Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಹೋಶೇಯ 8 - ಕನ್ನಡ ಸತ್ಯವೇದವು J.V. (BSI)

1 ಬಾಯಿಗೆ ತುತೂರಿಯನ್ನು ಹಿಡಿ. ನನ್ನ ಜನರು ನನ್ನ ಒಡಂಬಡಿಕೆಯನ್ನು ಮೀರಿ ನನ್ನ ಧರ್ಮವಿಧಿಗಳಿಗೆ ದ್ರೋಹಮಾಡಿದ್ದರಿಂದ ಶತ್ರುವು ಹದ್ದಿನ ಹಾಗೆ ಯೆಹೋವನಾದ ನನ್ನ ನಿವಾಸದ ಮೇಲೆ ಬರುತ್ತಾನೆ.

2 ಅವರು ನನ್ನನ್ನು - ನಮ್ಮ ದೇವರೇ, ಇಸ್ರಾಯೇಲ್ಯರಾದ ನಾವು ನಿನ್ನನ್ನು ತಿಳಿದವರಾಗಿದ್ದೇವೆ ಎಂದು ಕೂಗಿಕೊಳ್ಳುವರು.

3 ಇಸ್ರಾಯೇಲ್ಯರು ಮೇಲನ್ನು ತಳ್ಳಿಬಿಟ್ಟಿದ್ದಾರೆ; ಶತ್ರುವು ಅವರನ್ನು ಹಿಂದಟ್ಟುವನು.


ಇಸ್ರಾಯೇಲು ಕಲ್ಪಿಸಿದ ರಾಜರೂ ದೇವರುಗಳೂ

4 ನನ್ನ ಅಪ್ಪಣೆಯಿಲ್ಲದೆ ರಾಜರನ್ನು ಕಲ್ಪಿಸಿಕೊಂಡಿದ್ದಾರೆ; ನನಗೆ ತಿಳಿಯದೆ ಅಧಿಪತಿಗಳನ್ನು ಮಾಡಿಕೊಂಡಿದ್ದಾರೆ; ತಮ್ಮ ಬೆಳ್ಳಿ ಬಂಗಾರಗಳಿಂದ ಬೊಂಬೆಗಳನ್ನು ನಿರ್ಮಿಸಿಕೊಂಡಿದ್ದಾರೆ; ಅವರು ನಿರ್ಮಿಸಿದ್ದೆಲ್ಲಾ ನಾಶವಾಗತಕ್ಕದ್ದೇ.

5 ಸಮಾರ್ಯವೇ, ನಾನು ನಿನ್ನ ಬಸವನನ್ನು ತಳ್ಳಿಬಿಟ್ಟಿದ್ದೇನೆ; ನನ್ನ ರೋಷಾಗ್ನಿಯು ನಿನ್ನವರ ಮೇಲೆ ಉರಿಯುತ್ತದೆ; ಅವರು ನಿರ್ಮಲರಾಗುವದಕ್ಕೆ ಇನ್ನೆಷ್ಟು ಕಾಲ ಹಿಡಿಯುವದೋ?

6 ಆ ಬಸವನೂ ಇಸ್ರಾಯೇಲಿನ ಕೈಕೆಲಸ; ಶಿಲ್ಪಿಯು ಅದನ್ನು ರೂಪಿಸಿದನು; ಅದು ದೇವರಲ್ಲ; ಸಮಾರ್ಯದ ಬಸವನು ಚೂರುಚೂರಾಗುವನು.

7 ಅವರು ಗಾಳಿಯನ್ನು ಬಿತ್ತುತ್ತಾರೆ, ಬಿರುಗಾಳಿಯನ್ನು ಕೊಯ್ದುಕೊಳ್ಳುವರು. ಇಸ್ರಾಯೇಲಿಗಾಗಿ ಪೈರು ತೆನೆಗೆ ಬಾರದು; ಬೀಜ ಮೊಳೆತರೂ ಹಿಟ್ಟುಸಿಕ್ಕದು; ಒಂದು ವೇಳೆ ಸಿಕ್ಕಿದರೂ ಅನ್ಯರು ಅದನ್ನು ನುಂಗಿಬಿಡುವರು.

8 ಇಸ್ರಾಯೇಲೇ ನುಂಗಲ್ಪಟ್ಟಿದೆ; ಅದು ಜನಾಂಗಗಳ ಮಧ್ಯದಲ್ಲಿ ಯಾರಿಗೂ ಬೇಡದ ಪಾತ್ರೆಯಂತಿದೆ.

9 ಅದು ಒಂಟಿಯಾದ ಕಾಡುಕತ್ತೆಯಂತೆ ಮನಸ್ಸು ಬಂದ ಹಾಗೆ ನಡೆದು ಅಶ್ಶೂರಕ್ಕೆ ಹೋಗಿದೆ; ಎಫ್ರಾಯೀಮು ಹಣತೆತ್ತು ವಿುಂಡರನ್ನು ಸಂಪಾದಿಸಿಕೊಂಡಿದೆ.

10 ಅದು ಜನಾಂಗಗಳೊಳಗೆ ವಿುಂಡರನ್ನು ಸಂಪಾದಿಸಿದರೂ ಅದನ್ನು ನಾನು ಈಗ ಸೆರೆಕೂಡುವೆನು; ರಾಜಾಧಿರಾಜನು ಹೊರಿಸುವ ಹೊರೆಯಿಂದ ಅದು ಕುಗ್ಗಿಹೋಗಲಿಕ್ಕೆ ಆರಂಭವಾಗುವದು.

11 ಎಫ್ರಾಯೀಮು ಯಜ್ಞವೇದಿಗಳನ್ನು ಹೆಚ್ಚೆಚ್ಚಾಗಿ ಕಟ್ಟಿ ಪಾಪಮಾಡಿದೆ; ಕಟ್ಟಿದ ಯಜ್ಞವೇದಿಗಳೇ ಅದಕ್ಕೆ ಪಾಪವಾಗಿ ಪರಿಣವಿುಸಿವೆ.

12 ನಾನು ನನ್ನ ಧರ್ಮವನ್ನು ಲಕ್ಷಾಂತರ ವಿಧಿಗಳ ರೂಪವಾಗಿ ಅದಕ್ಕೆ ಬರೆಯಿಸಿಕೊಟ್ಟರೂ ಅವುಗಳು ತನಗೆ ಸಂಬಂಧಪಟ್ಟವುಗಳಲ್ಲವೆಂದು ಅದು ಭಾವಿಸುತ್ತದೆ.

13 ಎಫ್ರಾಯೀಮ್ಯರು ಯಜ್ಞಪಶುಗಳನ್ನು ನನಗೆ ನೈವೇದ್ಯವಾಗಿ ವಧಿಸಿ ಮಾಂಸಭೋಜನ ಮಾಡುತ್ತಾರೆ; ಯೆಹೋವನು ಆ ಯಜ್ಞಗಳಿಗೆ ಮೆಚ್ಚನು; ಅವರ ಅಧರ್ಮವನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಕ್ಕೆ ದಂಡನೆಮಾಡುವನು; ಅವರು ಐಗುಪ್ತಕ್ಕೆ ಹಿಂದಿರುಗಬೇಕಾಗುವದು.

14 ಇಸ್ರಾಯೇಲು ತನ್ನ ಸೃಷ್ಟಿಕರ್ತನನ್ನು ಮರೆತು ಅರಮನೆಗಳನ್ನು ಕಟ್ಟಿಕೊಂಡಿದೆ; ಯೆಹೂದವು ಕೋಟೆಕೊತ್ತಲಗಳ ಪಟ್ಟಣಗಳನ್ನು ಮಾಡಿಕೊಂಡಿದೆ; ಆಹಾ, ನಾನು ಆ ಪಟ್ಟಣಗಳ ಮೇಲೆ ಬೆಂಕಿಯನ್ನು ಕಳುಹಿಸುವೆನು, ಅದು ಆ ಸೌಧಗಳನ್ನು ನುಂಗಿಬಿಡುವದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು