2 ಕೊರಿಂಥದವರಿಗೆ 2 - ಕನ್ನಡ ಸಮಕಾಲಿಕ ಅನುವಾದ1 ಆದ್ದರಿಂದ ಇನ್ನೊಮ್ಮೆ ನಿಮ್ಮ ಬಳಿಗೆ ಬಂದು ನಿಮಗೆ ವೇದನೆಯನ್ನು ಉಂಟುಮಾಡಬಾರದೆಂದು ನಾನು ನಿರ್ಧರಿಸಿಕೊಂಡೆನು. 2 ನಾನೇ ನಿಮ್ಮನ್ನು ದುಃಖಪಡಿಸಿದರೆ, ನಾನು ದುಃಖಪಡಿಸಿದ ನಿಮ್ಮನ್ನಲ್ಲದೆ ನನ್ನನ್ನು ಆನಂದಪಡಿಸುವವರು ಬೇರೆ ಯಾರಿದ್ದಾರೆ? 3 ನಾನು ಬಂದಾಗ ನನ್ನನ್ನು ಆನಂದಪಡಿಸತಕ್ಕವರಿಂದಲೇ ದುಃಖ ಹೊಂದಬಾರದೆಂದು ನಾನು ಹಿಂದಿನ ಪತ್ರವನ್ನು ನಿಮಗೆ ಬರೆದಿದ್ದೇನೆ. ನನ್ನ ಆನಂದದಲ್ಲಿ ನೀವೆಲ್ಲರೂ ಪಾಲಾಗುವಿರಿ ಎಂದು ನಿಮ್ಮೆಲ್ಲರ ವಿಷಯದಲ್ಲಿ ನನಗೆ ಭರವಸೆ ಇದೆ. 4 ಏಕೆಂದರೆ, ನಿಮಗೆ ದುಃಖವಾಗಬೇಕೆಂದಲ್ಲ, ನಿಮ್ಮ ಮೇಲೆ ನನಗಿರುವ ಅಧಿಕವಾದ ಪ್ರೀತಿಯನ್ನು ನೀವು ತಿಳಿದುಕೊಳ್ಳಬೇಕೆಂತಲೇ ನಾನು ಮಹಾ ದುಃಖದಿಂದಲೂ ಬಹಳ ಕಣ್ಣೀರಿನಿಂದಲೂ ಹೃದಯದ ವೇದನೆಯಿಂದಲೂ ನಿಮಗೆ ಬರೆದೆನು. ಅಪರಾಧಿಗೆ ಕ್ಷಮಾಪಣೆ 5 ನಿಮ್ಮಲ್ಲಿ ಯಾರಾದರೂ ನನ್ನನ್ನು ದುಃಖಪಡಿಸಿದರೆ, ಅವನು ನನ್ನನ್ನು ಮಾತ್ರವೇ ದುಃಖ ಪಡಿಸದೆ, ಒಂದು ವಿಧದಲ್ಲಿ ನಿಮ್ಮೆಲ್ಲರನ್ನೂ ದುಃಖಪಡಿಸಿದ್ದಾನೆ. ಅವನ ಮೇಲೆ ಬಹಳ ಕಠಿಣನಾಗಿರಲು ನನಗೆ ಇಷ್ಟವಿಲ್ಲ. 6 ಅವನಿಗೆ ನಿಮ್ಮಲ್ಲಿ ಅನೇಕರಿಂದ ಉಂಟಾದ ಶಿಕ್ಷೆಯೇ ಸಾಕು. 7 ಈಗ ಅವನನ್ನು ನೀವು ಕ್ಷಮಿಸಿ ಸಂತೈಸಿರಿ. ಇಲ್ಲವಾದರೆ, ಅವನು ದುಃಖದಲ್ಲಿ ಮುಳುಗಿ ಹೋದಾನು. 8 ಅದಕ್ಕಾಗಿ ನೀವು ನಿಮ್ಮ ಪ್ರೀತಿಯನ್ನು ಮೊದಲು ಇದ್ದಂತೆ ಈಗಲೂ ಅವನ ಮೇಲೆ ತೋರಿಸಿರಿ ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. 9 ಎಲ್ಲಾ ವಿಷಯಗಳಲ್ಲಿ ನೀವು ವಿಧೇಯರಾಗುತ್ತೀರೋ ಏನೋ ಎಂದು ಪರೀಕ್ಷಿಸಿ ಅರಿತುಕೊಳ್ಳಬೇಕೆಂಬ ಕಾರಣಕ್ಕಾಗಿ ನಾನು ನಿಮಗೆ ಹಾಗೆ ಬರೆದನು. 10 ನೀವು ಯಾರನ್ನಾದರೂ ಕ್ಷಮಿಸಿದರೆ, ನಾನು ಅವರನ್ನು ಕ್ಷಮಿಸುವೆನು. ನಾನು ಯಾರನ್ನಾದರೂ ಕ್ಷಮಿಸಿದರೆ, ನಿಮ್ಮ ನಿಮಿತ್ತವಾಗಿಯೇ ಕ್ರಿಸ್ತ ಯೇಸುವಿನ ಸನ್ನಿಧಾನದಲ್ಲಿ ಕ್ಷಮಿಸುವೆನು. 11 ಸೈತಾನನು ನಮ್ಮನ್ನು ವಂಚಿಸಲು ಅವಕಾಶ ಕೊಡಬಾರದು. ಅವನ ಕುತಂತ್ರಗಳನ್ನು ನಾವು ಅರಿತವರಲ್ಲವೇ? ಹೊಸ ಒಡಂಬಡಿಕೆಯ ಸೇವಕರು 12 ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ಸಾರುವುದಕ್ಕೆ ನಾನು ತ್ರೋವಕ್ಕೆ ಹೋದಾಗ, ಅಲ್ಲಿ ಕರ್ತ ಯೇಸುವು ನನಗೆ ಬಾಗಿಲು ತೆರೆದಿರುವುದನ್ನು ಕಂಡೆನು. 13 ನನ್ನ ಸಹೋದರನಾದ ತೀತನು ನನಗೆ ಅಲ್ಲಿ ಸಿಗದಿದ್ದ ಕಾರಣ, ನನ್ನ ಆತ್ಮಕ್ಕೆ ಇನ್ನೂ ವಿಶ್ರಾಂತಿಯಿರಲಿಲ್ಲ. ಆದ್ದರಿಂದ ತ್ರೋವದವರಿಗೆ ನಾನು ನನ್ನ ವಂದನೆಗಳನ್ನರ್ಪಿಸಿ ಮಕೆದೋನ್ಯ ಪ್ರಾಂತಕ್ಕೆ ಹೋದೆನು. 14 ಕ್ರಿಸ್ತ ಯೇಸುವಿನಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವದೊಡನೆ ಮೆರೆಸುತ್ತಾ, ಅವರ ವಿಷಯವಾದ ಜ್ಞಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ಪ್ರಸಾರಗೊಳಿಸುವ ದೇವರಿಗೆ ಕೃತಜ್ಞತೆಗಳು. 15 ರಕ್ಷಣಾ ಮಾರ್ಗದಲ್ಲಿರುವವರಿಗೂ ನಾಶದ ಮಾರ್ಗದಲ್ಲಿರುವವರಿಗೂ ನಾವು ದೇವರಿಗೆ ಕ್ರಿಸ್ತ ಯೇಸುವಿನ ಪರಿಮಳವಾಗಿದ್ದೇವೆ. 16 ಕೆಲವರಿಗೆ ನಾವು ಮರಣದ ವಾಸನೆಯಾಗಿದ್ದೇವೆ. ಇತರರಿಗೆ ಜೀವವನ್ನು ಹುಟ್ಟಿಸುವ ವಾಸನೆಯಾಗಿರುತ್ತೇವೆ. ಇಂಥ ಸೇವೆಗೆ ಸಮರ್ಥರು ಯಾರು? 17 ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ, ಅದರಿಂದ ಹಣಗಳಿಸುತ್ತಾರೆ. ನಾವಾದರೋ ಹಾಗೆ ಮಾಡುವವರಲ್ಲ. ನಾವು ದೇವರಿಂದ ಕಳುಹಿಸಲಾದವರಾಗಿ ಕ್ರಿಸ್ತ ಯೇಸುವಿನಲ್ಲಿದ್ದುಕೊಂಡು ದೇವರ ಮುಂದೆ ಯಥಾರ್ಥವಾಗಿ ಮಾತನಾಡುತ್ತೇವೆ. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.