Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 9 - ಕನ್ನಡ ಸತ್ಯವೇದವು J.V. (BSI)


ಐಗುಪ್ತ್ಯರಿಗೆ ಶರೀರದಲ್ಲಿ ಹುಣ್ಣುಬೊಕ್ಕೆಗಳೂ ಅವರ ದನಗಳಿಗೆ ವ್ಯಾಧಿಯೂ ಉಂಟಾದದ್ದು

1 ತರುವಾಯ ಯೆಹೋವನು ಮೋಶೆಗೆ ಹೇಳಿದ್ದೇನಂದರೆ - ನೀನು ಫರೋಹನ ಬಳಿಗೆ ಹೋಗಿ ಅವನಿಗೆ - ಇಬ್ರಿಯರ ದೇವರಾದ ಯೆಹೋವನು ತನ್ನನ್ನು ಆರಾಧಿಸುವಂತೆ ತನ್ನ ಜನರಿಗೆ ಅಪ್ಪಣೆಕೊಡಬೇಕೆಂಬದಾಗಿ ಹೇಳಿದ್ದಾನಷ್ಟೆ.

2 ನೀನು ಅವರಿಗೆ ಅಪ್ಪಣೆ ಕೊಡದೆ ಇನ್ನೂ ಅವರನ್ನು ತಡೆದರೆ

3 ಯೆಹೋವನು ಅಡವಿಯಲ್ಲಿರುವ ನಿನ್ನ ಎಲ್ಲಾ ಪಶುಗಳಿಗೂ ಕುದುರೆ ಕತ್ತೆ ಒಂಟೆ ದನ ಕುರಿ ಆಡು ಇವೆಲ್ಲವುಗಳಿಗೂ ವಿರೋಧವಾಗಿ ತನ್ನ ಕೈಯೆತ್ತಿ ಘೋರವ್ಯಾಧಿಯನ್ನುಂಟುಮಾಡುವನೆಂದು ತಿಳುಕೋ.

4 ಇಸ್ರಾಯೇಲ್ಯರ ಪಶುಗಳಿಗೂ ಐಗುಪ್ತ್ಯರ ಪಶುಗಳಿಗೂ ಆತನು ವ್ಯತ್ಯಾಸ ಮಾಡುವನು; ಇಸ್ರಾಯೇಲ್ಯರಿಗಿರುವ ಪಶುಗಳಲ್ಲಿ ಒಂದೂ ಸಾಯುವದಿಲ್ಲವೆಂದು ಹೇಳಬೇಕು.

5 ಇದಲ್ಲದೆ ಯೆಹೋವನು ಕಾಲವನ್ನು ನಿರ್ಣಯಿಸಿ - ನಾಳೆಯೇ ಈ ಕಾರ್ಯವನ್ನು ನಡಿಸುವೆನು ಎಂದು ಹೇಳಿದನು.

6 ಮಾರಣೆಯ ದಿನ ಯೆಹೋವನು ಆ ಕಾರ್ಯವುಂಟಾಗುವಂತೆ ಮಾಡಿದನು. ಐಗುಪ್ತ್ಯರ ಪಶುಗಳೆಲ್ಲಾ ಸಾಯುತ್ತಾ ಬಂದವು; ಇಸ್ರಾಯೇಲ್ಯರ ಪಶುಗಳಲ್ಲಿ ಒಂದೂ ಸಾಯಲಿಲ್ಲ.

7 ಫರೋಹನು ವಿಚಾರಿಸಿದಾಗ ಇಸ್ರಾಯೇಲ್ಯರ ಪಶುಗಳಲ್ಲಿ ಒಂದೂ ಸಾಯಲಿಲ್ಲವೆಂದು ತಿಳುಕೊಂಡನು. ಆದಾಗ್ಯೂ ಫರೋಹನ ಹೃದಯವು ಮೊಂಡವಾಗಿದ್ದದರಿಂದ ಆ ಜನರಿಗೆ ಹೊರಡಲಿಕ್ಕೆ ಅಪ್ಪಣೆ ಕೊಡದೆಹೋದನು.

8 ಯೆಹೋವನು ಮೋಶೆ ಆರೋನರಿಗೆ - ನೀವು ಆವಿಗೆಯ ಬೂದಿಯನ್ನು ಕೈತುಂಬ ತೆಗೆದುಕೊಳ್ಳಿರಿ; ಮೋಶೆ ಅದನ್ನು ಫರೋಹನ ಕಣ್ಣಿನ ಮುಂದೆ ಆಕಾಶಕ್ಕೆ ತೂರಲಿ.

9 ಅದು ಸಣ್ಣ ಪುಡಿಯಾಗಿ ಐಗುಪ್ತದೇಶದಲ್ಲೆಲ್ಲಾ ಹಬ್ಬಿ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಹುಣ್ಣಾಗುವ ಬೊಕ್ಕೆಗಳನ್ನುಂಟುಮಾಡುವದು ಎಂದು ಹೇಳಿದನು.

10 ಮೋಶೆ ಆರೋನರು ಆವಿಗೆಯ ಬೂದಿಯನ್ನು ತೆಗೆದುಕೊಂಡು ಫರೋಹನ ಮುಂದೆ ನಿಂತುಕೊಂಡರು; ಮೋಶೆಯು ಆ ಬೂದಿಯನ್ನು ಆಕಾಶಕ್ಕೆ ತೂರಲಾಗಿ ಅದು ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಹುಣ್ಣಾಗುವ ಬೊಕ್ಕೆಗಳನ್ನೆಬ್ಬಿಸಿತು.

11 ಆ ಹುಣ್ಣುಗಳು ಜೋಯಿಸರಲ್ಲಿಯೂ ಐಗುಪ್ತ್ಯರೆಲ್ಲರಲ್ಲಿಯೂ ಇದ್ದದರಿಂದ ಆ ಜೋಯಿಸರು ಹುಣ್ಣುಗಳ ದೆಸೆಯಿಂದ ಮೋಶೆಯ ಮುಂದೆ ನಿಲ್ಲಲಾರದೆ ಹೋದರು.

12 ಆದರೂ ಯೆಹೋವನು ಮೋಶೆಗೆ ಹೇಳಿದ್ದಂತೆಯೇ ಆಯಿತು; ಯೆಹೋವನು ಫರೋಹನ ಹೃದಯವನ್ನು ಕಠಿಣ ಮಾಡಿದ್ದರಿಂದ ಅವನು ಅವರ ಮಾತಿಗೆ ಕಿವಿಗೊಡದೆಹೋದನು.


ವಿಪರೀತವಾದ ಆನೆಕಲ್ಲಿನ ಮಳೆಯಿಂದ ಐಗುಪ್ತ ದೇಶವು ಹಾಳಾದದ್ದು

13 ತರುವಾಯ ಯೆಹೋವನು ಮೋಶೆಗೆ - ನೀನು ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೊಂಡು ಹೀಗನ್ನಬೇಕು - ಇಬ್ರಿಯರ ದೇವರಾದ ಯೆಹೋವನು ಆಜ್ಞಾಪಿಸುವದೇನಂದರೆ - ನನ್ನನ್ನು ಆರಾಧಿಸುವಂತೆ ನನ್ನ ಜನರಿಗೆ ಅಪ್ಪಣೆ ಕೊಡಬೇಕು.

14 ಈ ಸಾರಿ ನಾನು ನನ್ನ ವಶದಲ್ಲಿರುವ ಈತಿಬಾಧೆಗಳನ್ನು ನಿನ್ನ ಪ್ರಜಾಪರಿವಾರದವರಿಗೆ ಉಂಟಾಗುವಂತೆಯೂ ನಿನ್ನ ಹೃದಯಕ್ಕೂ ತಗಲುವಂತೆಯೂ ಮಾಡುವೆನು. ಅದರಿಂದ ಸಮಸ್ತ ಲೋಕದಲ್ಲಿ ನನಗೆ ಸಮಾನರು ಬೇರೆ ಯಾರೂ ಇಲ್ಲವೆಂದು ನನ್ನ ವಿಷಯದಲ್ಲಿ ತಿಳುಕೊಳ್ಳುವಿ.

15 ನಾನು ಕೈಯೆತ್ತಿ ನಿನ್ನನ್ನೂ ನಿನ್ನ ಪ್ರಜೆಗಳನ್ನೂ ಅಂಟುರೋಗದಿಂದ ಸಾಯಿಸಬಹುದಾಗಿತ್ತು; ಆಗ ನೀನು ಈವರೆಗೆ ಭೂವಿುಯಲ್ಲಿ ಇರದಂತೆ ನಿರ್ಮೂಲವಾಗುತ್ತಿದ್ದಿ.

16 ಆದರೆ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದೆನು.

17 ನೀನು ನನ್ನ ಜನರನ್ನು ಇನ್ನೂ ಹೋಗಗೊಡಿಸದೆ ನಿನ್ನನ್ನು ಅವರ ಮುಂದೆ ಆಟಂಕವಾಗಿ ಒಡ್ಡುತ್ತೀಯಾ?

18 ಹಾಗಾದರೆ ನಾಳೆ ಇಷ್ಟು ಹೊತ್ತಿಗೆ ವಿಪರೀತವಾದ ಆನೆಕಲ್ಲಿನ ಮಳೆ ಬೀಳುವಂತೆ ಮಾಡುವೆನು; ಐಗುಪ್ತರಾಜ್ಯವು ಸ್ಥಾಪಿಸಲ್ಪಟ್ಟ ದಿನ ಮೊದಲುಗೊಂಡು ಇಂದಿನವರೆಗೂ ಅಂಥ ಕಲ್ಲಿನ ಮಳೆ ಬಿದ್ದಿಲ್ಲ.

19 ಆದ ಕಾರಣ ನೀನು ಆಳುಗಳನ್ನು ಕಳುಹಿಸಿ ನಿನ್ನ ಪಶುಗಳನ್ನೂ ನಿನಗೆ ಅಡವಿಯಲ್ಲಿರುವದೆಲ್ಲವನ್ನೂ ಬೇಗ ಭದ್ರಮಾಡಿಸು. ಮನೆಯೊಳಗೆ ಬಾರದೆ ಬೈಲಿನಲ್ಲೇ ಇರುವ ಎಲ್ಲಾ ಮನುಷ್ಯರೂ ಪಶುಗಳೂ ಆ ಕಲ್ಲಿನ ಮಳೆಯ ಹೊಡೆತದಿಂದ ಸಾಯುವರು ಎಂದು ಹೇಳಿದನು.

20 ಆಗ ಫರೋಹನ ಸೇವಕರಲ್ಲಿ ಯಾರಾರು ಯೆಹೋವನ ಮಾತಿಗೆ ಹೆದರಿದರೋ ಅವರು ತಮ್ಮ ಆಳುಗಳನ್ನೂ ಪಶುಗಳನ್ನೂ ಬೇಗ ಮನೆಗೆ ಬರಮಾಡಿಕೊಂಡರು;

21 ಯಾರು ಯೆಹೋವನ ಮಾತನ್ನು ಮನಸ್ಸಿಗೆ ತೆಗೆದುಕೊಳ್ಳಲಿಲ್ಲವೋ ಅವರು ತಮ್ಮ ಆಳುಗಳನ್ನೂ ಪಶುಗಳನ್ನೂ ಅಡವಿಯಲ್ಲೇ ಬಿಟ್ಟರು.

22 ಯೆಹೋವನು ಮೋಶೆಗೆ - ಆಕಾಶಕ್ಕೆ ನಿನ್ನ ಕೈ ಚಾಚು; ಆಗ ಐಗುಪ್ತದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹೊಲದಲ್ಲಿರುವ ಎಲ್ಲಾ ಪೈರುಗಳ ಮೇಲೆಯೂ ಆನೆಕಲ್ಲಿನ ಮಳೆ ಬೀಳುವದು ಎಂದು ಹೇಳಿದನು.

23 ಮೋಶೆಯು ತನ್ನ ಕೋಲನ್ನು ಆಕಾಶಕ್ಕೆ ಚಾಚಿದಾಗ ಯೆಹೋವನು ಗುಡುಗನ್ನೂ ಆನೆಕಲ್ಲಿನ ಮಳೆಯನ್ನೂ ಉಂಟುಮಾಡಿದನು. ಸಿಡಿಲುಗಳು ನೆಲಕ್ಕೆ ಬಿದ್ದವು. ಯೆಹೋವನು ಐಗುಪ್ತದೇಶದ ಮೇಲೆ ಕಲ್ಲಿನ ಮಳೆಯನ್ನು ಸುರಿಸಿದನು. ಕಲ್ಲಿನ ಮಳೆಯು ಬಹು ಬಲವಾಗಿತ್ತು.

24 ಝಗಝಗಿಸುವ ವಿುಂಚೂ ಅದರೊಂದಿಗಿತ್ತು. ಐಗುಪ್ತ್ಯರು ಜನಾಂಗವಾದಂದಿನಿಂದಲೂ ಆ ದೇಶದಲ್ಲಿ ಅಂಥ ಘೋರವಾದ ಕಲ್ಲಿನ ಮಳೆ ಆಗಿರಲಿಲ್ಲ.

25 ಆ ಕಲ್ಲಿನ ಮಳೆ ಐಗುಪ್ತದೇಶದ ಎಲ್ಲಾ ಕಡೆಯಲ್ಲಿ ಮನುಷ್ಯರನ್ನೂ ಪಶುಗಳನ್ನೂ ಬೈಲಿನಲ್ಲಿದ್ದ ಎಲ್ಲವನ್ನೂ ನಷ್ಟಪಡಿಸಿತು. ಆ ಕಲ್ಲಿನ ಮಳೆಯಿಂದ ಹೊಲಗಳಲ್ಲಿದ್ದ ಎಲ್ಲಾ ಪೈರುಗಳು ಹಾಳಾದವು. ಅಡವಿಯಲ್ಲಿದ್ದ ಮರಗಳು ಮುರಿದು ಹೋದವು.

26 ಇಸ್ರಾಯೇಲ್ಯರು ಇದ್ದ ಗೋಷೆನ್ ಸೀಮೆಯಲ್ಲಿ ಮಾತ್ರ ಕಲ್ಲಿನ ಮಳೆ ಬೀಳಲಿಲ್ಲ.

27 ಆಗ ಫರೋಹನು ಮೋಶೆ ಆರೋನರನ್ನು ಕರಿಸಿ ಅವರಿಗೆ - ನಾನು ಅಪರಾಧಿಯೆಂದು ಈಗ ಒಪ್ಪಿಕೊಂಡೆನು; ಯೆಹೋವನು ನ್ಯಾಯವಂತನು, ನಾನೂ ನನ್ನ ಜನರೂ ದೋಷಿಗಳು.

28 ಈ ಭಯಂಕರವಾದ ಗುಡುಗೂ ಕಲ್ಲಿನ ಮಳೆಯೂ ಬಹು ಹೆಚ್ಚಾದವು. ಇವುಗಳನ್ನು ನಿಲ್ಲಿಸುವದಕ್ಕೆ ಯೆಹೋವನನ್ನು ಪ್ರಾರ್ಥಿಸಿರಿ. ದೇಶವನ್ನು ಬಿಟ್ಟು ಹೊರಡುವದಕ್ಕೆ ನಿಮಗೆ ಅಪ್ಪಣೆ ಕೊಡುತ್ತೇನೆ, ನಿಮ್ಮನ್ನು ತಡೆಯುವದಿಲ್ಲ ಎಂದು ಹೇಳಿದನು.

29 ಅದಕ್ಕೆ ಮೋಶೆ - ನಾನು ಪಟ್ಟಣದಿಂದಾಚೆಗೆ ಹೋದಕೂಡಲೇ ಕೈ ಎತ್ತಿ ಯೆಹೋವನನ್ನು ಪ್ರಾರ್ಥಿಸುವೆನು; ಆಗ ಗುಡುಗೂ ಕಲ್ಲಿನ ಮಳೆಯೂ ನಿಂತುಹೋಗುವವು. ಇದರಿಂದ ಸಮಸ್ತ ಭೂಲೋಕವು ಯೆಹೋವನ ಅಧಿಕಾರದೊಳಗೆ ಇದೆ ಎಂದು ನೀನು ತಿಳಿದುಕೊಳ್ಳುವಿ.

30 ಆದರೂ ನೀನಾಗಲಿ ನಿನ್ನ ಪರಿವಾರದವರಾಗಲಿ ದೇವರಾಗಿರುವ ಯೆಹೋವನಿಗೆ ಆಗಲೂ ಭಯಪಡುವದಿಲ್ಲವೆಂದು ಬಲ್ಲೆನು ಅಂದನು.

31 ಜವೆಗೋದಿಗೆ ತೆನೆಯೂ ಅಗಸೆಗೆ ಮೊಗ್ಗೆಯೂ ಆಗಿದ್ದದರಿಂದ ಆ ಎರಡು ಬೆಳೆಗೂ ನಷ್ಟವಾಯಿತು.

32 ಗೋದಿಯೂ ಕಡಲೆಯೂ ಹಿಂದಿನ ಬೆಳೆಯಾದದರಿಂದ ಅದಕ್ಕೆ ನಷ್ಟವಾಗಲಿಲ್ಲ.

33 ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದಿಂದ ಹೊರಗೆ ಬಂದು ಕೈಯೆತ್ತಿ ಯೆಹೋವನನ್ನು ಪ್ರಾರ್ಥಿಸಿದಾಗ ಗುಡುಗೂ ಕಲ್ಲಿನ ಮಳೆಯೂ ನಿಂತು ಹೋದವು, ಮಳೆಯು ನಿಂತಿತು.

34 ಆದರೆ ಆ ಬಿರುಮಳೆಯೂ ಕಲ್ಲಿನ ಮಳೆಯೂ ಗುಡುಗೂ ನಿಂತು ಹೋದದ್ದನ್ನು ಫರೋಹನು ಕಂಡಾಗ ಅವನೂ ಅವನ ಪರಿವಾರದವರೂ ಇನ್ನೂ ಪಾಪಿಷ್ಠರಾಗಿ ತಮ್ಮ ಹೃದಯಗಳನ್ನು ಮೊಂಡುಮಾಡಿಕೊಂಡರು.

35 ಯೆಹೋವನು ಮೋಶೆಯಿಂದ ಹೇಳಿಸಿದಂತೆಯೇ ಆಯಿತು; ಫರೋಹನ ಹೃದಯವು ಕಠಿಣವಾಗಿತ್ತು. ಅವನು ಇಸ್ರಾಯೇಲ್ಯರನ್ನು ಹೋಗಗೊಡಿಸಲೇ ಇಲ್ಲ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು