ಹೋಶೇಯ 10 - ಕನ್ನಡ ಸತ್ಯವೇದವು J.V. (BSI)ಕೆಲಸಕ್ಕೆ ಬಾರದ ರಾಜರನ್ನೂ ದೇವರುಗಳನ್ನೂ ನಂಬಿದವರ ದುರ್ಗತಿ 1 ಇಸ್ರಾಯೇಲು ಸೊಂಪಾಗಿ ಬೆಳೆದ ದ್ರಾಕ್ಷಾಲತೆಯಾಗಿದೆ; ಹಣ್ಣು ಬಿಟ್ಟುಕೊಂಡಿದೆ; ಅದರ ಹಣ್ಣುಗಳು ಹೆಚ್ಚಿದಷ್ಟೂ ಯಜ್ಞವೇದಿಗಳನ್ನು ಹೆಚ್ಚಿಸಿಕೊಂಡಿದೆ; ಅದರ ಭೂವಿುಯು ಎಷ್ಟು ಒಳ್ಳೆಯದೋ ಅಷ್ಟು ಒಳ್ಳೆಯ ವಿಗ್ರಹಸ್ತಂಭಗಳನ್ನು ಮಾಡಿಕೊಂಡಿದೆ. 2 ಇಸ್ರಾಯೇಲ್ಯರ ಮನಸ್ಸು ನುಣುಚಿಕೊಳ್ಳುತ್ತದೆ; ಈಗ ದಂಡನೆಗೆ ಈಡಾಗಿದ್ದಾರೆ; ಯೆಹೋವನೇ ಅವರ ಯಜ್ಞವೇದಿಗಳನ್ನು ಮುರಿದುಬಿಡುವನು. ಅವರ ವಿಗ್ರಹಸ್ತಂಭಗಳನ್ನು ಹಾಳುಮಾಡುವನು. 3 ನಮಗೆ ರಾಜನೇ ಇಲ್ಲ; ನಾವು ಯೆಹೋವನಲ್ಲಿ ಭಯಭಕ್ತಿಯಿಟ್ಟವರಲ್ಲ; ರಾಜನಾದರೋ ನಮಗಾಗಿ ಏನು ಮಾಡಿಯಾನು ಎಂದು ಈಗ ಅವರು ಅಂದುಕೊಳ್ಳಬೇಕಾಯಿತು. 4 ಹರಟೆಹರಟುತ್ತಾರೆ, ಸುಳ್ಳಾಣೆಯಿಡುತ್ತಾರೆ, ಸಂಧಾನಮಾಡಿಕೊಳ್ಳುತ್ತಾರೆ; ಅಲ್ಲಿನ ನ್ಯಾಯವು ನೇಗಿಲಗೆರೆಗಳಲ್ಲಿ ಹುಟ್ಟುವ ವಿಷದ ಕಳೆಗಳಂತಿದೆ. 5 ಸಮಾರ್ಯದ ನಿವಾಸಿಗಳು ಬೇತಾವೆನಿನ ಬಸವನ ವಿಷಯದಲ್ಲಿ ದಿಗಿಲುಪಡುವರು; ಅದರ ಭಕ್ತಜನರು ಅದಕ್ಕಾಗಿ ಎದೆಬಡಿದುಕೊಳ್ಳುವರು; ಅದರ ಮಹಿಮೆಯು ಅದರಿಂದ ತೊಲಗಿತಲ್ಲಾ ಎಂದು ಅದರ ಪೂಜಾರಿಗಳು ಅದಕ್ಕಾಗಿ ನಡುಗುವರು. 6 ಅದು ಜಗಳಗಂಟ ಮಹಾರಾಜನಿಗೆ ಕಾಣಿಕೆಯಾಗಿ ಅಶ್ಶೂರಕ್ಕೆ ಒಯ್ಯಲ್ಪಡುವದು; ಎಫ್ರಾಯೀವಿುಗೆ ಅವಮಾನವಾಗುವದು, ಇಸ್ರಾಯೇಲು ತಾನು ಸಂಕಲ್ಪಿಸಿಕೊಂಡ ವಿಷಯವಾಗಿ ನಾಚಿಕೆಪಡುವದು. 7 ಸಮಾರ್ಯದ ರಾಜನು ಹಾಳಾಗಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ಚಕ್ಕೆಗೆ ಸಮಾನನಾಗಿದ್ದಾನೆ. 8 ಇಸ್ರಾಯೇಲಿಗೆ ಪಾಪಾಸ್ಪದವಾದ ಆವೆನಿನ ಪೂಜಾಸ್ಥಾನಗಳು ನಾಶವಾಗುವವು; ಮುಳ್ಳುಗಿಡಗಳೂ ಕಳೆಗಳೂ ಅಲ್ಲಿನ ಯಜ್ಞವೇದಿಗಳ ಮೇಲೆ ಹುಟ್ಟುವವು; ಅಲ್ಲಿನ ಜನರು - ಬೆಟ್ಟಗಳೇ, ನಮ್ಮನ್ನು ಮುಚ್ಚಿಕೊಳ್ಳಿರಿ, ಗುಡ್ಡಗಳೇ, ನಮ್ಮ ಮೇಲೆ ಬೀಳಿರಿ ಎಂದು ಕೂಗಿಕೊಳ್ಳುವರು. 9 ಇಸ್ರಾಯೇಲೇ, ಗಿಬ್ಯದಲ್ಲಿ ದುರಾಚಾರವು ನಡೆದಂದಿನಿಂದ ನೀನು ಪಾಪಮಾಡುತ್ತಾ ಬಂದಿದ್ದೀ; ಆಹಾ, ನನ್ನ ಜನರು ಅಲ್ಲಿ ನಿಂತಿದ್ದಾರೆ, ದುರಾಚಾರಿಗಳಿಗೆ ವಿರುದ್ಧವಾದ ಯುದ್ಧವು ಗಿಬ್ಯದಲ್ಲಿ ಅವರಿಗೆ ತಗಲುವದಿಲ್ಲ. 10 ನನಗಿಷ್ಟವಾದಾಗ ನಾನು ಅವರನ್ನು ದಂಡಿಸುವೆನು; ಅವರ ಎರಡು ಅಪರಾಧಗಳ ದಂಡನೆಗೋಸ್ಕರ ಜನಾಂಗಗಳು ಅವರಿಗೆ ವಿರುದ್ಧವಾಗಿ ಒಟ್ಟುಗೂಡುವವು. 11 ಎಫ್ರಾಯೀಮು ಹತೋಟಿಗೆ ಬಂದು ತೆನೆಹುಲ್ಲನ್ನು ತುಳಿಯುತ್ತಿರುವದರಲ್ಲಿಯೇ ಇಷ್ಟಪಡುವ ಕಡಸಾಗಿದೆ; [ಈಗಲಾದರೋ] ಅದರ ಅಂದವಾದ ಹೆಗಲಿನ ಮೇಲೆ ಕೈಹಾಕಿದ್ದೇನೆ, ಎಫ್ರಾಯೀಮನ್ನು ಹೂಡುವೆನು, ಯೆಹೂದವು ಉಳಬೇಕು, ಯಾಕೋಬು ಕುಂಟೆ ಎಳೆಯಬೇಕು. 12 ನೀತಿಯ ಬೀಜವನ್ನು ಬಿತ್ತಿರಿ, ಪ್ರೀತಿಯ ಫಲವನ್ನು ಕೊಯ್ಯಿರಿ, ಗೆಯ್ಯದ ನಿಮ್ಮ ಭೂವಿುಯನ್ನು ಗೆಯ್ಯಿರಿ; ಯೆಹೋವನು ಬಂದು ನಮ್ಮ ಮೇಲೆ ನೀತಿಯನ್ನು ವರ್ಷಿಸಲೆಂದು ಆತನನ್ನು ಶರಣುಹೊಗುವ ಸಮಯವು ಒದಗಿದೆ. 13 ನೀವು ಮಾಡಿದ ವ್ಯವಸಾಯವು ದುಷ್ಟತನ, ನಿಮಗಾದ ಬೆಳೆಯು ಅನ್ಯಾಯ; ನೀವು ನಿಮ್ಮ ಕಟ್ಟುಪಾಡಿನಲ್ಲಿಯೂ ನಿಮ್ಮ ಶೂರರ ಬಾಹುಳ್ಯದಲ್ಲಿಯೂ ಭರವಸವಿಟ್ಟದರಿಂದ ಮೋಸದ ಫಲವನ್ನು ಅನುಭವಿಸಿದ್ದೀರಿ. 14 ಹೀಗಿರಲು ನಿಮ್ಮ ಕುಲಗಳವರಿಗೆ ವಿರುದ್ಧವಾಗಿ ಯುದ್ಧಘೋಷವು ಏಳುವದು; ಕಾಳಗದ ದಿನದಲ್ಲಿ ಶಲ್ಮಾನನು ತಾಯಿಗಳನ್ನು ಮಕ್ಕಳ ಸಹಿತ ಬಂಡೆಗೆ ಅಪ್ಪಳಿಸಿ ಬೇತ್ಅರ್ಬೇಲ್ ಪಟ್ಟಣವನ್ನು ಸೂರೆಮಾಡಿದಂತೆ ನಿಮ್ಮ ಎಲ್ಲಾ ಕೋಟೆಗಳು ಸೂರೆಮಾಡಲ್ಪಡುವವು. 15 ನಿಮ್ಮ ದುಷ್ಟತನವು ಬಹಳವಾಗಿರುವದರಿಂದ ಬೇತೇಲು ಇಂಥ ದುರ್ಗತಿಯನ್ನು ನಿಮಗೆ ತರುವದು; ಬೆಳಗಾಗುವದರೊಳಗೆ ಇಸ್ರಾಯೇಲಿನ ರಾಜನು ತೀರಾ ಹಾಳಾಗುವನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India