Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 35 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲ್ಯರು ದೇವದರ್ಶನದ ಗುಡಾರವನ್ನೂ ಯಾಜಕ ವಸ್ತ್ರಗಳನ್ನೂ ಮಾಡಿದ್ದು ( 35—40 ) ಸಬ್ಬತ್‍ದಿನವನ್ನು ಖಂಡಿತವಾಗಿ ಆಚರಿಸಬೇಕೆಂಬದು

1 ಮೋಶೆ ಇಸ್ರಾಯೇಲ್ಯರ ಸಮೂಹವನ್ನೆಲ್ಲಾ ಕೂಡ ಕರಿಸಿ ಅವರಿಗೆ - ನೀವು ಅನುಸರಿಸಬೇಕೆಂದು ಯೆಹೋವನು ನಿಮಗೆ ಹೀಗೆ ಅಪ್ಪಣೆ ಮಾಡಿದ್ದಾನೆ -

2 ಆರು ದಿನಗಳು ಕೆಲಸನಡೆಯಬೇಕು; ಏಳನೆಯ ದಿನವು ಪರಿಶುದ್ಧವಾದ ದಿನ; ಅದು ಯೆಹೋವನಿಗೆ ಮೀಸಲಾದ ಸಬ್ಬತ್ ದಿನವಾದ್ದರಿಂದ ಅದರಲ್ಲಿ ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಿಬಿಡಬೇಕು;

3 ಆ ದಿನದಲ್ಲಿ ಕೆಲಸಮಾಡುವವನಿಗೆ ಮರಣದಂಡನೆಯಾಗಬೇಕು; ನೀವು ವಾಸಿಸುವ ಯಾವ ಸ್ಥಳದಲ್ಲಿಯಾದರೂ ಸಬ್ಬತ್ ದಿನದಲ್ಲಿ ಬೆಂಕಿಯನ್ನೂ ಹೊತ್ತಿಸಬಾರದು ಎಂದು ಹೇಳಿದನು.


ಗುಡಾರವನ್ನು ಮಾಡುವದಕ್ಕೆ ಬೇಕಾದ ಪದಾರ್ಥಗಳನ್ನು ಇಸ್ರಾಯೇಲ್ಯರು ಕಾಣಿಕೆಯಾಗಿ ತಂದುಕೊಟ್ಟರು

4 ಮೋಶೆಯು ಇಸ್ರಾಯೇಲ್ಯರ ಸರ್ವಸಮೂಹಕ್ಕೆ ಹೀಗಂದನು :- ಯೆಹೋವನು ಆಜ್ಞಾಪಿಸಿದ್ದೇನಂದರೆ -

5 ನೀವು ನಿಮ್ಮನಿಮ್ಮೊಳಗೆ ಯೆಹೋವನಿಗೆ ಕಾಣಿಕೆಯನ್ನು ಎತ್ತಿ ಕೊಡಬೇಕು; ಮನಃಪೂರ್ವಕವಾಗಿ ಕಾಣಿಕೆಯನ್ನು ಕೊಡುವವರೇ ತರಬೇಕು. ಯೆಹೋವನಿಗೆ ತರಬೇಕಾದ ಆ ಕಾಣಿಕೆಯು ಎಂಥದಾಗಿರಬೇಕಂದರೆ - ಚಿನ್ನ, ಬೆಳ್ಳಿ, ತಾಮ್ರ ಎಂಬ ಲೋಹಗಳೂ

6 ನೀಲಿ ಧೂಮ್ರ ರಕ್ತವರ್ಣಗಳುಳ್ಳ ದಾರಗಳೂ ನಾರುಬಟ್ಟೆಗಳೂ ಆಡುಕೂದಲಿನ ಬಟ್ಟೆಗಳೂ

7 ಹದಮಾಡಿರುವ ಕೆಂಪುಬಣ್ಣದ ಕುರಿದೊಗಲುಗಳೂ ಕಡಲು ಹಂದಿಯ ತೊಗಲುಗಳೂ ಜಾಲೀಮರವೂ

8 ದೀಪಕ್ಕೆ ಬೇಕಾದ ಎಣ್ಣೆಯೂ ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳೂ

9 ಮಹಾಯಾಜಕನ ಕವಚಕ್ಕೆ ಬೇಕಾಗಿರುವ ರತ್ನಗಳೂ ಚೀಲದ ಪದಕದಲ್ಲಿ ಕೆತ್ತಬೇಕಾದ ನಾನಾ ರತ್ನಗಳೂ ಇವೇ.

10 ನಿಮ್ಮಲ್ಲಿರುವ ಜಾಣರೆಲ್ಲರು ಬಂದು ಯೆಹೋವನು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಬೇಕು.

11 ಅವರು ಮಾಡಬೇಕಾದವುಗಳು ಯಾವವಂದರೆ - ದೇವದರ್ಶನದ ಗುಡಾರ, ಅದರ ಮೇಲ್ಹೊದಿಕೆಗಳು, ಅದರ ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೇಕಲ್ಲುಗಳು,

12 ಆಜ್ಞಾಶಾಸನಗಳ ಮಂಜೂಷ, ಅದನ್ನು ಹೊರುವ ಕೋಲುಗಳು, ಕೃಪಾಸನ, ಅದನ್ನು ಮರೆಮಾಡುವ ತೆರೆ,

13 ಮೇಜು, ಅದರ ಕೋಲುಗಳು, ಅದರ ಉಪಕರಣಗಳು, ಅದರ ಮೇಲೆ ಇಡತಕ್ಕ ನೈವೇದ್ಯದ ರೊಟ್ಟಿಗಳು,

14 ದೀಪಸ್ತಂಭ, ಅದರ ಉಪಕರಣಗಳು, ಹಣತೆಗಳು, ದೀಪಕ್ಕೆ ಬೇಕಾದ ಎಣ್ಣೆ, ಧೂಪವೇದಿ, ಅದರ ಕೋಲುಗಳು,

15 ಅಭಿಷೇಕ ತೈಲ, ಪರಿಮಳ ಧೂಪದ್ರವ್ಯ, ಗುಡಾರದ ಬಾಗಲಿನ ಪರದೆ,

16 ಯಜ್ಞವೇದಿ, ಅದರ ತಾಮ್ರದ ಜಾಳಿಗೆ, ಕೋಲುಗಳು, ಉಪಕರಣಗಳು, ಗಂಗಾಳ, ಅದರ ಪೀಠ,

17 ಅಂಗಳದ ತೆರೆಗಳು, ಕಂಬಗಳು, ಗದ್ದಿಗೇಕಲ್ಲುಗಳು, ಅಂಗಳದ ಬಾಗಲಿನ ಪರದೆ,

18 ಗುಡಾರದ ಗೂಟಗಳು, ಅಂಗಳದ ಗೂಟಗಳು, ಇವುಗಳ ಹಗ್ಗಗಳು,

19 ಪವಿತ್ರಸ್ಥಾನದ ಸೇವೆಗೆ ಬೇಕಾದ ಸುಂದರವಾದ ದೀಕ್ಷಾವಸ್ತ್ರಗಳು ಅಂದರೆ ಮಹಾಯಾಜಕನಾದ ಆರೋನನಿಗೂ ಅವನ ಮಕ್ಕಳಿಗೂ ಬೇಕಾದ ಯಾಜಕವಸ್ತ್ರಗಳು ಇವೇ ಅಂದನು.

20 ಇಸ್ರಾಯೇಲ್ಯರ ಸಮೂಹದವರೆಲ್ಲರೂ ಮೋಶೆಯ ಎದುರಿನಿಂದ ಹೋದನಂತರ

21 ಯಾರಾರನ್ನು ಹೃದಯವು ಪ್ರೇರಿಸಿತೋ ಯಾರಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕೋಸ್ಕರವೂ ಅದರ ಸಮಸ್ತ ಸೇವೆಗೋಸ್ಕರವೂ ದೀಕ್ಷಾವಸ್ತ್ರಗಳಿಗೋಸ್ಕರವೂ ಯೆಹೋವನಿಗೆ ಕಾಣಿಕೆಗಳನ್ನು ತಂದರು.

22 ಸಿದ್ಧಚಿತ್ತರಾದ ಗಂಡಸರೂ ಹೆಂಗಸರೂ ಬಂದು ಯೆಹೋವನಿಗೆ ಚಿನ್ನದ ಕಾಣಿಕೆಗಳನ್ನು ಅಂದರೆ ಕಡಗ, ಮೂಗುತಿ, ಮುದ್ರೆಯುಂಗುರ, ಕಂಠಮಾಲೆ ಮೊದಲಾದ ಚಿನ್ನದ ಒಡವೆಗಳನ್ನು ಸಮರ್ಪಿಸಿದರು.

23 ಯಾರಲ್ಲಿ ನೀಲಿಧೂಮ್ರ ರಕ್ತವರ್ಣಗಳುಳ್ಳ ದಾರಗಳೂ ನಾರುಬಟ್ಟೆಯೂ ಆಡುಕೂದಲಿನ ಬಟ್ಟೆಯೂ ಹದಮಾಡಿದ ಕೆಂಪುಬಣ್ಣದ ಕುರಿದೊಗಲುಗಳೂ ಕಡಲುಹಂದಿಯ ತೊಗಲುಗಳೂ ಇದ್ದವೋ ಅವರು ಅವುಗಳನ್ನು ತಂದುಕೊಟ್ಟರು.

24 ಯಾರಲ್ಲಿ ಬೆಳ್ಳಿ ಇಲ್ಲವೇ ತಾಮ್ರ ಇತ್ತೋ ಅವರು ಅವುಗಳನ್ನೇ ತಂದು ಯೆಹೋವನಿಗೆ ಸಮರ್ಪಿಸಿದರು. ಯಾರ ಬಳಿಯಲ್ಲಿ ಗುಡಾರದ ಕೆಲಸಕ್ಕೆ ಬೇಕಾದ ಜಾಲೀಮರವಿತ್ತೋ ಅವರು ಅದನ್ನು ತಂದುಕೊಟ್ಟರು.

25 ಜಾಣೆಯರಾದ ಸ್ತ್ರೀಯರು ತಮ್ಮ ಕೈಗಳಿಂದ ನೀಲಿ ಧೂಮ್ರ ರಕ್ತವರ್ಣಗಳುಳ್ಳ ನೂಲನ್ನೂ ನಾರಿನ ನೂಲನ್ನೂ ನೂತು ಆ ನೂಲನ್ನು ತಂದುಕೊಟ್ಟರು.

26 ಬೇರೆ ಜಾಣೆಯರಾದ ಸ್ತ್ರೀಯರು ಆಡಿನ ಕೂದಲುಗಳನ್ನು ನೂತು ತಂದುಕೊಟ್ಟರು.

27 ಅಧಿಪತಿಗಳು ಮಹಾಯಾಜಕನ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳನ್ನೂ ಚೀಲದ ಪದಕದಲ್ಲಿ ಕೆತ್ತಬೇಕಾದ ರತ್ನಗಳನ್ನೂ

28 ದೀಪಕ್ಕೆ ಬೇಕಾದ ಎಣ್ಣೆಯನ್ನೂ ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳನ್ನೂ ತಂದುಕೊಟ್ಟರು.

29 ಮೋಶೆಯ ಮೂಲಕ ಯೆಹೋವನು ಆಜ್ಞಾಪಿಸಿದ ಎಲ್ಲಾ ಕೆಲಸಗಳಿಗೋಸ್ಕರ ಆತನಿಗೆ ಕಾಣಿಕೆಗಳನ್ನು ತಂದುಕೊಟ್ಟ ಇಸ್ರಾಯೇಲ್ಯರ ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿಯೇ ಕೊಟ್ಟರು.

30 ಮತ್ತು ಮೋಶೆಯು ಇಸ್ರಾಯೇಲ್ಯರಿಗೆ ಹೀಗಂದನು - ವಿಚಿತ್ರವಾಗಿ ನಯವಾದ ಕೆಲಸಗಳನ್ನು ಕಲ್ಪಿಸುವದಕ್ಕೂ

31 ಚಿನ್ನ ಬೆಳ್ಳಿ ತಾಮ್ರಗಳಿಂದ ಕೆಲಸನಡಿಸುವದಕ್ಕೂ ರತ್ನಗಳನ್ನು ಕೆತ್ತುವದಕ್ಕೂ ಮರದಲ್ಲಿ ವಿಚಿತ್ರವಾಗಿ ಕೆತ್ತನೇ ಕೆಲಸವನ್ನು ಮಾಡುವದಕ್ಕೂ

32 ಬೇರೆ ಸಕಲವಿಧವಾದ ಶೃಂಗಾರವಾದ ಕೆಲಸವನ್ನು ಮಾಡುವದಕ್ಕೂ ಯೆಹೋವನು ಯೆಹೂದಕುಲದವನಾದ ಹೂರನ ಮೊಮ್ಮಗನೂ ಊರಿಯ ಮಗನೂ ಆಗಿರುವ ಬೆಚಲೇಲನೆಂಬವನನ್ನು ಗೊತ್ತಾಗಿ ನೇವಿುಸಿ

33 ಅವನಿಗೆ ದಿವ್ಯಾತ್ಮನನ್ನು ಕೊಟ್ಟು ಬೇಕಾದ ಜ್ಞಾನವಿದ್ಯಾವಿವೇಕಗಳನ್ನೂ ಸಕಲಶಿಲ್ಪಶಾಸ್ತ್ರಜ್ಞಾನವನ್ನೂ ಅನುಗ್ರಹಿಸಿದ್ದಾನೆ.

34 ಅದಲ್ಲದೆ ಮತ್ತೊಬ್ಬರಿಗೆ ಕಲಿಸಿಕೊಡುವದಕ್ಕೆ ಸಹ ಅವನಿಗೂ ದಾನ್ ಕುಲದ ಅಹೀಸಾಮಾಕನ ಮಗನಾದ ಒಹೊಲೀಯಾಬನಿಗೂ ವರಕೊಟ್ಟಿದ್ದಾನೆ.

35 ಶಿಲ್ಪಿಗಳು, ಚಮತ್ಕಾರವಾದ ಕೆಲಸ ಕಲ್ಪಿಸುವವರು, ನೀಲಿ ಧೂಮ್ರರಕ್ತವರ್ಣದ ದಾರದಿಂದಲೂ ನಾರುಬಟ್ಟೆಯಿಂದಲೂ ಬುಟೇದಾರೀ ಕೆಲಸಮಾಡುವವರು, ನೇಯುವವರು, ಅಂತೂ ಎಲ್ಲಾ ಕಸಬುದಾರರು ನಡಿಸುವ ಕೆಲಸಗಳನ್ನು ಕಲ್ಪಿಸುವದಕ್ಕೂ ಮಾಡುವದಕ್ಕೂ ಯೆಹೋವನು ಅವರಿಗೆ ಜ್ಞಾನವನ್ನು ಪರಿಪೂರ್ಣವಾಗಿ ಅನುಗ್ರಹಿಸಿದ್ದಾನೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು