1 ಕೊರಿಂಥದವರಿಗೆ 13 - ಕನ್ನಡ ಸಮಕಾಲಿಕ ಅನುವಾದ1 ನಾನು ಮನುಷ್ಯರ ಭಾಷೆಗಳನ್ನೂ, ದೇವದೂತರ ಭಾಷೆಗಳನ್ನೂ ಮಾತನಾಡುವವನಾದರೂ ನನಗೆ ಪ್ರೀತಿಯಿಲ್ಲದಿದ್ದರೆ, ನಾದ ಕೊಡುವ ಕಂಚೂ ಗಣಗಣಿಸುವ ತಾಳವೂ ಆಗಿದ್ದೇನೆ. 2 ನನಗೆ ಪ್ರವಾದನ ವರವಿದ್ದರೂ ನಾನು ಎಲ್ಲಾ ರಹಸ್ಯಗಳನ್ನೂ, ಸಕಲ ವಿದ್ಯೆಯನ್ನು ತಿಳಿದಿದ್ದರೂ ಬೆಟ್ಟಗಳನ್ನು ಕದಲಿಸುವಷ್ಟು ನಂಬಿಕೆಯಿದ್ದರೂ ನನಗೆ ಪ್ರೀತಿಯಿಲ್ಲದಿದ್ದರೆ, ಶೂನ್ಯನಾಗಿದ್ದೇನೆ. 3 ನಾನು ನನ್ನ ಎಲ್ಲಾ ಆಸ್ತಿಯನ್ನು ದಾನಮಾಡಿದರೂ, ನಾನು ಹೊಗಳಿಕೊಳ್ಳುವಂತೆ ನನ್ನ ದೇಹವನ್ನು ಸುಡುವುದಕ್ಕಾಗಿ ಒಪ್ಪಿಸಿಕೊಟ್ಟರೂ ಪ್ರೀತಿಯು ನನಗಿಲ್ಲದಿದ್ದರೆ, ನನಗೇನೂ ಪ್ರಯೋಜನವಾಗುವುದಿಲ್ಲ. 4 ಪ್ರೀತಿ ತಾಳ್ಮೆಯುಳ್ಳದ್ದು, ಪ್ರೀತಿ ದಯೆಯುಳ್ಳದ್ದು, ಪ್ರೀತಿ ಅಸೂಯೆಪಡುವುದಿಲ್ಲ, ಪ್ರೀತಿ ಹೊಗಳಿಕೊಳ್ಳುವುದಿಲ್ಲ, ಗರ್ವಪಡುವುದಿಲ್ಲ, 5 ಪ್ರೀತಿಯು ಇತರರನ್ನು ಅವಮಾನಪಡಿಸುವುದಿಲ್ಲ, ಸ್ವಹಿತವನ್ನೇ ಹುಡುಕುವುದಿಲ್ಲ, ಸುಲಭವಾಗಿ ಸಿಟ್ಟುಗೊಳ್ಳುವುದಿಲ್ಲ, ಅಪಕಾರವನ್ನು ಎಣಿಸುವುದಿಲ್ಲ, 6 ಪ್ರೀತಿ ಕೆಟ್ಟದ್ದರಲ್ಲಿ ಸಂತೋಷಪಡುವುದಿಲ್ಲ, ಸತ್ಯದೊಂದಿಗೆ ಸಂತೋಷ ಪಡುತ್ತದೆ. 7 ಯಾವಾಗಲೂ ಸಂರಕ್ಷಿಸುತ್ತದೆ, ಯಾವಾಗಲೂ ನಂಬುತ್ತದೆ, ಯಾವಾಗಲೂ ನಿರೀಕ್ಷಿಸುತ್ತದೆ, ಯಾವಾಗಲೂ ಸಹಿಸಿಕೊಳ್ಳುತ್ತದೆ. 8 ಪ್ರೀತಿಯು ಎಂದಿಗೂ ಅಳಿದುಹೋಗುವುದಿಲ್ಲ, ಪ್ರವಾದನೆಗಳಾದರೋ ಇಲ್ಲದಂತಾಗುವುವು, ಅನ್ಯ ಭಾಷೆಗಳು ಗತಿಸಿ ಹೋಗುವುವು, ವಿದ್ಯೆಯೋ ಇಲ್ಲದಂತಾಗುವುವು. 9 ನಾವು ಅಪೂರ್ಣವಾಗಿ ತಿಳಿದುಕೊಂಡಿದ್ದೇವೆ, ಅಪೂರ್ಣವಾಗಿ ಪ್ರವಾದಿಸುತ್ತೇವೆ. 10 ಆದರೆ ಸಂಪೂರ್ಣವಾದದ್ದು ಬಂದಾಗ, ಭಾಗವಾದದ್ದು ಅಳಿದುಹೋಗುವುದು. 11 ನಾನು ಬಾಲಕನಾಗಿದ್ದಾಗ, ಬಾಲಕನ ಮಾತುಗಳನ್ನಾಡಿದೆನು, ಬಾಲಕನಂತೆ ಯೋಚಿಸಿದೆನು, ಬಾಲಕನಂತೆಯೇ ತರ್ಕಿಸಿದೆನು. ಪ್ರೌಢನಾದಾಗ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು. 12 ಈಗ ನಾವು ಕನ್ನಡಿಯಲ್ಲಿ ಮೊಬ್ಬಾಗಿ ನೋಡುತ್ತೇವೆ. ಆಗ ಮುಖಾಮುಖಿಯಾಗಿ ನೋಡುವೆವು. ಈಗ ಸ್ವಲ್ಪ ಮಾತ್ರ ನನಗೆ ತಿಳಿದಿದೆ. ಆಗ ದೇವರು ನನ್ನನ್ನು ಸಂಪೂರ್ಣವಾಗಿ ತಿಳಿದುಕೊಂಡಂತೆ, ನಾನು ಸಂಪೂರ್ಣವಾಗಿ ತಿಳಿದುಕೊಳ್ಳುವೆನು. 13 ಆದರೆ ಈಗ ನಂಬಿಕೆ, ನಿರೀಕ್ಷೆ, ಪ್ರೀತಿ, ಈ ಮೂರೇ ಉಳಿದಿರುತ್ತವೆ. ಇವುಗಳಲ್ಲಿ ಮಹತ್ತಾದದ್ದು ಪ್ರೀತಿಯೇ. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.