ಹೋಶೇಯ 6 - ಕನ್ನಡ ಸತ್ಯವೇದವು J.V. (BSI)1 ಅವರು - ಯೆಹೋವನ ಕಡೆಗೆ ಹಿಂದಿರುಗಿ ಹೋಗೋಣ ಬನ್ನಿರಿ; ನಮ್ಮನ್ನು ಸೀಳಿಬಿಟ್ಟವನು ಆತನೇ, ಆತನೇ ಸ್ವಸ್ಥಮಾಡುವನು; ಹೊಡೆದವನು ಆತನೇ, ಆತನೇ ನಮ್ಮ ಗಾಯಗಳನ್ನು ಕಟ್ಟುವನು. 2 ಒಂದೆರಡು ದಿನದ ಮೇಲೆ ಆತನು ನಮ್ಮನ್ನು ಬದುಕಿಸುವನು; ಮೂರನೆಯ ದಿನದಲ್ಲಿ ಆತನು ನಮ್ಮನ್ನೆಬ್ಬಿಸಲು ಆತನ ಸಾನ್ನಿಧ್ಯದಲ್ಲಿ ಬಾಳುವೆವು. 3 ಯೆಹೋವನನ್ನು ತಿಳಿದುಕೊಳ್ಳೋಣ, ಹುಡುಕಿ ಹುಡುಕಿ ತಿಳಿದುಕೊಳ್ಳೋಣ; ಆತನ ಆಗಮನವು ಉದಯದಂತೆ ನಿಶ್ಚಯ; ಆತನು ಮುಂಗಾರಿನಂತೆಯೂ ಭೂವಿುಯನ್ನು ತಂಪುಮಾಡುವ ಹಿಂಗಾರಿನಂತೆಯೂ ನಮಗೆ ಸಿಕ್ಕುವನು [ಅಂದುಕೊಂಡು ನನ್ನನ್ನು ಮರೆಹೊಗುವರು]. 4 ಎಫ್ರಾಯೀಮೇ, ನಾನು ನಿನ್ನನ್ನು ಹೇಗೆ ತಿದ್ದಲಿ? ಯೆಹೂದವೇ, ನಿನ್ನನ್ನು ಹೇಗೆ ಸರಿಮಾಡಲಿ? ನಿಮ್ಮ ಭಕ್ತಿಯು ಪ್ರಾತಃಕಾಲದ ಮೋಡಕ್ಕೂ ಬೇಗನೆ ಮಾಯವಾಗುವ ಇಬ್ಬನಿಗೂ ಸಮಾನವಾಗಿದೆ. 5 ಆದಕಾರಣ ನಾನು ನಿಮ್ಮ ಜನರನ್ನು ಪ್ರವಾದಿಗಳ ಮೂಲಕ ಹತಿಸಿದ್ದೇನೆ, ನನ್ನ ಬಾಯಿ ಮಾತುಗಳಿಂದ ಸಂಹರಿಸಿದ್ದೇನೆ; ನನ್ನ ನ್ಯಾಯದಂಡನೆಯು ವಿುಂಚಿನಂತೆ ಹೊರಡುವದು. 6 ನನಗೆ ಯಜ್ಞವು ಬೇಡ, ಕರುಣೆಯೇ ಬೇಕು; ಹೋಮಗಳಿಗಿಂತ ದೇವಜ್ಞಾನವೇ ಇಷ್ಟ. ಇಸ್ರಾಯೇಲ್ಯರ ದುರ್ನಡತೆಗಳು 7 ಅವರು ಪ್ರಾಪಂಚಿಕರಂತೆ ನನ್ನ ನಿಬಂಧನೆಯನ್ನು ಮೀರಿದ್ದಾರೆ; ಅಲ್ಲಲ್ಲಿ ನನಗೆ ದ್ರೋಹಮಾಡಿದ್ದಾರೆ. 8 ಗಿಲ್ಯಾದು ಅಧರ್ಮಿಗಳು ತುಂಬಿದ ಪಟ್ಟಣ, ಅಲ್ಲಿ ಹೆಜ್ಜೆಜಾಡುಗಳು ರಕ್ತಮಯವೇ. 9 ಡಕಾಯಿತಿಯವರು ಒಬ್ಬನಿಗೆ ಹೊಂಚುವಂತೆ ಯಾಜಕರು ಗುಂಪಾಗಿ ದಾರಿಯಲ್ಲಿ ಹೊಂಚಿಕೊಂಡಿದ್ದು ಶೆಕೆವಿುಗೆ ಹೋಗುವವರನ್ನು ಕೊಂದುಹಾಕುತ್ತಾರೆ; ಹೌದು, ಘೋರಕೃತ್ಯವನ್ನು ನಡಿಸುತ್ತಾರೆ. 10 ನಾನು ಇಸ್ರಾಯೇಲ್ ಮನೆತನದಲ್ಲಿ ಅಸಹ್ಯವನ್ನು ನೋಡಿದ್ದೇನೆ; ಎಫ್ರಾಯೀವಿುನೊಳಗೆ ಸೂಳೆತನವು ನಡೆಯುತ್ತದೆ, ಇಸ್ರಾಯೇಲು ಹೊಲೆಯಾಗಿದೆ. 11 ಯೆಹೂದವೇ, ನಿನಗೂ [ಅಧರ್ಮಫಲದ] ಸುಗ್ಗಿಯು ನೇಮಕವಾಗಿದೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India