ವಿಮೋಚನಕಾಂಡ 37 - ಕನ್ನಡ ಸತ್ಯವೇದವು J.V. (BSI)1 ಬೆಚಲೇಲನು ಜಾಲೀಮರದಿಂದ ಮಂಜೂಷವನ್ನು ಮಾಡಿದನು. ಅದು ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು. 2 ಚೊಕ್ಕಬಂಗಾರದ ತಗಡುಗಳನ್ನು ಅದರ ಹೊರಗಡೆಯೂ ಒಳಗಡೆಯೂ ಹೊದಿಸಿದನು; ಅದರ ಮೇಲೆ ಸುತ್ತಲೂ ಚಿನ್ನದ ಗೋಟು ಕಟ್ಟಿಸಿದನು. 3 ನಾಲ್ಕು ಬಂಗಾರದ ಬಳೆಗಳನ್ನು ಎರಕ ಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ ಅಂದರೆ ಒಂದೊಂದು ಕಡೆಯಲ್ಲಿ ಎರಡೆರಡು ಬಳೆಗಳನ್ನು ಇರಿಸಿದನು. 4 ಮತ್ತು ಜಾಲೀಮರದ ಕೋಲುಗಳನ್ನು ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ 5 ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಅದನ್ನು ಹೊರುವದಕ್ಕಾಗಿ ಸೇರಿಸಿದನು. 6 ಅದಲ್ಲದೆ ಚೊಕ್ಕಬಂಗಾರದ ಕೃಪಾಸನವನ್ನು ಮಾಡಿದನು. ಅದು ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಆಗಿತ್ತು. 7 ಕೃಪಾಸನದ ಎರಡು ಕೊನೆಗಳಲ್ಲಿ ಕೆರೂಬಿಯರ ಎರಡು ಬಂಗಾರದ ಆಕಾರಗಳನ್ನು ನಕಾಸಿಕೆಲಸದಿಂದ ಮಾಡಿದನು. 8 ಕೃಪಾಸನದ ಒಂದೊಂದು ಕೊನೆಯಲ್ಲಿ ಒಂದೊಂದು ಕೆರೂಬಿಯನ್ನು ಮಾಡಿ ಕೃಪಾಸನಕ್ಕೆ ಜೋಡಿಸಿದನು. 9 ಆ ಕೆರೂಬಿಗಳು ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತೆಯೂ ಕೃಪಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚುವಂತೆಯೂ ಇದ್ದವು. ಅವುಗಳ ಮುಖಗಳು ಎದುರು ಬದುರಾಗಿ ಕೃಪಾಸನವನ್ನು ನೋಡುತ್ತಿದ್ದವು. 10 ಅವನು ಜಾಲೀಮರದಿಂದ ಮೇಜನ್ನು ಮಾಡಿದನು. ಅದು ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು. 11 ಅದಕ್ಕೆ ಚೊಕ್ಕ ಬಂಗಾರದ ತಗಡುಗಳನ್ನು ಹೊದಿಸಿ ಸುತ್ತಲೂ ಚಿನ್ನದ ಗೋಟು ಕಟ್ಟಿದನು. 12 ಮೇಜಿನ ಸುತ್ತಲೂ ಅಂಗೈ ಅಗಲದ ಅಡ್ಡ ಪಟ್ಟಿಯನ್ನು ಮಾಡಿ ಅದಕ್ಕೂ ಚಿನ್ನದ ಗೋಟು ಕಟ್ಟಿದನು. 13 ಮೇಜನ್ನು ಎತ್ತುವ ಕೋಲುಗಳನ್ನು ಸೇರಿಸುವದಕ್ಕಾಗಿ ಅದಕ್ಕೆ ನಾಲ್ಕು ಚಿನ್ನದ ಬಳೆಗಳನ್ನು ಎರಕ ಹೊಯಿಸಿ ಅದರ ನಾಲ್ಕು ಕಾಲುಗಳಲ್ಲಿ ಹಚ್ಚಿದನು. 14 ಆ ಬಳೆಗಳು ಅಡ್ಡಪಟ್ಟಿಗೆ ಹತ್ತಿಕೊಂಡಿದ್ದವು. 15 ಮೇಜನ್ನು ಹೊರುವದಕ್ಕೆ ಕೋಲುಗಳನ್ನು ಜಾಲೀಮರದಿಂದ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿದನು. 16 ಮೇಜಿನ ಮೇಲೆ ಇಡಬೇಕಾದ ಉಪಕರಣಗಳನ್ನು ಅಂದರೆ ಹರಿವಾಣಗಳು, ಧೂಪಾರತಿಗಳು, ಹೂಜೆಗಳು, ಪಾನದ್ರವ್ಯವನ್ನು ಅರ್ಪಿಸುವದಕ್ಕೆ ಬೇಕಾದ ಬಟ್ಟಲುಗಳು ಇವುಗಳನ್ನು ಚೊಕ್ಕ ಬಂಗಾರದಿಂದ ಮಾಡಿದನು. 17 ಮತ್ತು ಚೊಕ್ಕಬಂಗಾರದ ದೀಪಸ್ತಂಭವನ್ನು ಮಾಡಿದನು. ಅದರ ಬುಡವನ್ನೂ ಕಂಬವನ್ನೂ ನಕಾಸಿಕೆಲಸದಿಂದ ಮಾಡಿದನು. ಆ ದೀಪಸ್ತಂಭವೆಲ್ಲಾ ಅಖಂಡವಾಗಿ ಪುಷ್ಪಪಾತ್ರೆಗಳಂತೆಯೂ ಪುಷ್ಪಗಳಂತೆಯೂ ಅಲಂಕಾರವಾಗಿ ಕೆತ್ತಿತ್ತು. 18 ಕಂಬದ ಒಂದೊಂದು ಪಾರ್ಶ್ವದಲ್ಲಿ ಮೂರು ಮೂರು ಕೊಂಬೆಗಳು ಅಂತೂ ಆರು ಕೊಂಬೆಗಳು ಇದ್ದವು. 19 ಪ್ರತಿಯೊಂದು ಕೊಂಬೆಯಲ್ಲಿ ಬಾದಾವಿು ಹೂವುಗಳಂತಿರುವ ಮೂರು ಮೂರು ಪುಷ್ಪಾಲಂಕಾರಗಳಿದ್ದವು; ಒಂದೊಂದು ಅಲಂಕಾರಕ್ಕೆ ಒಂದು ಪುಷ್ಪಪಾತ್ರೆಯೂ ಒಂದು ಪುಷ್ಪವೂ ಇದ್ದವು. ಆರು ಕೊಂಬೆಗಳನ್ನೂ ಹಾಗೆಯೇ ಮಾಡಿದನು. 20 ದೀಪಸ್ತಂಭದ ಕಡ್ಡಿಯಲ್ಲಿ ಪುಷ್ಪಪಾತ್ರೆಗಳೂ ಪುಷ್ಪಗಳೂ ಇರುವ ಬಾದಾವಿು ಹೂವುಗಳಂತೆ ನಾಲ್ಕು ಪುಷ್ಪಾಲಂಕಾರಗಳು ಇದ್ದವು. 21 ಎರಡೆರಡು ಕೊಂಬೆಗಳು ಕವಲು ಒಡೆದಿರುವ ಸ್ಥಳಗಳಲ್ಲೆಲ್ಲಾ ಒಂದೊಂದು ಪುಷ್ಪಪಾತ್ರೆ ಇತ್ತು. 22 ಪುಷ್ಪಪಾತ್ರೆಗಳೂ ಕೊಂಬೆಗಳೂ ಸಹಿತವಾದ ದೀಪಸ್ತಂಭವನ್ನೆಲ್ಲಾ ಒಟ್ಟಿಗೆ ಚೊಕ್ಕಬಂಗಾರದಿಂದ ನಕಾಸಿಕೆಲಸದಿಂದ ಮಾಡಿದನು. 23 ಅದರ ಏಳು ಹಣತೆಗಳನ್ನೂ ಅದರ ಕತ್ತರಿಗಳನ್ನೂ ದೀಪದ ಕುಡಿ ತೆಗೆಯುವ ಬಟ್ಟಲುಗಳನ್ನೂ ಚೊಕ್ಕಬಂಗಾರದಿಂದ ಮಾಡಿದನು. 24 ದೀಪಸ್ತಂಭವೂ ಅದರ ಎಲ್ಲಾ ಉಪಕರಣಗಳೂ ಒಂದು ತಲಾಂತು ಚೊಕ್ಕಬಂಗಾರದವುಗಳಾಗಿದ್ದವು. 25 ಅವನು ಜಾಲೀಮರದಿಂದ ಧೂಪವೇದಿಯನ್ನು ಮಾಡಿದನು. ಅದು ಒಂದು ಮೊಳ ಉದ್ದವಾಗಿಯೂ ಒಂದು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು; ಅದರ ಎತ್ತರವು ಎರಡು ಮೊಳವಾಗಿತ್ತು. 26 ಅದರ ಕೊಂಬುಗಳು ಅದರೊಂದಿಗೆ ಏಕವಾಗಿದ್ದವು. ಅದರ ಮೇಲ್ಭಾಗಕ್ಕೂ ನಾಲ್ಕು ಪಕ್ಕಗಳಿಗೂ ಕೊಂಬುಗಳಿಗೂ ಚೊಕ್ಕಬಂಗಾರದ ತಗಡುಗಳನ್ನು ಹೊದಿಸಿದನು. ಸುತ್ತಲೂ ಚಿನ್ನದ ಗೋಟು ಕಟ್ಟಿದನು. 27 ಅದನ್ನು ಎತ್ತುವ ಕೋಲುಗಳನ್ನು ಸೇರಿಸುವದಕ್ಕಾಗಿ ಆ ಗೋಟಿನ ಕೆಳಗೆ ವೇದಿಯ ಎರಡು ಪಾರ್ಶ್ವಗಳ ಮೂಲೆಗಳಲ್ಲಿ ಎರಡೆರಡು ಚಿನ್ನದ ಬಳೆಗಳನ್ನು ಬಿಗಿಸಿದನು. 28 ವೇದಿಯನ್ನು ಹೊರುವದಕ್ಕೆ ಕೋಲುಗಳನ್ನು ಜಾಲೀಮರದಿಂದ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿದನು. 29 ಅದಲ್ಲದೆ ಅವನು ದೇವರ ಸೇವೆಗೆ ನೇಮಕವಾದ ಪಟ್ಟಾಭಿಷೇಕತೈಲವನ್ನೂ ಪರಿಮಳ ದ್ರವ್ಯಗಳಿಂದುಂಟಾದ ಸ್ವಚ್ಫವಾದ ಧೂಪದ್ರವ್ಯವನ್ನೂ ಸುಗಂಧದ್ರವ್ಯಕಾರರ ವಿದ್ಯೆಯ ಮೇರೆಗೆ ಮಾಡಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India