1 ಕೊರಿಂಥದವರಿಗೆ 16 - ಕನ್ನಡ ಸಮಕಾಲಿಕ ಅನುವಾದದೇವಜನರಿಗಾಗಿ ಹಣ ಕೂಡಿಸುವುದು 1 ಈಗ ದೇವಜನರಿಗೋಸ್ಕರ ಹಣ ಕೂಡಿಸಿಡುವುದನ್ನು ಕುರಿತು: ನಾನು ಗಲಾತ್ಯದ ಸಭೆಗಳಿಗೆ ಹೇಳಿದ್ದನ್ನೇ ನೀವೂ ಮಾಡಿರಿ. 2 ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಆದಾಯಕ್ಕೆ ತಕ್ಕಂತೆ ವಾರದ ಮೊದಲನೆಯ ದಿನದಲ್ಲಿ ಕೂಡಿಟ್ಟುಕೊಂಡಿರಲಿ. ಹೀಗೆ ಮಾಡಿದರೆ, ನಾನು ಬಂದಾಗ ನೀವು ಹಣ ಕೂಡಿಸುವ ಅವಶ್ಯವಿರುವುದಿಲ್ಲ. 3 ನಾನು ನಿಮ್ಮಲ್ಲಿಗೆ ಬಂದಾಗ, ನೀವು ಯಾರನ್ನು ಅನುಮೋದಿಸುವಿರೋ, ಅವರಿಗೆ ಪತ್ರ ಕೊಟ್ಟು ನಿಮ್ಮ ಕೊಡುಗೆಯನ್ನು ತೆಗೆದುಕೊಂಡು ಯೆರೂಸಲೇಮಿಗೆ ಹೋಗುವಂತೆ ಕಳುಹಿಸುವೆನು. 4 ನಾನು ಸಹ ಹೋಗುವುದು ಯುಕ್ತವಾಗಿದ್ದರೆ, ಅವರು ನನ್ನೊಂದಿಗೆ ಬರಲಿ. ವೈಯಕ್ತಿಕ ಬೇಡಿಕೆ 5 ಮಕೆದೋನ್ಯವನ್ನು ದಾಟಿದ ಮೇಲೆ, ಅದೇ ಮಾರ್ಗವಾಗಿ ನಾನು ಪುನಃ ನಿಮ್ಮ ಬಳಿಗೆ ಬರುವೆನು. 6 ಬಹುಶಃ ನಾನು ಸ್ವಲ್ಪ ಸಮಯ ನಿಮ್ಮೊಂದಿಗೆ ಇದ್ದ ಮೇಲೆ ಅಥವಾ ಚಳಿಗಾಲವನ್ನು ಪೂರ್ತಿಯಾಗಿ ನಿಮ್ಮೊಂದಿಗೆ ಕಳೆಯಲು ಬಯಸುತ್ತೇನೆ. ಹೀಗೆ ನಾನು ಹೋಗಬೇಕಾದ ಸ್ಥಳಗಳಲ್ಲಿ ನೀವು ನನಗೆ ಸಹಾಯ ಮಾಡಬಹುದು. 7 ನಾನು ಹಾದುಹೋಗುವಾಗ, ನಿಮ್ಮನ್ನು ಸ್ವಲ್ಪ ಸಮಯ ಮಾತ್ರ ಸಂದರ್ಶಿಸುವುದಕ್ಕೆ ನನಗೆ ಇಷ್ಟವಿಲ್ಲ. ಕರ್ತನು ಅನುಮತಿಸಿದರೆ, ನಿಮ್ಮ ಬಳಿಯಲ್ಲಿ ಬಂದು ಹೆಚ್ಚುಕಾಲ ಇರುವೆನೆಂದು ನಿರೀಕ್ಷಿಸುತ್ತೇನೆ. 8 ಆದರೆ ಐವತ್ತು ದಿನಗಳ ಹಬ್ಬದ ತನಕ ಎಫೆಸದಲ್ಲಿರುವೆನು. 9 ಏಕೆಂದರೆ, ಪರಿಣಾಮಕಾರಿಯಾದ ಸೇವೆಗೆ ದೊಡ್ಡದಾಗಿ ಬಾಗಿಲು ನನಗೆ ತೆರೆದಿದೆ, ಬಹಳ ಜನ ವಿರೋಧಿಗಳೂ ಇದ್ದಾರೆ. 10 ನನ್ನ ಹಾಗೆಯೇ ತಿಮೊಥೆ ಕರ್ತನ ಸೇವೆ ಮಾಡುತ್ತಿದ್ದಾನೆ. ಅವನು ಬಂದರೆ, ಅವನು ನಿಮ್ಮೊಂದಿಗಿರುವಾಗ ಅವನಿಗೆ ಯಾವ ಭಯವೂ ಇಲ್ಲದಂತೆ ನೋಡಿಕೊಳ್ಳಿರಿ. 11 ಯಾರೂ ಅವನನ್ನು ಹೀನಾಯವಾಗಿ ಕಾಣಬಾರದು. ಆದರೆ ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನದಿಂದ ಕಳುಹಿಸಿಕೊಡಿರಿ. ಅವನು ಸಹೋದರರೊಂದಿಗೆ ಬರುವುದನ್ನು ಎದುರು ನೋಡುತ್ತಿದ್ದೇನೆ. 12 ಈಗ ನಮ್ಮ ಸಹೋದರನಾದ ಅಪೊಲ್ಲೋಸನ ವಿಷಯವೇನೆಂದರೆ, ಅವನು ಇತರ ಸಹೋದರರೊಂದಿಗೆ ನಿಮ್ಮ ಬಳಿಗೆ ಬರಬೇಕೆಂದು ಅವನಿಗೆ ಬಹಳವಾಗಿ ಕೇಳಿಕೊಂಡೆನು. ಆದರೆ ಈಗ ಬರುವುದಕ್ಕೆ ಅವನಿಗೆ ಸ್ವಲ್ಪವೂ ಮನಸ್ಸಿಲ್ಲ. ಅವನು ತನಗೆ ಸಂದರ್ಭ ಸಿಕ್ಕಿದಾಗ ಬರುವನು. 13 ಎಚ್ಚರವಾಗಿರಿ, ವಿಶ್ವಾಸದಲ್ಲಿ ಸ್ಥಿರವಾಗಿ ನಿಲ್ಲಿರಿ, ಧೈರ್ಯವಾಗಿರಿ, ಬಲಗೊಳ್ಳಿರಿ. 14 ನೀವು ಮಾಡುವುದನ್ನೆಲ್ಲಾ ಪ್ರೀತಿಯಿಂದ ಮಾಡಿರಿ. 15 ಸ್ತೆಫನನ ಕುಟುಂಬದವರು ಅಖಾಯದಲ್ಲಿ ಪ್ರಥಮವಾಗಿ ವಿಶ್ವಾಸಿಗಳಾದವರು ಎಂಬುದನ್ನು ನೀವು ಬಲ್ಲಿರಿ. ಅವರು ದೇವಜನರಿಗೆ ಸೇವೆ ಮಾಡುವುದಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡವರಾಗಿದ್ದಾರೆ. 16 ಪ್ರಿಯರೇ, ನೀವು ಇಂಥವರಿಗೂ ಈ ಸೇವೆಯಲ್ಲಿ ಅವರೊಂದಿಗೆ ಪ್ರಯಾಸಪಡುವವರಿಗೂ ವಿಧೇಯರಾಗಿರಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 17 ಸ್ತೆಫನನೂ ಫೊರ್ತುನಾತನೂ ಅಖಾಯಿಕನೂ ಬಂದುದರಿಂದ ನನಗೆ ಸಂತೋಷವಾಯಿತು. ನೀವಿಲ್ಲದ್ದ ಕೊರತೆಯನ್ನು ಅವರು ನನಗೆ ಒದಗಿಸಿದ್ದಾರೆ. 18 ಅವರು ನನ್ನ ಆತ್ಮವನ್ನೂ, ನಿಮ್ಮ ಆತ್ಮಗಳನ್ನೂ ಉಪಶಮನ ಮಾಡಿದರು. ನೀವು ಇಂಥವರನ್ನು ಸನ್ಮಾನಿಸಿರಿ. ಅಂತಿಮ ವಂದನೆಗಳು 19 ಏಷ್ಯಾದ ಸೀಮೆಯ ಸಭೆಗಳವರು ನಿಮ್ಮನ್ನು ವಂದಿಸುತ್ತಾರೆ. ಅಕ್ವಿಲನೂ ಮತ್ತು ಪ್ರಿಸ್ಕಳೂ ತಮ್ಮ ಮನೆಯಲ್ಲಿ ಕೂಡುವ ಸಭೆಯವರೊಂದಿಗೆ ಕರ್ತನ ಹೆಸರಿನಲ್ಲಿ ನಿಮ್ಮನ್ನು ಹೃದಯಪೂರ್ವಕವಾಗಿ ವಂದಿಸುತ್ತಾರೆ. 20 ಸಹೋದರರೆಲ್ಲರೂ ನಿಮ್ಮನ್ನು ವಂದಿಸುತ್ತಾರೆ. ಪವಿತ್ರವಾದ ಮುದ್ದಿಟ್ಟು, ಒಬ್ಬರನ್ನೊಬ್ಬರು ವಂದಿಸಿರಿ. 21 ಪೌಲನೆಂಬ ನಾನು, ಸ್ವಂತ ಕೈಯಿಂದ ಈ ವಂದನೆಯನ್ನು ಬರೆದಿದ್ದೇನೆ. 22 ಯಾವನಾದರೂ ಕರ್ತನನ್ನು ಪ್ರೀತಿಸದಿದ್ದರೆ, ಅವನು ಶಾಪಗ್ರಸ್ತನಾಗಲಿ! ಕರ್ತನೇ, ಬಾ! 23 ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೊಂದಿಗಿರಲಿ. 24 ಕ್ರಿಸ್ತ ಯೇಸುವಿನಲ್ಲಿ ನನ್ನ ಪ್ರೀತಿಯು ನಿಮ್ಮೆಲ್ಲರೊಂದಿಗೆ ಇದೆ. ಆಮೆನ್. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.