ವಿಮೋಚನಕಾಂಡ 36 - ಕನ್ನಡ ಸತ್ಯವೇದವು J.V. (BSI)1 ಬೆಚಲೇಲನೂ ಒಹೊಲೀಯಾಬನೂ ಎಲ್ಲವನ್ನು ಯೆಹೋವನು ಆಜ್ಞಾಪಿಸಿದ ಪ್ರಕಾರವೇ ಮಾಡುವರು; ಮತ್ತು ಬೇರೆ ಜಾಣರೆಲ್ಲರು, ಅಂದರೆ ಯೆಹೋವನಿಂದ ಜ್ಞಾನವಿವೇಕಗಳನ್ನು ಹೊಂದಿ ದೇವಮಂದಿರವನ್ನು ನಿರ್ಮಿಸುವ ಕೆಲಸಕ್ಕೋಸ್ಕರ ಬೇಕಾದ ಸಕಲವಿಧವಾದ ವಸ್ತುಗಳನ್ನು ಮಾಡುವ ಕ್ರಮತಿಳಿದಿರುವವರು, ಅವರೊಂದಿಗೆ ಕೆಲಸಮಾಡುವರು ಅಂದನು. ಇಸ್ರಾಯೇಲ್ಯರು ಗುಡಾರವನ್ನೂ ಅದರ ಎಲ್ಲಾ ಸಾಮಾನುಗಳನ್ನೂ ಮಾಡಿದ್ದು 2 ಬೆಚಲೇಲನನ್ನೂ ಒಹೊಲೀಯಾಬನನ್ನೂ ಮತ್ತು ಯಾರಾರ ಹೃದಯದಲ್ಲಿ ಯೆಹೋವನು ಜ್ಞಾನವನ್ನು ಇಟ್ಟಿದ್ದನೋ ಯಾರಾರನ್ನು ಈ ಕೆಲಸಮಾಡುವದಕ್ಕೆ ಹೃದಯ ಪ್ರೇರಿಸಿತೋ ಆ ಜಾಣರೆಲ್ಲರನ್ನೂ ಮೋಶೆ ತನ್ನ ಹತ್ತಿರಕ್ಕೆ ಕರಿಸಿದನು. 3 ಅವರು ದೇವಮಂದಿರವನ್ನು ನಿರ್ಮಿಸುವ ಕೆಲಸಕ್ಕೆ ಇಸ್ರಾಯೇಲ್ಯರು ತಂದಿದ್ದ ಕಾಣಿಕೆಗಳನ್ನೆಲ್ಲಾ ಮೋಶೆಯ ಕೈಯಿಂದ ತೆಗೆದುಕೊಂಡರು. ಇಸ್ರಾಯೇಲ್ಯರು ಪ್ರತಿದಿನದ ಹೊತ್ತಾರೆಯಲ್ಲಿ ಮೋಶೆಯ ಬಳಿಗೆ ಬಂದು ಹೆಚ್ಚು ಕಾಣಿಕೆಗಳನ್ನು ಮನಃಪೂರ್ವಕವಾಗಿ ಕೊಡುತ್ತಿದ್ದರು. 4 ಆಗ ದೇವಮಂದಿರದ ಕೆಲಸವನ್ನು ನಡಿಸುತ್ತಿದ್ದ ಆ ಜಾಣರೆಲ್ಲರು ತಮ್ಮ ತಮ್ಮ ಕೆಲಸವನ್ನು ಬಿಟ್ಟು ಮೋಶೆಯ ಬಳಿಗೆ ಬಂದು ಅವನಿಗೆ - 5 ಯೆಹೋವನು ಆಜ್ಞಾಪಿಸಿದ ಕೆಲಸಕ್ಕೆ ಬೇಕಾದದ್ದಕ್ಕಿಂತಲೂ ಬಹಳ ಹೆಚ್ಚಾಗಿ ಜನರು ಕಾಣಿಕೆಗಳನ್ನು ತರುತ್ತಿರುತ್ತಾರೆಂದು ಹೇಳಲಾಗಿ ಮೋಶೆ - 6 ದೇವಮಂದಿರದ ಕೆಲಸಕ್ಕಾಗಿ ಯಾವ ಪುರುಷನಾಗಲಿ ಸ್ತ್ರೀಯಾಗಲಿ ಇನ್ನು ಮುಂದೆ ಯಾವದನ್ನೂ ಸಿದ್ಧಪಡಿಸಬಾರದೆಂದು ಅಪ್ಪಣೆಮಾಡಿ ಪಾಳೆಯದಲ್ಲಿ ಪ್ರಕಟಿಸಿ ಜನರ ಕಾಣಿಕೆಗಳನ್ನು ನಿಲ್ಲಿಸಿಬಿಟ್ಟನು. 7 ಕೆಲಸವನ್ನೆಲ್ಲಾ ಮಾಡುವದಕ್ಕೆ ಸಾಕಾಗುವದಕ್ಕಿಂತಲೂ ಹೆಚ್ಚಾದ ಸಾಮಗ್ರಿಯಿತ್ತು. 8 ಆ ಕೆಲಸದವರಲ್ಲಿದ್ದ ಜಾಣರೆಲ್ಲರು ಹೊಸೆದ ನಾರಿನ ಹತ್ತುತಾನು ಬಟ್ಟೆಗಳಿಂದ ಗುಡಾರವನ್ನು ಮಾಡಿ ಆ ಬಟ್ಟೆಗಳಲ್ಲಿ ನೀಲಿ ಧೂಮ್ರ ರಕ್ತವರ್ಣಗಳ ದಾರದಿಂದ ಕೆರೂಬಿಗಳನ್ನು ಚಮತ್ಕಾರವಾಗಿ ಕಸೂತಿ ಹಾಕಿ ಮಾಡಿದರು. 9 ಪ್ರತಿಯೊಂದು ಬಟ್ಟೆಯು ಇಪ್ಪತ್ತೆಂಟು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು. ಎಲ್ಲಾ ಬಟ್ಟೆಗಳು ಒಂದೇ ಅಳತೆಯಾಗಿದ್ದವು. 10 ಐದೈದು ಬಟ್ಟೆಗಳನ್ನು ಒಂದೊಂದಾಗಿ ಜೋಡಿಸಿದರು. 11 ಈ ಎರಡು ಜೋಡನೆಗಳಲ್ಲಿ ಒಂದೊಂದರ ಕೊನೇ ಬಟ್ಟೆಯ ಅಂಚಿನಲ್ಲಿ ನೀಲಿ ದಾರದಿಂದ ಕುಣಿಕೆಗಳನ್ನು ಮಾಡಿದರು; 12 ಆ ಕುಣಿಕೆಗಳನ್ನು ಐವತ್ತೈವತ್ತರ ಮೇರೆಗೆ ಒಂದಕ್ಕೊಂದು ಎದುರಾಗಿ ಇರಿಸಿದರು. 13 ಅದಲ್ಲದೆ ಐವತ್ತು ಚಿನ್ನದ ಕೊಂಡಿಗಳನ್ನು ಮಾಡಿ ಆ ಬಟ್ಟೆಗಳನ್ನು ಒಂದಕ್ಕೊಂದು ಕೂಡಿಸಿದರು; ಹೀಗೆ ಒಂದೇ ಗುಡಾರ ಆಯಿತು. 14 ಈ ಗುಡಾರದ ಮೇಲೆ ಹೊದಿಸುವದಕ್ಕಾಗಿ ಆಡುಕೂದಲಿನ ಹನ್ನೊಂದುತಾನು ಬಟ್ಟೆಗಳಿಂದ ಆ ಗುಡಾರಕ್ಕೆ ಮೇಲಣ ಡೇರೆಯನ್ನು ಮಾಡಿದರು. 15 ಒಂದೊಂದು ಬಟ್ಟೆಯು ಮೂವತ್ತು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು; 16 ಎಲ್ಲಾ ಬಟ್ಟೆಗಳೂ ಒಂದೇ ಅಳತೆಯಾಗಿದ್ದವು. ಐದು ಬಟ್ಟೆಗಳನ್ನು ಒಂದಾಗಿ ಜೋಡಿಸಿ ವಿುಕ್ಕ ಆರು ಬಟ್ಟೆಗಳನ್ನು ಒಂದಾಗಿ ಜೋಡಿಸಿದರು. 17 ಒಂದೊಂದರ ಕೊನೇ ಬಟ್ಟೆಯ ಅಂಚಿನಲ್ಲಿ ಐವತ್ತೈವತ್ತು ಕುಣಿಕೆಗಳನ್ನು ಮಾಡಿದರು. 18 ಒಂದೇ ಡೇರೆಯಾಗುವಂತೆ ಸಮಸ್ತವನ್ನು ಕೂಡಿಸುವದಕ್ಕಾಗಿ ತಾಮ್ರದ ಐವತ್ತು ಕೊಂಡಿಗಳನ್ನು ಮಾಡಿದರು. 19 ಅದಲ್ಲದೆ ಹದಮಾಡಿರುವ ಕುರಿದೊಗಲುಗಳಿಂದ ಒಂದು ಮೇಲ್ಹೊದಿಕೆಯನ್ನೂ ಕಡಲುಹಂದಿಯ ತೊಗಲುಗಳಿಂದ ಮತ್ತೊಂದು ಮೇಲ್ಹೊದಿಕೆಯನ್ನೂ ಮಾಡಿದರು. 20 ಗುಡಾರಕ್ಕೆ ಚೌಕಟ್ಟುಗಳನ್ನು ಜಾಲೀಮರದಿಂದ ಮಾಡಿದರು. 21 ಪ್ರತಿಯೊಂದು ಚೌಕಟ್ಟು ಹತ್ತು ಮೊಳ ಉದ್ದವಾಗಿಯೂ ಒಂದುವರೆ ಮೊಳ ಅಗಲವಾಗಿಯೂ ಇತ್ತು; 22 ಪ್ರತಿಯೊಂದು ಚೌಕಟ್ಟೂ ಅಡ್ಡಪಟ್ಟಿಗಳಿಂದ ಜೋಡಿಸಲ್ಪಟ್ಟ ಎರಡು ನಿಲುವುಪಟ್ಟಿಗಳುಳ್ಳದ್ದಾಗಿತ್ತು; ಗುಡಾರದ ಎಲ್ಲಾ ಚೌಕಟ್ಟುಗಳನ್ನೂ ಹಾಗೆ ಮಾಡಿದರು. 23 ಗುಡಾರದ ದಕ್ಷಿಣದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು; 24 ನಾಲ್ವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಿ ಆ ಇಪ್ಪತ್ತು ಚೌಕಟ್ಟುಗಳ ಕೆಳಗೆ ಇಟ್ಟರು; ಒಂದೊಂದು ಚೌಕಟ್ಟಿನಲ್ಲಿರುವ ಎರಡು ನಿಲುವುಪಟ್ಟಿಗಳ ಕೆಳಗೆ ಒಂದೊಂದು ಗದ್ದಿಗೇ ಕಲ್ಲನ್ನು ಇಟ್ಟರು. 25 ಹಾಗೆಯೇ ಗುಡಾರದ ಉತ್ತರ ದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು 26 ಮತ್ತು ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಗದ್ದಿಗೇ ಕಲ್ಲುಗಳ ಮೇರೆಗೆ ನಾಲ್ವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಿದರು. 27 ಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮದಿಕ್ಕಿನಲ್ಲಿ ಆರು ಚೌಕಟ್ಟುಗಳನ್ನು ಮಾಡಿದರು. 28 ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಿದರು; 29 ಅವು ಬುಡದಿಂದ ತುದಿಯವರೆಗೂ ಅಂದರೆ ಮೊದಲನೆಯ ಬಳೆಯ ತನಕ ಜೋಡಿಸಿದ್ದವು; ಹಾಗೆ ಎರಡು ಮೂಲೆಗಳಿಗೂ ಮಾಡಿದರು. 30 ಹೀಗೆ ಎಂಟು ಚೌಕಟ್ಟುಗಳೂ ಮತ್ತು ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಬೆಳ್ಳಿಯ ಗದ್ದಿಗೇಕಲ್ಲುಗಳೂ ಅಂತೂ ಹದಿನಾರು ಗದ್ದಿಗೇಕಲ್ಲುಗಳೂ ಇದ್ದವು. 31 ಜಾಲೀಮರದಿಂದ ಅಗುಳಿಗಳನ್ನು ಮಾಡಿದರು. 32 ಗುಡಾರದ ಎರಡು ಕಡೆಗಳ ಚೌಕಟ್ಟುಗಳಿಗೂ ಅದರ ಹಿಂದುಗಡೆಯ ಅಂದರೆ ಪಶ್ಚಿಮ ಕಡೆಯ ಚೌಕಟ್ಟುಗಳಿಗೂ ಐದೈದು ಅಗುಳಿಗಳನ್ನು ಮಾಡಿದರು. 33 ಚೌಕಟ್ಟುಗಳ ನಟ್ಟನಡುವೆಯಲ್ಲಿರುವ ಅಗುಳಿಯು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ಮುಟ್ಟುವಂತೆ ಮಾಡಿದರು. 34 ಆ ಚೌಕಟ್ಟುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ ಅವುಗಳಲ್ಲಿ ಆ ಅಗುಳಿಗಳಿಗಾಗಿ ಚಿನ್ನದ ಬಳೆಗಳನ್ನು ಮಾಡಿದರು. ಆ ಅಗುಳಿಗಳನ್ನೂ ಚಿನ್ನದ ತಗಡುಗಳಿಂದ ಹೊದಿಸಿದರು. 35 ಹುರಿನಾರಿನ ಬಟ್ಟೆಯಲ್ಲಿ ನೀಲಿ ಧೂಮ್ರ ರಕ್ತವರ್ಣಗಳುಳ್ಳ ದಾರದಿಂದ ಕೆರೂಬಿಗಳನ್ನು ಚಮತ್ಕಾರವಾಗಿ ಕಸೂತಿಹಾಕಿ ಒಂದು ತೆರೆಯನ್ನು ಮಾಡಿದರು. 36 ಅದಕ್ಕೆ ಜಾಲೀಮರದಿಂದ ನಾಲ್ಕು ಕಂಬಗಳನ್ನು ಮಾಡಿ ಚಿನ್ನದ ತಗಡುಗಳನ್ನು ಹೊದಿಸಿದರು; ಅವುಗಳಿಗೆ ಚಿನ್ನದ ಕೊಂಡಿಗಳನ್ನು ಮಾಡಿ ನಾಲ್ಕು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಎರಕಹೊಯಿಸಿದರು. 37 ಡೇರೆಯ ಬಾಗಲಿಗೆ ಹುರಿನಾರಿನ ಬಟ್ಟೆಯಲ್ಲಿ ನೀಲಿ ಧೂಮ್ರ ರಕ್ತವರ್ಣಗಳುಳ್ಳ ದಾರದಿಂದ ವಿಚಿತ್ರವಾಗಿ ಕಸೂತಿಹಾಕಿ ಪರದೆಯನ್ನು ಮಾಡಿದರು. 38 ಆ ಪರದೆ ತೂಗಿಸುವದಕ್ಕಾಗಿ ಐದು ಕಂಬಗಳನ್ನೂ ಅವುಗಳ ಕೊಂಡಿಗಳನ್ನೂ ಮಾಡಿ ಅವುಗಳ ಬೋದಿಗೆಗಳಿಗೂ ಕಟ್ಟುಗಳಿಗೂ ಚಿನ್ನದ ತಗಡುಗಳನ್ನು ಹೊದಿಸಿದರು. ಅವುಗಳ ಐದು ಗದ್ದಿಗೇಕಲ್ಲುಗಳನ್ನು ತಾಮ್ರದಿಂದ ಮಾಡಿದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India