Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಥೆಸಲೋನಿಕದವರಿಗೆ 2 - ಕನ್ನಡ ಸಮಕಾಲಿಕ ಅನುವಾದ


ಕರ್ತ ಯೇಸುವಿನ ದಿನವೂ ನಿಯಮ ಮೀರುವ ಮನುಷ್ಯನೂ

1 ಪ್ರಿಯರೇ, ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಬರುವಿಕೆಯನ್ನೂ ನಾವು ಅವರ ಸನ್ನಿಧಿಯಲ್ಲಿ ಒಂದಾಗಿ ಸೇರುವ ವಿಷಯವನ್ನೂ ಕುರಿತು ನಾವು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ:

2 ಕ್ರಿಸ್ತ ಯೇಸುವಿನ ದಿನವು ಈಗಾಗಲೇ ಬಂದಿದೆಯೆಂದು ಪ್ರವಾದನೆಯಿಂದಾಗಲಿ, ಪ್ರಸಂಗದಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ತಿಳಿದು ನೀವು ಬೇಗನೆ ಚಂಚಲರಾಗಿ ಕಳವಳಪಡಬೇಡಿರಿ.

3 ನಿಮ್ಮನ್ನು ಯಾರೂ ಯಾವ ವಿಧದಲ್ಲಿಯೂ ವಂಚಿಸದಿರಲಿ. ಏಕೆಂದರೆ ವಿಶ್ವಾಸದಿಂದ ಬಿದ್ದುಹೋಗುವಿಕೆಯು ಸಂಭವಿಸಿ, ನಾಶಕ್ಕೆ ನೇಮಕವಾಗಿರುವ ನಿಯಮ ಮೀರುವ ಮನುಷ್ಯನು ಬರುವುದಕ್ಕೆ ಮುಂಚೆ ಕರ್ತ ಯೇಸುವಿನ ದಿನವು ಬರುವುದಿಲ್ಲ!

4 ದೇವರೆಣಿಸಿಕೊಳ್ಳುವ ಎಲ್ಲವನ್ನೂ ಆರಾಧಿಸಲಾಗುವ ಪ್ರತಿಯೊಂದನ್ನೂ ಅವನು ವಿರೋಧಿಸಿ ನಿಲ್ಲುವನು. ದೇವರಿಗೆ ಸಂಬಂಧಿಸಿದ ಇವೆಲ್ಲವುಗಳ ಮೇಲೆ ತನ್ನನ್ನು ಹೆಚ್ಚಿಸಿಕೊಳ್ಳುವನು. ತಾನೇ ದೇವರೆಂದು ಘೋಷಿಸಿ ದೇವರ ಆಲಯದಲ್ಲಿ ಕೂತುಕೊಳ್ಳುವನು.

5 ನಾನು ನಿಮ್ಮ ಸಂಗಡ ಇರುವಾಗ ಈ ಸಂಗತಿಗಳನ್ನು ನಿಮಗೆ ಹೇಳಿದ್ದು ಜ್ಞಾಪಕವಿಲ್ಲವೋ?

6 ಇದಲ್ಲದೆ ಅವನು ನಿಯಮಿತ ಕಾಲದಲ್ಲಿ ಮಾತ್ರ ಕಾಣಿಸಿಕೊಳ್ಳುವಂತೆ ಈಗ ಅವನನ್ನು ಏನು ಅಡ್ಡಿಮಾಡುತ್ತಿದೆಯೋ ಅದನ್ನು ನೀವೇ ಬಲ್ಲಿರಿ.

7 ಏಕೆಂದರೆ, ನಿಯಮ ಮೀರುವ ರಹಸ್ಯ ಶಕ್ತಿಯು ಈಗಾಗಲೇ ಕಾರ್ಯಮಾಡುತ್ತಿದೆ. ಅವನನ್ನು ದಾರಿಯಿಂದ ತೆಗೆಯುವವರೆಗೆ ಈಗ ಅಡ್ಡಿಮಾಡುವಾತನು ಅಡ್ಡಿ ಮಾಡುತ್ತಲೇ ಇರುವನು.

8 ಆಗ ಆ ನಿಯಮ ಮೀರುವವನು ಪ್ರತ್ಯಕ್ಷನಾಗುವನು. ಅವನನ್ನು ಕರ್ತ ಯೇಸು ತಮ್ಮ ಬಾಯಿಯ ಶ್ವಾಸದಿಂದ ಕೆಡವಿ, ತಮ್ಮ ಪ್ರತ್ಯಕ್ಷತೆಯ ಮಹಿಮೆಯಿಂದ ನಾಶಮಾಡಿಬಿಡುವರು.

9 ಆ ನಿಯಮ ಮೀರುವವನ ಬರುವಿಕೆಯು ಸೈತಾನನ ಕಾರ್ಯಗಳಿಗೆ ಅನುಸಾರವಾಗಿರುವುದು. ಅವು ಎಲ್ಲಾ ಶಕ್ತಿಯ ಪ್ರದರ್ಶನದಿಂದಲೂ ಸುಳ್ಳಾದ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಇರುವವು.

10 ಎಲ್ಲಾ ವಿಧವಾದ ದುಷ್ಟತನದ ವಂಚನೆಯಿಂದಲೂ ಕೂಡಿ ನಾಶವಾಗುವವರಲ್ಲಿ ಇದು ಸಂಭವಿಸುವುದು. ಏಕೆಂದರೆ ಅವರು ರಕ್ಷಣೆ ಹೊಂದುವಂತೆ ಸತ್ಯವನ್ನು ಪ್ರೀತಿಸಲು ನಿರಾಕರಿಸಿದ ಕಾರಣದಿಂದ ನಾಶವಾಗಿ ಹೋಗುವರು.

11 ಇದೇ ಕಾರಣದಿಂದ ದೇವರು ಅವರ ಮೇಲೆ ವಂಚಿಸಲು ಶಕ್ತಿಯುಳ್ಳ ಭ್ರಮೆಯನ್ನು ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಮಾಡುವರು.

12 ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಿಸುವವರೆಲ್ಲರೂ ಈ ಪ್ರಕಾರ ತೀರ್ಪಿಗೆ ಗುರಿಯಾಗುವರು.


ದೃಢವಾಗಿ ನಿಲ್ಲಿರಿ

13 ಕರ್ತ ಯೇಸುವಿಗೆ ಪ್ರಿಯರಾಗಿರುವವರೇ, ನಾವು ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಏಕೆಂದರೆ, ನೀವು ಪವಿತ್ರಾತ್ಮ ದೇವರ ಶುದ್ಧೀಕರಣದಿಂದಲೂ ಸತ್ಯವನ್ನು ನಂಬುವುದರಿಂದಲೂ ರಕ್ಷಣೆಯನ್ನು ಹೊಂದಿ ಪ್ರಥಮ ಫಲವಾಗುವುದಕ್ಕೆ ದೇವರು ನಿಮ್ಮನ್ನು ಆದಿಯಿಂದ ಆರಿಸಿಕೊಂಡಿದ್ದಾರೆ.

14 ನಾವು ನಿಮಗೆ ತಿಳಿಸಿದ ಸುವಾರ್ತೆಯ ಮೂಲಕವಾಗಿ, ನೀವು ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮಹಿಮೆಯನ್ನು ಸಂಪಾದಿಸಿಕೊಳ್ಳಬೇಕೆಂದು ದೇವರು ನಿಮ್ಮನ್ನು ಈ ಆಯ್ಕೆಗಾಗಿ ಕರೆದರು.

15 ಹೀಗಿರುವುದರಿಂದ ಪ್ರಿಯರೇ, ದೃಢವಾಗಿ ನಿಲ್ಲಿರಿ. ನಾವು ಮಾತಿನಿಂದಾಗಲಿ, ಪತ್ರದಿಂದಾಗಲಿ ನಿಮಗೆ ಕಲಿಸಿದ ಬೋಧನೆಗಳನ್ನು ನೀವು ಭದ್ರವಾಗಿ ಪಾಲಿಸಿರಿ.

16 ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರು ಹಾಗೂ ನಮ್ಮ ತಂದೆ ದೇವರು ನಮ್ಮನ್ನು ಪ್ರೀತಿಸಿ ಕೃಪೆಯಿಂದ ಕೊಟ್ಟಿರುವ ನಮಗೆ ನಿತ್ಯ ಆದರಣೆಯನ್ನೂ ಒಳ್ಳೆಯ ನಿರೀಕ್ಷೆಯನ್ನೂ ನೀಡಿ,

17 ನಿಮ್ಮ ಹೃದಯಗಳನ್ನು ಸಂತೈಸಿ, ಸಕಲ ಸದ್ವಾಕ್ಯದಲ್ಲಿಯೂ ಸತ್ಕಾರ್ಯದಲ್ಲಿಯೂ ದೃಢಪಡಿಸಲಿ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು