Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಥೆಸಲೋನಿಕದವರಿಗೆ 3 - ಕನ್ನಡ ಸಮಕಾಲಿಕ ಅನುವಾದ

1 ಆದ್ದರಿಂದ ನಿಮ್ಮ ಅಗಲಿಕೆಯನ್ನು ಸಹಿಸಲಾಗದೆ, ನಾವು ಅಥೇನೆಯಲ್ಲಿ ಒಬ್ಬಂಟಿಗರಾಗಿಯೇ ಇರುವುದು ಒಳ್ಳೆಯದೆಂದು ಯೋಚಿಸಿದೆವು.

2 ನಿಮ್ಮನ್ನು ದೃಢಪಡಿಸುವುದಕ್ಕೂ ನಿಮ್ಮ ನಂಬಿಕೆಯ ವಿಷಯವಾಗಿ ನಿಮ್ಮನ್ನು ಉತ್ತೇಜಿಸುವುದಕ್ಕೂ ನಮ್ಮ ಸಹೋದರನೂ ದೇವರ ಸೇವಕನೂ ಯೇಸುಕ್ರಿಸ್ತರ ಸುವಾರ್ತೆಯಲ್ಲಿ ನಮ್ಮ ಜೊತೆ ಸೇವಕನೂ ಆಗಿರುವ ತಿಮೊಥೆಯನನ್ನು ಕಳುಹಿಸಿದೆವು.

3 ಹೀಗಿರುವಲ್ಲಿ ಈ ಸಂಕಟಗಳಿಂದ ಒಬ್ಬರೂ ಚಂಚಲರಾಗಬೇಡಿರಿ. ಏಕೆಂದರೆ ಇವುಗಳಿಗಾಗಿಯೇ ನಾವು ನೇಮಕವಾಗಿದ್ದೇವೆ ಎಂದು ನೀವೇ ಬಲ್ಲಿರಿ.

4 ನಾವು ನಿಮ್ಮ ಬಳಿಯಲ್ಲಿದ್ದಾಗ ಸಂಕಟವನ್ನು ಅನುಭವಿಸಲೇಬೇಕೆಂದು ಮುಂದಾಗಿ ಹೇಳಿದೆವಲ್ಲಾ. ಹಾಗೆ ಆಯಿತೆಂದು ನೀವೂ ಚೆನ್ನಾಗಿ ಬಲ್ಲಿರಿ.

5 ಈ ಕಾರಣದಿಂದ, ನಮ್ಮ ಪ್ರಯಾಸವು ವ್ಯರ್ಥವಾಗುವಂತೆ ಶೋಧಕನು ನಿಮ್ಮನ್ನು ಶೋಧಿಸುವನೋ ಎಂಬ ಭಯದ ದೆಸೆಯಿಂದ, ನಾನು ಸಹ ಸಹಿಸಲಾರದೆ ನಿಮ್ಮ ನಂಬಿಕೆಯ ವಿಷಯದಲ್ಲಿ ತಿಳಿದುಕೊಳ್ಳುವುದಕ್ಕೆ ತಿಮೊಥೆಯನನ್ನು ಕಳುಹಿಸಿದೆನು.


ತಿಮೊಥೆ ಕೊಟ್ಟ ಪ್ರೋತ್ಸಾಹ ಕಾರ್ಯದ ವರದಿ

6 ತಿಮೊಥೆಯನು ಈಗಲೇ ನಿಮ್ಮಿಂದ ನಮ್ಮ ಬಳಿಗೆ ಬಂದು ನಿಮ್ಮ ವಿಶ್ವಾಸ ಹಾಗೂ ಪ್ರೀತಿಯ ವಿಷಯವಾಗಿ ಒಳ್ಳೆಯ ವರ್ತಮಾನವನ್ನು ತಂದಿದ್ದಾನೆ. ನೀವು ನಮ್ಮನ್ನು ಯಾವಾಗಲೂ ಚೆನ್ನಾಗಿ ನೆನಪಿಸಿಕೊಂಡು, ನಾವು ನಿಮ್ಮನ್ನು ಹೇಗೋ ಹಾಗೆಯೇ ನೀವೂ ನಮ್ಮನ್ನು ನೋಡುವುದಕ್ಕೆ ಹಾರೈಸುತ್ತೀರೆಂಬುದನ್ನು ತಿಳಿಸಿದ್ದಾನೆ.

7 ಈ ಕಾರಣದಿಂದ ಪ್ರಿಯರೇ, ನಮ್ಮ ಎಲ್ಲಾ ಇಕ್ಕಟ್ಟು ಹಾಗೂ ಹಿಂಸೆಗಳಲ್ಲಿಯೂ ನಿಮ್ಮ ನಂಬಿಕೆಯ ಮೂಲಕ ನಮಗೆ ಆದರಣೆಯಾಯಿತು.

8 ಏಕೆಂದರೆ ನೀವು ಕರ್ತ ಯೇಸುವಿನಲ್ಲಿ ದೃಢವಾಗಿ ನಿಂತಿರುವುದರಿಂದಲೇ ಈಗ ನಾವು ನಿಜವಾಗಿಯೂ ಜೀವಿಸುತ್ತಿದ್ದೇವೆ.

9 ನಿಮ್ಮ ನಿಮಿತ್ತ ನಮ್ಮ ದೇವರ ಮುಂದೆ ನಮಗಿರುವ ಎಲ್ಲಾ ಆನಂದಕ್ಕೆ ಬದಲಾಗಿ ದೇವರಿಗೆ ಹೇಗೆ ಸಾಕಷ್ಟು ಕೃತಜ್ಞತೆಯನ್ನು ಸಲ್ಲಿಸಬಹುದು?

10 ನಿಮ್ಮ ಮುಖವನ್ನು ನೋಡುವುದಕ್ಕಾಗಿಯೂ ನಿಮ್ಮ ನಂಬಿಕೆಯಲ್ಲಿರುವ ಕೊರತೆಯನ್ನು ನಿವಾರಿಸುವುದಕ್ಕೂ ನಾವು ಹಗಲಿರುಳು ಆಸಕ್ತಿಯಿಂದ ಪ್ರಾರ್ಥಿಸುತ್ತಿದ್ದೇವೆ.

11 ನಮ್ಮ ತಂದೆಯಾದ ದೇವರೂ ನಮಗೆ ಕರ್ತ ಆಗಿರುವ ಯೇಸುವೂ ನಾವು ನಿಮ್ಮಲ್ಲಿಗೆ ಬರುವಂತೆ ಮಾರ್ಗವನ್ನು ಸುಗಮಗೊಳಿಸಲಿ.

12 ನಮ್ಮ ಪ್ರೀತಿಯು ನಿಮ್ಮ ಕಡೆಗೆ ಸಮೃದ್ಧಿಯಾಗಿರುವಂತೆಯೇ ನಿಮ್ಮ ಪ್ರೀತಿಯೂ ಒಬ್ಬರಿಂದೊಬ್ಬರಿಗೂ ಎಲ್ಲರ ಮೇಲೆಯೂ ತುಂಬಿರುವಂತೆ ಕರ್ತ ಯೇಸು ನಿಮಗೆ ಅನುಗ್ರಹಿಸಲಿ.

13 ನಮಗೆ ಕರ್ತ ಆಗಿರುವ ಯೇಸುವು ತಮ್ಮ ಎಲ್ಲಾ ಪರಿಶುದ್ಧರೊಂದಿಗೆ ಬರುವಾಗ, ನೀವು ತಂದೆ ದೇವರ ಮುಂದೆ ಪರಿಶುದ್ಧರೂ ನಿರ್ದೋಷಿಗಳೂ ಆಗಿರುವಂತೆ ನಿಮ್ಮ ಹೃದಯಗಳನ್ನು ಬಲಪಡಿಸಲಿ!

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು