ವಿಮೋಚನಕಾಂಡ 33 - ಕನ್ನಡ ಸತ್ಯವೇದವು J.V. (BSI)1 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - ನೀನು ಐಗುಪ್ತದೇಶದಿಂದ ಕರತಂದ ಜನರನ್ನು ನಿನ್ನ ಸಂಗಡ ಕರಕೊಂಡು ಈ ಸ್ಥಳವನ್ನು ಬಿಟ್ಟು ನಾನು ಅಬ್ರಹಾಮ್ ಇಸಾಕ್ ಯಾಕೋಬರಿಗೆ - ನಿಮ್ಮ ಸಂತತಿಯವರಿಗೆ ಕೊಡುವೆನೆಂದು ಪ್ರಮಾಣ ಮಾಡಿ ಕೊಟ್ಟ ದೇಶಕ್ಕೆ ಹೊರಟುಹೋಗು. 2 ನಾನು ನಿನ್ನ ಮುಂದುಗಡೆಯಲ್ಲಿ ದೂತನನ್ನು ಕಳುಹಿಸಿ ಕಾನಾನ್ಯರನ್ನೂ ಅಮೋರಿಯರನ್ನೂ ಹಿತ್ತಿಯರನ್ನೂ ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಹೊರಡಿಸುವೆನು. 3 ಅದು ಹಾಲೂ ಜೇನೂ ಹರಿಯುವ ದೇಶವೇ. ಆದರೆ ನಾನೇ ನಿಮ್ಮ ಸಂಗಡ ಬರುವದಿಲ್ಲ; ನೀವು ನನ್ನ ಆಜ್ಞೆಗೆ ಬೊಗ್ಗದವರಾದ್ದರಿಂದ ನಾನು ದಾರಿಯಲ್ಲಿ ನಿಮ್ಮನ್ನು ಸಂಹರಿಸೇನು ಅಂದನು. 4 ಇಸ್ರಾಯೇಲ್ ಜನರು ಈ ದುಃಖಕರವಾದ ವಾಕ್ಯವನ್ನು ಕೇಳಿ ಮನಗುಂದಿದವರಾದರು; ಅವರಲ್ಲಿ ಒಬ್ಬರೂ ಆಭರಣಗಳನ್ನು ಧರಿಸಿಕೊಳ್ಳಲಿಲ್ಲ. 5 ಯೆಹೋವನು ಮೋಶೆಗೆ ಹೀಗಂದನು - ನೀನು ಇಸ್ರಾಯೇಲ್ಯರಿಗೆ ಹೇಳಬೇಕಾದದ್ದೇನಂದರೆ - ನೀವು ನನ್ನ ಆಜ್ಞೆಗಳಿಗೆ ಬೊಗ್ಗದವರೇ. ನಾನು ಒಂದು ಕ್ಷಣಮಾತ್ರ ನಿಮ್ಮ ಮಧ್ಯದಲ್ಲಿ ಬರುವದಾದರೆ ನೀವು ನಿರ್ಮೂಲವಾಗಿ ಹೋದೀರಿ, ನೋಡಿಕೊಳ್ಳಿರಿ. ಆದಕಾರಣ ನಿಮ್ಮ ಆಭರಣಗಳನ್ನು ಈಗ ತೆಗೆದುಬಿಡಿರಿ ನಿಮಗೆ ನಾನು ಏನು ಮಾಡಬೇಕೆಂಬದನ್ನು ಆಲೋಚಿಸಿಕೊಳ್ಳುವೆನು ಅಂದನು. 6 ಆದದರಿಂದ ಇಸ್ರಾಯೇಲ್ಯರು ಹೋರೆಬ್ ಬೆಟ್ಟದಿಂದೀಚೆಗೆ ಆಭರಣಗಳನ್ನು ಧರಿಸಿಕೊಳ್ಳದೆ ಇದ್ದರು. 7 ಮೋಶೆ ಡೇರೆಯನ್ನು ಪಾಳೆಯದ ಹೊರಗೆ ದೂರವಾಗಿ ಹಾಕಿಸುತ್ತಿದ್ದನು. ಅದಕ್ಕೆ ದೇವದರ್ಶನದ ಡೇರೆ ಎಂದು ಹೆಸರಿಟ್ಟನು. ಯೆಹೋವನ ಉತ್ತರವನ್ನು ಬಯಸಿದವರೆಲ್ಲರು ಪಾಳೆಯದ ಹೊರಗಿದ್ದ ದೇವದರ್ಶನದ ಡೇರೆಗೆ ಹೋಗುತ್ತಿದ್ದರು. 8 ಮೋಶೆ ಆ ಡೇರೆಗೆ ಹೋಗುವಾಗೆಲ್ಲಾ ಜನರೆಲ್ಲರು ಎದ್ದು ತಮ್ಮ ತಮ್ಮ ಡೇರೆಗಳ ಬಾಗಲಲ್ಲಿ ನಿಂತು ಮೋಶೆಯು ಆ ಡೇರೆಯೊಳಕ್ಕೆ ಹೋಗುವತನಕ ಅವನ ಹಿಂದೆ ನೋಡುತ್ತಿದ್ದರು. 9 ಮೋಶೆ ಆ ಡೇರೆಯೊಳಕ್ಕೆ ಹೋದ ಕೂಡಲೆ ಮೇಘಸ್ತಂಭವು ಇಳಿದು ಆ ಡೇರೆಯ ಬಾಗಲಲ್ಲಿ ನಿಲ್ಲುತ್ತಿತ್ತು. ಆಗ ಯೆಹೋವನು ಮೋಶೆಯ ಸಂಗಡ ಮಾತಾಡುವನು. 10 ಆ ಮೇಘಸ್ತಂಭವು ಡೇರೆಯ ಬಾಗಲಲ್ಲಿ ನಿಂತದ್ದನ್ನು ಜನರೆಲ್ಲರು ನೋಡಿ ಎದ್ದು ತಮ್ಮ ತಮ್ಮ ಡೇರೆಗಳ ಬಾಗಲಲ್ಲೇ ಅಡ್ಡ ಬೀಳುವರು. 11 ಮನುಷ್ಯರೊಳಗೆ ಒಬ್ಬನು ತನ್ನ ಸ್ನೇಹಿತನೊಡನೆ ಹೇಗೆ ಮಾತಾಡುವನೋ ಹಾಗೆಯೇ ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡುತ್ತಿದ್ದನು; ತರುವಾಯ ಮೋಶೆ ಪಾಳೆಯಕ್ಕೆ ತಿರಿಗಿ ಬರುವನು. ಆದರೆ ನೂನನ ಮಗನಾದ ಯೆಹೋಶುವನೆಂಬ ಹೆಸರುಳ್ಳ ಯೌವನಸ್ಥನಾದ ಅವನ ಶಿಷ್ಯನು ಆ ಡೇರೆಯಲ್ಲೇ ಇದ್ದನು; ಅದರ ಬಳಿಯಿಂದ ಹೋಗಲೇ ಇಲ್ಲ. 12 ಮೋಶೆ ಯೆಹೋವನಿಗೆ - ಈ ಜನರನ್ನು ಆ ಸೀಮೆಗೆ ನಡಿಸಿಕೊಂಡುಹೋಗಬೇಕೆಂದು ನೀನು ನನಗೆ ಆಜ್ಞಾಪಿಸಿದಿಯಷ್ಟೆ; ನನ್ನ ಸಂಗಡ ಯಾರನ್ನು ಕಳುಹಿಸುವಿಯೋ ಅದನ್ನು ನನಗೆ ತಿಳಿಸಲಿಲ್ಲ. ನಿನ್ನ ಹೆಸರನ್ನು ಗೊತ್ತುಮಾಡಿದ್ದೇನೆಂದೂ ನಿನಗೆ ನನ್ನ ದಯೆ ದೊರಕಿತೆಂದೂ ನೀನು ನನಗೆ ಹೇಳಿದಿಯಲ್ಲಾ. 13 ನನಗೆ ನಿನ್ನ ದಯೆ ದೊರಕಿದ್ದಾದರೆ ನಾನು ನಿನ್ನನ್ನು ಬಲ್ಲವನಾಗಿರುವಂತೆ ನಿನ್ನ ಮಾರ್ಗವನ್ನು ನನಗೆ ತೋರಿಸು; ಆಗ ನಿನ್ನ ದಯೆ ನನಗೆ ದೊರೆಯಿತೆಂದು ನನಗೆ ತಿಳಿದಿರುವದು; ಈ ಜನವು ನಿನ್ನ ಪ್ರಜೆಯೆಂದು ಜ್ಞಾಪಕಮಾಡಿಕೋ ಎಂದು ಅರಿಕೆಮಾಡಿದನು. 14 ಅದಕ್ಕೆ ಯೆಹೋವನು - ನಾನೇ ನಿಮ್ಮ ಜೊತೆಯಲ್ಲಿ ಬಂದು ನಿಮಗೆ ವಿಶ್ರಾಂತಿಯನ್ನು ಉಂಟುಮಾಡುವೆನು ಅಂದನು. 15 ಅದಕ್ಕೆ ಮೋಶೆ - ನೀನೇ ನಮ್ಮಸಂಗಡ ಬಾರದೆ ಹೋದರೆ ನಮ್ಮನ್ನು ಇಲ್ಲಿಂದ ಹೋಗಗೊಡಿಸಬಾರದು. 16 ನನಗೂ ನಿನ್ನ ಪ್ರಜೆಗಳಾದ ಇವರಿಗೂ ನಿನ್ನ ಅನುಗ್ರಹ ದೊರಕಿತೆಂಬದು ನೀನೇ ನಮ್ಮ ಸಂಗಡ ಬರುವದರಿಂದಲೇ ಹೊರತು ಬೇರೆ ಯಾತರಿಂದ ತಿಳಿದುಬರುವದು? ಇದರಿಂದ ನಾನೂ ನಿನ್ನ ಪ್ರಜೆಗಳಾದ ಇವರೂ ಭೂವಿುಯಲ್ಲಿರುವ ಬೇರೆ ಎಲ್ಲಾ ಜನಗಳಿಗಿಂತಲೂ ವಿಶೇಷವಾಗಿದ್ದೇವೆಂಬದು ತೋರುವದು ಅಂದನು. 17 ಯೆಹೋವನು ಮೋಶೆಗೆ - ನಿನಗೆ ನನ್ನ ಅನುಗ್ರಹ ದೊರಕಿದ್ದರಿಂದಲೂ ನಾನು ನಿನ್ನ ಹೆಸರನ್ನು ಗೊತ್ತುಮಾಡಿದ್ದರಿಂದಲೂ ನಿನಗೋಸ್ಕರ ಈ ಕಾರ್ಯವನ್ನು ಮಾಡುವೆನು ಎಂದು ಹೇಳಿದನು. 18 ಅದಕ್ಕೆ ಮೋಶೆ - ನಿನ್ನ ಮಹಿಮೆಯನ್ನು ದಯಮಾಡಿ ನನಗೆ ತೋರಿಸು ಎಂದು ಕೇಳಲಾಗಿ 19 ಆತನು - ನನ್ನ ಸರ್ವೋತ್ತಮತ್ವವನ್ನು ನಿನ್ನೆದುರಾಗಿ ದಾಟಿಹೋಗುವಂತೆ ಮಾಡುವೆನು; ಯೆಹೋವನ ನಾಮದ ಮಹತ್ವವನ್ನು ನಿನ್ನೆದುರಾಗಿ ಪ್ರಕಟಿಸುವೆನು. ಯಾವನ ಮೇಲೆ ದಯೆಯಿಡುವೆನೋ ಅವನ ಮೇಲೆ ದಯೆಯಿಡುವೆನು; ಯಾರನ್ನು ಕರುಣಿಸುವೆನೋ ಅವರನ್ನು ಕರುಣಿಸುವೆನು ಅಂದನು. 20 ಅದರೆ ಆತನು ಅವನಿಗೆ - ನೀನು ನನ್ನ ಮುಖವನ್ನು ನೋಡುವದಕ್ಕಾಗದು; ಮನುಷ್ಯರಲ್ಲಿ ಯಾವನೂ ನನ್ನನ್ನು ನೋಡಿ ಜೀವಿಸಲಾರನು ಎಂದು ಹೇಳಿದನು. 21 ಮತ್ತು ಯೆಹೋವನು ಅವನಿಗೆ - ಇಲ್ಲಿ ನನ್ನ ಸಮೀಪದಲ್ಲೇ ಒಂದು ಸ್ಥಳವಿದೆ; ನೀನು ಈ ಬಂಡೆಯ ಮೇಲೆಯೇ ನಿಂತಿರಬೇಕು. 22 ನನ್ನ ಪ್ರಭಾವವು ನಿನ್ನೆದುರಾಗಿ ದಾಟಿಹೋಗುವ ಕಾಲದಲ್ಲಿ ನಾನು ಈ ಬಂಡೆಯ ಸಂದಿನಲ್ಲಿ ನಿನ್ನನ್ನು ಇರಿಸಿ ನಿನ್ನ ಮುಂದೆ ದಾಟಿಹೋಗುವ ತನಕ ನಿನ್ನ ಮೇಲೆ ಕೈ ಮುಚ್ಚುವೆನು; 23 ತರುವಾಯ ನಾನು ಕೈ ತೆಗೆದಾಗ ನೀನು ನನ್ನ ಹಿಂಭಾಗವನ್ನು ನೋಡುವಿಯೇ ಹೊರತು ನನ್ನ ಮುಖವು ನಿನಗೆ ಕಾಣಿಸುವದಿಲ್ಲ ಎಂದು ಹೇಳಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India