Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 29 - ಕನ್ನಡ ಸತ್ಯವೇದವು J.V. (BSI)


ಯಾಜಕರನ್ನು ಪ್ರತಿಷ್ಠಿಸಬೇಕಾದ ಕ್ರಮ

1 ಅವರು ನನಗೆ ಯಾಜಕರಾಗುವಂತೆ ಅವರನ್ನು ಪ್ರತಿಷ್ಠಿಸುವದಕ್ಕೆ ನೀನು ಮಾಡಬೇಕಾದ ಕಾರ್ಯ ಯಾವದಂದರೆ - ಒಂದು ಹೋರಿಕರುವನ್ನೂ ಪೂರ್ಣಾಂಗವಾದ ಎರಡು ಟಗರುಗಳನ್ನೂ ತೆಗೆದುಕೊಳ್ಳಬೇಕು;

2 ಮತ್ತು ಹುಳಿಯಿಲ್ಲದ ರೊಟ್ಟಿಗಳನ್ನೂ ಎಣ್ಣೆ ವಿುಶ್ರವಾದ ಹುಳಿಯಿಲ್ಲದ ಹೋಳಿಗೆಗಳನ್ನೂ ಎಣ್ಣೆ ಹೊಯಿದ ಹುಳಿಯಿಲ್ಲದ ಕಡುಬುಗಳನ್ನೂ ಗೋದಿಯ ಹಿಟ್ಟಿನಿಂದ ಮಾಡಿಸಿ ಒಂದೇ ಪುಟ್ಟಿಯಲ್ಲಿ ತುಂಬಿಸಬೇಕು.

3 ಆಮೇಲೆ ಆ ಪುಟ್ಟಿಯನ್ನೂ ಆ ಹೋರಿಯನ್ನೂ ಟಗರುಗಳನ್ನೂ ತಂದಿಡಬೇಕು.

4 ಆಗ ಆರೋನನನ್ನೂ ಅವನ ಮಕ್ಕಳನ್ನೂ ದೇವದರ್ಶನದ ಗುಡಾರದ ಬಾಗಲಿಗೆ ಕರಕೊಂಡು ಬಂದು ನೀರಿನಲ್ಲಿ ಸ್ನಾನ ಮಾಡಿಸಿ

5 ಆ ವಸ್ತ್ರಗಳನ್ನು ಅಂದರೆ ನಿಲುವಂಗಿಯನ್ನೂ ಕವಚದ ಸಂಗಡ ತೊಟ್ಟುಕೊಳ್ಳತಕ್ಕ ಮೇಲಂಗಿಯನ್ನೂ ಕವಚವನ್ನೂ ಚೀಲದ ಪದಕವನ್ನೂ ಆರೋನನಿಗೆ ತೊಡಿಸಿ ಕವಚದ ವಿಚಿತ್ರವಾದ ನಡುಕಟ್ಟನ್ನು ಕಟ್ಟಿಸಿ

6 ಅವನ ತಲೆಗೆ ಮುಂಡಾಸವನ್ನು ಹಾಕಿಸಿ ಮುಂಡಾಸದ ಮೇಲೆ ಪವಿತ್ರ ಪಟ್ಟವನ್ನು ಕಟ್ಟಿಸಿ

7 ಅಭಿಷೇಕತೈಲವನ್ನು ಅವನ ತಲೆಯ ಮೇಲೆ ಅಭ್ಯಂಜನಮಾಡಿ ಅವನನ್ನು ಅಭಿಷೇಕಿಸಬೇಕು.

8 ತರುವಾಯ ಅವನ ಮಕ್ಕಳನ್ನು ಹತ್ತಿರಕ್ಕೆ ಕರೆದು ಅವರಿಗೆ ನಿಲುವಂಗಿಗಳನ್ನು ತೊಡಿಸಿ

9 ಆರೋನನಿಗೂ ಅವನ ಮಕ್ಕಳಿಗೂ ನಡುಕಟ್ಟುಗಳನ್ನು ಕಟ್ಟಿಸಿ ಮುಂಡಾಸಗಳನ್ನು ಸುತ್ತಿಸಬೇಕು. ಆ ಹೊತ್ತಿನಿಂದ ಯಾಜಕತ್ವವು ಶಾಶ್ವತವಾದ ನಿಯಮದಿಂದ ಅವರಿಗೆ ಉಂಟಾಗುವದು. ಹೀಗೆ ಆರೋನನನ್ನೂ ಅವನ ಮಕ್ಕಳನ್ನೂ ಯಾಜಕೋದ್ಯೋಗಕ್ಕೆ ಸೇರಿಸಬೇಕು.

10 ತರುವಾಯ ನೀನು ಆ ಹೋರಿಯನ್ನು ದೇವದರ್ಶನದ ಗುಡಾರದ ಎದುರಿಗೆ ತರಿಸಿ ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟನಂತರ

11 ನೀನು ಅದನ್ನು ಯೆಹೋವನ ಸನ್ನಿಧಿಯಲ್ಲಿ ದೇವದರ್ಶನದ ಗುಡಾರದ ಬಾಗಲಲ್ಲಿ ವಧಿಸಬೇಕು.

12 ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ವಿುಕ್ಕ ರಕ್ತವನ್ನೆಲ್ಲಾ ಯಜ್ಞವೇದಿಯ ಬುಡಕ್ಕೆ ಹೊಯ್ಯಬೇಕು.

13 ಅದರ ವಪೆಯನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಹುರುಳಿಕಾಯಿಗಳನ್ನೂ ಅವುಗಳ ಮೇಲಿರುವ ಕೊಬ್ಬನ್ನೂ ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮಮಾಡಬೇಕು.

14 ಹೋರಿಯ ಮಾಂಸವನ್ನೂ ಚರ್ಮವನ್ನೂ ಕಲ್ಮಷವನ್ನೂ ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟುಬಿಡಬೇಕು. ಇದು ದೋಷಪರಿಹಾರಕಯಜ್ಞ.

15 ತರುವಾಯ ನೀನು ಆ ಟಗರುಗಳಲ್ಲಿ ಒಂದನ್ನು ತೆಗೆದುಕೊಂಡು ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟ ನಂತರ

16 ನೀನು ಅದನ್ನು ವಧಿಸಿ ಅದರ ರಕ್ತವನ್ನು ಯಜ್ಞವೇದಿಯ ನಾಲ್ಕು ಕಡೆಗಳಿಗೆ ಚೆಲ್ಲಬೇಕು.

17 ಆಗ ನೀನು ಆ ಟಗರನ್ನು ತುಂಡುತುಂಡಾಗಿ ಕಡಿದು ಅದರ ಕರುಳುಗಳನ್ನೂ ಕಾಲುಗಳನ್ನೂ ತೊಳಿಸಿ ಅವುಗಳನ್ನೂ ಆ ತುಂಡುಗಳನ್ನೂ ತಲೆಯನ್ನೂ ಒಟ್ಟಿಗೆ ಇಟ್ಟು

18 ಅದನ್ನೆಲ್ಲಾ ಯಜ್ಞವೇದಿಯ ಮೇಲೆ ಯೆಹೋವನಿಗೆ ಸರ್ವಾಂಗಹೋಮವಾಗಿ ಸಮರ್ಪಿಸಬೇಕು. ಇದು ಯೆಹೋವನಿಗೆ ಸುಗಂಧಹೋಮವಾಗಿದೆ.

19 ಆಮೇಲೆ ನೀನು ಎರಡನೆಯ ಟಗರನ್ನು ತೆಗೆದುಕೊಂಡು ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟನಂತರ

20 ಅದನ್ನು ವಧಿಸಿ ಅದರ ರಕ್ತದಲ್ಲಿ ಸ್ವಲ್ಪವನ್ನು ಆರೋನನ ಮತ್ತು ಅವನ ಮಕ್ಕಳ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಸೋಂಕಿಸಿ ವಿುಕ್ಕ ರಕ್ತವನ್ನು ಯಜ್ಞವೇದಿಯ ನಾಲ್ಕು ಕಡೆಗಳಿಗೆ ಚೆಲ್ಲಬೇಕು.

21 ಅದಲ್ಲದೆ ನೀನು ಯಜ್ಞವೇದಿಯ ಮೇಲಿರುವ ರಕ್ತದಲ್ಲಿಯೂ ಅಭಿಷೇಕತೈಲದಲ್ಲಿಯೂ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಮತ್ತು ಅವನ ವಸ್ತ್ರಗಳ ಮೇಲೆಯೂ ಅವನ ಮಕ್ಕಳ ಮತ್ತು ಅವರ ವಸ್ತ್ರಗಳ ಮೇಲೆಯೂ ಚಿವಿುಕಿಸಬೇಕು. ಹೀಗೆ ಅವನೂ ಅವನ ಮಕ್ಕಳೂ ಅವರ ವಸ್ತ್ರಗಳು ಸಹಿತವಾಗಿ ಪರಿಶುದ್ಧರಾಗುವರು.

22 ಬಳಿಕ ಪಟ್ಟಾಭಿಷೇಕಕ್ಕಾಗಿ ಸಮರ್ಪಿಸಲ್ಪಟ್ಟ ಆ ಟಗರಿನ ಕೊಬ್ಬನ್ನೆಲ್ಲಾ ಅಂದರೆ ಬಾಲದ ಕೊಬ್ಬನ್ನೂ ವಪೆಯನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಹುರುಳಿಕಾಯಿಗಳನ್ನೂ ಅವುಗಳ ಮೇಲಿರುವ ಕೊಬ್ಬನ್ನೂ

23 ಬಲದೊಡೆಯನ್ನೂ ಮತ್ತು ಯೆಹೋವನಿಗೆದುರಾಗಿ ಪುಟ್ಟಿಯಲ್ಲಿ ಇಟ್ಟಿದ್ದ ಹುಳಿಯಿಲ್ಲದ ಪದಾರ್ಥಗಳಲ್ಲಿ ಒಂದು ರೊಟ್ಟಿಯನ್ನೂ ಎಣ್ಣೆ ವಿುಶ್ರವಾದ ಒಂದು ಹೋಳಿಗೆಯನ್ನೂ ಒಂದು ಕಡುಬನ್ನೂ ತೆಗೆದುಕೊಂಡು

24 ಅವುಗಳನ್ನೆಲ್ಲಾ ಆರೋನನ ಮತ್ತು ಅವನ ಮಕ್ಕಳ ಕೈಗೆ ಕೊಟ್ಟು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು.

25 ಆಮೇಲೆ ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಯಜ್ಞವೇದಿಯ ಮೇಲೆ ಸರ್ವಾಂಗಹೋಮದ್ರವ್ಯದ ಸಂಗಡ ಯೆಹೋವನಿಗೆ ಆಹುತಿಕೊಡಬೇಕು. ಅದು ಯೆಹೋವನಿಗೆ ಸುಗಂಧ ಹೋಮವಾಗಿದೆ.

26 ಮತ್ತು ಆರೋನನ ಪಟ್ಟಾಭಿಷೇಕಕ್ಕಾಗಿ ಸಮರ್ಪಿಸಿದ ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು ಅದನ್ನೂ ನೈವೇದ್ಯವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸಬೇಕು. ಅದು ನಿನಗೇ ಸಲ್ಲತಕ್ಕ ಪಾಲು.

27 ಆರೋನನಿಗೂ ಅವನ ಮಕ್ಕಳಿಗೂ ಯಾಜಕದೀಕ್ಷೆಯನ್ನು ಕೊಡುವಾಗ ಸಮರ್ಪಿಸಿದ ಟಗರಿನ ಮಾಂಸದಲ್ಲಿ ನೈವೇದ್ಯವಾಗಿ ನಿವಾಳಿಸಿದ ಎದೆಯ ಭಾಗವನ್ನೂ ಯಾಜಕರ ಭಾಗಕ್ಕೆ ಪ್ರತ್ಯೇಕಿಸಿದ ತೊಡೆಯನ್ನೂ ದೇವರದೆಂದು ಭಾವಿಸಬೇಕು.

28 ಶಾಶ್ವತ ನಿಯಮವಾಗಿ ಇಸ್ರಾಯೇಲ್ಯರು ಅವುಗಳನ್ನು ಆರೋನನಿಗೂ ಅವನ ವಂಶಸ್ಥರಿಗೂ ಕೊಡತಕ್ಕದ್ದು; ಅವು ಯಾಜಕರ ಭಾಗಕ್ಕಾಗಿ ಪ್ರತ್ಯೇಕಿಸಲ್ಪಟ್ಟಿವೆ. ಇಸ್ರಾಯೇಲ್ಯರು ಸಮಾಧಾನ ಯಜ್ಞಕ್ಕಾಗಿ ಪಶುಗಳನ್ನು ವಧಿಸಿ ಯೆಹೋವನಿಗೆ ನೈವೇದ್ಯ ಮಾಡುವಾಗೆಲ್ಲಾ ಆ ಭಾಗಗಳನ್ನು ಯಾಜಕರಿಗೋಸ್ಕರ ಪ್ರತ್ಯೇಕಿಸಬೇಕು.

29 ಆರೋನನ ಯಾಜಕದೀಕ್ಷಾವಸ್ತ್ರಗಳೇ ಅವನ ತರುವಾಯ ಅವನ ವಂಶಸ್ಥರಿಗೂ ಉಪಯೋಗವಾಗಬೇಕು. ಅವರೂ ಪಟ್ಟಾಭಿಷಿಕ್ತರಾಗಿ ಮಹಾಯಾಜಕೋದ್ಯೋಗಕ್ಕೆ ಬಂದಾಗ ಅವುಗಳನ್ನು ಧರಿಸಿಕೊಳ್ಳಬೇಕು.

30 ಅವನ ಮಕ್ಕಳಲ್ಲಿ ಅವನಿಗೆ ಪ್ರತಿಯಾಗಿ ಮಹಾಯಾಜಕನಾಗುವವನು ಪವಿತ್ರಸ್ಥಾನದಲ್ಲಿ ದೇವರ ಸೇವೆಯನ್ನು ನಡಿಸುವದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದಂದಿನಿಂದ ಏಳು ದಿವಸಗಳವರೆಗೆ ಆ ವಸ್ತ್ರಗಳನ್ನು ಧರಿಸಿಕೊಂಡಿರಬೇಕು.

31 ಆರೋನನ ಪಟ್ಟಾಭಿಷೇಕಕ್ಕಾಗಿ ಸಮರ್ಪಿಸಿದ ಟಗರಿನ ಮಾಂಸವನ್ನು ದೇವದರ್ಶನದ ಗುಡಾರದ ಪ್ರಾಕಾರದಲ್ಲಿ ಬೇಯಿಸಬೇಕು.

32 ಆರೋನನೂ ಅವನ ಮಕ್ಕಳೂ ಆ ಟಗರಿನ ಮಾಂಸವನ್ನೂ ಪುಟ್ಟಿಯಲ್ಲಿರುವ ರೊಟ್ಟಿಯನ್ನೂ ದೇವದರ್ಶನದ ಗುಡಾರದ ಬಾಗಲೊಳಗೆ ಊಟಮಾಡಬೇಕು.

33 ಅವರನ್ನು ಯಾಜಕೋದ್ಯೋಗಕ್ಕೆ ಸೇರಿಸುವದಕ್ಕೂ ದೇವರ ಸೇವೆಗೆ ಪ್ರತಿಷ್ಠಿಸುವದಕ್ಕೂ ಯಾವ ಪದಾರ್ಥಗಳು ದೋಷಪರಿಹಾರಕ್ಕಾಗಿ ಸಮರ್ಪಿಸಲ್ಪಟ್ಟವೋ ಅವುಗಳನ್ನು ಅವರೇ ಭೋಜನಮಾಡಬೇಕೇ ಹೊರತು ಇತರರು ತಿನ್ನಕೂಡದು; ಅವು ಮೀಸಲು.

34 ಪಟ್ಟಾಭಿಷೇಕಕ್ಕೆ ಸಂಬಂಧಪಟ್ಟ ಮಾಂಸದಲ್ಲಿಯಾಗಲಿ ರೊಟ್ಟಿಯಲ್ಲಿಯಾಗಲಿ ಏನಾದರೂ ಮರುದಿನದ ಉದಯದವರೆಗೆ ಉಳಿದರೆ ಅದನ್ನು ಸುಟ್ಟುಬಿಡಬೇಕು; ಅದು ದೇವರ ವಸ್ತುವಾದದರಿಂದ ಯಾರೂ ತಿನ್ನಕೂಡದು.

35 ನಾನು ನಿನಗೆ ಆಜ್ಞಾಪಿಸಿದ ರೀತಿಯಲ್ಲಿ ಏಳು ದಿವಸದ ಆಚಾರವನ್ನು ನಡಿಸಿ ಆರೋನನನ್ನೂ ಅವನ ಮಕ್ಕಳನ್ನೂ ಉದ್ಯೋಗಕ್ಕೆ ಸೇರಿಸಬೇಕು;

36 ಪ್ರತಿದಿನದಲ್ಲಿಯೂ ದೋಷಪರಿಹಾರಕ್ಕಾಗಿ ಒಂದು ಹೋರಿಯನ್ನು ಯಜ್ಞಮಾಡಬೇಕು. ಅದಲ್ಲದೆ ಯಜ್ಞವೇದಿಯನ್ನು ಶುದ್ಧಿಮಾಡುವದಕ್ಕಾಗಿ ಅದರ ಮೇಲೆ ದೋಷಪರಿಹಾರಕ ಯಜ್ಞವನ್ನು ಸಮರ್ಪಿಸಿ ಅದನ್ನು ದೇವರ ಸೇವೆಗೋಸ್ಕರ ಅಭಿಷೇಕಿಸಬೇಕು.

37 ಹೀಗೆ ಏಳು ದಿನಗಳವರೆಗೂ ಯಜ್ಞವೇದಿಯ ನಿವಿುತ್ತವಾಗಿ ದೋಷಪರಿಹಾರಕಾಚಾರವನ್ನು ನಡಿಸಿ ಅದನ್ನು ಪ್ರತಿಷ್ಠಿಸಬೇಕು. ಯಜ್ಞವೇದಿಯು ಅತಿಪರಿಶುದ್ಧವಾಗಿರಬೇಕು; ಯಜ್ಞವೇದಿಗೆ ಸೋಂಕಿದ್ದೆಲ್ಲವು ಪರಿಶುದ್ಧವಾಗಿರಬೇಕು.


ಪ್ರತಿನಿತ್ಯವೂ ಮಾಡಬೇಕಾದ ಸರ್ವಾಂಗಹೋಮದ ಕ್ರಮ

38 ಯಜ್ಞವೇದಿಯ ಮೇಲೆ ನಿತ್ಯವೂ ಸಮರ್ಪಿಸಬೇಕಾದದ್ದೇನಂದರೆ - ಒಂದು ವರುಷದ ಎರಡು ಕುರಿಗಳನ್ನು ದಿನಂಪ್ರತಿಯೂ ಹೋಮಮಾಡಬೇಕು.

39 ಅವುಗಳಲ್ಲಿ ಒಂದನ್ನು ಪ್ರಾತಃಕಾಲದಲ್ಲಿ ಮತ್ತೊಂದನ್ನು ಸಾಯಂಕಾಲದಲ್ಲಿ ಸಮರ್ಪಿಸಬೇಕು.

40 ಒಂದುವರೆ ಸೇರು ಶ್ರೇಷ್ಠವಾದ ಎಣ್ಣೆಯನ್ನೂ ಮೂರು ಸೇರು ಗೋದಿಹಿಟ್ಟನ್ನೂ ಬೆರಸಿ ಧಾನ್ಯ ಸಮರ್ಪಣೆಗಾಗಿ ಆ ಮೊದಲನೆಯ ಕುರಿಯ ಸಂಗಡ ಹೋಮ ಮಾಡಬೇಕು. ಪಾನ ದ್ರವ್ಯಾರ್ಪಣೆಗಾಗಿ ಒಂದುವರೆ ಸೇರು ದ್ರಾಕ್ಷಾರಸವನ್ನು ಹೋಮಮಾಡಬೇಕು.

41 ಸಾಯಂಕಾಲದಲ್ಲಿ ಎರಡನೆಯ ಕುರಿಯನ್ನು ಹೋಮಮಾಡುವಾಗ ಹೊತ್ತಾರೆಯಲ್ಲಿ ಮಾಡಿದ ಪ್ರಕಾರವೇ ಅದರೊಂದಿಗೆ ಧಾನ್ಯವನ್ನೂ ಪಾನದ್ರವ್ಯವನ್ನೂ ಸಮರ್ಪಿಸಬೇಕು. ಅದು ಯೆಹೋವನಿಗೆ ಸುಗಂಧ ಹೋಮವಾಗಿರುವದು.

42 ಈ ಸರ್ವಾಂಗಹೋಮವನ್ನು ನೀವೂ ನಿಮ್ಮ ಸಂತತಿಯವರೂ ಪ್ರತಿನಿತ್ಯವೂ ಯೆಹೋವನ ಸನ್ನಿಧಿಯಲ್ಲಿ ದೇವದರ್ಶನದ ಗುಡಾರದ ಬಾಗಲಿನ ಎದುರಿನಲ್ಲಿ ಮಾಡಬೇಕು. ಆ ಗುಡಾರದಲ್ಲಿ ನಾನು ನಿಮಗೆ ದರ್ಶನವನ್ನು ಕೊಟ್ಟು ನಿನ್ನ ಸಂಗಡ ಮಾತಾಡುವೆನು;

43 ಅಲ್ಲಿಯೇ ನಾನು ಇಸ್ರಾಯೇಲ್ಯರಿಗೆ ದರ್ಶನವನ್ನು ಕೊಡುವೆನು; ಅಲ್ಲಿ ಕಾಣಿಸುವ ನನ್ನ ಪ್ರಭಾವದಿಂದ ಆ ಸ್ಥಳವು ಪರಿಶುದ್ಧವಾಗಿರುವದು.

44 ನಾನು ದೇವದರ್ಶನದ ಗುಡಾರವನ್ನೂ ಯಜ್ಞವೇದಿಯನ್ನೂ ಪರಿಶುದ್ಧ ಸ್ಥಳಗಳಾಗುವಂತೆ ಮಾಡುವೆನು; ಆರೋನನನ್ನೂ ಅವನ ಮಕ್ಕಳನ್ನೂ ನನಗೆ ಯಾಜಕರಾಗುವಂತೆ ಪ್ರತಿಷ್ಠಿಸಿಕೊಳ್ಳುವೆನು.

45 ನಾನು ಇಸ್ರಾಯೇಲ್ಯರ ಮಧ್ಯದಲ್ಲಿ ವಾಸವಾಗಿದ್ದು ಅವರಿಗೆ ದೇವರಾಗಿರುವೆನು.

46 ತಮ್ಮ ಮಧ್ಯದಲ್ಲಿ ವಾಸವಾಗುವದಕ್ಕಾಗಿಯೇ ತಮ್ಮನ್ನು ಐಗುಪ್ತದೇಶದಿಂದ ಹೊರಗೆ ಬರಮಾಡಿದ ತಮ್ಮ ದೇವರಾದ ಯೆಹೋವನು ನಾನೇ ಎಂದು ಅವರು ತಿಳುಕೊಳ್ಳುವರು. ನಾನು ಅವರ ದೇವರಾದ ಯೆಹೋವನೇ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು