1 ಸಮುಯೇಲ 3 - ಕನ್ನಡ ಸಮಕಾಲಿಕ ಅನುವಾದಯೆಹೋವ ದೇವರು ಸಮುಯೇಲನನ್ನು ಕರೆದದ್ದು 1 ಬಾಲಕನಾದ ಸಮುಯೇಲನು ಏಲಿಯ ಕೈಕೆಳಗಿದ್ದುಕೊಂಡು ಯೆಹೋವ ದೇವರಿಗೆ ಸೇವೆ ಮಾಡಿಕೊಂಡಿದ್ದನು. ಆ ದಿನಗಳಲ್ಲಿ ಯೆಹೋವ ದೇವರ ವಾಕ್ಯವು ವಿರಳವಾಗಿತ್ತು. ಅಲ್ಲಿ ದೇವದರ್ಶನಗಳು ಅಪರೂಪವಾಗಿದ್ದವು. 2 ಒಂದು ರಾತ್ರಿ ಏಲಿಯು ತನ್ನ ಸ್ಥಳದಲ್ಲಿ ಮಲಗಿದ್ದನು. ನೋಡುವುದಕ್ಕಾಗದಂತೆ ಅವನ ಕಣ್ಣುಗಳು ಮಬ್ಬಾಗುತ್ತಿದ್ದವು. 3 ದೇವರ ಮಂಜೂಷವಿರುವ ಯೆಹೋವ ದೇವರ ಮಂದಿರದಲ್ಲಿ ದೇವರ ದೀಪವು ಆರಿಹೋಗುವುದಕ್ಕಿಂತ ಮುಂಚೆ ಸಮುಯೇಲನು ಮಲಗಿದ್ದನು. 4 ಆಗ ಯೆಹೋವ ದೇವರು ಸಮುಯೇಲನನ್ನು ಕರೆದರು. ಅದಕ್ಕವನು, “ಇಗೋ, ನಾನು ಇಲ್ಲಿದ್ದೇನೆ,” ಎಂದು ಹೇಳಿ, 5 ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿ ಇದ್ದೇನೆ; ನೀನು ನನ್ನನ್ನು ಕರೆದೆಯಲ್ಲಾ,” ಎಂದನು. ಅದಕ್ಕವನು, “ನಾನು ನಿನ್ನನ್ನು ಕರೆಯಲಿಲ್ಲ, ತಿರುಗಿ ಹೋಗಿ ಮಲಗಿಕೋ,” ಎಂದನು. ಸಮುವೇಲನು ಹೋಗಿ ಮಲಗಿದನು. 6 ಯೆಹೋವ ದೇವರು, “ಸಮುಯೇಲನೇ,” ಎಂದು ಅವನನ್ನು ತಿರುಗಿ ಕರೆದರು. ಆಗ ಸಮುಯೇಲನು ಎದ್ದು ಏಲಿಯ ಬಳಿಗೆ ಹೋಗಿ, “ಇಗೋ, ಇದ್ದೇನೆ; ನನ್ನನ್ನು ಕರೆದೆಯಲ್ಲಾ,” ಎಂದನು. ಅದಕ್ಕವನು, “ನನ್ನ ಮಗನೇ, ನಾನು ಕರೆಯಲಿಲ್ಲ; ನೀನು ಹೋಗಿ ಮಲಗಿಕೋ,” ಎಂದನು. 7 ಸಮುಯೇಲನು ಆವರೆಗೂ ಯೆಹೋವ ದೇವರನ್ನು ತಿಳಿದುಕೊಂಡಿರಲಿಲ್ಲ. ಯೆಹೋವ ದೇವರ ವಾಕ್ಯವು ಅವನಿಗೆ ಪ್ರಕಟವಾಗಿರಲೂ ಇಲ್ಲ. 8 ಯೆಹೋವ ದೇವರು ಮತ್ತೆ ಮೂರನೆಯ ಸಾರಿ, “ಸಮುಯೇಲನೇ,” ಎಂದು ಕರೆದರು. ಅವನು ಎದ್ದು ಏಲಿಯ ಬಳಿಗೆ ಹೋಗಿ, “ಇಗೋ, ಇದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ,” ಎಂದನು. ಆಗ ಏಲಿಯು, ಯೆಹೋವ ದೇವರು ಹುಡುಗನನ್ನು ಕರೆದರೆಂದು ಗ್ರಹಿಸಿಕೊಂಡನು. 9 ಏಲಿಯು ಸಮುಯೇಲನಿಗೆ, “ನೀನು ಹೋಗಿ ಮಲಗು; ಅವರು ನಿನ್ನನ್ನು ಕರೆದರೆ, ಆಗ ನೀನು, ‘ಯೆಹೋವ ದೇವರೇ, ಮಾತನಾಡಿ, ನಿಮ್ಮ ದಾಸನು ಕೇಳುತ್ತಾನೆ,’ ಎಂದು ಹೇಳು,” ಎಂದನು. ಹಾಗೆಯೇ ಸಮುಯೇಲನು ಹೋಗಿ ತನ್ನ ಸ್ಥಳದಲ್ಲಿ ಮಲಗಿದನು. 10 ಆಗ ಯೆಹೋವ ದೇವರು ಬಂದು ನಿಂತು ಮೊದಲಿನ ಹಾಗೆಯೇ, “ಸಮುಯೇಲನೇ, ಸಮುಯೇಲನೇ,” ಎಂದು ಕರೆದರು. ಅದಕ್ಕೆ ಸಮುಯೇಲನು, “ಯೆಹೋವ ದೇವರೇ ಮಾತನಾಡಿ; ನಿಮ್ಮ ದಾಸನು ಕೇಳುತ್ತಾನೆ,” ಎಂದನು. 11 ಆಗ ಯೆಹೋವ ದೇವರು ಸಮುಯೇಲನಿಗೆ, “ನಾನು ಇಸ್ರಾಯೇಲಿನಲ್ಲಿ ಒಂದು ಕಾರ್ಯವನ್ನು ಮಾಡುವೆನು. ಅದನ್ನು ಕೇಳುವವನ ಎರಡು ಕಿವಿಗಳೂ ಕಂಪಿಸುವುವು. 12 ಏಕೆಂದರೆ ನಾನು ಏಲಿಯ ಮನೆಯನ್ನು ಕುರಿತು ಹೇಳಿದ್ದನ್ನೆಲ್ಲಾ ಅವರಿಗೆ ಆ ದಿವಸದಲ್ಲಿ ಮಾಡುತ್ತೇನೆ. ನಾನು ಆರಂಭಿಸಿದ ಹಾಗೆ ಅಂತ್ಯವನ್ನು ಮಾಡುವೆನು. 13 ನಾನು ಅವನಿಗೆ, ಅವನು ತಿಳಿದ ದುಷ್ಟತನದ ನಿಮಿತ್ತ ನಾನು ಎಂದೆಂದಿಗೂ ಅವನ ಮನೆಗೆ ನ್ಯಾಯತೀರಿಸುವೆನು, ಎಂದು ಹೇಳಿದ್ದೆನು. ಏಕೆಂದರೆ ತನ್ನ ಪುತ್ರರು ದೇವರ ನಿಂದನೆ ಮಾಡಿದಾಗ, ಅವರನ್ನು ಹತೋಟಿಗೆ ತರಲಿಲ್ಲ. 14 ಆದ್ದರಿಂದ ‘ಏಲಿಯ ಮನೆಯ ದುಷ್ಟತನವು ಎಂದೆಂದಿಗೂ ಬಲಿಯಿಂದಲಾದರೂ, ಅರ್ಪಣೆಯಿಂದಲಾದರೂ ಪ್ರಾಯಶ್ಚಿತ್ತವಾಗುವದಿಲ್ಲ, ಎಂದು ನಾನು ಏಲಿಯ ಮನೆಯನ್ನು ಕುರಿತು ಪ್ರಮಾಣಮಾಡಿದೆನು,’ ” ಎಂದರು. 15 ಸಮುಯೇಲನು ಉದಯದವರೆಗೂ ಮಲಗಿದ್ದು, ಯೆಹೋವ ದೇವರ ಮನೆಯ ಬಾಗಿಲುಗಳನ್ನು ತೆರೆದನು. ಆದರೆ ಸಮುಯೇಲನು ದರ್ಶನವನ್ನು ಏಲಿಗೆ ತಿಳಿಸಲು ಭಯಪಟ್ಟನು. 16 ಆಗ ಏಲಿಯು ಸಮುಯೇಲನನ್ನು ಕರೆದು ಅವನಿಗೆ, “ನನ್ನ ಮಗನಾದ ಸಮುಯೇಲನೇ,” ಎಂದನು. ಅದಕ್ಕವನು, “ಇಗೋ, ಇದ್ದೇನೆ,” ಎಂದನು. 17 ಏಲಿಯು ಅವನಿಗೆ, “ಅವರು ನಿನಗೆ ಹೇಳಿದ ಮಾತೇನು? ನನಗೆ ಅದನ್ನು ಮರೆಮಾಡಬೇಡ. ಅವರು ನಿನಗೆ ಹೇಳಿದ ಸಕಲ ವಾರ್ತೆಗಳಲ್ಲಿ ನೀನು ಯಾವುದನ್ನಾದರೂ ನನಗೆ ಮರೆಮಾಡಿದರೆ, ದೇವರು ನಿನ್ನನ್ನು ದಂಡಿಸಲಿ,” ಎಂದನು. 18 ಹಾಗೆಯೇ ಸಮುಯೇಲನು ಅವನಿಗೆ ಒಂದನ್ನೂ ಮರೆಮಾಡದೆ, ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿದನು. ಅದಕ್ಕವನು, “ಅವರು ಯೆಹೋವ ದೇವರು. ಅವರಿಗೆ ಸರಿತೋರುವುದನ್ನು ಮಾಡಲಿ,” ಎಂದನು. 19 ಸಮುಯೇಲನು ಬೆಳೆಯುತ್ತಾ ಬಂದನು. ಯೆಹೋವ ದೇವರು ಅವನ ಸಂಗಡ ಇದ್ದು, ಅವರ ವಾಕ್ಯಗಳಲ್ಲಿ ಒಂದಾದರೂ ಬಿದ್ದು ಹೋಗಗೊಡಿಸಲಿಲ್ಲ. 20 ಆಗ ಸಮುಯೇಲನು ಯೆಹೋವ ದೇವರ ಪ್ರವಾದಿಯಾಗಿ ದೃಢಪಟ್ಟನೆಂದು ದಾನ್ ಊರು ಮೊದಲ್ಗೊಂಡು ಬೇರ್ಷೆಬದವರೆಗೂ ಇದ್ದ ಇಸ್ರಾಯೇಲರೆಲ್ಲರು ತಿಳಿದಿದ್ದರು. 21 ಯೆಹೋವ ದೇವರು ತಿರುಗಿ ಶೀಲೋವಿನಲ್ಲಿ ಕಾಣಿಸಿಕೊಂಡರು. ಏಕೆಂದರೆ ಶೀಲೋವಿನಲ್ಲಿ ಯೆಹೋವ ದೇವರು ವಾಕ್ಯದ ಮೂಲಕ ಸಮುಯೇಲನಿಗೆ ಪ್ರಕಟಿಸಿಕೊಂಡರು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.