ಹೋಶೇಯ 11 - ಕನ್ನಡ ಸತ್ಯವೇದವು J.V. (BSI)ದೇವರ ಪುತ್ರವಾತ್ಸಲ್ಯ 1 ಇಸ್ರಾಯೇಲು ಕೇವಲ ಬಾಲ್ಯದಲ್ಲಿದ್ದಾಗ ನಾನು ಅದರ ಮೇಲೆ ಪ್ರೀತಿಯನ್ನಿಟ್ಟು ಆ ನನ್ನ ಮಗನನ್ನು ಐಗುಪ್ತದೇಶದಿಂದ ಕರೆದೆನು. 2 [ಪ್ರವಾದಿಗಳು ] ಕರೆಕರೆದ ಹಾಗೆಲ್ಲಾ ನನ್ನ ಜನರು ದೂರದೂರ ಹೋಗುತ್ತಲೇ ಬಂದರು; ಬಾಳ್‍ದೇವತೆಗಳಿಗೆ ಯಜ್ಞಮಾಡಿ ಬೊಂಬೆಗಳಿಗೆ ಧೂಪಹಾಕಿದರು. 3 ನಾನೇ ಎಫ್ರಾಯೀವಿುಗೆ ನಡೆದಾಟವನ್ನು ಕಲಿಸಿದೆನು; ಅದನ್ನು ಕೈಯಲ್ಲಿ ಎತ್ತಿಕೊಂಡೆನು; ತನ್ನನ್ನು ಸ್ವಸ್ಥಮಾಡಿದವನು ನಾನೇ ಎಂದು ಅದಕ್ಕೆ ತಿಳಿಯಲಿಲ್ಲ. 4 ನಾನು ನನ್ನ ಜನರನ್ನು ಮಾನವರಿಗೆ ತಕ್ಕ ಮೂಗುದಾರದಿಂದ, ಅಂದರೆ ಮಮತೆಯ ಹಗ್ಗದಿಂದ ಸೆಳೆದುಕೊಂಡೆನು; ನೊಗವನ್ನು ತಲೆಯ ಈಚೆಗೆ ತೆಗೆಯುವವರಂತೆ ನಾನು ಅವರನ್ನು ಸುಧಾರಿಸಿ ಅವರಿಗೆ ತೀನಿಯನ್ನು ನಯದಿಂದ ಇಕ್ಕಿದೆನು. 5 ಇಸ್ರಾಯೇಲು ಐಗುಪ್ತದೇಶಕ್ಕೆ ಹಿಂದಿರುಗದು; ಅದು [ನನ್ನ ಕಡೆಗೆ] ಹಿಂದಿರುಗಲು ಒಪ್ಪದ ಕಾರಣ ಅಶ್ಶೂರವೇ ಅದಕ್ಕೆ ರಾಜನಾಗಬೇಕು. 6 ಅದರ ದುರಾಲೋಚನೆಗಳ ನಿವಿುತ್ತ ಖಡ್ಗವು ಅದರ ಪಟ್ಟಣಗಳ ಮೇಲೆ ಬೀಸಲ್ಪಟ್ಟು ಅಲ್ಲಿನ ಲಾಳವಿಂಡಿಗೆಗಳನ್ನು ಧ್ವಂಸಮಾಡಿ ನುಂಗಿಬಿಡುವದು. 7 ನನ್ನ ಕಡೆಯಿಂದ ತಿರಿಗಿಕೊಳ್ಳುವದು ನನ್ನ ಜನರ ಗುಣವೇ; ಅವರನ್ನು ಮೇಲಕ್ಕೆ ಕರೆಯುವವರು ಇದ್ದರೂ ಮೇಲಕ್ಕೆತ್ತುವವರು ಯಾರೂ ಇಲ್ಲ. 8 ಎಫ್ರಾಯೀಮೇ, ನಾನು ನಿನ್ನನ್ನು ಹೇಗೆ ತ್ಯಜಿಸಲಿ! ಇಸ್ರಾಯೇಲೇ, ಹೇಗೆ ನಿನ್ನನ್ನು ಕೈಬಿಡಲಿ! ಅಯ್ಯೋ, ನಿನ್ನನ್ನು ಅದ್ಮದ ಗತಿಗೆ ಹೇಗೆ ತರಲಿ! ಚೆಬೋಯೀವಿುನಂತೆ ಹೇಗೆ ನಾಶಮಾಡಲಿ! ನನ್ನೊಳಗೆ ಮನಸ್ಸು ತಿರುಗಿತು, ಕರುಳು ತೀರಾ ಮರುಗಿತು. 9 ನನ್ನ ಉಗ್ರಕೋಪವನ್ನು ತೀರಿಸೆನು, ಎಫ್ರಾಯೀಮನ್ನು ನಾಶಮಾಡಲು ತಿರಿಗಿಕೊಳ್ಳೆನು; ನಾನು ಮನುಷ್ಯನಲ್ಲ, ದೇವರೇ; ನಾನು ನಿಮ್ಮಲ್ಲಿ ನೆಲೆಯಾಗಿರುವ ಸದಮಲಸ್ವಾವಿು, ನಾನು ರೋಷದಿಂದ ಬಾರೆನು. 10 ಸಿಂಹದಂತೆ ಗರ್ಜಿಸುತ್ತಿರುವ ಯೆಹೋವನನ್ನು ಆತನ ಜನರು ಹಿಂಬಾಲಿಸುವರು; ಆತನು ಆರ್ಭಟಿಸಲು ಆತನ ಮಕ್ಕಳು ಪಡುವಲಿಂದ ನಡುಗುತ್ತಾ ಬರುವರು; 11 ಗುಬ್ಬಿಗಳಂತೆ ಐಗುಪ್ತದಿಂದಲೂ ಪಾರಿವಾಳಗಳಂತೆ ಅಶ್ಶೂರದಿಂದಲೂ ಅದರುತ್ತಾ ತ್ವರೆಪಡುವರು; ಅವರು ತಮ್ಮ ತಮ್ಮ ನಿವಾಸಗಳಲ್ಲಿ ವಾಸಿಸುವಂತೆ ಮಾಡುವೆನು; ಇದು ಯೆಹೋವನ ನುಡಿ. ಮೂಲಪಿತೃವಿನ ದೃಷ್ಟಾಂತದಿಂದ ಇಸ್ರಾಯೇಲನ್ನು ಎಚ್ಚರಿಸಿದ್ದು 12 ಎಫ್ರಾಯೀಮು ಸುಳ್ಳಿನಿಂದಲೂ ಇಸ್ರಾಯೇಲ್ ವಂಶವು ಮೋಸದಿಂದಲೂ ನನ್ನನ್ನು ಮುತ್ತಿಕೊಂಡಿವೆ; ಯೆಹೂದವು ಸತ್ಯಸಂಧನೂ ಸದಮಲಸ್ವಾವಿುಯೂ ಆದ ದೇವರ ಕಡೆಯಿಂದ ಇನ್ನೂ ಅಲೆದಾಡುತ್ತಿದೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India