ಹೋಶೇಯ 7 - ಕನ್ನಡ ಸತ್ಯವೇದವು J.V. (BSI)1 ನಾನು ನನ್ನ ಜನರ ದುರವಸ್ಥೆಯನ್ನು ತಪ್ಪಿಸಿ ಇಸ್ರಾಯೇಲನ್ನು ಸ್ವಸ್ಥಮಾಡಬೇಕೆಂದಿರುವಾಗ ಎಫ್ರಾಯೀವಿುನ ಅಧರ್ಮವೂ ಸಮಾರ್ಯದ ದುಷ್ಟತನವೂ ವ್ಯಕ್ತವಾಗುತ್ತವೆ; ಎಲ್ಲರೂ ಮೋಸಮಾಡುತ್ತಾರೆ, ಒಳಗೆ ಕಳ್ಳರು ನುಗ್ಗುತ್ತಾರೆ, ಹೊರಗೆ ಡಕಾಯಿತಿಯವರು ಸುಲಿಯುತ್ತಾರೆ. 2 ತಮ್ಮ ದುರ್ಮಾರ್ಗವೆಲ್ಲಾ ಯೆಹೋವನ ಜ್ಞಾಪಕದಲ್ಲಿರುತ್ತದೆ ಎಂದು ಅವರು ಮಂದಟ್ಟುಮಾಡಿಕೊಳ್ಳುವದಿಲ್ಲ; ಅವರ ದುಷ್ಕೃತ್ಯಗಳು ಈಗ ಅವರನ್ನು ಮುತ್ತಿಕೊಂಡಿವೆ, ನನ್ನ ಕಣ್ಣೆದುರಿಗಿವೆ. 3 ತಮ್ಮ ಕೆಟ್ಟತನದಿಂದ ರಾಜನನ್ನು ಆನಂದಗೊಳಿಸುತ್ತಾರೆ, ಸುಳ್ಳುಗಳಿಂದ ಮುಖಂಡರನ್ನು ಸಂತೋಷಪಡಿಸುತ್ತಾರೆ, 4 ಅವರೆಲ್ಲರೂ ವ್ಯಭಿಚಾರಿಗಳು; ರೊಟ್ಟಿಗಾರನು ಬೆಂಕಿ ಹೊತ್ತಿಸಿ ಉರಿಸಿ ಕಣಕವನ್ನು ನಾದಿದಾಗಿನಿಂದ ಹುಳಿಬರುವ ತನಕ ಮತ್ತಷ್ಟು ಉರಿಸದೆ ಹಾಗೆಯೇ ಬಿಟ್ಟಿರುವ ಒಲೆಗೆ ಸಮಾನರಾಗಿದ್ದಾರೆ. 5 ನಮ್ಮ ರಾಜನ ವರ್ಧಂತಿಯ ದಿನದಲ್ಲಿ ದ್ರಾಕ್ಷಾರಸದ ಉಷ್ಣವು ದೇಶಾಧಿಪತಿಗಳ ತಲೆಗೇರಲು ಆರಂಭವಾಯಿತು; ರಾಜನು ಆ ತುಂಟರ ಕೈಯ ಮೇಲೆ ಕೈ ಹಾಕಿದನು. 6 ಅವರು ಹೊಂಚಿಕೊಂಡಿರುವಾಗ ಆಹಾ, ತಮ್ಮ ಹೃದಯವನ್ನು ಒಲೆಯಂತೆ ಸಿದ್ಧಮಾಡಿರುತ್ತಾರೆ; ಅವರ ರೋಷಾಗ್ನಿಯು ರಾತ್ರಿಯೆಲ್ಲಾ ಹೊತ್ತಿಕೊಂಡೇ ಇರುತ್ತದೆ; ಬೆಳಿಗ್ಗೆ ಧಗಧಗನೆ ಉರಿಯುತ್ತದೆ. 7 ಎಲ್ಲರೂ ಒಲೆಯಂತೆ ಝಳವೇರಿ ತಮ್ಮ ನ್ಯಾಯಾಧೀಶ್ವರರನ್ನು ನುಂಗಿಬಿಡುತ್ತಾರೆ; ಅವರ ಸಕಲರಾಜರು ಬಿದ್ದಿರುತ್ತಾರೆ, ಅವರೊಳಗೆ ನನ್ನನ್ನು ಪ್ರಾರ್ಥಿಸುವವರೇ ಇಲ್ಲ. ಇಸ್ರಾಯೇಲಿನ ಅವಿವೇಕದ ರಾಜ್ಯತಂತ್ರಗಳು 8 ಎಫ್ರಾಯೀಮು ಜನಾಂಗಗಳಲ್ಲಿ ಕಲೆತುಕೊಳುತ್ತದೆ; ಎಫ್ರಾಯೀಮು ತಿರುವಿಹಾಕದ ಚಪಾತಿ. 9 ಅನ್ಯರು ಅದರ ಶಕ್ತಿಯನ್ನು ಹೀರಿಬಿಟ್ಟಿದ್ದರೂ ಅದಕ್ಕೆ ತಿಳಿಯದು; ಅದರ ತಲೆಯ ಮೇಲೆ ಅಲ್ಲಲ್ಲಿ ನರೆಯು ಕಾಣಿಸಿದರೂ ಅದಕ್ಕೆ ಗೊತ್ತಿಲ್ಲ. 10 ಇಸ್ರಾಯೇಲಿಗೆ ಅದರ ಹೆಮ್ಮೆಯೇ ವಿರುದ್ಧ ಸಾಕ್ಷಿಯಾಗಿದೆ; ಇದೆಲ್ಲಾ ಸಂಭವಿಸಿದರೂ ಅದು ತನ್ನ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಲಿಲ್ಲ, ಆತನನ್ನು ಆಶ್ರಯಿಸಲಿಲ್ಲ. 11 ಎಫ್ರಾಯೀಮು ಬುದ್ಧಿವಿವೇಕಗಳಿಲ್ಲದ ಪಾರಿವಾಳದಂತಿದೆ; ಅದರ ಜನರು ಐಗುಪ್ತವನ್ನು ಕೂಗುತ್ತಾರೆ, ಅಶ್ಶೂರಕ್ಕೆ ಹೊರಡುತ್ತಾರೆ; 12 ಹೊರಟ ಕೂಡಲೆ ಅವರ ಮೇಲೆ ನನ್ನ ಬಲೆಯನ್ನು ಬೀಸಿ ಆಕಾಶದ ಪಕ್ಷಿಗಳ ಹಾಗೆ ಅವರನ್ನು ಕೆಳಕ್ಕೆ ಎಳೆಯುವೆನು; ಅವರೆಲ್ಲರ ಕಿವಿಗೆ ಬಿದ್ದ ಮಾತಿಗನುಸಾರವಾಗಿ ಅವರನ್ನು ಶಿಕ್ಷಿಸುವೆನು. 13 ಅವರು ನನ್ನ ಕಡೆಯಿಂದ ಅಗಲಿ ಹೋಗಿದ್ದಾರೆ, ಹಾಳಾಗಲಿ! ನನಗ ದ್ರೋಹಮಾಡಿದ್ದಾರೆ, ನಾಶವಾಗಲಿ! ನಾನು ಅವರನ್ನು ಉದ್ಧರಿಸಬೇಕೆಂದಿರುವಾಗಲೂ ನನ್ನ ವಿಷಯವಾಗಿ ಸುಳ್ಳಾಡಿದ್ದಾರೆ, ಅವರನ್ನು ಹೇಗೆ ಉದ್ಧರಿಸಲಿ! 14 ಅವರು ಹಾಸಿಗೆಯ ಮೇಲೆ ಬಿದ್ದುಕೊಂಡು ಧಾನ್ಯದ್ರಾಕ್ಷಾರಸಗಳಿಗೆ ಅರಚಿಕೊಳ್ಳುತ್ತಾರೆಯೇ ಹೊರತು ನನ್ನನ್ನು ಮನಃಪೂರ್ವಕವಾಗಿ ಎಂದೂ ಪ್ರಾರ್ಥಿಸಲಿಲ್ಲ; ನನ್ನನ್ನು ತೊರೆದುಬಿಟ್ಟು ತಮ್ಮ ದೇಹಗಳನ್ನು ಗಾಯಮಾಡಿಕೊಳ್ಳುತ್ತಾರೆ. 15 ಅವರಿಗೆ ಯುದ್ಧವನ್ನು ಕಲಿಸಿ ತೋಳುಗಳನ್ನು ಬಲಪಡಿಸಿದ ನನಗೂ ವಿರುದ್ಧವಾಗಿ ಕೇಡನ್ನು ಕಲ್ಪಿಸುತ್ತಾರೆ. 16 ಅತ್ತಿತ್ತ ತಿರುಗಿಕೊಳ್ಳುತ್ತಾರೆ, ಮೇಲಕ್ಕೆ ಮಾತ್ರ ತಿರುಗಿಕೊಳ್ಳುವದಿಲ್ಲ; ಮೋಸದ ಬಿಲ್ಲಿಗೆ ಸಮಾನರಾಗಿದ್ದಾರೆ; ಅವರ ಮುಖಂಡರು ತಮ್ಮ ನಾಲಿಗೆಯ ಸೊಕ್ಕಿನ ನಿವಿುತ್ತ ಖಡ್ಗಹತರಾಗಿ ಬೀಳುವರು; ಅವರ ಪತನವು ಐಗುಪ್ತದೇಶದ ಹಾಸ್ಯಕ್ಕೆ ಆಸ್ಪದವಾಗುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India