Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಹೋಶೇಯ 4 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲಿನ ದ್ರೋಹ, ದೇವರ ಕರುಣೆ ( 4—14 ) ಯಾಜಕಪ್ರಭುಪ್ರಜೆಗಳ ದುರಾಚಾರ

1 ಇಸ್ರಾಯೇಲ್ಯರೇ, ಯೆಹೋವನ ವಾಕ್ಯವನ್ನು ಕೇಳಿರಿ; ಯೆಹೋವನು ದೇಶನಿವಾಸಿಗಳ ಮೇಲೆ ವಿವಾದಹಾಕಿದ್ದಾನೆ. ಏಕಂದರೆ ಪ್ರೀತಿ ಸತ್ಯತೆ ದೇವಜ್ಞಾನಗಳು ದೇಶದಲ್ಲಿಲ್ಲ;

2 ಸುಳ್ಳುಸಾಕ್ಷಿ, ನರಹತ್ಯ, ಕಳ್ಳತನ, ವ್ಯಭಿಚಾರ, ಇವುಗಳೇ ನಡೆಯುತ್ತವೆ; ದೊಂಬಿಗಳು ಆಗುತ್ತಲಿವೆ, ದೇಶವೆಲ್ಲಾ ರಕ್ತಮಯವಾಗಿದೆ.

3 ಹೀಗಿರಲು ದೇಶವು ನರಳುವದು, ಅದರಲ್ಲಿ ವಾಸಿಸುವ ಸಕಲ ಭೂಜಂತುಗಳೂ ಆಕಾಶಪಕ್ಷಿಗಳೂ ಬಳಲಿಹೋಗುವವು; ಸಮುದ್ರದ ಮೀನುಗಳು ಸಹ ನೀಗಿಹೋಗುವವು.

4 ಯಾವನೂ ಎದುರಿಸದಿರಲಿ, ಯಾವನೂ ಖಂಡಿಸದಿರಲಿ; ನಿಮ್ಮ ಜನರು ಯಾಜಕನೊಂದಿಗೆ ಹೋರಾಡುವವರಂತಿದ್ದಾರೆ.

5 [ಆಹಾ, ಯಾಜಕರೇ,] ನೀವು ಹಗಲಿನಲ್ಲಿ ಎಡವುವಿರಿ; ರಾತ್ರಿಯಲ್ಲಿ ನಿಮ್ಮೊಂದಿಗೆ ಪ್ರವಾದಿಗಳೂ ಎಡವುವರು; ನಾನು ನಿಮ್ಮ ವಂಶಮೂಲವನ್ನು ನಾಶಮಾಡುವೆನು.

6 ನನ್ನ ಜನರು ಜ್ಞಾನಹೀನರಾಗಿ ಹಾಳಾಗಿದ್ದಾರೆ; ನೀವು ಜ್ಞಾನವನ್ನು ತಳ್ಳಿಬಿಟ್ಟದರಿಂದ ಇನ್ನು ನನಗೆ ಯಾಜಕ ಸೇವೆಮಾಡದಂತೆ ನಾನು ನಿಮ್ಮನ್ನು ತಳ್ಳಿಬಿಡುವೆನು; ನೀವು ನಿಮ್ಮ ದೇವರ ಧರ್ಮೋಪದೇಶವನ್ನು ಮರೆತ ಕಾರಣ ನಾನು ನಿಮ್ಮ ಸಂತತಿಯವರನ್ನು ಮರೆಯುವೆನು.

7 ಅವರು ಹೆಚ್ಚಿದ ಹಾಗೆಲ್ಲಾ ನನಗೆ ಹೆಚ್ಚೆಚ್ಚಾಗಿ ಪಾಪಮಾಡುತ್ತಾ ಬಂದರು; ನಾನು ಅವರ ಮಾನವನ್ನು ಅವಮಾನಕ್ಕೆ ಮಾರ್ಪಡಿಸುವೆನು.

8 ನನ್ನ ಜನರ ಪಾಪವೇ ಅವರಿಗೆ ಜೀವನ; ಅವರು ಅಧರ್ಮವನ್ನು ಆಶಿಸುತ್ತಾರೆ.

9 ಜನರೂ ಯಾಜಕರೂ ಒಂದೇ; ಅವರ ದುಷ್ಕಾರ್ಯಗಳಿಗೆ ಅವರನ್ನು ದಂಡಿಸುವೆನು, ಅವರ ದುಷ್ಕೃತ್ಯಗಳನ್ನು ಅವರಿಗೆ ಕಟ್ಟುವೆನು. ಅವರು ಉಣ್ಣುತ್ತಿದ್ದರೂ ತೃಪ್ತಿ ದೊರೆಯದು,

10 ಹಾದರ ಮಾಡುತ್ತಿದ್ದರೂ ಪ್ರಜಾಭಿವೃದ್ಧಿಯಾಗದು; ಯೆಹೋವನ ಕಡೆಗೆ ಗಮನಿಸುವದನ್ನು ಬಿಟ್ಟುಬಿಟ್ಟಿದ್ದಾರಷ್ಟೆ.

11 ವ್ಯಭಿಚಾರದ್ರಾಕ್ಷಾರಸಮದ್ಯಗಳು ಬುದ್ಧಿಯನ್ನು ಕೆಡಿಸುತ್ತವೆ.

12 ನನ್ನ ಜನರು ತಮ್ಮ ಮರದ ತುಂಡನ್ನು ಪ್ರಶ್ನೆ ಕೇಳುತ್ತಾರೆ, ಅವರ ಕೋಲು ಅವರಿಗೆ ಅರುಹನ್ನು ಉಂಟುಮಾಡುತ್ತದೆ; ವ್ಯಭಿಚಾರ ಗುಣವು ಅವರನ್ನು ಭ್ರಾಂತಿಗೊಳಿಸಿದೆ; ತಮ್ಮ ದೇವರಿಗೆ ಪತಿಭಕ್ತಿಯನ್ನು ಸಲ್ಲಿಸದೆ ದ್ರೋಹಿಗಳಾಗಿದ್ದಾರೆ.

13 ಪರ್ವತಾಗ್ರಗಳಲ್ಲಿ ಯಜ್ಞಮಾಡುತ್ತಾರೆ, ಗುಡ್ಡಗಳ ಮೇಲೆ ಧೂಪಹಾಕುತ್ತಾರೆ; ಅಲ್ಲೋನ್, ಲಿಬ್ನೆ, ಏಲಾ ಮರಗಳ ನೆರಳು ದಟ್ಟವಾಗಿರುವದರಿಂದ ಅವುಗಳ ಕೆಳಗೆ ಇವುಗಳನ್ನು ನಡಿಸುತ್ತಾರೆ; ಹೀಗಿರಲು [ನನ್ನ ಜನರೇ,] ನಿಮ್ಮ ಕುಮಾರಿಯರು ಸೂಳೆಯರಾಗಿ ನಡೆಯುವದೂ, ನಿಮ್ಮ ವಧುಗಳು ವ್ಯಭಿಚಾರಮಾಡುವದೂ ಏನಾಶ್ಚರ್ಯ?

14 ಸೂಳೆಯರಾಗಿ ನಡೆಯುವ ನಿಮ್ಮ ಕುಮಾರಿಯರನ್ನೂ ವ್ಯಭಿಚಾರಮಾಡುವ ನಿಮ್ಮ ವಧುಗಳನ್ನೂ ನಾನು ದಂಡಿಸುವದಿಲ್ಲ; ನೀವೇ ಸೂಳೆಯರನ್ನು ಕರಕೊಂಡು ಓರೆಯಾಗಿ ಹೋಗುತ್ತೀರಿ; ದೇವದಾಸಿಯರೊಂದಿಗೆ ಯಜ್ಞಮಾಡುತ್ತೀರಿ; ಆಹಾ, ವಿವೇಕವಿಲ್ಲದ ಜನರು ಕೆಡವಲ್ಪಡುವರು.

15 ಇಸ್ರಾಯೇಲೇ, ನೀನು ಸೂಳೆಯಾಗಿ ನಡೆದರೂ ಯೆಹೂದವು ಆ ದೋಷಕ್ಕೆ ಒಳಗಾಗದಿರಲಿ; [ಯೆಹೂದ್ಯರೇ,] ಗಿಲ್ಗಾಲಿಗೆ ನೆರೆಯದಿರಿ, ಬೇತಾವೆನಿಗೆ ಯಾತ್ರೆ ಹೋಗಬೇಡಿರಿ, ಯೆಹೋವನ ಜೀವದಾಣೆ ಎಂದು ಶಪಥಮಾಡಬಾರದು.

16 ಇಸ್ರಾಯೇಲು ಅಗಡುಹಸುವಿನಂತೆ ಮೊಂಡುತನದಿಂದ ನಡೆದಿದೆ; ಈಗ ಯೆಹೋವನು ಅದನ್ನು ಕುರಿಯಂತೆ ವಿಶಾಲಸ್ಥಳದಲ್ಲಿ ಮೇಯಿಸುವನೋ?

17 ಎಫ್ರಾಯೀಮು ವಿಗ್ರಹಗಳಲ್ಲಿ ಬೆರತುಹೋಗಿದೆ; ಅದನ್ನು ಬಿಟ್ಟುಬಿಡಿರಿ.

18 ಸುರಾಪಾನಮುಗಿದ ಕೂಡಲೆ ಸೂಳೆತನದಲ್ಲಿ ಬೀಳುತ್ತಾರೆ; ದೇಶಪಾಲಕರು ಅವಮಾನದಲ್ಲಿ ಅತ್ಯಾಶೆಪಡುತ್ತಾರೆ.

19 ಗಾಳಿಯು ಅವರನ್ನು ತನ್ನ ರೆಕ್ಕೆಗಳಲ್ಲಿ ಸುತ್ತಿಕೊಂಡು ಹೋಗುವದು; ತಾವು ಮಾಡುತ್ತಿದ್ದ ಯಜ್ಞಗಳಿಗೆ ನಾಚಿಕೆಪಡುವರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು