Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 7 - ಕನ್ನಡ ಸತ್ಯವೇದವು J.V. (BSI)

1 ಆಗ ಯೆಹೋವನು ಮೋಶೆಗೆ ಇಂತೆಂದನು - ನಿನ್ನನ್ನು ಫರೋಹನಿಗೆ ದೇವರ ಸ್ಥಾನದಲ್ಲಿ ನೇವಿುಸಿದ್ದೇನೆ, ನೋಡು.

2 ನಿನ್ನ ಅಣ್ಣನಾದ ಆರೋನನು ನಿನಗೋಸ್ಕರ ಪ್ರವಾದಿಯಾಗಿರುವನು; ನಾನು ನಿನಗೆ ಆಜ್ಞಾಪಿಸುವದನ್ನೆಲ್ಲಾ ನೀನು ಹೇಳಬೇಕು. ಇಸ್ರಾಯೇಲ್ಯರು ದೇಶದಿಂದ ಹೊರಟುಹೋಗುವದಕ್ಕೆ ಅಪ್ಪಣೆಕೊಡಬೇಕೆಂಬದಾಗಿ ನಿನ್ನ ಅಣ್ಣನಾದ ಆರೋನನೇ ಫರೋಹನ ಮುಂದೆ ಮಾತಾಡಬೇಕು.

3 ಆದರೂ ನಾನು ಫರೋಹನ ಮನಸ್ಸಿನಲ್ಲಿ ಹಟವನ್ನು ಹುಟ್ಟಿಸಿ ಐಗುಪ್ತ ದೇಶದಲ್ಲಿ ಅನೇಕ ಸೂಚಕಕಾರ್ಯಗಳನ್ನೂ ಅದ್ಭುತ ಕಾರ್ಯಗಳನ್ನೂ ನಡಿಸಿ ನನ್ನ ಶಕ್ತಿಯನ್ನು ತೋರಿಸುವೆನು.

4 ಫರೋಹನು ನಿಮ್ಮ ಮಾತನ್ನು ಕೇಳುವದಿಲ್ಲ; ಆಗ ನಾನು ಐಗುಪ್ತದೇಶದವರನ್ನು ಬಾಧಿಸಿ ಅವರಿಗೆ ಮಹಾಶಿಕ್ಷೆಗಳನ್ನು ವಿಧಿಸಿ ನನ್ನ ಜನರಾಗಿರುವ ಇಸ್ರಾಯೇಲ್ಯರ ಸೈನ್ಯವನ್ನೆಲ್ಲಾ ಐಗುಪ್ತದೇಶದಿಂದ ಹೊರ ತರುವೆನು.

5 ನಾನು ಐಗುಪ್ತ್ಯರಿಗೆ ವಿರೋಧವಾಗಿ ಕೈಚಾಚಿ ಅವರ ಮಧ್ಯದಿಂದ ಇಸ್ರಾಯೇಲ್ಯರನ್ನು ಹೊರತಂದಾಗ ನಾನು ಯೆಹೋವನೆಂಬದನ್ನು ಐಗುಪ್ತ್ಯರು ತಿಳಿದುಕೊಳ್ಳುವರು ಅಂದನು.

6 ಯೆಹೋವನ ಆಜ್ಞೆಯಂತೆಯೇ ಮೋಶೆ ಆರೋನರು ಮಾಡಿದರು.

7 ಅವರು ಫರೋಹನ ಹತ್ತಿರ ಮಾತಾಡಿದ ಕಾಲದಲ್ಲಿ ಮೋಶೆ ಎಂಭತ್ತು ವರುಷದವನೂ ಆರೋನನು ಎಂಭತ್ತುಮೂರು ವರುಷದವನೂ ಆಗಿದ್ದರು.

8 ಯೆಹೋವನು ಮೋಶೆ ಆರೋನರ ಸಂಗಡ ಮಾತಾಡಿ -

9 ಫರೋಹನು ನಿಮಗೆ - ನಾನು ನಿಮ್ಮ ಮಾತನ್ನು ನಂಬುವಂತೆ ನೀವು ಮಹತ್ಕಾರ್ಯವನ್ನು ನನ್ನ ಮುಂದೆ ಮಾಡಬೇಕೆಂದು ಹೇಳಿದರೆ ಮೋಶೆಯು ಆರೋನನಿಗೆ - ನಿನ್ನ ಕೈಯಲ್ಲಿರುವ ಕೋಲನ್ನು ಫರೋಹನ ಮುಂದೆ ನೆಲದಲ್ಲಿ ಬೀಸಾಡು ಎಂದು ಹೇಳಬೇಕು, ಅದು ಸರ್ಪವಾಗುವದು ಎಂದು ಆಜ್ಞಾಪಿಸಿದನು.

10 ಮೋಶೆ ಆರೋನರು ಫರೋಹನ ಬಳಿಗೆ ಹೋಗಿ ಯೆಹೋವನು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹನ ಮತ್ತು ಅವನ ಪರಿವಾರದವರ ಮುಂದೆ ನೆಲದಲ್ಲಿ ಬೀಸಾಡಿದಾಗ ಅದು ಸರ್ಪವಾಯಿತು.

11 ಫರೋಹನು ಐಗುಪ್ತದೇಶದ ವಿದ್ವಾಂಸರನ್ನೂ ಮಂತ್ರಗಾರರನ್ನೂ ಕರಿಸಿದಾಗ ಆ ಜೋಯಿಸರೂ ತಮ್ಮ ಗುಪ್ತವಿದ್ಯೆಗಳಿಂದ ಅದೇ ರೀತಿಯಾಗಿ ಮಾಡಿದರು.

12 ಅವರು ತಮ್ಮ ತಮ್ಮ ಕೋಲುಗಳನ್ನು ನೆಲಕ್ಕೆ ಬೀಸಾಡಲು ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು.

13 ಯೆಹೋವನು ಮೊದಲು ಹೇಳಿದ್ದಂತೆಯೇ ಫರೋಹನ ಹೃದಯವು ಕಠಿಣವಾಯಿತು; ಅವನು ಅವರ ಮಾತಿಗೆ ಕಿವಿಗೊಡದೆ ಹೋದನು.


ನೈಲ್ ನದಿಯ ನೀರು ರಕ್ತವಾದದ್ದು

14 ತರುವಾಯ ಯೆಹೋವನು ಮೋಶೆಗೆ - ಫರೋಹನ ಹೃದಯವು ಮೊಂಡಾಗಿದೆ; ತಾನು ಜನರಿಗೆ ಅಪ್ಪಣೆ ಕೊಡುವದಿಲ್ಲವೆನ್ನುತ್ತಾನೆ.

15 ಬೆಳಿಗ್ಗೆ ಫರೋಹನ ಬಳಿಗೆ ಹೋಗು; ಅವನು ನದಿಗೆ ಹೋಗುತ್ತಾನಲ್ಲಾ. ಸರ್ಪವಾಗಿ ಮಾಡಲ್ಪಟ್ಟ ಆ ಕೋಲನ್ನು ನೀನು ಕೈಯಲ್ಲಿ ಹಿಡಿದುಕೊಂಡು ಅವನನ್ನು ಎದುರುಗೊಳ್ಳುವದಕ್ಕೆ ನೈಲ್ ನದೀತೀರದಲ್ಲಿ ನಿಂತುಕೊಂಡು ಹೀಗನ್ನಬೇಕು -

16 ಇಬ್ರಿಯರ ದೇವರಾದ ಯೆಹೋವನು ನನ್ನನ್ನು ನಿನ್ನ ಬಳಿಗೆ ಕಳುಹಿಸಿ ಅರಣ್ಯದಲ್ಲಿ ತನ್ನನ್ನು ಆರಾಧಿಸುವಂತೆ ತನ್ನ ಜನರಿಗೆ ಅಪ್ಪಣೆಕೊಡಬೇಕೆಂದು ನಿನಗೆ ಆಜ್ಞಾಪಿಸಿದನಷ್ಟೆ; ಈವರೆಗೂ ನೀನು ಲಕ್ಷ್ಯಕ್ಕೆ ತರಲಿಲ್ಲ.

17 ಆದದರಿಂದ ಯೆಹೋವನು ಮತ್ತೆ ಹೇಳುವದೇನಂದರೆ - ನೀನು ನನ್ನನ್ನು ಯೆಹೋವನೆಂದು ತಿಳಿದುಕೊಳ್ಳುವದಕ್ಕಾಗಿ ನನ್ನ [ಸೇವಕನ] ಕೈಯಲ್ಲಿರುವ ಕೋಲಿನಿಂದ ನೈಲ್ ನದಿಯ ನೀರನ್ನು ಹೊಡಿಸುವೆನು; ಆಗ ಅದು ರಕ್ತವಾಗುವದು.

18 ನದಿಯಲ್ಲಿರುವ ಮೀನುಗಳು ಸಾಯುವವು; ನದಿಯು ಹೊಲಸು ನಾರುವದು; ಅದರಲ್ಲಿ ಕುಡಿಯುವದಕ್ಕೆ ಐಗುಪ್ತ್ಯರಿಗೆ ಹೇಸಿಗೆಯಾಗುವದು ಎಂದು ಹೇಳಬೇಕು ಅಂದನು.

19 ಯೆಹೋವನು ಮೋಶೆಯ ಸಂಗಡ ಮಾತಾಡಿ - ನೀನು ಆರೋನನಿಗೆ - ನಿನ್ನ ಕೊಲನ್ನು ತೆಗೆದುಕೊಂಡು ಐಗುಪ್ತ ದೇಶದಲ್ಲಿರುವ ಹೊಳೆ ಕಾಲುವೆ ಕೆರೆ ಕೊಳ ಮೊದಲಾದ ನೀರಿರುವ ಎಲ್ಲಾ ಸ್ಥಳಗಳ ಮೇಲೆ ಅದನ್ನು ಚಾಚು ಎಂದು ಹೇಳಬೇಕು; ಅವನು ಚಾಚುವಾಗ ಆ ನೀರೆಲ್ಲಾ ರಕ್ತವಾಗುವದು; ಐಗುಪ್ತ ದೇಶದಲ್ಲೆಲ್ಲಾ ಮರದ ಪಾತ್ರೆಗಳಲ್ಲಿಯೂ ಕಲ್ಲಿನ ಪಾತ್ರೆಗಳಲ್ಲಿಯೂ ಇರುವ ನೀರೂ ರಕ್ತವಾಗುವದು ಅಂದನು.

20 ಮೋಶೆ ಆರೋನರು ಯೆಹೋವನು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ಫರೋಹನ ಮತ್ತು ಅವನ ಪರಿವಾರದ ಮುಂದೆ ಕೋಲನ್ನು ಎತ್ತಿ ನದಿಯಲ್ಲಿರುವ ನೀರನ್ನು ಹೊಡೆಯಲು ಅದೆಲ್ಲಾ ರಕ್ತವಾಯಿತು.

21 ಅದರಲ್ಲಿದ್ದ ಮೀನುಗಳು ಸತ್ತುಹೋದವು; ನದಿಯು ಹೊಲಸು ನಾರಿದ್ದರಿಂದ ಐಗುಪ್ತ್ಯರು ಅದರಲ್ಲಿ ಕುಡಿಯಲಾರದೆ ಹೋದರು. ಐಗುಪ್ತ ದೇಶದಲ್ಲೆಲ್ಲಾ ರಕ್ತವೇ ಆಗಿತ್ತು.

22 ಆದರೆ ಐಗುಪ್ತದೇಶದ ಜೋಯಿಸರು ತಮ್ಮ ಗುಪ್ತವಿದ್ಯೆಗಳಿಂದ ಅದೇ ರೀತಿಯಾಗಿ ಮಾಡಿದ್ದರಿಂದ ಫರೋಹನ ಹೃದಯವು ಕಠಿಣವಾಯಿತು. ಯೆಹೋವನು ಹೇಳಿದ್ದಂತೆಯೇ ಅವನು ಮೋಶೆ ಆರೋನರ ಮಾತನ್ನು ಕೇಳದೆ ಹೋದನು.

23 ಫರೋಹನು ಆ ಮಹತ್ಕಾರ್ಯವನ್ನಾದರೂ ಲಕ್ಷ್ಯಕ್ಕೆ ತೆಗೆದುಕೊಳ್ಳದೆ ತನ್ನ ಮನೆಗೆ ಹೊರಟುಹೋದನು.

24 ಐಗುಪ್ತ್ಯರೆಲ್ಲರೂ ನದಿಯ ನೀರನ್ನು ಕುಡಿಯಲಾರದೆ ಕುಡಿಯುವ ನೀರಿಗೋಸ್ಕರ ನದಿಯ ಸುತ್ತಲು ಅಗೆದರು.

25 ಯೆಹೋವನು ನೈಲ್ ನದಿಯನ್ನು ಹೊಡೆದ ಮೇಲೆ ಏಳು ದಿನಗಳು ತುಂಬಿದವು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು