Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ತಿಮೊಥೆಯನಿಗೆ 3 - ಕನ್ನಡ ಸಮಕಾಲಿಕ ಅನುವಾದ


ಮೇಲ್ವಿಚಾರಕರೂ ಸಭಾಸೇವಕರೂ

1 ಸಭೆಯ ಮೇಲ್ವಿಚಾರಕನಾಗಲು ಬಯಸುವವನು ಒಳ್ಳೆಯ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ.

2 ಸಭೆಯ ಮೇಲ್ವಿಚಾರಕನು ನಿಂದಾರಹಿತನಾಗಿ, ಏಕಪತ್ನಿಯುಳ್ಳವನೂ ಜಿತೇಂದ್ರಿಯನೂ ಸ್ವಸ್ಥಚಿತ್ತನೂ ಗೌರವಸ್ಥನೂ ಅತಿಥಿ ಸತ್ಕಾರ ಮಾಡುವವನೂ ಬೋಧಿಸುವುದರಲ್ಲಿ ಪ್ರವೀಣನೂ ಆಗಿರಬೇಕು.

3 ಅವನು ಮದ್ಯಪಾನ ಮಾಡುವವನಾಗಿರಬಾರದು, ಹೊಡೆದಾಡುವವನಾಗಿರಬಾರದು. ಆದರೆ ಸಾತ್ವಿಕನೂ ಕುತರ್ಕ ಮಾಡದವನೂ ಹಣದಾಶೆಯಿಲ್ಲದವನೂ ಆಗಿರಬೇಕು.

4 ಪೂರ್ಣ ಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವನಾಗಿರಬೇಕು.

5 ಸ್ವಂತ ಮನೆಯವರನ್ನು ಆಳುವುದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಮರಿಸುವನು?

6 ಅವನು ಹೊಸದಾಗಿ ವಿಶ್ವಾಸಕ್ಕೆ ಬಂದವನಾಗಿರಬಾರದು. ಅಂಥವನಾದರೆ ಉಬ್ಬಿಕೊಂಡು ಸೈತಾನನ ಶಿಕ್ಷಾವಿಧಿಗೆ ಬಲಿಬೀಳುವನು.

7 ಇದಲ್ಲದೆ ಅವನು ನಿಂದೆಗೆ ಗುರಿಯಾಗದವನೂ ಸೈತಾನನ ಉರುಲಿಗೆ ಸಿಕ್ಕಿ ಬೀಳದವನೂ ಆಗಿದ್ದಾನೆಂಬ ಒಳ್ಳೆಯ ಸಾಕ್ಷಿಯನ್ನು ಹೊಂದಿದವನಾಗಿರಬೇಕು.

8 ಅದೇ ರೀತಿಯಾಗಿ ಸಭಾಸೇವಕರು ಗೌರವವುಳ್ಳವರಾಗಿರಬೇಕು. ಅವರು ಎರಡು ನಾಲಿಗೆಯುಳ್ಳವರಾಗಿರಬಾರದು. ಮದ್ಯಾಸಕ್ತರೂ ನೀಚಲಾಭವನ್ನು ಅಪೇಕ್ಷಿಸುವವರೂ ಆಗಿರದೆ

9 ನಂಬಿಕೆಯ ರಹಸ್ಯವನ್ನು ಶುದ್ಧಮನಸ್ಸಾಕ್ಷಿಯಿಂದ ಹಿಡಿದುಕೊಂಡವರಾಗಿರಬೇಕು.

10 ಇದಲ್ಲದೆ ಇವರು ಸಹ ಮೊದಲು ಪರೀಕ್ಷೆಗೊಳಪಡಬೇಕು. ಅವರು ನಿಂದಾರಹಿತರಾಗಿ ಕಂಡು ಬಂದರೆ ಸಭಾ ಹಿರಿಯರಾಗಿ ಸೇವೆಮಾಡಲಿ.

11 ಹಾಗೆಯೇ ಅವರ ಹೆಂಡತಿಯರು ಗೌರವವುಳ್ಳವರಾಗಿರಬೇಕು. ಚಾಡಿ ಹೇಳದವರೂ ಸ್ವಸ್ಥ ಬುದ್ಧಿಯುಳ್ಳವರೂ ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರೂ ಆಗಿರತಕ್ಕದ್ದು.

12 ಸಭಾಸೇವಕರು ಏಕಪತ್ನಿಯುಳ್ಳವರೂ ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ಆಳುವವರೂ ಆಗಿರಬೇಕು.

13 ಸಭಾ ಹಿರಿಯರಾಗಿ ಚೆನ್ನಾಗಿ ಸೇವೆ ಮಾಡಿದವರು ತಮಗೆ ಒಳ್ಳೆಯ ಸ್ಥಿತಿಯನ್ನೂ, ಕ್ರಿಸ್ತ ಯೇಸುವಿನಲ್ಲಿರುವ ವಿಶ್ವಾಸದಲ್ಲಿ ಬಹು ಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ.


ಪೌಲನ ಸೂಚನೆಗಳಿಗೆ ಕಾರಣಗಳು

14 ನಾನು ನಿನ್ನ ಬಳಿಗೆ ಬೇಗನೆ ಬರುವೆನೆಂಬ ನಿರೀಕ್ಷೆಯಿಂದಲೇ ನಿನಗೆ ಈ ವಿಷಯಗಳನ್ನು ಬರೆದಿದ್ದೇನೆ.

15 ಒಂದು ವೇಳೆ ನಾನು ತಡ ಮಾಡಿದರೂ ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿರುವ ದೇವರ ಮನೆಯಲ್ಲಿ ಎಂದರೆ ಜೀವಸ್ವರೂಪರಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ಗೊತ್ತಾಗಿರಬೇಕು.

16 ಎಲ್ಲಾ ಪ್ರಶ್ನೆಗಳಿಂದ ಹೆಚ್ಚಾಗಿ ದೈವ ಭಕ್ತಿಯ ರಹಸ್ಯವು ದೊಡ್ಡದಾದದ್ದು ಅದು ಯಾವುದೆಂದರೆ: “ದೇವರು ಮನುಷ್ಯ ರೂಪದಲ್ಲಿ ಪ್ರತ್ಯಕ್ಷರಾದರು. ಆತ್ಮದಲ್ಲಿ ರುಜುಪಡಿಸಲಾದರು. ದೂತರಿಗೆ ಕಾಣಿಸಿಕೊಂಡರು, ಯೆಹೂದ್ಯರಲ್ಲದವರಿಗೆ ಸಾರಲಾದರು, ಲೋಕದಲ್ಲಿ ನಂಬಲಾದರು, ಮಹಿಮೆಗೆ ಒಯ್ಯಲಾದರು!”

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು