Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಥೆಸಲೋನಿಕದವರಿಗೆ 4 - ಕನ್ನಡ ಸಮಕಾಲಿಕ ಅನುವಾದ


ದೇವರನ್ನು ಮೆಚ್ಚಿಸಲು ಜೀವಿಸುವುದು

1 ಪ್ರಿಯರೇ, ನೀವು ಹೇಗೆ ನಡೆದುಕೊಂಡು ದೇವರನ್ನು ಮೆಚ್ಚಿಸಬೇಕೆಂದು ನಮ್ಮಿಂದ ಕೇಳಿದಂತೆಯೇ ಜೀವಿಸುತಿರುವಿರಿ. ಇದರಲ್ಲಿ ನೀವು ಹೆಚ್ಚೆಚ್ಚಾಗಿ ಮಾಡಬೇಕೆಂದು ನಾವು ಕಡೆಯದಾಗಿ ನಮಗೆ ಕರ್ತ ಆಗಿರುವ ಯೇಸುವಿನಲ್ಲಿ ನಿಮ್ಮನ್ನು ಪ್ರಬೋಧಿಸುತ್ತೇವೆ ಮತ್ತು ಉತ್ತೇಜಿಸುತ್ತೇವೆ.

2 ನಮಗೆ ಕರ್ತ ಆಗಿರುವ ಯೇಸುವಿನ ಅಧಿಕಾರದ ಮೂಲಕ ನಿಮಗೆ ಕೊಟ್ಟ ಆಜ್ಞೆಗಳನ್ನು ನೀವು ತಿಳಿದವರಾಗಿದ್ದೀರಿ.

3 ನೀವು ಪವಿತ್ರರಾಗಿ ಇರಬೇಕೆಂಬುದೇ ದೇವರ ಚಿತ್ತವಾಗಿದೆ. ಆದ್ದರಿಂದ ನೀವು ಕಾಮಾತಿರೇಕಕ್ಕೆ ದೂರವಾಗಿರಬೇಕು.

4 ನಿಮ್ಮಲ್ಲಿ ಪ್ರತಿಯೊಬ್ಬನೂ ಪವಿತ್ರತೆಯಿಂದಲೂ ಘನತೆಯಿಂದಲೂ ತನ್ನ ಸ್ವಂತ ದೇಹವನ್ನು ಕಾಪಾಡಿಕೊಳ್ಳಲು ತಿಳಿಯಬೇಕು.

5 ನೀವು ದೇವರನ್ನರಿಯದ ಯೆಹೂದ್ಯರಲ್ಲದವರಂತೆ ಕಾಮಾಭಿಲಾಷೆಗೆ ಒಳಪಡಬಾರದು.

6 ಈ ವಿಷಯದಲ್ಲಿ ಯಾರೂ ಅತಿಕ್ರಮಿಸಿ ತಮ್ಮ ಸಹೋದರ ಸಹೋದರಿಯನ್ನು ವಂಚಿಸದಿರಲಿ. ಏಕೆಂದರೆ ನಾವು ಮೊದಲು ತಿಳಿಸಿ ನಿಮಗೆ ಗಂಭೀರವಾಗಿ ಎಚ್ಚರಿಸಿದಂತೆ ಈ ಪಾಪಗಳ ವಿಷಯದಲ್ಲಿ ಕರ್ತ ಯೇಸುವು ಮುಯ್ಯಿಗೆ ಮುಯ್ಯಿ ತೀರಿಸುವವರಾಗಿದ್ದಾರೆ.

7 ದೇವರು ನಮ್ಮನ್ನು ಅಶುದ್ಧತೆಗೆ ಕರೆಯದೆ ಪವಿತ್ರ ಜೀವನವನ್ನು ಜೀವಿಸಲು ಕರೆದಿದ್ದಾರೆ.

8 ಆದ್ದರಿಂದ, ಈ ಆಜ್ಞೆಗಳನ್ನು ತಿರಸ್ಕರಿಸುವವನು ಮನುಷ್ಯನನ್ನಲ್ಲ ದೇವರನ್ನು ಅಂದರೆ, ತಮ್ಮ ಪವಿತ್ರಾತ್ಮರನ್ನು ನಮಗೆ ಕೊಡುವ ದೇವರನ್ನೇ ತಿರಸ್ಕರಿಸುತ್ತಾನೆ.

9 ಸಹೋದರ ಪ್ರೀತಿಯ ವಿಷಯದಲ್ಲಿ ನಿಮಗೆ ಬರೆಯುವುದು ಅವಶ್ಯವಿಲ್ಲ. ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ನೀವು ದೇವರಿಂದಲೇ ಉಪದೇಶ ಹೊಂದಿದ್ದೀರಿ.

10 ಸಮಸ್ತ ಮಕೆದೋನ್ಯದಲ್ಲಿರುವ ಸಹೋದರರನ್ನೆಲ್ಲಾ ನೀವು ಪ್ರೀತಿಸುತ್ತಿರುವುದು ನಿಜವೆ. ಆದರೂ ಪ್ರಿಯರೇ, ನೀವು ಪ್ರೀತಿಯಲ್ಲಿ ಇನ್ನೂ ಸಮೃದ್ಧಿಯಾಗಬೇಕೆಂದು ನಾವು ನಿಮ್ಮನ್ನು ಉತ್ತೇಜಿಸುತ್ತೇವೆ.

11 ಇದಲ್ಲದೆ ನಾವು ನಿಮಗೆ ಹೇಳಿದ ಪ್ರಕಾರ ಪ್ರಶಾಂತ ಜೀವನವೇ ನಿಮ್ಮ ಗುರಿಯಾಗಿರಲಿ: ನೀವು ಸ್ವಂತ ಕಾರ್ಯಗಳನ್ನೇ ನಡೆಸಿಕೊಂಡು, ನಿಮ್ಮ ಕೈಯಾರೆ ಕೆಲಸ ಮಾಡುವವರಾಗಿರಿ.

12 ಹೀಗೆ ನಿಮ್ಮ ಅನುದಿನದ ಜೀವನವು ಹೊರಗಿನವರ ಮುಂದೆ ಯೋಗ್ಯವಾಗಿರುವುದು ಮತ್ತು ನೀವು ಯಾರ ಮೇಲೆಯೂ ಆತುಕೊಳ್ಳದೆ ಬಾಳುವಿರಿ.


ಪುನರುತ್ಥಾನದ ನಿರೀಕ್ಷೆ

13 ಪ್ರಿಯರೇ, ನೀವು ನಿರೀಕ್ಷೆಯಿಲ್ಲದೆ ಗೋಳಾಡುವವರಂತೆ ಮರಣ ಹೊಂದಿದ ವಿಶ್ವಾಸಿಗಳ ಬಗ್ಗೆ ಅಜ್ಞಾನಿಗಳಾಗಿರಬಾರದೆಂದು ನಾವು ಅಪೇಕ್ಷಿಸುತ್ತೇವೆ.

14 ಏಕೆಂದರೆ ಯೇಸು ಸತ್ತು ಪುನಃ ಜೀವಂತವಾಗಿ ಎದ್ದರೆಂದು ನಾವು ನಂಬಿದರೆ, ಅದರಂತೆ ಯೇಸುವಿನಲ್ಲಿ ನಿದ್ರೆಹೋದವರನ್ನು ಸಹ ದೇವರು ಅವರೊಡನೆ ಕರೆದುಕೊಂಡು ಬರುವರು.

15 ಕರ್ತ ಯೇಸುವಿನ ಪುನರಾಗಮನದವರೆಗೆ ಇನ್ನೂ ಜೀವದಿಂದ ಉಳಿದಿರುವ ನಾವು ಮರಣಹೊಂದಿದವರಿಗಿಂತ ಮುಂದಾಗಿ ಪುನರುತ್ಥಾನವಾಗುವುದಿಲ್ಲ ಎಂದು, ನಾವು ಕರ್ತ ಯೇಸುವಿನ ವಾಕ್ಯದ ಆಧಾರದಿಂದ ನಿಮಗೆ ಹೇಳುತ್ತಿದ್ದೇವೆ.

16 ಏಕೆಂದರೆ ಕರ್ತ ಯೇಸು ತಾವೇ ಆಜ್ಞಾಘೋಷದೊಡನೆಯೂ ಪ್ರಧಾನ ದೇವದೂತನ ಧ್ವನಿಯೊಡನೆಯೂ ದೇವರ ತುತೂರಿಯೊಡನೆಯೂ ಪರಲೋಕದಿಂದ ಇಳಿದು ಬರುವರು. ಆಗ ಕ್ರಿಸ್ತ ಯೇಸುವಿನಲ್ಲಿ ಸತ್ತವರು ಮೊದಲು ಎದ್ದು ಬರುವರು.

17 ಆಮೇಲೆ, ಜೀವದಿಂದ ಉಳಿದಿರುವ ನಾವು ಅವರೊಂದಿಗೆ ಅಂತರಿಕ್ಷದಲ್ಲಿ ಕರ್ತ ಯೇಸುವನ್ನು ಎದುರುಗೊಳ್ಳುವುದಕ್ಕಾಗಿ ಮೇಘಗಳಲ್ಲಿ ಒಯ್ಯಲಾಗುವೆವು. ಹೀಗೆ ನಾವು ಸದಾಕಾಲವೂ ಕರ್ತ ಯೇಸುವಿನ ಜೊತೆಯಲ್ಲಿಯೇ ಇರುವೆವು.

18 ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು