ವಿಮೋಚನಕಾಂಡ 30 - ಕನ್ನಡ ಸತ್ಯವೇದವು J.V. (BSI)ಧೂಪವೇದಿಯ ಕ್ರಮ 1 ಸುಗಂಧದ್ರವ್ಯಗಳಿಂದ ಧೂಪಹಾಕುವದಕ್ಕೆ ಜಾಲೀಮರದ ಧೂಪವೇದಿಯನ್ನು ಮಾಡಿಸಬೇಕು. 2 ಅದು ಒಂದು ಮೊಳ ಉದ್ದವಾಗಿಯೂ ಒಂದು ಮೊಳ ಅಗಲವಾಗಿಯೂ ಚಚ್ಚೌಕವಾಗಿರಬೇಕು; ಅದರ ಎತ್ತರವು ಎರಡು ಮೊಳವಾಗಿರಬೇಕು. ಅದರ ಕೊಂಬುಗಳು ಅದರೊಂದಿಗೆ ಏಕವಾಗಿರಬೇಕು. 3 ಅದರ ಮೇಲ್ಭಾಗಕ್ಕೂ ನಾಲ್ಕು ಪಕ್ಕಗಳಿಗೂ ಕೊಂಬುಗಳಿಗೂ ಚೊಕ್ಕ ಬಂಗಾರದ ತಗಡುಗಳನ್ನು ಹೊದಿಸಬೇಕು. ಸುತ್ತಲೂ ಚಿನ್ನದ ಗೋಟು ಕಟ್ಟಿಸಬೇಕು. 4 ಅದರ ಕೆಳಗೆ ವೇದಿಯ ಎರಡು ಪಾರ್ಶ್ವಗಳಲ್ಲಿ ಎರಡೆರಡು ಚಿನ್ನದ ಬಳೆಗಳನ್ನು ಮೂಲೆಗಳಲ್ಲಿಯೇ ಹಾಕಿಸಬೇಕು. ವೇದಿಯನ್ನು ಹೊರುವದಕ್ಕೆ ಕೋಲುಗಳನ್ನು ಅವುಗಳಲ್ಲಿ ಸೇರಿಸಬೇಕು. 5 ಆ ಕೋಲುಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಬೇಕು. 6 ಆಜ್ಞಾಶಾಸನಗಳ ಮಂಜೂಷದ ಮುಂದಣ ತೆರೆಗೆ ಎದುರಾಗಿ, ಅಂದರೆ ಆಜ್ಞಾಶಾಸನಗಳ ಮೇಲಿರುವಂಥ ಮತ್ತು ನಾನು ನಿನಗೆ ದರ್ಶನಕೊಡುವಂಥ ಕೃಪಾಸನದ ಮುಂದೆ ಅದನ್ನು ಇರಿಸಬೇಕು. 7 ಆರೋನನು ಪ್ರತಿನಿತ್ಯವೂ ಹೊತ್ತಾರೆಯಲ್ಲಿ ದೀಪಗಳನ್ನು ಸರಿಪಡಿಸುವಾಗಲೂ 8 ಸಾಯಂಕಾಲದಲ್ಲಿ ದೀಪಗಳನ್ನು ಹೊತ್ತಿಸುವಾಗಲೂ ಅದರ ಮೇಲೆ ಸುಗಂಧದ್ರವ್ಯಗಳಿಂದ ಧೂಪವನ್ನು ಹಾಕಬೇಕು. ಹೀಗೆ ನಿಮ್ಮಿಂದಲೂ ನಿಮ್ಮ ಸಂತತಿಯವರಿಂದಲೂ ಯೆಹೋವನ ಸನ್ನಿಧಿಯಲ್ಲಿ ನಿತ್ಯವಾದ ಧೂಪ ಸಮರ್ಪಣೆಯು ಇರಬೇಕು. 9 ಆ ವೇದಿಯ ಮೇಲೆ ಬೇರೆ ಯಾವ ಧೂಪವನ್ನೂ ಹಾಕಕೂಡದು; ಅದರ ಮೇಲೆ ಹೋಮವನ್ನಾಗಲಿ ಧಾನ್ಯ ದ್ರವ್ಯವನ್ನಾಗಲಿ ಪಾನದ್ರವ್ಯವನ್ನಾಗಲಿ ಸಮರ್ಪಿಸಕೂಡದು. 10 ಆರೋನನೂ ಅವನ ಸಂತತಿಯವರೂ ವರುಷಕ್ಕೊಮ್ಮೆ ದೋಷಪರಿಹಾರಕ ಯಜ್ಞಪಶುವಿನ ರಕ್ತವನ್ನು ಆ ವೇದಿಯ ಕೊಂಬುಗಳಿಗೆ ಹಚ್ಚಿ ಅದರ ವಿಷಯವಾಗಿ ದೋಷ ಪರಿಹಾರವನ್ನು ಮಾಡಬೇಕು. ಅದು ಯೆಹೋವನಿಗೆ ಅತಿಪರಿಶುದ್ಧವಾಗಿದೆ. ಇಸ್ರಾಯೇಲ್ಯರೆಲ್ಲರು ಪ್ರಾಣರಕ್ಷಣೆಗಾಗಿ ಕೊಡಬೇಕಾದ ಕಪ್ಪವನ್ನು ಕುರಿತದ್ದು 11 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - 12 ನೀನು ಖಾನೇಷುಮಾರಿಯಾಗತಕ್ಕ ಇಸ್ರಾಯೇಲ್ಯರನ್ನು ಲೆಕ್ಕಿಸುವಾಗ ಅವರೊಳಗೆ ವ್ಯಾಧಿಸಂಭವಿಸದಂತೆ ಪ್ರತಿಯೊಬ್ಬನು ತನ್ನ ತನ್ನ ಪ್ರಾಣಕ್ಕೆ ಈಡಾಗಿ ಯೆಹೋವನಿಗೆ ಕಪ್ಪವನ್ನು ಕೊಡಬೇಕು. 13 ಲೆಕ್ಕಿಸಲ್ಪಟ್ಟವರಲ್ಲಿ ಸೇರುವ ಪ್ರತಿಯೊಬ್ಬನು ಯೆಹೋವನಿಗೆ ಅರ್ಧ ರೂಪಾಯಿಯ ಮೇರೆಗೆ ಕಪ್ಪ ಕೊಡಬೇಕು. ದೇವರ ಸೇವೆಗೆ ನೇಮಕವಾದ ಇಪ್ಪತ್ತು ಗೇರಾ ತೂಕದ ರೂಪಾಯಿಯ ಮೇರೆಗೆ ಅರ್ಧರ್ಧ ರೂಪಾಯಿ ಕಪ್ಪವಾಗಿ ಕೊಡಬೇಕು. 14 ಲೆಕ್ಕಿಸಲ್ಪಟ್ಟವರಲ್ಲಿ ಸೇರಿದವರೊಳಗೆ ಇಪ್ಪತ್ತು ವರುಷದವರೂ ಅದಕ್ಕೆ ಹೆಚ್ಚಿನ ವಯಸ್ಸುಳ್ಳವರೂ ಆ ಕಪ್ಪವನ್ನು ಯೆಹೋವನಿಗೆ ಕೊಡಬೇಕು. 15 ಪ್ರಾಣರಕ್ಷಣೆಯ ಕಪ್ಪವನ್ನು ಯೆಹೋವನಿಗೆ ಕೊಡುವದರಲ್ಲಿ ಐಶ್ವರ್ಯವಂತರು ಅರ್ಧ ರೂಪಾಯಿಗಿಂತ ಹೆಚ್ಚು ಕೊಡಬಾರದು, ಬಡವರು ಕಮ್ಮಿಕೊಡಬಾರದು. 16 ನೀನು ಪ್ರಾಣರಕ್ಷಣೆಯ ಹಣವನ್ನು ಇಸ್ರಾಯೇಲ್ಯರಿಂದ ತೆಗೆದುಕೊಂಡು ದೇವದರ್ಶನದ ಗುಡಾರದ ಸೇವೆಗೆ ಉಪಯೋಗಿಸಬೇಕು. ಇಸ್ರಾಯೇಲ್ಯರ ಪ್ರಾಣಗಳನ್ನು ಉಳಿಸಬೇಕೆಂಬದಾಗಿ ಆ ಕಪ್ಪವು ಯೆಹೋವನ ಸನ್ನಿಧಿಯಲ್ಲಿ ಜ್ಞಾಪಕ ಕೊಡುವದು. ಗುಡಾರದ ಸೇವೆಗೆ ಬೇಕಾದ ಗಂಗಾಳವೂ ಅಭಿಷೇಕತೈಲವೂ ಧೂಪದ್ರವ್ಯವೂ 17 ಯೆಹೋವನು ಮೋಶೆಗೆ ಮತ್ತೂ ಹೇಳಿದ್ದೇನಂದರೆ - 18 ಸ್ನಾನಕ್ಕೋಸ್ಕರ ಒಂದು ತಾಮ್ರದ ಗಂಗಾಳವನ್ನೂ ಅದಕ್ಕೆ ತಾಮ್ರದ ಪೀಠವನ್ನೂ ಮಾಡಿಸಿ ದೇವದರ್ಶನದ ಗುಡಾರಕ್ಕೂ ಯಜ್ಞವೇದಿಗೂ ನಡುವೆ ಇಟ್ಟು ಅದರಲ್ಲಿ ನೀರನ್ನು ತುಂಬಿಸಬೇಕು. 19 ಆರೋನನೂ ಅವನ ಮಕ್ಕಳೂ ಅದರಿಂದ ಕೈಕಾಲುಗಳನ್ನು ತೊಳೆದುಕೊಳ್ಳಬೇಕು. 20 ಅವರು ದೇವದರ್ಶನದ ಗುಡಾರದೊಳಗೆ ಹೋಗುವಾಗೆಲ್ಲಾ ಆ ನೀರಿನಿಂದ ಕೈಕಾಲುಗಳನ್ನು ತೊಳೆದುಕೊಂಡು ಹೋಗಬೇಕು; ತೊಳೆಯದೆ ಹೋದರೆ ಸತ್ತಾರು. ಹಾಗೆಯೇ ಅವರು ದೇವರ ಸೇವೆಯನ್ನು ನಡಿಸುವವರಾಗಿ ಯೆಹೋವನಿಗೆ ಹೋಮಸಮರ್ಪಣೆಗಾಗಿ ಯಜ್ಞವೇದಿಯ ಬಳಿಗೆ ಬರುವಾಗಲೂ ಕೈಕಾಲುಗಳನ್ನು ತೊಳೆದುಕೊಂಡು ಬರಬೇಕು; 21 ತೊಳಕೊಳ್ಳದೆ ಬಂದರೆ ಸತ್ತಾರು. ಇದು ಅವನಿಗೂ ಅವನ ಸಂತತಿಯವರಿಗೂ ಶಾಶ್ವತ ನಿಯಮ. 22 ಅದಲ್ಲದೆ ಯೆಹೋವನು ಮೋಶೆಗೆ ಹೇಳಿದ್ದೇನಂದರೆ - 23 ನೀನು ಮುಖ್ಯವಾದ ಸುಗಂಧದ್ರವ್ಯಗಳಲ್ಲಿ ದೇವರ ಸೇವೆಗೆ ನೇಮಕವಾದ ತೂಕದ ಮೇರೆಗೆ ಐನೂರು ತೊಲೆ ಅಚ್ಚ ರಕ್ತಬೋಳ, ಇನ್ನೂರೈವತ್ತು ತೊಲೆ ಶ್ರೇಷ್ಠವಾದ ಲವಂಗಚಕ್ಕೆ, ಇನ್ನೂರೈವತ್ತು ತೊಲೆ ಸುಗಂಧವಾದ ಬಜೆ, 24 ಐನೂರು ತೊಲೆ ದಾಲ್ಚಿನ್ನಿ, ಆರುವರೆ ಸೇರು ಒಲೀವ ತೈಲ ಇವುಗಳನ್ನೆಲ್ಲಾ ತೆಗೆದುಕೊಂಡು 25 ಬುಕ್ಕಿಟ್ಟುಗಾರರ ಪದ್ಧತಿಯ ಮೇರೆಗೆ ವಿುಶ್ರಮಾಡಿ ದೇವರ ಸೇವೆಗಾಗಿ ಅಭಿಷೇಕತೈಲವನ್ನು ಮಾಡಿಸಬೇಕು. 26 ಅದರಿಂದ ದೇವದರ್ಶನದ ಗುಡಾರ, ಆಜ್ಞಾಶಾಸನಗಳ ಮಂಜೂಷ, ಮೇಜು, ಮೇಜಿನ ಉಪಕರಣಗಳು, 27 ದೀಪಸ್ತಂಭ, ದೀಪಸ್ತಂಭದ ಉಪಕರಣಗಳು, ಧೂಪವೇದಿ, 28 ಯಜ್ಞವೇದಿ, ಯಜ್ಞವೇದಿಯ ಉಪಕರಣಗಳು, ಗಂಗಾಳ, 29 ಅದರ ಪೀಠ ಇವುಗಳನ್ನೆಲ್ಲಾ ಅಭಿಷೇಕಿಸಿ ಅವು ಅತಿ ಪರಿಶುದ್ಧವಾಗುವಂತೆ ಪ್ರತಿಷ್ಠಿಸಬೇಕು. ಅವುಗಳಿಗೆ ಸೋಂಕಿದೆಲ್ಲವು ಪರಿಶುದ್ಧವಾಗಿರುವದು. 30 ಅದಲ್ಲದೆ ಆರೋನನೂ ಅವನ ಮಕ್ಕಳೂ ನನಗೆ ಯಾಜಕರಾಗುವಂತೆ ಅವರನ್ನು ಅಭಿಷೇಕಿಸಿ ಪ್ರತಿಷ್ಠಿಸಬೇಕು. 