ವಿಮೋಚನಕಾಂಡ 6 - ಕನ್ನಡ ಸತ್ಯವೇದವು J.V. (BSI)1 ಅದಕ್ಕೆ ಯೆಹೋವನು - ನಾನು ಫರೋಹನಿಗೆ ಮಾಡುವದನ್ನು ನೀನು ಈಗ ನೋಡುವಿ. ಅವನು ನನ್ನ ಭುಜಬಲದಿಂದ ಅವರನ್ನು ಹೋಗಗೊಡಿಸುವನು; ನನ್ನ ಭುಜಬಲದಿಂದ ಪೀಡಿತನಾಗಿ ಅವರನ್ನು ತನ್ನ ದೇಶದಿಂದ ಹೊರಡಿಸುವನು ಅಂದನು. 2 ಇದಲ್ಲದೆ ದೇವರು ಮೋಶೆಯ ಸಂಗಡ ಮಾತಾಡಿ ಇಂತೆಂದನು - 3 ನಾನು ಯೆಹೋವನು; ಅಬ್ರಹಾಮ ಇಸಾಕ ಯಾಕೋಬರಿಗೆ ನಾನು ಸರ್ವಶಕ್ತನಾದ ದೇವರೆಂಬ ಹೆಸರುಳ್ಳವನಾಗಿ ಕಾಣಿಸಿಕೊಂಡೆನೇ ಹೊರತು ಯೆಹೋವನು ಎಂಬ ನನ್ನ ಹೆಸರಿನಿಂದ ಅವರಿಗೆ ಗೋಚರವಾಗಲಿಲ್ಲ. 4 ನಾನು ಅವರಿಗೆ - ನೀವು ಪ್ರವಾಸವಾಗಿರುವ ಕಾನಾನ್ ದೇಶವನ್ನು ನಿಮಗೇ ಕೊಡುವೆನೆಂಬದಾಗಿ ದೃಢವಾಗಿ ವಾಗ್ದಾನ ಮಾಡಿದೆನಷ್ಟೆ. 5 ಐಗುಪ್ತ್ಯರು ದಾಸರನ್ನಾಗಿ ಮಾಡಿಕೊಂಡಿರುವ ಇಸ್ರಾಯೇಲ್ಯರ ಗೋಳು ಈಗ ನನಗೆ ಕೇಳಿಸಿತು. 6 ನಾನು ಮಾಡಿದ ವಾಗ್ದಾನವನ್ನು ನೆನಸಿಕೊಂಡೆನು. ಆದದರಿಂದ ನೀನು ಇಸ್ರಾಯೇಲ್ಯರಿಗೆ [ನನ್ನ ಹೆಸರಿನಲ್ಲಿ] ಹೇಳಬೇಕಾದದ್ದೇನಂದರೆ - ನಾನು ಯೆಹೋವನು; ಐಗುಪ್ತ್ಯರು ನಿಮ್ಮಿಂದ ಮಾಡಿಸುವ ಬಿಟ್ಟೀಕೆಲಸಗಳನ್ನು ನಾನು ತಪ್ಪಿಸಿ ಅವರಲ್ಲಿ ನಿಮಗಿರುವ ದಾಸತ್ವವನ್ನು ತೊಲಗಿಸಿ ನನ್ನ ಕೈ ಚಾಚಿ ಅವರಿಗೆ ಮಹಾಶಿಕ್ಷೆಗಳನ್ನು ವಿಧಿಸಿ ನಿಮ್ಮನ್ನು ರಕ್ಷಿಸುವೆನು. 7 ನಾನು ನಿಮ್ಮನ್ನು ನನ್ನ ಪ್ರಜೆಯೆಂದು ಆರಿಸಿಕೊಂಡು ನಿಮಗೆ ದೇವರಾಗಿರುವೆನು. ಐಗುಪ್ತ್ಯರು ಮಾಡಿಸುವ ಬಿಟ್ಟೀ ಸೇವೆಯನ್ನು ನಾನು ನಿಮಗೆ ತಪ್ಪಿಸಿದಾಗ ಯೆಹೋವನು ಎಂಬ ನಾನೇ ನಿಮ್ಮ ದೇವರಾಗಿದ್ದೇನೆಂಬದು ನಿಮಗೆ ತಿಳಿದುಬರುವದು. 8 ಇದಲ್ಲದೆ ಅಬ್ರಹಾಮ ಇಸಾಕ ಯಾಕೋಬರಿಗೆ ಕೊಡುವೆನೆಂದು ನಾನು ಪ್ರಮಾಣವಾಗಿ ಹೇಳಿದ ದೇಶಕ್ಕೆ ನಿಮ್ಮನ್ನು ಸೇರಿಸಿ ಅದನ್ನು ನಿಮಗೆ ಸ್ವದೇಶವನ್ನಾಗಿ ಕೊಡುವೆನು; ಯೆಹೋವನೇ ನಾನು; ಹೀಗೆ ಅವರಿಗೆ ಹೇಳು ಅಂದನು. 