ವಿಮೋಚನಕಾಂಡ 31 - ಕನ್ನಡ ಸತ್ಯವೇದವು J.V. (BSI)ಗುಡಾರವನ್ನೂ ಅದರ ಉಪಕರಣಗಳನ್ನೂ ಮಾಡುವದಕ್ಕೆ ಕೆಲಸಗಾರರನ್ನು ನೇವಿುಸಿದ್ದು 1 ಯೆಹೋವನು ಮೋಶೆಗೆ ಹೀಗಂದನು - 2 ವಿಚಿತ್ರವಾಗಿ ನಯವಾದ ಕೆಲಸಗಳನ್ನು ಕಲ್ಪಿಸುವದಕ್ಕೂ ಚಿನ್ನ ಬೆಳ್ಳಿ ತಾಮ್ರಗಳಿಂದ ಕೆಲಸ ನಡಿಸುವದಕ್ಕೂ 3 ರತ್ನಗಳನ್ನು ಕೆತ್ತುವದಕ್ಕೂ ಮರದಲ್ಲಿ ವಿಚಿತ್ರವಾಗಿ ಕೆತ್ತನೇ ಕೆಲಸವನ್ನು ಮಾಡುವದಕ್ಕೂ 4 ಇವೇ ಮೊದಲಾದ ಸಮಸ್ತ ಶೃಂಗಾರವಾದ ಕೆಲಸವನ್ನು ಮಾಡುವದಕ್ಕೂ ನಾನು ಯೆಹೂದಕುಲದವನಾದ ಹೂರನ ಮೊಮ್ಮಗನೂ ಊರಿಯ ಮಗನೂ ಆಗಿರುವ ಬೆಚಲೇಲನೆಂಬವನನ್ನು ಗೊತ್ತುಮಾಡಿದ್ದೇನೆ. 5 ಅವನಿಗೆ ದಿವ್ಯಾತ್ಮವನ್ನು ಕೊಟ್ಟು ಬೇಕಾದ ಜ್ಞಾನ ವಿದ್ಯಾ ವಿವೇಕಗಳನ್ನೂ ಸಕಲಶಿಲ್ಪಶಾಸ್ತ್ರಜ್ಞಾನವನ್ನೂ ಅನುಗ್ರಹಿಸಿದ್ದೇನೆ. 6 ಅವನೊಂದಿಗೆ ದಾನ್ ಕುಲದವನಾದ ಅಹೀಸಾಮಾಕನ ಮಗನಾದ ಒಹೊಲೀಯಾಬನನ್ನೂ ನೇವಿುಸಿದ್ದೇನೆ. ಅದಲ್ಲದೆ ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವದಕ್ಕೆ ಜಾಣರೆಲ್ಲರ ಹೃದಯದಲ್ಲಿ ಜ್ಞಾನವನ್ನುಂಟುಮಾಡಿದ್ದೇನೆ. 7 ದೇವದರ್ಶನದ ಗುಡಾರ, ಆಜ್ಞಾಶಾಸನಗಳನ್ನು ಇಟ್ಟಿರುವ ಮಂಜೂಷ, ಅದರ ಮೇಲಿರುವ ಕೃಪಾಸನ, ಗುಡಾರದ ಎಲ್ಲಾ ಉಪಕರಣಗಳು, 8 ಮೇಜು ಅದರ ಉಪಕರಣಗಳು, ಚೊಕ್ಕಬಂಗಾರದ ದೀಪಸ್ತಂಭ, ಅದರ ಉಪಕರಣಗಳು, 9 ಧೂಪವೇದಿ, ಯಜ್ಞವೇದಿ, ಅದರ ಉಪಕರಣಗಳು, 10 ಗಂಗಾಳ, ಅದರ ಪೀಠ, ಅಲಂಕಾರವಾದ ದೀಕ್ಷಾವಸ್ತ್ರಗಳು ಅಂದರೆ ಮಹಾಯಾಜಕನಾದ ಆರೋನನಿಗೂ ಅವನ ಮಕ್ಕಳಿಗೂ ಬೇಕಾದ ಯಾಜಕವಸ್ತ್ರಗಳು, 11 ಪಟ್ಟಾಭಿಷೇಕತೈಲ, ಪವಿತ್ರಸ್ಥಾನದ ಸೇವೆಗೆ ಬೇಕಾದ ಪರಿಮಳಧೂಪ ಇವುಗಳನ್ನೆಲ್ಲಾ ನಾನು ನಿನಗೆ ಆಜ್ಞಾಪಿಸಿದಂತೆಯೇ ಅವರು ಮಾಡುವರು. ಸಬ್ಬತ್ ದಿನವನ್ನು ಆಚರಿಸಲೇಬೇಕೆಂಬದೂ ಆಜ್ಞಾಶಾಸನಗಳೂ 12-13 ಯೆಹೋವನು ಮೋಶೆಗೆ ಹೀಗಂದನು - ನೀನು ಇಸ್ರಾಯೇಲ್ಯರಿಗೆ ಆಜ್ಞಾಪಿಸಬೇಕಾದದ್ದೇನಂದರೆ - ನಾನು ನೇವಿುಸಿರುವ ಸಬ್ಬತ್ ದಿನಗಳನ್ನು ನೀವು ತಪ್ಪದೆ ಆಚರಿಸಬೇಕು. ನಿಮ್ಮನ್ನು ದೇವಜನರನ್ನಾಗಿ ಮಾಡಿರುವ ಯೆಹೋವನು ನಾನೇ ಎಂದು ನೀವು ತಿಳುಕೊಳ್ಳುವಂತೆ ಇದೇ ನನಗೂ ನಿಮಗೂ ನಿಮ್ಮ ಸಂತತಿಯವರಿಗೂ ಇರುವ ಗುರುತು. 14 ಆದಕಾರಣ ನೀವು ಸಬ್ಬತ್ ದಿನವನ್ನು ದೇವರ ದಿನವೆಂದು ಭಾವಿಸಿ ಆಚರಿಸಬೇಕು. ಅದನ್ನು ಅಪರಿಶುದ್ಧವಾದದ್ದೆಂದು ಎಣಿಸಿ ನಡೆದವನಿಗೆ ಮರಣಶಿಕ್ಷೆಯಾಗಬೇಕು. ಆ ದಿನದಲ್ಲಿ ಕೆಲಸವೇನಾದರೂ ಮಾಡುವವನು ತನ್ನ ಕುಲದಿಂದ ತೆಗೆದುಹಾಕಲ್ಪಡಬೇಕು. 15 ಆರು ದಿನಗಳು ಕೆಲಸಮಾಡಬೇಕು; ಏಳನೆಯ ದಿವಸ ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾದ ಸಬ್ಬತ್ ದಿನವಾಗಿದೆ. ಅದು ಯೆಹೋವನಿಗೆ ಪರಿಶುದ್ಧವಾದ ದಿನ; ಇಂಥ ಸಬ್ಬತ್ ದಿನದಲ್ಲಿ ಕೆಲಸವೇನಾದರೂ ಮಾಡುವವನಿಗೆ ಮರಣಶಿಕ್ಷೆಯಾಗಬೇಕು; 16 ಆದದರಿಂದ ಇಸ್ರಾಯೇಲ್ಯರು ಸಬ್ಬತ್ ದಿವಸವನ್ನು ಆಚರಿಸಬೇಕು. ಈ ಆಚರಣೆಯು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾದ ನಿಬಂಧನೆ. 17 ನನಗೂ ಇಸ್ರಾಯೇಲ್ಯರಿಗೂ ನಡುವೆ ಇದು ಸದಾಕಾಲವೂ ಗುರುತು. ಆರು ದಿನಗಳಲ್ಲಿ ಯೆಹೋವನು ಭೂಮ್ಯಾಕಾಶಗಳನ್ನು ಉಂಟುಮಾಡಿ ಏಳನೆಯ ದಿನದಲ್ಲಿ ಕೆಲಸವನ್ನು ಮಾಡದೆ ವಿಶ್ರವಿುಸಿಕೊಂಡನಲ್ಲವೇ. 18 ಯೆಹೋವನು ಸೀನಾಯಿಬೆಟ್ಟದಲ್ಲಿ ಮೋಶೆಯ ಸಂಗಡ ಮಾತಾಡುವದನ್ನು ಮುಗಿಸಿದ ಮೇಲೆ ಅವನಿಗೆ ಆ ಎರಡು ಆಜ್ಞಾಶಾಸನಗಳನ್ನು ಕೊಟ್ಟನು. ಅವು ದೇವರ ಕೈಯಿಂದ ಕೆತ್ತಲ್ಪಟ್ಟ ಶಿಲಾಶಾಸನಗಳೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India