Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 32 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲ್ಯರು ದ್ರೋಹಿಗಳಾದದ್ದು; ದೇವರು ಮೋಶೆಯ ಬಿನ್ನಹವನ್ನು ಲಾಲಿಸಿ ಅವರನ್ನು ತಿರಿಗಿ ಸ್ವೀಕರಿಸಿದ್ದು ( 32—34 ) ಬಸವನ ಪೂಜೆಯೂ ಅದರ ಫಲವೂ

1 ಮೋಶೆ ಬೆಟ್ಟದಿಂದ ಇಳಿಯದೆ ತಡಮಾಡಿದ್ದನ್ನು ಇಸ್ರಾಯೇಲ್ಯರು ನೋಡಿ ಆರೋನನ ಬಳಿಗೆ ಕೂಡಿಬಂದು - ಏಳು; ನಮ್ಮ ಮುಂದುಗಡೆಯಲ್ಲಿ ಹೋಗುವದಕ್ಕೆ ನಮಗೆ ದೇವರುಗಳನ್ನು ಮಾಡಿಕೊಡು; ಐಗುಪ್ತದೇಶದಿಂದ ನಮ್ಮನ್ನು ಕರಕೊಂಡು ಬಂದ ಆ ಮೋಶೆಯು ಏನಾದನೋ ಗೊತ್ತಿಲ್ಲ ಎಂದು ಹೇಳಿದರು.

2 ಅದಕ್ಕೆ ಆರೋನನು - ನಿಮ್ಮ ಹೆಂಡರೂ ಗಂಡುಮಕ್ಕಳೂ ಹೆಣ್ಣುಮಕ್ಕಳೂ ಕಿವಿಗೆ ಹಾಕಿಕೊಂಡಿರುವ ಚಿನ್ನದ ಮುರುವುಗಳನ್ನು ನೀವು ಕಿತ್ತು ನನಗೆ ಒಪ್ಪಿಸಿರಿ ಎಂದು ಹೇಳಲಾಗಿ

3 ಜನರೆಲ್ಲರು ತಮ್ಮ ಕಿವಿಗಳಲ್ಲಿದ್ದ ಚಿನ್ನದ ಮುರುವುಗಳನ್ನು ಕಿತ್ತು ಆರೋನನ ಬಳಿಗೆ ತಂದು ಕೊಟ್ಟರು.

4 ಅವನು ಆ ಚಿನ್ನವನ್ನು ತನ್ನ ವಶಕ್ಕೆ ತೆಗೆದುಕೊಂಡು ಬಸವನ ಆಕಾರವನ್ನು ಉಳಿಯಿಂದ ರೂಪಿಸಿ ಎರಕ ಹೊಯಿಸಲಾಗಿ ಅವರು - ಇಸ್ರಾಯೇಲ್ಯರೇ, ನೋಡಿರಿ; ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರಕೊಂಡುಬಂದ ದೇವರು ಎಂದು ಹೇಳಿದರು.

5 ಆರೋನನು ಅದನ್ನು ನೋಡಿ ಬಸವನಿಗೆ ಎದುರಾಗಿ ಯಜ್ಞವೇದಿಯನ್ನು ಕಟ್ಟಿಸಿ - ನಾಳೆ ಯೆಹೋವನಿಗೆ ಉತ್ಸವವಾಗಬೇಕು ಎಂದು ಪ್ರಕಟಿಸಿದನು.

6 ಆದದರಿಂದ ಮರುದಿನದಲ್ಲಿ ಜನರು ಬೆಳಿಗ್ಗೆ ಎದ್ದು ಸರ್ವಾಂಗಹೋಮಗಳನ್ನೂ ಸಮಾಧಾನ ಯಜ್ಞಗಳನ್ನೂ ಸಮರ್ಪಿಸಿದರು. ಜನರು ಉಣ್ಣುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು; ಆಮೇಲೆ ಎದ್ದು ಕುಣಿದಾಡಿದರು.

7 ಹೀಗಿರಲಾಗಿ ಯೆಹೋವನು ಮೋಶೆಗೆ - ನೀನು ಬೆಟ್ಟದಿಂದ ಇಳಿದುಹೋಗು; ಐಗುಪ್ತದೇಶದಿಂದ ನೀನು ಕರಕೊಂಡು ಬಂದ ನಿನ್ನ ಜನರು ಕೆಟ್ಟು ಹೋದರು.

8 ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಅವರು ಬೇಗನೆ ಬಿಟ್ಟುಹೋಗಿ ತಮಗೆ ಲೋಹದ ಬಸವನನ್ನು ಮಾಡಿಸಿಕೊಂಡು ಅದಕ್ಕೆ ಅಡ್ಡಬಿದ್ದು ಯಜ್ಞಗಳನ್ನು ಅರ್ಪಿಸಿ - ಇಸ್ರಾಯೇಲ್ಯರೇ, ನೋಡಿರಿ; ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರಕೊಂಡು ಬಂದ ದೇವರು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದನು.

9 ಅದಲ್ಲದೆ ಯೆಹೋವನು ಮೋಶೆಗೆ - ಈ ಜನರ ಸ್ವಭಾವವನ್ನು ನಾನು ನೋಡಿದ್ದೇನೆ; ಇವರು ನನ್ನ ಆಜ್ಞೆಗೆ ಬೊಗ್ಗದವರಾಗಿದ್ದಾರೆ;

10 ಆದಕಾರಣ ನೀನು ನನ್ನನ್ನು ತಡೆಯಬೇಡ; ನನ್ನ ಕೋಪಾಗ್ನಿ ಉರಿಯಲಿ, ಅವರನ್ನು ಭಸ್ಮಮಾಡುವೆನು. ತರುವಾಯ ನಿನ್ನಿಂದಲೇ ಬೇರೆ ಒಂದು ದೊಡ್ಡ ಜನಾಂಗವುಂಟಾಗುವಂತೆ ಮಾಡುವೆನು ಎಂದು ಹೇಳಿದನು.

11 ಆಗ ಮೋಶೆ ತನ್ನ ದೇವರಾದ ಯೆಹೋವನನ್ನು ಬೇಡಿಕೊಂಡು - ಯೆಹೋವನೇ, ನೀನು ಮಹಾಶಕ್ತಿಯಿಂದಲೂ ಭುಜಬಲದಿಂದಲೂ ಐಗುಪ್ತದೇಶದಿಂದ ಬಿಡಿಸಿದ ನಿನ್ನ ಪ್ರಜೆಗಳ ಮೇಲೆ ಕೋಪದಿಂದುರಿಯುವದೇಕೆ?

12 ಐಗುಪ್ತ್ಯರು ನಿನ್ನ ವಿಷಯದಲ್ಲಿ - ಯೆಹೋವನು ಕೇಡುಮಾಡಬೇಕೆಂಬ ಅಭಿಪ್ರಾಯದಿಂದಲೇ ಇಸ್ರಾಯೇಲ್ಯರನ್ನು ಇಲ್ಲಿಂದ ಕರಕೊಂಡು ಹೋದನಲ್ಲಾ; ಅವರನ್ನು ಬೆಟ್ಟಗಳಲ್ಲಿ ಸಾಯಿಸಿ ಭೂವಿುಯಲ್ಲಿ ಉಳಿಯದಂತೆ ನಿರ್ಮೂಲ ಮಾಡುವದಕ್ಕೇನೇ ಅವರನ್ನು ಕರಕೊಂಡು ಹೋದನೆಂದು ಹೇಳುವದಕ್ಕೆ ಆಸ್ಪದವಾಗಬೇಕೇ? ನೀನು ರೋಷಾಗ್ನಿಯನ್ನು ಬಿಟ್ಟು ನಿನ್ನ ಪ್ರಜೆಗಳಿಗೆ ಕೆಡುಕನ್ನು ಮಾಡದೆ ಮನಸ್ಸನ್ನು ಬೇರೆ ಮಾಡಿಕೋ.

13 ನಿನ್ನ ಸೇವಕರಾದ ಅಬ್ರಹಾಮ್ ಇಸಾಕ್ ಯಾಕೋಬರನ್ನು ನೆನಪಿಗೆ ತಂದುಕೋ. ನೀನು ನಿನ್ನ ಜೀವದಾಣೆ ಪ್ರಮಾಣಮಾಡಿ ಅವರಿಗೆ - ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ ಮಾಡುವೆನೆಂದೂ ನಾನು ಸೂಚಿಸಿರುವ ಈ ಪ್ರದೇಶಗಳನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನೆಂದೂ ಅವರು ಈ ದೇಶವನ್ನು ಶಾಶ್ವತವಾಗಿ ಸ್ವಾಧೀನದಲ್ಲಿಟ್ಟುಕೊಳ್ಳುವರೆಂದೂ ಮಾತುಕೊಡಲಿಲ್ಲವೇ ಅಂದನು.

14 ಆಗ ಯೆಹೋವನು ತನ್ನ ಪ್ರಜೆಗಳಿಗೆ ಮಾಡುವೆನೆಂದು ತಾನು ಹೇಳಿದ ಕೇಡಿನ ವಿಷಯದಲ್ಲಿ ಮನಸ್ಸನ್ನು ಬೇರೆ ಮಾಡಿಕೊಂಡನು.

15 ಆಜ್ಞಾಶಾಸನಗಳಾದ ಆ ಎರಡು ಕಲ್ಲಿನ ಹಲಿಗೆಗಳನ್ನು ಮೋಶೆಯು ಕೈಯಲ್ಲಿ ಹಿಡಿದುಕೊಂಡು ಬೆಟ್ಟದಿಂದ ಇಳಿದುಬಂದನು. ಆ ಹಲಿಗೆಗಳ ಎರಡು ಪಕ್ಕಗಳಲ್ಲಿಯೂ ಅಕ್ಷರಗಳು ಬರೆದಿದ್ದವು; ಈ ಕಡೆಯೂ ಆ ಕಡೆಯೂ ಬರಹವಿತ್ತು.

16 ಆ ಶಿಲಾಶಾಸನಗಳು ದೇವರ ಕೆಲಸವೇ; ಅವುಗಳಲ್ಲಿ ಬರೆದದ್ದು ದೇವರು ಕೆತ್ತಿದ ಅಕ್ಷರಗಳೇ.

17 ಇಸ್ರಾಯೇಲ್ಯರು ಉತ್ಸಾಹದಿಂದ ಕೂಗಾಡುತ್ತಾ ಇರಲಾಗಿ ಯೆಹೋಶುವನು ಆ ಶಬ್ದವನ್ನು ಕೇಳಿ - ಪಾಳೆಯದ ಕಡೆಯಿಂದ ಯುದ್ಧಧ್ವನಿ ಕೇಳಿಸುತ್ತದೆ ಎಂದು ಮೋಶೆಗೆ ಹೇಳಿದನು.

18 ಅದಕ್ಕವನು - ನನಗೆ ಕೇಳಿಸುವದು ಜಯಧ್ವನಿಯೂ ಅಲ್ಲ, ಅಪಜಯ ಧ್ವನಿಯೂ ಅಲ್ಲ, ಉತ್ಸವಧ್ವನಿಯೇ ಅಂದನು.

19 ಅವನು ಪಾಳೆಯದ ಹತ್ತಿರಕ್ಕೆ ಬಂದು ಆ ಬಸವನನ್ನೂ ಜನರು ಕುಣಿದಾಡುವದನ್ನೂ ಕಂಡಾಗ ಬಹು ಕೋಪಗೊಂಡು ಕೈಯಲ್ಲಿದ್ದ ಶಿಲಾಶಾಸನಗಳನ್ನು ಬೆಟ್ಟದ ಬುಡದಲ್ಲಿ ನೆಲಕ್ಕೆ ಹಾಕಿ ಒಡೆದುಬಿಟ್ಟನು.

20 ಜನರು ಮಾಡಿಸಿಕೊಂಡಿದ್ದ ಬಸವನನ್ನು ಅವನು ಹಿಡಿದು ಬೆಂಕಿಯಿಂದ ಸುಟ್ಟು ಅರೆದು ಪುಡಿಪುಡಿಮಾಡಿ ನೀರಿನ ಮೇಲೆ ಚೆಲ್ಲಿ ಇಸ್ರಾಯೇಲ್ಯರಿಗೆ ಆ ನೀರನ್ನು ಕುಡಿಸಿದನು.

21 ಆಗ ಅವನು ಆರೋನನನ್ನು - ನೀನು ಈ ಜನರಿಂದ ಮಹಾಪರಾಧವನ್ನು ಮಾಡಿಸಿದಿಯಲ್ಲಾ; ಹೀಗೆ ಮಾಡಿಸುವದಕ್ಕೆ ಇವರು ನಿನಗೇನು ಮಾಡಿದರು ಎಂದು ವಿಚಾರಿಸಲು

22 ಆರೋನನು - ಸ್ವಾವಿುಯವರು ರೋಷಗೊಳ್ಳಬಾರದು; ಈ ಜನರು ದುಷ್ಟಸ್ವಭಾವಿಗಳೆಂಬದನ್ನು ಬಲ್ಲಿರಷ್ಟೆ.

23 ಅವರು ನನ್ನ ಬಳಿಗೆ ಬಂದು - ನಮ್ಮ ಮುಂದುಗಡೆಯಲ್ಲಿ ಹೋಗುವದಕ್ಕೆ ದೇವರುಗಳನ್ನು ಮಾಡಿಸಿಕೊಡು; ಐಗುಪ್ತದೇಶದಿಂದ ನಮ್ಮನ್ನು ಕರಕೊಂಡುಬಂದ ಮೋಶೆಯು ಏನಾದನೋ ಗೊತ್ತಿಲ್ಲ ಅಂದರು.

24 ಅದಕ್ಕೆ ನಾನು - ಯಾರಲ್ಲಿ ಚಿನ್ನದ ಒಡವೆಯಿದೆಯೋ ಅವರೆಲ್ಲರು ಅದನ್ನು ತೆಗೆದು ನನಗೆ ಕೊಡಬೇಕು ಅಂದೆನು. ಅವರು ಹಾಗೆ ಕೊಡಲಾಗಿ ನಾನು ಆ ಚಿನ್ನವನ್ನು ಬೆಂಕಿಯಲ್ಲಿ ಹಾಕಿದಾಗ ಈ ಬಸವ ಉಂಟಾಯಿತು ಅಂದನು.

25 ಜನರು ಅಂಕೆತಪ್ಪಿ ತಮ್ಮ ಇಷ್ಟಬಂದಂತೆ ಮಾಡುವದಕ್ಕೆ ಆರೋನನು ಅವರನ್ನು ಬಿಟ್ಟದ್ದರಿಂದ ಅವರ ವಿರೋಧಿಗಳು ಅಪಹಾಸ್ಯ ಮಾಡುವದಕ್ಕೆ ಆಸ್ಪದವಾಯಿತು.

26 ಅವರು ಕ್ರಮವಿಲ್ಲದೆ ಸ್ವೇಚ್ಫೆಯಾಗಿ ನಡೆದುಕೊಳ್ಳುವದನ್ನು ಮೋಶೆ ನೋಡಿ ಪಾಳೆಯದ ಬಾಗಲಲ್ಲಿ ನಿಂತುಕೊಂಡು - ಯೆಹೋವನ ಪಕ್ಷದವರೆಲ್ಲರು ನನ್ನ ಬಳಿಗೆ ಬರಬೇಕು ಎಂದು ಹೇಳಿದನು. ಆಗ ಲೇವಿಯ ಕುಲದವರೆಲ್ಲರು ಅವನ ಬಳಿಗೆ ಕೂಡಿ ಬಂದರು.

27 ಮೋಶೆ ಅವರಿಗೆ - ಇಸ್ರಾಯೇಲ್ಯರ ದೇವರಾದ ಯೆಹೋವನು ಅಪ್ಪಣೆಮಾಡುವದೇನಂದರೆ - ನಿಮ್ಮಲ್ಲಿ ಪ್ರತಿಯೊಬ್ಬನು ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಪಾಳೆಯದ ಮಧ್ಯದಲ್ಲಿ ಒಂದು ಬಾಗಲಿನಿಂದ ಮತ್ತೊಂದು ಬಾಗಲಿನವರೆಗೂ ಹೋಗುತ್ತಾ ಬರುತ್ತಾ ಅಣ್ಣ ತಮ್ಮ ಗೆಳೆಯ ನೆರೆಯವ ಎಂದು ಲಕ್ಷಿಸದೆ ಜನರನ್ನು ಸಂಹರಿಸಬೇಕು ಎಂದು ಹೇಳಿದನು.

28 ಲೇವಿಯ ಕುಲದವರು ಮೋಶೆಯ ಆಜ್ಞೆಯ ಮೇರೆಗೆ ಮಾಡಿದರು. ಆ ದಿನದಲ್ಲಿ ಜನರೊಳಗೆ ಹೆಚ್ಚು ಕಡಿಮೆ ಮೂರು ಸಾವಿರ ಮಂದಿ ಕೊಲ್ಲಲ್ಪಟ್ಟರು.

29 ಮೋಶೆ [ಲೇವಿಯರಿಗೆ] - ಈ ಹೊತ್ತು ನಿಮ್ಮಲ್ಲಿ ಪ್ರತಿಯೊಬ್ಬನು ಮಗನನ್ನಾದರೂ ಅಣ್ಣತಮ್ಮಂದಿರನ್ನಾದರೂ ಲಕ್ಷ್ಯಕ್ಕೆ ತೆಗೆದುಕೊಳ್ಳದೆ ನಿಮ್ಮನ್ನು ಯೆಹೋವನ ಸೇವೆಗೆ ಪ್ರತಿಷ್ಠಿಸಿಕೊಳ್ಳಬೇಕು; ಹಾಗಾದರೆ ಆತನು ಈ ಹೊತ್ತೇ ನಿಮ್ಮನ್ನು ಆಶೀರ್ವದಿಸುವನು ಎಂದು ಹೇಳಿದನು.


ಮೋಶೆಯು ಇಸ್ರಾಯೇಲ್ಯರಿಗಾಗಿ ದೇವರನ್ನು ಬೇಡಿಕೊಂಡದ್ದು

30 ಮರುದಿನದಲ್ಲಿ ಮೋಶೆ ಜನರಿಗೆ - ನೀವು ಮಹಾಪಾಪವನ್ನು ಮಾಡಿದಿರಿ. ಆದರೂ ನಾನು ಬೆಟ್ಟವನ್ನು ಹತ್ತಿ ಯೆಹೋವನ ಸನ್ನಿಧಿಗೆ ಹೋಗುವೆನು; ಒಂದು ವೇಳೆ ನೀವು ಮಾಡಿದ ಪಾಪಕೃತ್ಯಕ್ಕೆ ಕ್ಷಮಾಪಣೆಯು ನನ್ನ ಮೂಲಕ ದೊರಕೀತು ಎಂದು ಹೇಳಿದನು.

31 ಆಗ ಮೋಶೆ ಯೆಹೋವನ ಬಳಿಗೆ ತಿರಿಗಿ ಹೋಗಿ - ಅಯ್ಯೋ ಅಯ್ಯೋ, ಈ ಜನರು ಮಹಾಪಾಪವನ್ನು ಮಾಡಿದ್ದಾರೆ; ಚಿನ್ನದ ದೇವರನ್ನು ಮಾಡಿಕೊಂಡಿದ್ದಾರೆ. ಆದರೂ ನೀನು ಕರುಣವಿಟ್ಟು ಅವರ ಪಾಪವನ್ನು ಕ್ಷವಿುಸಬೇಕು.

32 ಇಲ್ಲವಾದರೆ ನೀನು ಬರೆದಿರುವ [ಜೀವಿತರ] ಪಟ್ಟಿಯಿಂದ ನನ್ನ ಹೆಸರನ್ನೂ ಅಳಿಸಿಬಿಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಪ್ರಾರ್ಥಿಸಿದನು.

33 ಅದಕ್ಕೆ ಯೆಹೋವನು - ಯಾರಾರು ನನ್ನ ಮಾತನ್ನು ಮೀರಿ ಪಾಪಮಾಡಿದ್ದಾರೋ ಅವರ ಹೆಸರುಗಳನ್ನೇ ನನ್ನ ಬಳಿಯಲ್ಲಿರುವ ಪಟ್ಟಿಯಿಂದ ನಾನು ಅಳಿಸಿಬಿಡುವೆನು.

34 ನೀನು ಇಲ್ಲಿಂದ ಹೊರಟು ನಾನು ನಿನಗೆ ಹೇಳಿದ ದೇಶಕ್ಕೆ ಈ ಜನರನ್ನು ನಡಿಸಿಕೊಂಡು ಹೋಗು. ನನ್ನ ದೂತನು ನಿನ್ನ ಮುಂದುಗಡೆಯಲ್ಲಿ ನಡೆಯುವನು. ಆದರೂ ನಾನು ಅವರನ್ನು ಶಿಕ್ಷಿಸುವಾಗ ಅವರ ಪಾಪಕ್ಕೆ ತಕ್ಕಂತೆ ಶಿಕ್ಷಿಸುವೆನು.

35 ಇಸ್ರಾಯೇಲ್ಯರು ಆರೋನನ ಕೈಯಿಂದ ಆ ಬಸವನನ್ನು ಮಾಡಿಸಿಕೊಂಡದ್ದರಿಂದ ಯೆಹೋವನು ಅವರನ್ನು ದಂಡಿಸಿದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು