ವಿಮೋಚನಕಾಂಡ 38 - ಕನ್ನಡ ಸತ್ಯವೇದವು J.V. (BSI)1 ಅವನು ಯಜ್ಞವೇದಿಯನ್ನು ಜಾಲೀಮರದಿಂದ ಮಾಡಿದನು. ಅದು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು; ಅದರ ಎತ್ತರ ಮೂರು ಮೊಳವಾಗಿತ್ತು. 2 ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬುಗಳನ್ನು ಮಾಡಿದನು; ಅವು ಯಜ್ಞವೇದಿಗೆ ಏಕವಾಗಿದ್ದವು. ಆ ವೇದಿಗೆ ತಾಮ್ರದ ತಗಡುಗಳನ್ನು ಹೊದಿಸಿದನು. 3 ವೇದಿಯ ಉಪಕರಣಗಳನ್ನೆಲ್ಲಾ ಅಂದರೆ ಅದರ ಬಟ್ಟಲುಗಳು, ಸಲಿಕೆಗಳು, ಬೋಗುಣಿಗಳು, ಮುಳ್ಳುಗಳು, ಅಗ್ಗಿಷ್ಟಿಗೆಗಳು ಇವುಗಳನ್ನೆಲ್ಲಾ ತಾಮ್ರದಿಂದ ಮಾಡಿದನು. 4 ವೇದಿಗೆ ಹೆಣಿಗೇ ಕೆಲಸದಿಂದ ತಾಮ್ರದ ಜಾಳಿಗೆಯನ್ನು ಮಾಡಿದನು. ಅದು ವೇದಿಯ ಸುತ್ತಲಿರುವ ಕಟ್ಟೆಯ ಕೆಳಗೆ ವೇದಿಯ ಬುಡದಿಂದ ನಡುವಿನ ತನಕ ಇರುವಂತೆ ಹಾಕಿದನು. 5 ವೇದಿಯನ್ನು ಎತ್ತುವ ಕೋಲುಗಳನ್ನು ಸೇರಿಸುವದಕ್ಕಾಗಿ ಆ ತಾಮ್ರದ ಜಾಳಿಗೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಬಳೆಗಳನ್ನು ಎರಕಹೊಯಿದನು. 6 ವೇದಿಯನ್ನು ಹೊರುವ ಕೋಲುಗಳನ್ನು ಜಾಲೀಮರದಿಂದ ಮಾಡಿ ತಾಮ್ರದ ತಗಡುಗಳನ್ನು ಹೊದಿಸಿ 7 ಅದರ ಎರಡು ಪಕ್ಕಗಳಲ್ಲಿರುವ ಬಳೆಗಳಲ್ಲಿ ಸೇರಿಸಿದನು. ಆ ವೇದಿಯನ್ನು ಹಲಿಗೆಗಳಿಂದ ಪೆಟ್ಟಿಗೆಯಂತೆ ಮಾಡಿದನು. 8 ದೇವದರ್ಶನದ ಗುಡಾರದ ಬಾಗಲಲ್ಲಿ ಸೇವೆ ಮಾಡುತ್ತಿದ್ದ ಸ್ತ್ರೀಯರು ಕೊಟ್ಟ ತಾಮ್ರದ ದರ್ಪಣಗಳಿಂದ ಗಂಗಾಳವನ್ನೂ ಅದರ ಪೀಠವನ್ನೂ ಮಾಡಿದನು. 9 ಗುಡಾರಕ್ಕೆ ಅಂಗಳವನ್ನು ಮಾಡಿದನು. ಆ ಅಂಗಳದ ತೆಂಕಣ ಕಡೆಯಲ್ಲಿ ಇದ್ದ ತೆರೆಗಳು ಹುರಿನಾರಿನ ಬಟ್ಟೆಯಿಂದ ಉಂಟಾಗಿ ನೂರು ಮೊಳ ಉದ್ದವಾಗಿದ್ದವು. 10 ಆ ಕಡೆಯಲ್ಲಿ ಇಪ್ಪತ್ತು ಕಂಬಗಳೂ ಅವುಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು. 11 ಉತ್ತರ ಕಡೆಯಲ್ಲಿಯೂ ನೂರು ಮೊಳ ಉದ್ದವಾದ ತೆರೆಗಳೂ ಇಪ್ಪತ್ತು ಕಂಬಗಳೂ ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು. 12 ಪಶ್ಚಿಮ ಕಡೆಯಲ್ಲಿ ಐವತ್ತು ಮೊಳ ಉದ್ದವಾದ ತೆರೆಗಳೂ ಹತ್ತು ಕಂಬಗಳೂ ಹತ್ತು ಗದ್ದಿಗೇಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು. 13 ಪೂರ್ವದಿಕ್ಕಿನಲ್ಲಿಯೂ ಅಂಗಳದ ಅಗಲವು ಐವತ್ತು ಮೊಳವಾಗಿತ್ತು. 14-15 ಅಲ್ಲಿ ಬಾಗಲಿನ ಎರಡು ಕಡೆಗಳಲ್ಲಿಯೂ ಹದಿನೈದು ಮೊಳ ಉದ್ದವಾದ ತೆರೆಗಳೂ ಅವುಗಳಿಗೆ ಮೂರು ಮೂರು ಕಂಬಗಳೂ ಮೂರು ಮೂರು ಗದ್ದಿಗೇಕಲ್ಲುಗಳೂ ಇದ್ದವು. 16 ಅಂಗಳದ ಸುತ್ತಲಿರುವ ತೆರೆಗಳೆಲ್ಲಾ ಹುರಿನಾರಿನ ಬಟ್ಟೆಯೇ; 17 ಕಂಬಗಳ ಗದ್ದಿಗೇಕಲ್ಲುಗಳು ತಾಮ್ರದವುಗಳು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು; ಅವುಗಳ ಬೋದಿಗೆಗಳು ಬೆಳ್ಳಿಯ ತಗಡುಗಳಿಂದ ಹೊದಿಸಲ್ಪಟ್ಟವು. ಅಂಗಳದ ಎಲ್ಲಾ ಕಂಬಗಳಿಗೂ ಬೆಳ್ಳಿಯ ಕಟ್ಟುಗಳಿದ್ದವು. 18 ಅಂಗಳದ ಬಾಗಲಲ್ಲಿದ್ದ ಪರದೆಯು ಹುರಿನಾರಿನ ಬಟ್ಟೆಯಿಂದಲೂ ನೀಲಿ ಧೂಮ್ರ ರಕ್ತವರ್ಣಗಳುಳ್ಳ ದಾರದಿಂದಲೂ ಬುಟೇದಾರೀ ಕೆಲಸದವರ ಕೈಯಿಂದ ಮಾಡಲ್ಪಟ್ಟಿತು. ಅದರ ಉದ್ದವು ಇಪ್ಪತ್ತು ಮೊಳವಾಗಿತ್ತು; ಅದರ ಅಗಲವು ಅಂಗಳದ ವಿುಕ್ಕ ತೆರೆಗಳಂತೆ ಐದು ಮೊಳ. 19 ಬಾಗಲಿಗೆ ನಾಲ್ಕು ಕಂಬಗಳೂ ನಾಲ್ಕು ತಾಮ್ರದ ಗದ್ದಿಗೇಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೋದಿಗೆಗಳಿಗೆ ಹೊದಿಸಲ್ಪಟ್ಟ ತಗಡುಗಳೂ ಬೆಳ್ಳಿಯವು. 20 ಗುಡಾರದ ಗೂಟಗಳೂ ಅಂಗಳದ ಗೂಟಗಳೂ ಎಲ್ಲಾ ತಾಮ್ರದವುಗಳು. ಗುಡಾರವನ್ನು ನಿರ್ಮಿಸುವದರಲ್ಲಿ ಉಪಯೋಗವಾದ ಚಿನ್ನ ಬೆಳ್ಳಿ ತಾಮ್ರಗಳ ಒಟ್ಟು ಲೆಕ್ಕ 21 ದೇವದರ್ಶನದ ಗುಡಾರವನ್ನು ಮಾಡುವದರಲ್ಲಿ ಉಪಯೋಗಿಸಿದ ಪದಾರ್ಥಗಳ ಲೆಕ್ಕ. ಮೋಶೆಯ ಆಜ್ಞೆಯ ಮೇರೆಗೆ ಮಹಾಯಾಜಕನಾದ ಆರೋನನ ಮಗ ಈತಾಮಾರನು ಲೇವಿಯರ ಕೈಯಿಂದ ಲೆಕ್ಕ ಮಾಡಿಸಿದ್ದು. 22 ಯೆಹೋವನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದವರು ಯಾರಂದರೆ - ಯೆಹೂದ ಕುಲದ ಹೂರನ ಮೊಮ್ಮಗನೂ ಊರಿಯ ಮಗನೂ ಆಗಿದ್ದ ಬೆಚಲೇಲನೇ; 23 ಅವನ ಜೊತೆಯಲ್ಲಿ ದಾನ್ ಕುಲದ ಅಹೀಸಾಮಾಕನ ಮಗನಾದ ಒಹೊಲೀಯಾಬನು ಸೇರಿದ್ದನು; ಇವನು ಶಿಲ್ಪವಿದ್ಯೆ ಬಲ್ಲವನೂ ವಿಚಿತ್ರವಾದ ಕೆಲಸವನ್ನು ಕಲ್ಪಿಸುವವನೂ ನಾರಿನ ಬಟ್ಟೆಯಲ್ಲಿ ನೀಲಿ ಧೂಮ್ರ ರಕ್ತವರ್ಣಗಳುಳ್ಳ ನೂಲಿನಿಂದ ಬುಟೇದಾರೀ ಕೆಲಸಮಾಡುವವನೂ ಆಗಿದ್ದನು. 24 ದೇವ ಮಂದಿರದ ಸಕಲವಿಧವಾದ ಕೆಲಸದಲ್ಲಿ ಉಪಯೋಗಿಸಿದ ಕಾಣಿಕೆಯ ಬಂಗಾರವು ದೇವರ ಸೇವೆಗೆ ನೇಮಕವಾದ ಶೆಕೆಲಿನ ಮೇರೆಗೆ ಇಪ್ಪತ್ತೊಂಭತ್ತು ತಲಾಂತು ಏಳು ನೂರಮೂವತ್ತು ಶೆಕೆಲ್. 25-26 ಬೆಳ್ಳಿಯ ಲೆಕ್ಕ ಲೆಕ್ಕಿಸಲ್ಪಟ್ಟವರಲ್ಲಿ, ಇಪ್ಪತ್ತು ವರುಷದವರೂ ಹೆಚ್ಚಿನ ವಯಸ್ಸುಳ್ಳವರೂ ದೇವರ ಸೇವೆಗೆ ನೇಮಕವಾದ ರೂಪಾಯಿಯ ಮೇರೆಗೆ ಒಂದೊಂದು ಬೆಕಾ ಅಂದರೆ ಅರ್ಧ ಅರ್ಧ ರೂಪಾಯಿ ಕಪ್ಪವನ್ನು ಕೊಡಬೇಕಾದದರಿಂದ ಸಮೂಹದಲ್ಲಿ ಲೆಕ್ಕಿಸಲ್ಪಟ್ಟ ಆರು ಲಕ್ಷ ಮೂರು ಸಾವಿರದ ಐನೂರ ಐವತ್ತು ಮಂದಿಯಿಂದ ವಸೂಲಾದದ್ದು - ನೂರು ತಲಾಂತು ಸಾವಿರದ ಏಳುನೂರ ಎಪ್ಪತ್ತೈದು ಶೆಕೆಲ್. 27 ದೇವಮಂದಿರದ ಗದ್ದಿಗೇ ಕಲ್ಲುಗಳನ್ನೂ ತೆರೆಯ ಕಂಬಗಳ ಗದ್ದಿಗೇಕಲ್ಲುಗಳನ್ನೂ ಎರಕಹೊಯ್ಯುವದರಲ್ಲಿ ಒಂದೊಂದು ಗದ್ದಿಗೇಕಲ್ಲಿಗೆ ಒಂದೊಂದು ತಲಾಂತಿನ ಮೇರೆಗೆ ನೂರು ತಲಾಂತು ಬೆಳ್ಳಿಯು ಉಪಯೋಗವಾಯಿತು. 28 ವಿುಕ್ಕ ಸಾವಿರದ ಏಳು ನೂರು ಎಪ್ಪತ್ತೈದು ತೊಲೆಯಿಂದ ಕಂಬಗಳಿಗೆ ಕೊಂಡಿಗಳನ್ನೂ ಕಟ್ಟುಗಳನ್ನೂ ಮಾಡಿ ಅವುಗಳ ಬೋದಿಗೆಗಳಿಗೆ ತಗಡುಗಳನ್ನು ಹೊದಿಸಿದರು. 29 ಜನರು ಕಾಣಿಕೆಯಾಗಿ ಕೊಟ್ಟ ತಾಮ್ರದ ಲೆಕ್ಕ - ಎಪ್ಪತ್ತು ತಲಾಂತು ಎರಡು ಸಾವಿರದ ನಾನೂರು ಶೆಕೆಲ್. 30 ಇದರಿಂದ ದೇವದರ್ಶನದ ಗುಡಾರದ ಬಾಗಲಿನ ಗದ್ದಿಗೇಕಲ್ಲುಗಳನ್ನೂ ತಾಮ್ರದ ಯಜ್ಞವೇದಿಯನ್ನೂ ಅದರ ತಾಮ್ರದ ಜಾಳಿಗೆಯನ್ನೂ 31 ಯಜ್ಞವೇದಿಯ ಎಲ್ಲಾ ಉಪಕರಣಗಳನ್ನೂ ಅಂಗಳದ ಸುತ್ತಲಿನ ಗದ್ದಿಗೇಕಲ್ಲುಗಳನ್ನೂ ಅಂಗಳದ ಬಾಗಲಿನ ಗದ್ದಿಗೇಕಲ್ಲುಗಳನ್ನೂ ಗುಡಾರದ ಮತ್ತು ಅಂಗಳದ ಎಲ್ಲಾ ಗೂಟಗಳನ್ನೂ ಮಾಡಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India