Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಕೊರಿಂಥದವರಿಗೆ 13 - ಕನ್ನಡ ಸಮಕಾಲಿಕ ಅನುವಾದ


ಅಂತಿಮ ಎಚ್ಚರಿಕೆಗಳು

1 ನಾನು ನಿಮ್ಮ ಬಳಿಗೆ ಬರುವುದು ಇದು ಮೂರನೆಯ ಸಾರಿ. “ಇಬ್ಬರು ಮೂವರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತೂ ಸ್ಥಾಪಿತವಾಗಬೇಕು,” ಎಂದು ಬರೆಯಲಾಗಿದೆ.

2 ನಾನು ಎರಡನೆಯ ಸಾರಿ ನಿಮ್ಮ ಬಳಿಗೆ ಬಂದಿದ್ದಾಗ, ಗತಕಾಲದಲ್ಲಿ ಪಾಪ ಮಾಡುತ್ತಿದ್ದವರನ್ನು ಎಚ್ಚರಿಸಿದೆನು. ನಾನು ತಿರುಗಿ ಬಂದರೆ, ನಿಮ್ಮನ್ನು ಶಿಕ್ಷಿಸದೆ ಬಿಡುವುದಿಲ್ಲವೆಂದು ಹೇಗೆ ಹೇಳಿದೆನೋ, ಹಾಗೆಯೇ ಈಗಲೂ ನಿಮಗೆ ದೂರದಲ್ಲಿದ್ದುಕೊಂಡು ಹೇಳುತ್ತಿದ್ದೇನೆ.

3 ಕ್ರಿಸ್ತ ಯೇಸು ನನ್ನ ಮೂಲಕ ಮಾತನಾಡುತ್ತಾನೆಂಬುದಕ್ಕೆ ನಿಮಗೆ ಬೇಕಾದ ನಿದರ್ಶನವು ಆಗ ತೋರಿಬರುವುದು. ಬಲಹೀನನಾಗಿ ಕ್ರಿಸ್ತನು ನಿಮ್ಮೊಂದಿಗೆ ವ್ಯವಹರಿಸದೆ, ನಿಮ್ಮ ನಡುವೆ ಶಕ್ತನಾಗಿದ್ದಾನೆ.

4 ಕ್ರಿಸ್ತ ಯೇಸು ಬಲಹೀನತೆಯಲ್ಲಿ ಶಿಲುಬೆಗೆ ಹಾಕಲಾದರು ನಿಜ. ಆದರೆ ಅವರು ದೇವರ ಶಕ್ತಿಯಿಂದ ಜೀವಿಸುತ್ತಿದ್ದಾರೆ. ನಾವು ಸಹ ಬಲಹೀನತೆಯುಳ್ಳವರಾಗಿದ್ದೇವೆ. ಆದರೆ ನಾವು ನಿಮ್ಮ ಸೇವೆ ಮಾಡುವಂತೆ, ನಾವು ಕ್ರಿಸ್ತ ಯೇಸುವಿನೊಂದಿಗೆ ದೇವರ ಶಕ್ತಿಯಿಂದ ಬದುಕುತ್ತಿದ್ದೇವೆ.

5 ನಂಬಿಕೆಯಲ್ಲಿ ಇದ್ದೀರೋ, ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ. ಏನು, ಕ್ರಿಸ್ತ ಯೇಸು ನಿಮ್ಮಲ್ಲಿದ್ದಾರೆಂಬುದರ ಬಗ್ಗೆ ನಿಮಗೆ ನಂಬಿಕೆಯಿಲ್ಲವೋ? ಅವರು ನಿಮ್ಮಲ್ಲಿಲ್ಲದಿದ್ದರೆ, ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾದವರಲ್ಲ.

6 ನಾವಂತೂ ಉತ್ತೀರ್ಣರಾದವರೆಂದು ನಿಮಗೆ ಗೊತ್ತಾಗುವುದೆಂದು ನಾನು ನಿರೀಕ್ಷಿಸುತ್ತೇನೆ.

7 ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವೇ ಉತ್ತೀರ್ಣರಾದವರು ಎಂದು ಕಂಡುಬರಬೇಕೆಂಬುದು ನಮ್ಮ ಉದ್ದೇಶವಲ್ಲ. ನಾವು ಸೋತವರಾಗಿ ಕಂಡುಬಂದರೂ ನೀವು ಒಳ್ಳೆಯದನ್ನೇ ಮಾಡಬೇಕೆಂಬುದು ನಮ್ಮ ಪ್ರಾರ್ಥನೆಯಾಗಿದೆ.

8 ಸತ್ಯಕ್ಕೆ ವಿರುದ್ಧವಾಗಿ ನಾವೇನೂ ಮಾಡಲಾರೆವು. ಸತ್ಯದ ಪರವಾಗಿಯೇ ಎಲ್ಲವನ್ನೂ ಮಾಡುತ್ತೇವೆ.

9 ನಾವು ಬಲಹೀನರಾಗಿದ್ದರೂ, ನೀವು ಬಲಿಷ್ಠರಾಗಿದ್ದಿರೆಂದು ತಿಳಿದು ಆನಂದಪಡುತ್ತೇವೆ. ನೀವು ಪರಿಪೂರ್ಣರಾಗಬೇಕೆಂದೇ ನಾವು ಪ್ರಾರ್ಥಿಸುತ್ತೇವೆ.

10 ಇದಕ್ಕಾಗಿಯೇ ನಾನು ನಿಮ್ಮಲ್ಲಿ ಇಲ್ಲದಿರುವಾಗ, ಈ ಮಾತುಗಳನ್ನು ಬರೆದಿದ್ದೇನೆ. ನಾನು ಬಂದಾಗ ನಿಮ್ಮನ್ನು ಕೆಡವಿ ಹಾಕುವುದಕ್ಕಲ್ಲ ಆದರೆ ಕಟ್ಟುವುದಕ್ಕಾಗಿ ಕರ್ತ ಯೇಸು ನನಗೆ ಕೊಟ್ಟಿರುವ ಅಧಿಕಾರದಿಂದ ನಿಮಗೆ ಕಾಠಿಣ್ಯವನ್ನು ತೋರಿಸುವುದಕ್ಕೆ ಅವಕಾಶವಿರಬಾರದೆಂದು ಅಪೇಕ್ಷಿಸುತ್ತೇನೆ.


ಅಂತಿಮ ವಂದನೆಗಳು

11 ಪ್ರಿಯರೇ, ಕಡೆಯ ಮಾತೇನೆಂದರೆ, ಆನಂದಪಡಿರಿ! ನಿಮ್ಮನ್ನು ಪೂರ್ಣ ಪುನಃಸ್ಥಾಪನೆಗಾಗಿ ಕ್ರಮಪಡಿಸಿಕೊಳ್ಳಿರಿ, ಉತ್ತೇಜನಗೊಳ್ಳಿರಿ, ಒಂದೇ ಮನಸ್ಸುಳ್ಳವರಾಗಿರಿ, ಸಮಾಧಾನದಿಂದಿರಿ. ಆಗ ಪ್ರೀತಿ ಹಾಗೂ ಶಾಂತಿಯ ದೇವರು ನಿಮ್ಮ ಸಂಗಡ ಇರುವರು.

12 ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.

13 ದೇವಜನರೆಲ್ಲರೂ ನಿಮಗೆ ತಮ್ಮ ವಂದನೆಗಳನ್ನು ತಿಳಿಸಿದ್ದಾರೆ.

14 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮ ದೇವರ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡ ಇರಲಿ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು