ವಿಮೋಚನಕಾಂಡ 40 - ಕನ್ನಡ ಸತ್ಯವೇದವು J.V. (BSI)ಮೋಶೆ ಆ ಗುಡಾರವನ್ನು ಎತ್ತಿ ನಿಲ್ಲಿಸಿ ಪ್ರತಿಷ್ಠಿಸಿದಾಗ ಯೆಹೋವನ ತೇಜಸ್ಸು ಅದರ ಮೇಲೆ ಕಾಣಿಸಿ ನೆಲೆಯಾಗಿದ್ದದ್ದು 1 ಯೆಹೋವನು ಮೋಶೆಗೆ - 2 ಮೊದಲನೆಯ ತಿಂಗಳಿನ ಪ್ರಥಮದಿನದಲ್ಲಿ ನೀನು ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸಬೇಕು. 3 ಆಜ್ಞಾಶಾಸನಗಳ ಮಂಜೂಷವನ್ನು ಅದರಲ್ಲಿ ಇಟ್ಟು ಆ ಮಂಜೂಷವನ್ನು ತೆರೆಯಿಂದ ಮರೆಮಾಡಬೇಕು. 4 ಆಮೇಲೆ ಮೇಜನ್ನು ತರಿಸಿ ಅದರ ಮೇಲಿಡಬೇಕಾದದ್ದನ್ನು ಸರಿಯಾಗಿ ಇಡಬೇಕು; ದೀಪಸ್ತಂಭವನ್ನು ತರಿಸಿ ಅದರ ಹಣತೆಗಳನ್ನು ಸರಿಯಾಗಿ ಇಡಬೇಕು; 5 ಆಜ್ಞಾಶಾಸನಗಳ ಮಂಜೂಷದ ಎದುರಾಗಿ ಚಿನ್ನದ ಧೂಪವೇದಿಯನ್ನು ಇಟ್ಟು ಗುಡಾರದ ಬಾಗಲಲ್ಲಿ ಪರದೆಯನ್ನು ಕಟ್ಟಬೇಕು. 6 ದೇವದರ್ಶನದ ಗುಡಾರದ ಬಾಗಲಿನ ಮುಂದುಗಡೆಯಲ್ಲಿ ಯಜ್ಞವೇದಿಯನ್ನು ಇಡಬೇಕು. 7 ದೇವದರ್ಶನದ ಗುಡಾರಕ್ಕೂ ಯಜ್ಞವೇದಿಗೂ ನಡುವೆ ಗಂಗಾಳವನ್ನು ಇಟ್ಟು ಅದರಲ್ಲಿ ನೀರನ್ನು ತುಂಬಿಸಬೇಕು. 8 ಅಂಗಳದ ಸುತ್ತಲೂ ಆವರಣವನ್ನು ನಿಲ್ಲಿಸಿ ಅಂಗಳದ ಬಾಗಲಿಗೆ ಪರದೆಯನ್ನು ತೂಗಬಿಡಬೇಕು. 9 ಆಗ ಅಭಿಷೇಕತೈಲವನ್ನು ತೆಗೆದುಕೊಂಡು ಗುಡಾರವನ್ನೂ ಅದರಲ್ಲಿರುವದೆಲ್ಲವನ್ನೂ ಅದರ ಎಲ್ಲಾ ಉಪಕರಣಗಳನ್ನೂ ಅಭಿಷೇಕಿಸಿ ಪ್ರತಿಷ್ಠಿಸಬೇಕು; ಅಂದಿನಿಂದ ಅದು ಪರಿಶುದ್ಧವಾಗಿರುವದು. 10 ಯಜ್ಞವೇದಿಯನ್ನೂ ಅದರ ಉಪಕರಣಗಳನ್ನೂ ಅಭಿಷೇಕಿಸಿ ಯಜ್ಞವೇದಿಯನ್ನು ಪ್ರತಿಷ್ಠಿಸಬೇಕು; ಆ ಯಜ್ಞವೇದಿ ಅತ್ಯಂತ ಪರಿಶುದ್ಧವಾಗಿರಬೇಕು. 11 ಗಂಗಾಳವನ್ನೂ ಅದರ ಪೀಠವನ್ನೂ ಅಭಿಷೇಕಿಸಿ ಪ್ರತಿಷ್ಠಿಸಬೇಕು. 12 ಅದಲ್ಲದೆ ಆರೋನನನ್ನೂ ಅವನ ಮಕ್ಕಳನ್ನೂ ದೇವದರ್ಶನದ ಗುಡಾರದ ಬಾಗಲಿನ ಹತ್ತಿರಕ್ಕೆ ಬರಮಾಡಿ ಅವರನ್ನು ಸ್ನಾನಮಾಡಿಸಿ 13 ಆರೋನನು ನನಗೆ ಯಾಜಕನಾಗುವಂತೆ ಅವನಿಗೆ ಆ ದೀಕ್ಷಾವಸ್ತ್ರಗಳನ್ನು ತೊಡಿಸಿ ಅವನನ್ನು ಅಭಿಷೇಕಿಸಿ ಪ್ರತಿಷ್ಠಿಸಬೇಕು. 14 ಆಮೇಲೆ ನೀನು ಅವನ ಮಕ್ಕಳನ್ನು ಬರಮಾಡಿ ಅವರಿಗೆ ಅಂಗಿಗಳನ್ನು ತೊಡಿಸಿ 15 ಅವರು ನನಗೋಸ್ಕರ ಯಾಜಕರಾಗುವದಕ್ಕಾಗಿ ನೀನು ಅವರ ತಂದೆಯನ್ನು ಅಭಿಷೇಕಿಸಿದಂತೆಯೇ ಅವರನ್ನೂ ಅಭಿಷೇಕಿಸಬೇಕು. ಈ ಅಭಿಷೇಕದಿಂದ ಯಾಜಕತ್ವವು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿರುವದು ಎಂದು ಹೇಳಿದನು. 16 ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನು ಮಾಡಿದನು. 17 ಎರಡನೆಯ ವರುಷದ ಮೊದಲನೆಯ ತಿಂಗಳಿನ ಪ್ರಥಮ ದಿನದಲ್ಲಿ ಮೋಶೆ ಗುಡಾರವನ್ನು ಎತ್ತಿ ನಿಲ್ಲಿಸಿದನು. 18 ಅವನು ಗುಡಾರವನ್ನು ಎತ್ತಿಸಿ ಅದರ ಗದ್ದಿಗೇ ಕಲ್ಲುಗಳನ್ನು ಹಾಕಿ ಚೌಕಟ್ಟುಗಳನ್ನು ನಿಲ್ಲಿಸಿ ಅಗುಳಿಗಳನ್ನು ಕೊಟ್ಟು ಕಂಬಗಳನ್ನು ನಿಲ್ಲಿಸಿದನು. 19 ಗುಡಾರದ ಮೇಲೆ ಡೇರೆಯ ಬಟ್ಟೆಯನ್ನು ಹಾಸಿ ಆ ಡೇರೆಗೆ ಮೇಲ್ಹೊದಿಕೆಯನ್ನು ಹಾಕಿದನು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಅದನ್ನೆಲ್ಲಾ ಮಾಡಿದನು. 20 ಅವನು ಆಜ್ಞಾಶಾಸನಗಳನ್ನು ಮಂಜೂಷದಲ್ಲಿಟ್ಟು ಮಂಜೂಷಕ್ಕೆ ಕೋಲುಗಳನ್ನು ಕೊಟ್ಟು 21 ಅದರ ಮೇಲೆ ಕೃಪಾಸನವನ್ನಿಟ್ಟು ಮಂಜೂಷವನ್ನು ಗುಡಾರದೊಳಕ್ಕೆ ತಂದು ಅದರ ಮುಂದೆ ತೆರೆಯನ್ನು ಇರಿಸಿ ಯೆಹೋವನು ಆಜ್ಞಾಪಿಸಿದಂತೆಯೇ ಆಜ್ಞಾಶಾಸನಗಳ ಮಂಜೂಷವನ್ನು ಮರೆಮಾಡಿದನು. 22 ಅದಲ್ಲದೆ ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ದೇವದರ್ಶನದ ಗುಡಾರದೊಳಗೆ ಉತ್ತರಕಡೆಯಲ್ಲಿ ತೆರೆಯ ಹೊರಗಡೆ ಮೇಜನ್ನು ಇಟ್ಟು 23 ಅದರ ಮೇಲೆ ಯೆಹೋವನ ಸನ್ನಿಧಿಯಲ್ಲಿ ರೊಟ್ಟಿಗಳನ್ನು ಕ್ರಮವಾಗಿ ಇರಿಸಿದನು. 24 ಮತ್ತು ಯೆಹೋವನು ಆಜ್ಞಾಪಿಸಿದಂತೆಯೇ ಅವನು ದೀಪಸ್ತಂಭವನ್ನು ದೇವದರ್ಶನದ ಗುಡಾರದೊಳಗೆ ಮೇಜಿನ ಎದುರಾಗಿ ಗುಡಾರದ ದಕ್ಷಿಣ ಕಡೆಯಲ್ಲಿ ಇಟ್ಟು 25 ಅದರ ಹಣತೆಗಳನ್ನು ಯೆಹೋವನ ಸನ್ನಿಧಿಯಲ್ಲಿ ಕ್ರಮವಾಗಿ ಇರಿಸಿದನು. 26 ಮತ್ತು ಯೆಹೋವನು ಆಜ್ಞಾಪಿಸಿದಂತೆ ಚಿನ್ನದ ಧೂಪವೇದಿಯನ್ನು ದೇವದರ್ಶನದ ಗುಡಾರದಲ್ಲಿ ತೆರೆಯ ಮುಂದೆ ಇಟ್ಟು 27 ಅದರ ಮೇಲೆ ಪರಿಮಳ ದ್ರವ್ಯಗಳ ಧೂಪವನ್ನು ಹಾಕಿದನು. 28 ಮತ್ತು ಮೋಶೆ ಗುಡಾರದ ಬಾಗಲಿಗೆ ಪರದೆಯನ್ನು ಹಾಕಿದನು. 29 ಯೆಹೋವನು ಆಜ್ಞಾಪಿಸಿದಂತೆಯೇ ದೇವದರ್ಶನದ ಗುಡಾರದ ಬಾಗಲಿನ ಮುಂದೆ ಯಜ್ಞವೇದಿಯನ್ನು ಇಟ್ಟು ಅದರ ಮೇಲೆ ಸರ್ವಾಂಗಹೋಮವನ್ನೂ ಧಾನ್ಯಸಮರ್ಪಣೆಯನ್ನೂ ಮಾಡಿದನು. 30 ಯೆಹೋವನು ಆಜ್ಞಾಪಿಸಿದಂತೆ ಮೋಶೆ ದೇವದರ್ಶನದ ಗುಡಾರಕ್ಕೂ ಯಜ್ಞವೇದಿಗೂ ನಡುವೆ ಗಂಗಾಳವನ್ನು ಇರಿಸಿ ತೊಳಕೊಳ್ಳುವದಕ್ಕೋಸ್ಕರ ಅದರಲ್ಲಿ ನೀರು ತುಂಬಿಸಿದನು. 31 ಅದರಲ್ಲಿ ಮೋಶೆಯೂ ಆರೋನನೂ ಅವನ ಮಕ್ಕಳೂ 32 ದೇವದರ್ಶನದ ಗುಡಾರದೊಳಗೆ ಹೋಗುವಾಗಲೂ ಯಜ್ಞವೇದಿಯ ಸೇವೆಗೆ ಬಂದಾಗಲೂ ಕೈಕಾಲುಗಳನ್ನು ತೊಳಕೊಳ್ಳುವರು. 33 ಗುಡಾರಕ್ಕೂ ಯಜ್ಞವೇದಿಗೂ ಸುತ್ತಲು ಅಂಗಳದ ಆವರಣವನ್ನು ಎತ್ತಿ ನಿಲ್ಲಿಸಿ ಅಂಗಳದ ಬಾಗಲಿಗೆ ಪರದೆಯನ್ನು ಹಾಕಿದನು. ಹೀಗೆ ಮೋಶೆ ಆ ಕೆಲಸವನ್ನೆಲ್ಲಾ ಮುಗಿಸಿದನು. 34 ಆಗ ಮೇಘವು ದೇವದರ್ಶನದ ಗುಡಾರವನ್ನು ಮುಚ್ಚಿತು; ಯೆಹೋವನ ತೇಜಸ್ಸು ಗುಡಾರವನ್ನು ತುಂಬಿತು. 35 ಮೇಘವು ದೇವದರ್ಶನದ ಗುಡಾರದ ಮೇಲೆ ನೆಲೆಯಾಗಿರುವದರಿಂದಲೂ ಯೆಹೋವನ ತೇಜಸ್ಸು ಗುಡಾರದೊಳಗೆ ತುಂಬಿರುವದರಿಂದಲೂ ಮೋಶೆ ಗುಡಾರದಲ್ಲಿ ಹೋಗಲಾರದೆ ಇದ್ದನು. 36 ಆ ಮೇಘವು ಗುಡಾರವನ್ನು ಬಿಟ್ಟು ಮೇಲಕ್ಕೆ ಹೋದಾಗ ಇಸ್ರಾಯೇಲ್ಯರು ಮುಂದೆ ಪ್ರಯಾಣ ಮಾಡುವರು; 37 ಆ ಮೇಘವು ಬಿಡದೆ ಇರುವಾಗ ಅದು ಬಿಡುವ ತನಕ ಪ್ರಯಾಣಮಾಡದೆ ಇರುವರು. 38 ಇಸ್ರಾಯೇಲ್ಯರ ಎಲ್ಲಾ ಪ್ರಯಾಣಗಳಲ್ಲಿಯೂ ಅವರ ಕಣ್ಣ ಮುಂದೆ ಹಗಲು ಹೊತ್ತಿನಲ್ಲಿ ಯೆಹೋವನ ಮೇಘವು ಗುಡಾರದ ಮೇಲೆ ಇತ್ತು; ರಾತ್ರಿ ವೇಳೆಯಲ್ಲಿ ಆ ಮೇಘದೊಳಗೆ ಅಗ್ನಿಯು ಪ್ರಕಾಶಿಸುತ್ತಿತ್ತು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India