2 ಕೊರಿಂಥದವರಿಗೆ 4 - ಕನ್ನಡ ಸಮಕಾಲಿಕ ಅನುವಾದಸಾಕ್ಷಿಯೂ ಪುನರುತ್ಥಾನದ ಜೀವವೂ 1 ದೇವರ ಕರುಣೆಯ ನಿಮಿತ್ತ ನಾವು ಈ ಸೇವೆಯನ್ನು ಹೊಂದಿರುವುದರಿಂದ ನಾವು ಧೈರ್ಯಗೆಡುವವರಲ್ಲ. 2 ನಾವು ನಾಚಿಕೆಯ ಗುಪ್ತ ಕಾರ್ಯಗಳನ್ನು ಬಿಟ್ಟುಬಿಟ್ಟು, ಕುತಂತ್ರದಲ್ಲಿ ನಡೆಯದೆಯೂ ವಂಚನೆಯಿಂದ ದೇವರ ವಾಕ್ಯಗಳನ್ನು ವ್ಯಾಖ್ಯಾನ ಮಾಡದೆಯೂ ಸತ್ಯವನ್ನು ಸ್ಪಷ್ಟವಾಗಿ ಬೋಧಿಸುತ್ತಾ, ಎಲ್ಲಾ ಮನುಷ್ಯರ ಮನಸ್ಸಾಕ್ಷಿಯು ಒಪ್ಪಬೇಕಾದ ರೀತಿಯಲ್ಲಿ ನಮ್ಮನ್ನು ನಾವೇ ದೇವರ ಮುಂದೆ ಸಮರ್ಪಿಸಿಕೊಳ್ಳುತ್ತೇವೆ. 3 ನಾವು ಪ್ರಚಾರ ಮಾಡುವ ಸುವಾರ್ತೆಯು ಮುಸುಕು ಹಾಕಿರುವುದಾದರೆ, ಅದು ನಾಶದ ಮಾರ್ಗದಲ್ಲಿರುವವರಿಗೆ ಮಾತ್ರ. 4 ಈ ಲೋಕದ ದೇವರು ನಂಬದವರ ಮನಸ್ಸನ್ನು ಕುರುಡುಮಾಡಿರುತ್ತಾನೆ. ಆದ್ದರಿಂದ ದೇವರ ಸ್ವರೂಪವಾಗಿರುವ ಕ್ರಿಸ್ತ ಯೇಸುವಿನ ಸುವಾರ್ತೆಯ ಮಹಿಮೆಯ ಬೆಳಕನ್ನು ಅವರು ಕಾಣಲಾರರು. 5 ನಾವು ನಮ್ಮ ಬಗ್ಗೆಯೇ ಪ್ರಚಾರ ಮಾಡುವುದಿಲ್ಲ. ಆದರೆ ಕ್ರಿಸ್ತ ಯೇಸು ಕರ್ತ ದೇವರೆಂದೂ ನಾವು ಯೇಸುವಿಗಾಗಿ ನಿಮ್ಮ ಸೇವಕರಾಗಿದ್ದೇವೆ ಎಂದೂ ಪ್ರಚುರಪಡಿಸುತ್ತೇವೆ. 6 “ಕತ್ತಲೆಯಿಂದ ಬೆಳಕು ಹೊಳೆಯಲಿ,” ಎಂದು ಆಜ್ಞಾಪಿಸಿದ ದೇವರು ತಾವೇ, ತಮ್ಮ ಪ್ರಕಾಶವನ್ನು ನಮ್ಮ ಹೃದಯದ ಮೇಲೆ ಬೆಳಗಿಸಿದ್ದಾರೆ. ಹೀಗೆ ಕ್ರಿಸ್ತ ಯೇಸುವಿನ ಮುಖದಲ್ಲಿ ಪ್ರತಿಬಿಂಬಿಸುತ್ತಿರುವ ದೇವರ ಮಹಿಮೆಯ ತಿಳುವಳಿಕೆಯನ್ನು ನಮ್ಮಲ್ಲಿ ಉದಯಿಸುವಂತಾಗಿದೆ. 7 ಆದರೆ ಸರ್ವೋನ್ನತವಾದ ಈ ಶಕ್ತಿಯೂ ನಮ್ಮಿಂದಲ್ಲ ದೇವರಿಂದಲೇ ಬಂದಿರುತ್ತದೆ ಎಂಬುದನ್ನು ತೋರಿಸುವಂತೆ ಮಣ್ಣಿನ ಮಡಕೆಗಳಾದ ನಮ್ಮಲ್ಲಿ ನಿಕ್ಷೇಪವಿದೆ. 8 ಸರ್ವವಿಧದಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಜಜ್ಜಿಹೋಗಲಿಲ್ಲ, ನಾವು ಚಂಚಲರಾಗಿದ್ದರೂ ನಿರಾಶರಾಗಲಿಲ್ಲ. 9 ಹಿಂಸೆಗೆ ಒಳಪಟ್ಟರೂ ಕೈಬಿಟ್ಟವವರಲ್ಲ, ದಬ್ಬಿದವರಾದಾಗ್ಯೂ ನಾಶವಾಗಲಿಲ್ಲ. 10 ಯೇಸುವಿನ ಜೀವವು ನಮ್ಮ ಶರೀರದಲ್ಲಿ ಪ್ರಕಟವಾಗುವಂತೆ, ನಾವು ಯಾವಾಗಲೂ ನಮ್ಮ ಶರೀರದಲ್ಲಿ ಯೇಸುವಿನ ಮರಣವನ್ನು ಧರಿಸುವವರಾಗಿರುತ್ತೇವೆ. 11 ಏಕೆಂದರೆ ಜೀವಂತವಾಗಿರುವ ನಾವು ಯೇಸುವಿನ ಜೀವವು ನಮ್ಮ ಮರ್ತ್ಯ ಶರೀರದಲ್ಲಿ ಪ್ರಕಟಿಸುವಂತೆ, ನಮ್ಮನ್ನು ಯಾವಾಗಲೂ ಯೇಸುವಿಗಾಗಿ ಮರಣಕ್ಕೆ ಒಪ್ಪಿಸಿಕೊಟ್ಟವರಾಗಿದ್ದೇವೆ. 12 ಹೀಗಿರುವುದರಿಂದ, ನಮ್ಮೊಳಗೆ ಮರಣವು ಕಾರ್ಯ ಮಾಡುತ್ತದೆ, ಆದರೆ ನಿಮ್ಮೊಳಗೆ ಜೀವವು ಕಾರ್ಯ ಮಾಡುತ್ತದೆ. 13 “ನಾನು ನಂಬಿದೆನು, ಆದ್ದರಿಂದ ಮಾತನಾಡುವೆನು,” ಎಂದು ಪವಿತ್ರ ವೇದದಲ್ಲಿ ಬರೆಯಲಾಗಿದೆ. ಅದೇ ನಂಬಿಕೆಯ ಆತ್ಮವನ್ನು ಹೊಂದಿದವರಾದ ನಾವು ಕೂಡಾ ನಂಬಿದ್ದೇವೆ, ಆದ್ದರಿಂದ ನಾವು ಮಾತನಾಡುತ್ತೇವೆ. 14 ಏಕೆಂದರೆ, ಕರ್ತ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರೇ, ನಮ್ಮನ್ನೂ ಸಹ ಯೇಸುವಿನೊಂದಿಗೆ ಎಬ್ಬಿಸಿ, ನಿಮ್ಮ ಜೊತೆಯಲ್ಲಿಯೂ ನಿಲ್ಲಿಸುವನೆಂದು ತಿಳಿದವರಾಗಿದ್ದೇವೆ. 15 ಇವೆಲ್ಲವೂ ನಿಮ್ಮ ಒಳ್ಳೆಯದಕ್ಕಾಗಿಯೇ. ಇದರಿಂದ ಹೆಚ್ಚಾದ ಜನರಿಗೆ ತಲುಪುತ್ತಿರುವ ಕೃಪೆಯು, ಕೃತಜ್ಞತೆಯಿಂದ ತುಂಬಿ ಹರಿಯುವುದು. ಆಗ ದೇವರ ಮಹಿಮೆಯು ಸ್ಪಷ್ಟವಾಗುವುದು. 16 ಆದ್ದರಿಂದ ನಾವು ಅಧೈರ್ಯಪಡುವುದಿಲ್ಲ. ನಮ್ಮ ಹೊರಗಿನ ಮನುಷ್ಯ ಕ್ಷಯಿಸುತ್ತಿದ್ದರೂ ನಮ್ಮ ಆಂತರ್ಯ ಮನುಷ್ಯ ಅನುದಿನವೂ ನೂತನವಾಗುತ್ತಿದೆ. 17 ಹಗುರವಾಗಿಯೂ ಕ್ಷಣಿಕವಾಗಿಯೂ ಇರುವ ನಮ್ಮ ಸಂಕಟವು ಅತ್ಯಂತ ಘನತೆಯುಳ್ಳ ನಿತ್ಯ ಮಹಿಮೆಯನ್ನು ನಮಗೆ ದೊರಕಿಸಿಕೊಡುವುದು. 18 ಆದ್ದರಿಂದ ನಮ್ಮ ದೃಷ್ಟಿಯು ದೃಶ್ಯ ಸಂಗತಿಗಳ ಮೇಲಿರದೆ, ಅದೃಶ್ಯವಾದವುಗಳ ಮೇಲೆ ಇವೆ. ಕಾಣುವವುಗಳು ತಾತ್ಕಾಲಿಕವಾದವುಗಳು. ಆದರೆ ಕಾಣದಿರುವಂಥದ್ದು ನಿತ್ಯವಾಗಿರುವುದು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.