Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಹೋಶೇಯ 9 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲು ಅನ್ಯದೇಶಕ್ಕೆ ಒಯ್ಯಲ್ಪಟ್ಟು ಅನುಭವಿಸಬೇಕಾದ ದುರವಸ್ಥೆ

1 ಇಸ್ರಾಯೇಲೇ, ಜನಾಂಗಗಳಂತೆ ವಿುತಿಮೀರಿ ಉಲ್ಲಾಸಿಸಬೇಡ; ನೀನು ನಿನ್ನ ದೇವರನ್ನು ಬಿಟ್ಟು ಸೂಳೆತನ ನಡಿಸಿದ್ದೀ; ಎಲ್ಲಾ ಕಣಗಳಲ್ಲಿನ ಫಲವನ್ನು ಅದರ ಪ್ರತಿಫಲವನ್ನಾಗಿ ಆಶಿಸಿದ್ದೀ.

2 ಕಣವೂ ದ್ರಾಕ್ಷೆಯ ತೊಟ್ಟಿಯೂ ನಿನ್ನ ಜನರಿಗೆ ಜೀವನವಾಗವು; ದ್ರಾಕ್ಷಾರಸದ ನಿರೀಕ್ಷೆಯು ಅವರಿಗೆ ವ್ಯರ್ಥವಾಗಿಹೋಗುವದು.

3 ಅವರು ಯೆಹೋವನ ದೇಶದಲ್ಲಿ ಇನ್ನು ವಾಸಿಸರು. ಎಫ್ರಾಯೀಮ್ಯರು ಐಗುಪ್ತಕ್ಕೆ ಹಿಂದಿರುಗುವರು, ಅಶ್ಶೂರದಲ್ಲಿ ಅವರು ತಿನ್ನುವ ಆಹಾರವು ಹೊಲಸಾಗುವದು.

4 ಯೆಹೋವನಿಗೆ ದ್ರಾಕ್ಷಾರಸವನ್ನು ನೈವೇದ್ಯವಾಗಿ ಸುರಿಯರು, ಅವರ ಯಜ್ಞಗಳು ಆತನಿಗೆ ಮೆಚ್ಚಿಕೆಯಾಗವು; ಅವರ ಆಹಾರವು ಹೆಣದ ಮನೆಯ ಆಹಾರದಂತಿರುವದು, ಅದನ್ನು ತಿನ್ನುವವರೆಲ್ಲರೂ ಅಶುದ್ಧರಾಗುವರು, ಅದು ಹೊಟ್ಟೆತುಂಬುವದಕ್ಕೆ ಮಾತ್ರ ಅನುಕೂಲಿಸುವದು. ಅದು ಯೆಹೋವನ ಆಲಯಕ್ಕೆ ಬಂದಿಲ್ಲವಷ್ಟೆ.

5 ನೀವು ಹಬ್ಬದ ದಿನದಲ್ಲಿ, ಯೆಹೋವನ ಮಹೋತ್ಸವ ದಿವಸದಲ್ಲಿ ಏನು ಮಾಡುವಿರಿ?

6 ಆಹಾ, ಅವರು ಹಾಳಾದ ದೇಶವನ್ನು ಬಿಟ್ಟುಹೋಗುವರು; ಐಗುಪ್ತವು ಅವರಿಗೆ ಶ್ಮಶಾನವಾಗುವದು, ಮೋಫ್ ಪಟ್ಟಣವು ಅವರನ್ನು ಹೂಣಿಡುವದು; ಅವರ ಇಷ್ಟದ ಬೆಳ್ಳಿಯ ಒಡವೆಗಳು ದಬ್ಬೆಗಳ್ಳಿಗಳ ಪಾಲಾಗುವವು; ಮುಳ್ಳುಗಿಡಗಳು ಅವರ ಗುಡಾರಗಳಲ್ಲಿ ಹುಟ್ಟಿಕೊಳ್ಳುವವು.

7 ದಂಡನೆಯ ದಿನಗಳು ಹತ್ತರಿಸಿವೆ, ಮುಯ್ಯಿತೀರಿಸುವ ದಿವಸಗಳು ಸಮೀಪಿಸಿವೆ; ಇಸ್ರಾಯೇಲಿನ ಅನುಭವಕ್ಕೆ ಬಂದೇ ಬರುವವು; [ಇಸ್ರಾಯೇಲೇ,] ನಿನ್ನ ಅಧರ್ಮವು ಬಹಳವಾಗಿರುವದರಿಂದಲೂ ವಿರೋಧವು ಹೆಚ್ಚಾಗಿರುವದರಿಂದಲೂ ಪ್ರವಾದಿಯು ಮೂರ್ಖನು, ದೇವರಾತ್ಮಾವಿಷ್ಟನು ಹುಚ್ಚನು [ಅಂದುಕೊಳ್ಳುತ್ತಿ].

8 ಎಫ್ರಾಯೀಮು ನನ್ನ ದೇವರ ವಿಷಯವಾಗಿ ಹೊಂಚುಹಾಕುತ್ತದೆ; ಪ್ರವಾದಿಯ ಮಾರ್ಗಗಳಲ್ಲೆಲ್ಲಾ ಬೇಟೆಯ ಬಲೆಯು ಒಡ್ಡಿದೆ, ಅವನ ದೇವರ ಆಲಯದಲ್ಲಿಯೂ ಶತ್ರುವಿರೋಧವು ಕಾದಿದೆ.

9 ಪೂರ್ವದಲ್ಲಿ ಗಿಬ್ಯದವರು ಕೆಡಿಸಿಕೊಂಡಂತೆ ಎಫ್ರಾಯೀಮ್ಯರು ತಮ್ಮನ್ನು ತೀರಾ ಕೆಡಿಸಿಕೊಂಡಿದ್ದಾರೆ; ದೇವರು ಅವರ ಅಧರ್ಮವನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಗಳಿಗೆ ಪ್ರತಿದಂಡನೆಮಾಡುವನು.


ಇಸ್ರಾಯೇಲಿನ ಕ್ಷಯ

10 ಕಾಡಿನಲ್ಲಿ ದ್ರಾಕ್ಷೆಯ ಹಣ್ಣು ಸಿಕ್ಕಿದಂತೆ ಇಸ್ರಾಯೇಲು ನನಗೆ ಸಿಕ್ಕಿತು; ಹೊಸದಾಗಿ ಫಲಕ್ಕೆ ಬಂದ ಅಂಜೂರದ ಗಿಡದಲ್ಲಿ ಮೊದಲು ಮಾಗಿದ ಹಣ್ಣನ್ನು ಕಂಡ ಹಾಗೆ ನಿಮ್ಮ ಪಿತೃಗಳನ್ನು ಕಂಡೆನು; ಆದರೆ ಅವರು ಬಾಳ್‍ಪೆಗೋರಿಗೆ ಬಂದು ಬಾಳ್‍ದೇವತೆಯ ಭಕ್ತರಾಗಿ ದೀಕ್ಷೆಗೊಂಡು ತಾವು ಪ್ರೀತಿಸಿದ ದೇವತೆಯ ಹಾಗೆ ಅಸಹ್ಯರಾದರು.

11 ಎಫ್ರಾಯೀಮ್ಯರ ಮಹಿಮೆಯು ಪಕ್ಷಿಯಂತೆ ಹಾರಿಹೋಗುವದು; ಯಾರೂ ಹೆರರು, ಗರ್ಭಿಣಿಯಾಗಿರರು, ಗರ್ಭಧರಿಸರು.

12 ಒಂದು ವೇಳೆ ಮಕ್ಕಳನ್ನು ಹೆತ್ತು ಸಾಕಿದರೂ ಯಾವನೂ ಉಳಿಯದೆ ಇರುವ ತನಕ ಅವರಿಗೆ ಪುತ್ರಶೋಕವನ್ನು ಉಂಟುಮಾಡುತ್ತಲೇ ಬರುವೆನು; ಹೌದು, ನಾನು ಅವರಿಗೆ ವಿಮುಖನಾಗಲು ಅವರ ಗತಿಯನ್ನು ಏನೆಂದು ಹೇಳಲಿ!

13 ತೂರು ಹೇಗೆ ಕಾಣಿಸುತ್ತದೋ ಹಾಗೆಯೇ ಎಫ್ರಾಯೀಮು ಹುಲ್ಗಾವಲಿನಲ್ಲಿ ನಾಟಿರುವದಾಗಿ ಕಾಣಿಸುತ್ತದೆ; ಆದರೆ ಎಫ್ರಾಯೀಮು ತನ್ನ ಮಕ್ಕಳನ್ನು ಹತ್ಯಕ್ಕೆ ಈಡಾಗುವಂತೆ ಕಳುಹಿಸುವದು.

14 (ಯೆಹೋವನೇ, ಅವರಿಗೆ ತಕ್ಕ ಗತಿಯನ್ನು ವಿಧಿಸು; ಏನು ವಿಧಿಸುತ್ತಿಯೋ? ಅವರಿಗೆ ಗರ್ಭಸ್ರಾವವನ್ನು ಮಾಡು, ಮೊಲೆಯನ್ನು ಬತ್ತಿಸು.)

15 ಅವರ ದುಷ್ಟತನವು ಗಿಲ್ಗಾಲಿನಲ್ಲಿ ತುಂಬಿದೆ; ಅಲ್ಲೇ ನನ್ನ ದ್ವೇಷಕ್ಕೆ ಗುರಿಯಾಗಿದ್ದಾರೆ; ಅವರ ದುಷ್ಕೃತ್ಯಗಳ ನಿವಿುತ್ತ ನಾನು ಅವರನ್ನು ನನ್ನ ನಿವಾಸದೊಳಗಿಂದ ಓಡಿಸಿಬಿಡುವೆನು; ಅವರನ್ನು ಇನ್ನು ಪ್ರೀತಿಸೆನು; ಅವರ ಅಧಿಕಾರಿಗಳೆಲ್ಲರೂ ದ್ರೋಹಿಗಳೇ ಸರಿ.

16 ಎಪ್ರಾಯೀಮ್ಯರಿಗೆ ಘಾತವಾಗಿದೆ; ಅವರ ವಂಶಮೂಲವು ಒಣಗಿಹೋಗಿದೆ; ಅವರು ಫಲಹೀನರಾಗುವರು; ಹೌದು, ಅವರು ಮಕ್ಕಳನ್ನು ಹೆತ್ತರೂ ಅವರ ಗರ್ಭದ ಪ್ರಿಯಫಲವನ್ನು ಸಾಯಿಸುವೆನು.

17 ನನ್ನ ದೇವರು ಅವರನ್ನು ತಳ್ಳಿಬಿಡುವನು; ಅವರು ಆತನ ಮಾತಿಗೆ ಕಿವಿಗೊಡಲಿಲ್ಲ; ಅವರಿಗೆ ಜನಾಂಗಗಳಲ್ಲಿ ಅಲೆದಾಡುವ ಗತಿಯಾಗುವದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು