Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 5 - ಕನ್ನಡ ಸತ್ಯವೇದವು J.V. (BSI)


ಅರಸನು ಮೋಶೆಯ ಮಾತನ್ನು ಲಕ್ಷಿಸದೆ ಇಸ್ರಾಯೇಲ್ಯರನ್ನು ಹೆಚ್ಚಾಗಿ ಬಾಧಿಸಿದ್ದು

1 ಬಳಿಕ ಮೋಶೆ ಆರೋನರು ಫರೋಹನ ಸನ್ನಿಧಿಗೆ ಹೋಗಿ - ಇಸ್ರಾಯೇಲ್ಯರ ದೇವರಾದ ಯೆಹೋವನು - ನನ್ನ ಜನರು ನನಗಾಗಿ ಅರಣ್ಯದೊಳಗೆ ಜಾತ್ರೆ ನಡಿಸುವಂತೆ ಅವರಿಗೆ ಅಪ್ಪಣೆ ಕೊಡಬೇಕೆಂದು ಹೇಳಿದ್ದಾನೆ ಅಂದರು.

2 ಅದಕ್ಕೆ ಫರೋಹನು - ಯೆಹೋವನೆಂಬವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲ್ಯರನ್ನು ಹೋಗಗೊಡಿಸುವದೇಕೆ? ಯೆಹೋವನು ಯಾರೋ ನನಗೆ ಗೊತ್ತಿಲ್ಲ. ಇದು ಮಾತ್ರವಲ್ಲದೆ ಇಸ್ರಾಯೇಲ್ಯರು ಹೊರಟುಹೋಗುವದಕ್ಕೆ ನಾನು ಒಪ್ಪುವದೇ ಇಲ್ಲ ಅಂದನು.

3 ಅವರು ಅವನಿಗೆ - ಇಬ್ರಿಯರ ದೇವರು ನಮ್ಮನ್ನು ಎದುರುಗೊಂಡನು; ಅಪ್ಪಣೆಯಾದರೆ ನಾವು ಅರಣ್ಯದಲ್ಲಿ ಮೂರು ದಿವಸ ಪ್ರಯಾಣದಷ್ಟು ದೂರ ಹೋಗಿ ನಮ್ಮ ದೇವರಾದ ಯೆಹೋವನಿಗೋಸ್ಕರ ಯಜ್ಞ ಮಾಡಿ ಬರುವೆವು; ಮಾಡದೆ ಹೋದರೆ ಆತನು ನಮ್ಮನ್ನು ವ್ಯಾಧಿಯಿಂದಲೋ ಕತ್ತಿಯಿಂದಲೋ ಸಂಹಾರಮಾಡಾನು ಎಂದು ಹೇಳಿದರು.

4 ಐಗುಪ್ತ್ಯರ ಅರಸನು ಅವರಿಗೆ - ಮೋಶೆಯೇ, ಆರೋನನೇ, ಈ ಜನರು ತಮ್ಮ ಕೆಲಸವನ್ನು ಬಿಡುವಂತೆ ನೀವು ಯಾಕೆ ಮಾಡುತ್ತೀರಿ? ನಿಮ್ಮ ಬಿಟ್ಟೀಕೆಲಸಕ್ಕೆ ನಡೆಯಿರಿ ಎಂದು ಹೇಳಿದನು.

5 ಫರೋಹನು - ಈ ಜನರು ಬಲು ಹೆಚ್ಚಾದರು, ನೋಡಿರಿ; ಅವರು ತಮ್ಮ ಬಿಟ್ಟೀಕೆಲಸವನ್ನು ಬಿಟ್ಟು ಬಿಡುವದಕ್ಕೆ ನೀವು ಆಸ್ಪದ ಕೊಟ್ಟದ್ದೇನು ಅಂದನು.

6 ಆ ದಿನದಲ್ಲಿ ಫರೋಹನು ಬಿಟ್ಟೀ ಮಾಡಿಸುವ ಅಧಿಕಾರಿಗಳಿಗೂ ಮೇಸ್ತ್ರಿಗಳಿಗೂ -

7 ಇನ್ನು ಮೇಲೆ ನೀವು ಆ ಜನರಿಗೆ ಇಟ್ಟಿಗೆ ಮಾಡುವದಕ್ಕೆ ಹುಲ್ಲನ್ನು ಕೊಡಕೂಡದು; ಅವರೇ ಹೋಗಿ ಹುಲ್ಲನ್ನು ಕೂಡಿಸಿಕೊಳ್ಳಲಿ;

8 ಆದರೂ ಅವರು ಈವರೆಗೆ ಮಾಡಿದ ಇಟ್ಟಿಗೆಗಳ ಲೆಕ್ಕವನ್ನು ಮುಂದೆಯೂ ಒಪ್ಪಿಸಬೇಕು; ಅದನ್ನು ಕಡಿಮೆಮಾಡಕೂಡದು. ಅವರು ಮೈಗಳ್ಳರಾದದರಿಂದ - ನಾವು ಹೋಗಿ ನಮ್ಮ ದೇವರಿಗೆ ಯಜ್ಞವನ್ನು ಮಾಡಿ ಬರುವದಕ್ಕೆ ಅಪ್ಪಣೆಯಾಗಬೇಕೆಂದು ಕೂಗಿಕೊಳ್ಳುತ್ತಾರೆ.

9 ನೀವು ಅವರಿಂದ ಕಷ್ಟವಾದ ಬಿಟ್ಟೀಕೆಲಸವನ್ನು ಮಾಡಿಸಬೇಕು. ಅವರಿಗೆ ಕಷ್ಟವಾದ ಕೆಲಸವಿದ್ದರೆ ಸುಳ್ಳು ಮಾತುಗಳಿಗೆ ಲಕ್ಷ್ಯ ಕೊಡುವದಕ್ಕೆ ಮಾರ್ಗವಿಲ್ಲ ಎಂದು ಆಜ್ಞೆ ಮಾಡಿದನು.

10 ಆದದರಿಂದ ಬಿಟ್ಟೀಮಾಡಿಸುವ ಅಧಿಕಾರಿಗಳೂ ಮೇಸ್ತ್ರಿಗಳೂ ಆ ಜನರಿಗೆ - ನಿಮಗೆ ಹುಲ್ಲನ್ನು ಕೊಡಕೂಡದೆಂದು ಫರೋಹನ ಅಪ್ಪಣೆಯಾಗಿದೆ;

11 ನೀವೇ ಹೋಗಿ ಎಲ್ಲಿಂದಾದರೂ ತಂದುಕೊಳ್ಳಬೇಕು; ಆದರೂ ನೀವು ಮಾಡಬೇಕಾದ ಕೆಲಸ ಸ್ವಲ್ಪವೂ ಕಡಿಮೆಯಾಗಕೂಡದು ಎಂದು ಹೇಳಿದರು.

12 ಹೀಗಿರಲಾಗಿ ಜನರು ಐಗುಪ್ತ ದೇಶದಲ್ಲೆಲ್ಲಾ ತಿರುಗಿ ಹುಲ್ಲು ಸಿಕ್ಕದೆ ಕೂಳೆ ಕಿತ್ತು ಕೂಡಿಸಿದರು.

13 ಬಿಟ್ಟೀಮಾಡಿಸುವವರು - ನಿಮಗೆ ಹುಲ್ಲಿದ್ದ ಕಾಲದಲ್ಲಿ ಹೇಗೋ ಹಾಗೆ ಪ್ರತಿದಿನದ ಕೆಲಸವನ್ನು ಆಯಾ ದಿನದಲ್ಲೇ ಮುಗಿಸಬೇಕೆಂದು ಹೇಳಿ ಅವರನ್ನು ತ್ವರೆಪಡಿಸಿದರು.

14 ಫರೋಹನ ಅಧಿಕಾರಿಗಳು ತಾವೇ ನೇವಿುಸಿದ ಇಸ್ರಾಯೇಲ್ ಮೇಸ್ತ್ರಿಗಳಿಗೆ - ನೀವು ಮುಂಚೆ ಇಟ್ಟಿಗೆಗಳ ಲೆಕ್ಕವನ್ನು ಒಪ್ಪಿಸಿದಂತೆ ನಿನ್ನೆ ಈ ಹೊತ್ತು ಯಾಕೆ ಒಪ್ಪಿಸಲಿಲ್ಲ ಎಂದು ಹೇಳಿ ಅವರನ್ನು ಹೊಡಿಸಿದರು.

15 ಹೀಗಿರಲು ಇಸ್ರಾಯೇಲ್ ಮೇಸ್ತ್ರಿಗಳು ಫರೋಹನ ಸಮ್ಮುಖಕ್ಕೆ ಬಂದು - ತಾವು ತಮ್ಮ ದಾಸರಿಗೆ ಹೀಗೆ ಮಾಡುವದು ಯಾಕೆ ಸ್ವಾಮೀ?

16 ದಾಸರಿಗೆ ಅಧಿಕಾರಿಗಳು ಹುಲ್ಲು ಕೊಡದೆ ಇಟ್ಟಿಗೆಗಳನ್ನು ಮಾಡಬೇಕು ಅನ್ನುತ್ತಾರೆ; ಆದದರಿಂದ ದಾಸರು ಏಟುಗಳನ್ನು ತಿನ್ನಬೇಕಾಯಿತು; ತಪ್ಪು ಖಾವಂದರ ಜನರದೇ ಅಂದರು.

17 ಅದಕ್ಕವನು - ನೀವು ಬಹಳ ಮೈಗಳ್ಳರು, ನಾವು ಹೋಗಿ ಯೆಹೋವನಿಗೆ ಯಜ್ಞಮಾಡಿ ಬರಬೇಕನ್ನುವದಕ್ಕೆ ಇದೇ ಕಾರಣ.

18 ಕೆಲಸಕ್ಕೆ ನಡೆಯಿರಿ, ನಿಮಗೆ ಹುಲ್ಲನ್ನು ಕೊಡಿಸುವದಿಲ್ಲ; ಆದರೂ ಇಟ್ಟಿಗೆಗಳ ಲೆಕ್ಕವನ್ನು ತಪ್ಪದೆ ಒಪ್ಪಿಸಬೇಕು ಅಂದನು.

19 ದಿನದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂದು ಅಪ್ಪಣೆಯಾದದರಿಂದ ಇಸ್ರಾಯೇಲ್ ಮೇಸ್ತ್ರಿಗಳು ತಮಗೆ ದುರವಸ್ಥೆಯುಂಟಾಯಿತು ಎಂದು ತಿಳಿದುಕೊಂಡರು.

20 ಅವರು ಫರೋಹನ ಬಳಿಯಿಂದ ಬಂದಾಗ ತಮ್ಮನ್ನು ಎದುರುಗೊಳ್ಳುವದಕ್ಕೆ ನಿಂತಿದ್ದ ಮೋಶೆ ಆರೋನರನ್ನು ಕಲೆತು ಅವರಿಗೆ -

21 ಫರೋಹನೂ ಅವನ ಸೇವಕರೂ ನಮ್ಮನ್ನು ನೋಡಿ ಹೇಸಿಕೊಳ್ಳುವಂತೆ ನೀವು ಮಾಡಿದಿರಿ; ನಮ್ಮನ್ನು ಸಂಹಾರಮಾಡುವದಕ್ಕೆ ಅವರ ಕೈಗೆ ಕತ್ತಿಯನ್ನು ಕೊಟ್ಟ ಹಾಗಾಯಿತು; ಯೆಹೋವನು ನಿಮ್ಮ ತಪ್ಪನ್ನು ವಿಚಾರಿಸಿ ತಕ್ಕ ಶಿಕ್ಷೆಯನ್ನು ವಿಧಿಸಲಿ ಎಂದು ಹೇಳಿದರು.


ದೇವರು ಮೋಶೆಯನ್ನು ಧೈರ್ಯಪಡಿಸಿದ್ದು

22 ಆಗ ಮೋಶೆ ಯೆಹೋವನ ಬಳಿಗೆ ತಿರಿಗಿ ಬಂದು - ಸ್ವಾಮೀ, ಈ ಜನರಿಗೆ ಯಾಕೆ ಕೇಡನ್ನು ಮಾಡಿದಿ? ನನ್ನನ್ನು ಕಳುಹಿಸಿದ್ದು ಯಾಕೆ?

23 ನಾನು ಫರೋಹನ ಬಳಿಗೆ ಹೋಗಿ ನಿನ್ನ ಹೆಸರಿನಲ್ಲಿ ಮಾತಾಡಿದಂದಿನಿಂದ ಅವನು ಈ ಜನರಿಗೆ ಕೇಡನ್ನೇ ಮಾಡುತ್ತಾನಲ್ಲಾ; ನೀನು ನಿನ್ನ ಜನರನ್ನು ಎಷ್ಟು ಮಾತ್ರವೂ ತಪ್ಪಿಸಲೇ ಇಲ್ಲ ಅಂದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು