1 ಯೋಹಾನನು 5 - ಕನ್ನಡ ಸಮಕಾಲಿಕ ಅನುವಾದಮಾನವರಾಗಿ ಬಂದ ದೇವ ಪುತ್ರರಲ್ಲಿ ವಿಶ್ವಾಸ 1 ಯೇಸುವೇ ಕ್ರಿಸ್ತ ಎಂದು ನಂಬುವ ಪ್ರತಿಯೊಬ್ಬರೂ ದೇವರಿಂದ ಹುಟ್ಟಿದವರಾಗಿದ್ದಾರೆ. ತಂದೆಯನ್ನು ಪ್ರೀತಿಸುವ ಪ್ರತಿಯೊಬ್ಬರು ದೇವರಿಂದ ಹುಟ್ಟಿದವರನ್ನು ಸಹ ಪ್ರೀತಿಸುತ್ತಾರೆ. 2 ನಾವು ದೇವರನ್ನು ಪ್ರೀತಿಸಿ, ಅವರ ಆಜ್ಞೆಗಳನ್ನು ಅನುಸರಿಸುವುದರಿಂದಲೇ ದೇವರ ಮಕ್ಕಳನ್ನು ಪ್ರೀತಿಸುತ್ತೇವೆಂಬುದನ್ನು ತಿಳಿದುಕೊಳ್ಳುತ್ತೇವೆ. 3 ದೇವರ ಪ್ರೀತಿ ಏನೆಂದರೆ: ದೇವರ ಆಜ್ಞೆಗಳನ್ನು ಕೈಗೊಂಡು ನಡೆಯುವುದೇ. ಅವರ ಆಜ್ಞೆಗಳು ಕಠಿಣವಾದವುಗಳಲ್ಲ. 4 ದೇವರಿಂದ ಹುಟ್ಟಿರುವ ಪ್ರತಿಯೊಬ್ಬರು ಲೋಕವನ್ನು ಜಯಿಸುತ್ತಾರೆ. ಲೋಕವನ್ನು ಜಯಿಸುವಂಥದು ನಮ್ಮ ನಂಬಿಕೆಯೇ. 5 ಯೇಸುವು ದೇವಪುತ್ರ ಎಂದು ನಂಬಿದವರೇ ಹೊರತು ಲೋಕವನ್ನು ಜಯಿಸುವವರು ಯಾರು? 6 ಕ್ರಿಸ್ತ ಯೇಸುವೇ ನೀರಿನಿಂದಲೂ ರಕ್ತದಿಂದಲೂ ಬಂದವರು. ನೀರಿನಿಂದ ಮಾತ್ರವಲ್ಲದೆ ನೀರಿನಿಂದಲೂ ರಕ್ತದಿಂದಲೂ ಬಂದರು, ಇದಕ್ಕೆ ಸಾಕ್ಷಿಕೊಡುವವರು ಪವಿತ್ರಾತ್ಮ ದೇವರೇ, ಏಕೆಂದರೆ ಪವಿತ್ರಾತ್ಮ ದೇವರು ಸತ್ಯವಾಗಿದ್ದಾರೆ. 7 ಇದಲ್ಲದೆ ಸಾಕ್ಷಿಕೊಡುವವರು ಮೂವರಿದ್ದಾರೆ. 8 ಆತ್ಮ, ಜಲ, ರಕ್ತ ಎಂಬ ಮೂರು ಸಾಕ್ಷಿಗಳು ಇವೆ. ಇವು ಕೊಡುವ ಸಾಕ್ಷಿ ಒಂದೇ ಆಗಿರುತ್ತದೆ. 9 ನಾವು ಮನುಷ್ಯರ ಸಾಕ್ಷಿಯನ್ನು ತೆಗೆದುಕೊಳ್ಳುವುದಾದರೆ ದೇವರ ಸಾಕ್ಷಿಯು ಅದಕ್ಕಿಂತ ದೊಡ್ಡದಾಗಿದೆಯಲ್ಲಾ. ಏಕೆಂದರೆ ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ವಿಷಯದಲ್ಲಿ ದೇವರು ಕೊಟ್ಟ ಸಾಕ್ಷಿಯು ಇದೇ ಆಗಿದೆ. 10 ದೇವಪುತ್ರ ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ಇಟ್ಟವರು ಆ ಸಾಕ್ಷಿಯನ್ನು ಸ್ವೀಕರಿಸುತ್ತಾರೆ. ದೇವರನ್ನು ನಂಬದವರು ದೇವರನ್ನು ಸುಳ್ಳುಗಾರನನ್ನಾಗಿ ಮಾಡಿದ್ದಾರೆ. ಹೇಗೆಂದರೆ ದೇವರು ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾಗಿ ಕೊಟ್ಟ ಸಾಕ್ಷಿಯಲ್ಲಿ ಅಂಥವರು ನಂಬಿಕೆಯಿಡಲಿಲ್ಲ. 11 ಆ ಸಾಕ್ಷಿ ಯಾವುದೆಂದರೆ: ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದ್ದಾರೆ. ಈ ಜೀವವು ದೇವರ ಪುತ್ರ ಕ್ರಿಸ್ತ ಯೇಸುವಿನಲ್ಲಿ ಇದೆ ಎಂಬುದೇ. 12 ಯಾರು ಪುತ್ರ ಆಗಿರುವ ಕ್ರಿಸ್ತ ಯೇಸುವನ್ನು ಹೊಂದಿದ್ದಾರೊ ಅವರಿಗೆ ಜೀವವಿದೆ. ಯಾರಲ್ಲಿ ದೇವರ ಪುತ್ರ ಆಗಿರುವ ಕ್ರಿಸ್ತ ಯೇಸು ಇರುವುದಿಲ್ಲವೋ ಅಂಥವರಿಗೆ ಜೀವವಿಲ್ಲ. ಮುಕ್ತಾಯದ ಮಾತುಗಳು 13 ದೇವಪುತ್ರ ಆಗಿರುವವರ ಹೆಸರಿನಲ್ಲಿ ನಂಬಿಕೆಯಿಡುವ ನಿಮಗೆ ನಿತ್ಯಜೀವವು ಉಂಟೆಂದು ನೀವು ತಿಳಿಯುವ ಹಾಗೆ ನಾನು ನಿಮಗೆ ಇವುಗಳನ್ನು ಬರೆದಿದ್ದೇನೆ. 14 ದೇವರ ಚಿತ್ತಾನುಸಾರವಾಗಿ ನಾವು ಏನಾದರೂ ಬೇಡಿಕೊಂಡರೆ, ದೇವರು ಕೇಳುತ್ತಾರೆ. ಇದೇ ದೇವರಲ್ಲಿ ನಮಗಿರುವ ನಿಶ್ಚಯ. 15 ನಾವು ಏನು ಬೇಡಿಕೊಂಡರೂ ದೇವರು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾರೆ ಎಂದು ತಿಳಿದಿದ್ದರೆ, ನಾವು ಬೇಡಿದವುಗಳು ನಮಗೆ ದೊರೆಯುತ್ತವೆ ಎಂಬ ದೃಢನಿಶ್ಚಯ ನಮಗಿದೆ. 16 ಮರಣಕರವಲ್ಲದ ಪಾಪವನ್ನು ಮಾಡುವ ಸಹೋದರ ಅಥವಾ ಸಹೋದರಿಯನ್ನು ಯಾರಾದರೂ ಕಂಡರೆ, ಆ ಸಹೋದರ ಅಥವಾ ಸಹೋದರಿಯರಿಗಾಗಿ ದೇವರಲ್ಲಿ ಬೇಡಿಕೊಳ್ಳಿರಿ. ದೇವರು ಅವರಿಗೆ ಜೀವವನ್ನು ದಯಪಾಲಿಸುವರು. ಮರಣಕರವಲ್ಲದ ಪಾಪವನ್ನು ಕುರಿತೇ ಈ ಮಾತನ್ನು ಹೇಳುತ್ತಿದ್ದೇನೆ. ಆದರೆ ಮರಣಕರವಾದ ಪಾಪವೂ ಉಂಟು. ಈ ಮರಣಕರವಾದ ಪಾಪದ ವಿಷಯವಾಗಿ ಬೇಡಿಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ. 17 ಅನೀತಿಯೆಲ್ಲವೂ ಪಾಪವಾಗಿದೆ. ಆದರೂ ಮರಣಕರವಲ್ಲದ ಪಾಪವುಂಟು. 18 ದೇವರಿಂದ ಹುಟ್ಟಿರುವವರು ಪಾಪದಲ್ಲಿ ಮುಂದುವರೆಯುವುದಿಲ್ಲವೆಂಬುದು ನಮಗೆ ಗೊತ್ತದೆ. ದೇವರಿಂದ ಹುಟ್ಟಿದವರನ್ನು ದೇವಪುತ್ರ ಆಗಿರುವ ಕ್ರಿಸ್ತ ಯೇಸುವು ಅಂಥವರನ್ನು ಕಾಪಾಡುವರು, ಕೆಡುಕನು ಅಂಥವರನ್ನು ಮುಟ್ಟುವುದಿಲ್ಲ. 19 ನಾವು ದೇವರ ಮಕ್ಕಳೆಂದೂ ಲೋಕವೆಲ್ಲವು ಕೆಡುಕನ ನಿಯಂತ್ರಣದಲ್ಲಿ ಇದೆ ಎಂದೂ ನಮಗೆ ಗೊತ್ತಿದೆ. 20 ದೇವರ ಪುತ್ರ ಆಗಿರುವ ಕ್ರಿಸ್ತ ಯೇಸುವು ಬಂದು, ಸತ್ಯವಾಗಿರುವ ದೇವರನ್ನು ನಾವು ಅರಿತುಕೊಳ್ಳುವ ಹಾಗೆ ಅವರು ನಮಗೆ ತಿಳುವಳಿಕೆಯನ್ನು ಕೊಟ್ಟಿದ್ದಾರೆಂದೂ ನಾವು ಸತ್ಯವಾಗಿರುವ ದೇವರಲ್ಲಿ ಅವರ ಪುತ್ರ ಆಗಿರುವ ಕ್ರಿಸ್ತ ಯೇಸುವಿನಲ್ಲಿ ಇರುವವರಾಗಿದ್ದೇವೆ ಎಂದೂ ನಮಗೆ ಗೊತ್ತಿದೆ. ಈ ಕ್ರಿಸ್ತ ಯೇಸುವೇ ಸತ್ಯ ದೇವರೂ ನಿತ್ಯಜೀವವೂ ಆಗಿದ್ದಾರೆ. 21 ಪ್ರಿಯ ಮಕ್ಕಳೇ, ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.