9 ಮೋಶೆ ಈ ಮಾತುಗಳನ್ನು ಇಸ್ರಾಯೇಲ್ಯರಿಗೆ ತಿಳಿಸಿದನು. ಆದರೂ ಅವರ ಮನಸ್ಸು ಕುಗ್ಗಿ ಹೋದದರಿಂದಲೂ ಕಠಿಣವಾಗಿ ಸೇವೆಮಾಡಬೇಕಾದದರಿಂದಲೂ ಅವರು ಅವನ ಮಾತಿಗೆ ಕಿವಿಗೊಡಲೇ ಇಲ್ಲ. 10 ಆಗ ಯೆಹೋವನು ಮೋಶೆಯ ಸಂಗಡ ಮಾತಾಡಿ - 11 ನೀನು ಐಗುಪ್ತ್ಯರ ಅರಸನಾದ ಫರೋಹನ ಸನ್ನಿಧಿಗೆ ಹೋಗಿ ಅವನಿಗೆ - ಇಸ್ರಾಯೇಲ್ಯರು ನಿನ್ನ ದೇಶದಿಂದ ಹೊರಟು ಹೋಗುವಂತೆ ಅಪ್ಪಣೆಕೊಡಬೇಕೆಂದು ಹೇಳು ಅಂದನು. 12 ಅದಕ್ಕೆ ಮೋಶೆ ಯೆಹೋವನ ಸನ್ನಿಧಿಯಲ್ಲಿ - ಇಗೋ, ಇಸ್ರಾಯೇಲ್ಯರೇ ನನ್ನ ಮಾತನ್ನು ಕೇಳಲಿಲ್ಲ. ಫರೋಹನು ಕಿವಿಗೊಟ್ಟಾನೇ? ನಾನು ಮಾತಾಡುವದರಲ್ಲಿ ಜಾಣನಲ್ಲ ಅಂದನು. 13 ಯೆಹೋವನು ಮೋಶೆ ಆರೋನರ ಸಂಗಡ ಮಾತಾಡಿ ಇಸ್ರಾಯೇಲ್ಯರನ್ನು ಐಗುಪ್ತದೇಶದೊಳಗಿಂದ ಬರಮಾಡಬೇಕೆಂದು ಅವರಿಗೆ ಆಜ್ಞಾಪಿಸಿ ಅವರನ್ನು ಇಸ್ರಾಯೇಲ್ಯರ ಬಳಿಗೂ ಐಗುಪ್ತದ ಅರಸನಾದ ಫರೋಹನ ಬಳಿಗೂ ಕಳುಹಿಸಿದನು. ಮೋಶೆ ಆರೋನರ ವಂಶಾವಳಿ 14 ಅವರ ಗೋತ್ರಗಳ ಪ್ರಧಾನ ಪುರುಷರು. ಇಸ್ರಾಯೇಲನ ಚೊಚ್ಚಲ ಮಗನಾದ ರೂಬೇನನಿಗೆ ಹನೋಕ್ ಫಲ್ಲು ಹೆಚ್ರೋನ್ ಕರ್ಮೀ ಎಂಬವರು ಮಕ್ಕಳು. ಇವರೇ ರೂಬೇನನಿಂದುಂಟಾದ ಗೋತ್ರಗಳಿಗೆ ಮೂಲಪುರುಷರು. 15 ಸಿಮೆಯೋನನಿಗೆ ಯೆಮೂಯೇಲ್ ಯಾಮೀನ್ ಓಹದ್ ಯಾಕೀನ್ ಚೋಹರ್ ಮತ್ತು ಕಾನಾನ್ಯ ಸ್ತ್ರೀಯಲ್ಲಿ ಹುಟ್ಟಿದ ಸೌಲ ಎಂಬವರು ಮಕ್ಕಳು. ಇವರೇ ಸಿಮೆಯೋನನಿಂದುಂಟಾದ ಗೋತ್ರಗಳಿಗೆ ಮೂಲಪುರುಷರು. 16 ವಂಶಾವಳಿಗಳ ಪ್ರಕಾರ ಲೇವಿಯ ಮಕ್ಕಳು ಯಾರಂದರೆ - ಗೇರ್ಷೋನ್ ಕೆಹಾತ್ ಮೆರಾರೀ ಇವರೇ. ಲೇವಿಯು ನೂರಮೂವತ್ತೇಳು ವರುಷ ಬದುಕಿದನು. 17 ಗೋತ್ರಗಳನ್ನು ಸ್ಥಾಪಿಸಿದ ಗೇರ್ಷೋನನ ಮಕ್ಕಳು - ಲಿಬ್ನೀ ಶಿಮ್ಮೀ. 18 ಕೆಹಾತನ ಮಕ್ಕಳು - ಅಮ್ರಾಮ್ ಇಚ್ಹಾರ್ ಹೆಬ್ರೋನ್ ಉಜ್ಜೀಯೇಲ್. ಕೆಹಾತನು ನೂರಮೂವತ್ತುಮೂರು ವರುಷ ಬದುಕಿದನು. 19 ಮೆರಾರೀಯ ಮಕ್ಕಳು - ಮಹ್ಲೀ ಮೂಷೀ. ವಂಶಾವಳಿಗಳ ಪ್ರಕಾರ ಲೇವಿಯಿಂದುಂಟಾದ ಗೋತ್ರಗಳು ಇವೇ. 20 ಅಮ್ರಾಮನು ತನ್ನ ಸೋದರತ್ತೆಯಾದ ಯೋಕೆಬೆದಳನ್ನು ಮದುವೆಮಾಡಿಕೊಂಡನು. ಆಕೆ ಅವನಿಗೆ ಆರೋನನನ್ನೂ ಮೋಶೆಯನ್ನೂ ಹೆತ್ತಳು. ಅಮ್ರಾನನು ನೂರಮೂವತ್ತೇಳು ವರುಷ ಬದುಕಿದನು. 21 ಇಚ್ಹಾರನ ಮಕ್ಕಳು - ಕೋರಹ ನೆಫೆಗ್ ಜಿಕ್ರೀ. 22 ಉಜ್ಜೀಯೇಲನ ಮಕ್ಕಳು - ಮೀಷಾಯೇಲ್ ಎಲ್ಚಾಫಾನ್ ಸಿತ್ರೀ. 23 ಆರೋನನು ಅಮ್ಮೀನಾದಾಬನ ಮಗಳಾಗಿಯೂ ನಹಶೋನನ ತಂಗಿಯಾಗಿಯೂ ಇರುವ ಎಲೀಶೇಬಳನ್ನು ಮದುವೆ ಮಾಡಿಕೊಂಡನು; ಆಕೆಯಲ್ಲಿ ಅವನಿಗೆ ನಾದಾಬ್ ಅಬೀಹೂ ಎಲ್ಲಾಜಾರ್ ಈತಾಮಾರ್ ಎಂಬಿವರು ಹುಟ್ಟಿದರು. 24 ಕೋರಹನ ಮಕ್ಕಳು - ಅಸ್ಸೀರ್ ಎಲ್ಕಾನಾ ಅಬೀಯಾಸಾಫ್. ಇವರೇ ಕೋರಹೀಯರ ಗೋತ್ರ ಸ್ಥಾಪಕರು. 25 ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಹೆಣ್ಣು ಮಕ್ಕಳೊಳಗೆ ಒಬ್ಬಾಕೆಯನ್ನು ಮದುವೆ ಮಾಡಿಕೊಂಡನು. ಆಕೆ ಅವನಿಗೆ ಫೀನೆಹಾಸನನ್ನು ಹೆತ್ತಳು. ಅವರವರ ಗೋತ್ರದ ಮೇರೆಗೆ ಇವರೇ ಲೇವಿಯರ ಪೂರ್ವಿಕರು. 26 ಇಸ್ರಾಯೇಲ್ಯರ ಸೈನ್ಯವನ್ನೆಲ್ಲಾ ಐಗುಪ್ತ ದೇಶದಿಂದ ನಡಿಸಿಕೊಂಡು ಬರುವದಕ್ಕೆ ಯೆಹೋವನಿಂದ ಆಜ್ಞೆಹೊಂದಿದ ಆರೋನ ಮೋಶೆಯರು ಇವರೇ. 27 ಇಸ್ರಾಯೆಲ್ಯರನ್ನು ಐಗುಪ್ತ ದೇಶದಿಂದ ಹೊರಗೆ ಬರಮಾಡುವದಕ್ಕಾಗಿ ಐಗುಪ್ತ್ಯರ ಅರಸನಾದ ಫರೋಹನ ಸಂಗಡ ಮಾತಾಡಿದಂಥ ಮೋಶೆ ಆರೋನರು ಇವರೇ. ಮೋಶೆ ಅರೋನರು ಫರೋಹನ ಮುಂದೆ ಮಹತ್ಕಾರ್ಯ ಮಾಡಿದ್ದು 28 ಯೆಹೋವನು ಐಗುಪ್ತ ದೇಶದಲ್ಲಿ ಮೋಶೆಯ ಸಂಗಡ ಮಾತಾಡಿದಾಗ ಆತನು ಅವನಿಗೆ - 29 ನಾನು ಯೆಹೋವನು; ನಾನು ನಿನಗೆ ಹೇಳುವದನ್ನೆಲ್ಲಾ ನೀನು ಐಗುಪ್ತ್ಯರ ಅರಸನಾದ ಫರೋಹನ ಸನ್ನಿಧಿಯಲ್ಲಿ ಹೇಳಬೇಕೆಂದು ಹೇಳಲಾಗಿ 30 ಮೋಶೆ ಯೆಹೋವನಿಗೆ - ಸ್ವಾಮೀ, ನಾನು ಮಾತಾಡುವದರಲ್ಲಿ ಜಾಣನಲ್ಲ, ಫರೋಹನು ನನ್ನ ಮಾತನ್ನು ಹೇಗೆ ಕೇಳಾನು ಅಂದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India