31 ನೀನು ಇಸ್ರಾಯೇಲ್ಯರಿಗೆ ಆಜ್ಞಾಪಿಸತಕ್ಕದ್ದೇನಂದರೆ - ನೀವೂ ನಿಮ್ಮ ಸಂತತಿಯವರೂ ಈ ತೈಲವನ್ನು ನನ್ನ ಸೇವೆಗೆ ನೇಮಕವಾದ ಅಭಿಷೇಕತೈಲವೆಂದು ತಿಳಿದುಕೊಳ್ಳಬೇಕು. 32 ಮೈಗೆ ಹಚ್ಚಿಕೊಳ್ಳುವದಕ್ಕೆ ಇದನ್ನು ಉಪಯೋಗಿಸಬಾರದು. ಇದರಲ್ಲಿರುವ ಜೀನಸುಗಳ ಮೇರೆಗೆ ಬೇರೆ ಕೆಲಸಕ್ಕೆ ತೈಲವನ್ನು ಮಾಡಲೇಬಾರದು. ಇದು ದೇವರ ವಸ್ತು; ಇದನ್ನು ಮೀಸಲೆಂದು ನೀವು ತಿಳಿದುಕೊಳ್ಳಬೇಕು. 33 ಇದರಂತೆ ತೈಲವನ್ನು ಮಾಡುವವನಾಗಲಿ ಇದನ್ನು ಯಾಜಕನಲ್ಲದವನ ಮೇಲೆ ಹಚ್ಚುವವನಾಗಲಿ ತನ್ನ ಕುಲದಿಂದ ತೆಗೆದುಹಾಕಲ್ಪಡಬೇಕು. 34 ಅದಲ್ಲದೆ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನಂದರೆ - ನೀನು ಹಾಲು ಮಡ್ಡಿ, ಗುಗ್ಗುಲ, ಗಂಧದ ಚೆಕ್ಕೆ ಎಂಬ ಪರಿಮಳದ್ರವ್ಯಗಳನ್ನೂ ಸ್ವಚ್ಫವಾದ ಧೂಪವನ್ನೂ ಸಮಭಾಗವಾಗಿ ತೆಗೆದುಕೊಂಡು 35 ಸುವಾಸನೆಯುಳ್ಳ ಬುಕ್ಕಿಟ್ಟಾಗಿರುವಂತೆ ಸುಗಂಧದ್ರವ್ಯಕಾರರ ವಿದ್ಯೆಯ ಮೇರೆಗೆ ಕಲಸಿ ಉಪ್ಪು ಹಾಕಿ ದೇವರ ಸೇವೆಗೆ ಸ್ವಚ್ಫವಾದ ಧೂಪದ್ರವ್ಯವನ್ನು ಮಾಡಿಸಬೇಕು. 36 ಅದರಲ್ಲಿ ಸ್ವಲ್ಪವನ್ನು ಪುಡಿಮಾಡಿಸಿ ದೇವದರ್ಶನದ ಗುಡಾರದೊಳಗೆ ಆಜ್ಞಾಶಾಸನಗಳ ಮಂಜೂಷದ ಎದುರಾಗಿ, ನಾನು ನಿನಗೆ ದರ್ಶನಕೊಡುವ ಸ್ಥಳದಲ್ಲಿ ಇರಿಸಬೇಕು. ಅದು ಅತಿಪರಿಶುದ್ಧವಾದದ್ದೆಂದು ನೀವು ತಿಳುಕೊಳ್ಳಬೇಕು. 37 ನೀವು ಆ ಧೂಪದ್ರವ್ಯದ ಜೀನಸುಗಳ ಮೇರೆಗೆ ನಿಮ್ಮ ಸ್ವಂತಕ್ಕೋಸ್ಕರ ಧೂಪದ್ರವ್ಯವನ್ನು ಮಾಡಿಸಲೇಬಾರದು. ಅದು ಯೆಹೋವನ ಸೇವೆಗೆ ಮಾತ್ರ ಉಪಯೋಗಿಸಬೇಕಾದ ಮೀಸಲಾದ ಪದಾರ್ಥವೆಂದು ಭಾವಿಸಬೇಕು. 38 ಸುವಾಸನೆಗೋಸ್ಕರ ಅಂಥದನ್ನು ಮಾಡಿಕೊಳ್ಳುವವನು ತನ್ನ ಕುಲದಿಂದ ತೆಗೆದುಹಾಕಲ್ಪಡಬೇಕು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India