ವಿಮೋಚನಕಾಂಡ 23 - ಕನ್ನಡ ಸತ್ಯವೇದವು J.V. (BSI)1 ಆಧಾರವಿಲ್ಲದ ಸುದ್ದಿಯನ್ನು ಹಬ್ಬಿಸಬಾರದು. ದುಷ್ಟರ ಸಹಾಯಕ್ಕಾಗಿ ನ್ಯಾಯವಿರುದ್ಧವಾದ ಸಾಕ್ಷಿಯನ್ನು ನುಡಿಯಬಾರದು. 2 ದುಷ್ಕಾರ್ಯವನ್ನು ಮಾಡುವವರು ಬಹು ಮಂದಿ ಆದಾಗ್ಯೂ ಅವರ ಜೊತೆಯಲ್ಲಿ ಸೇರಬಾರದು. ಬಹು ಮಂದಿಯ ಮಾತಿಗೆ ಒಪ್ಪಿ ನ್ಯಾಯವನ್ನು ಕೆಡಿಸುವ ಸಾಕ್ಷಿಯನ್ನು ಹೇಳಬಾರದು. 3 ಅದಲ್ಲದೆ ಬಡವನನ್ನು ಕರುಣಿಸಿ ಪಕ್ಷಪಾತದಿಂದ ತೀರ್ಮಾನ ಮಾಡಬಾರದು. 4 ನಿನ್ನ ವೈರಿಯ ಎತ್ತಾಗಲಿ ಕತ್ತೆಯಾಗಲಿ ತಪ್ಪಿಸಿಕೊಂಡು ಹೋಗಿರಲಾಗಿ ಅದು ನಿನಗೆ ಸಿಕ್ಕಿದರೆ ಅದನ್ನು ಅವನ ಬಳಿಗೆ ಹೊಡಕೊಂಡು ಹೋಗಿ ಒಪ್ಪಿಸಬೇಕು. 5 ನಿನ್ನ ಹಗೆಯವನ ಕತ್ತೆ ಹೊರೆಯ ಕೆಳಗೆ ಬಿದ್ದಿರುವದನ್ನು ಕಂಡರೆ ಅದನ್ನು ಎಬ್ಬಿಸುವದಕ್ಕೆ ಮನಸ್ಸಿಲ್ಲದೆ ಹೋದಾಗ್ಯೂ ಅವನಿಗೆ ಸಹಾಯಮಾಡಿ ಎಬ್ಬಿಸಲೇಬೇಕು. 6 ನಿಮ್ಮಲ್ಲಿರುವ ಬಡವರು ವ್ಯಾಜ್ಯವಾಡಿದಾಗ ನೀವು ನ್ಯಾಯವನ್ನು ಬಿಟ್ಟು ತೀರ್ಮಾನ ಮಾಡಬಾರದು. ಮೋಸದ ಕಾರ್ಯಕ್ಕೆ ದೂರವಾಗಿರಬೇಕು. 7 ನಿರಪರಾಧಿಯಾಗಿಯೂ ಸನ್ಮಾರ್ಗಸ್ಥನಾಗಿಯೂ ಇರುವ ಮನುಷ್ಯನಿಗೆ ಮರಣದಂಡನೆಯನ್ನು ವಿಧಿಸಲೇ ಬಾರದು; ಅಂಥ ದುಷ್ಟತ್ವವನ್ನು ಮಾಡಿದವನಿಗೆ ನಾನು ಶಿಕ್ಷೆಯನ್ನು ವಿಧಿಸದೆ ಬಿಡುವದಿಲ್ಲ. 8 ಲಂಚವನ್ನು ತೆಗೆದುಕೊಳ್ಳಬಾರದು; ಲಂಚವು ಕಣ್ಣುಳ್ಳವರನ್ನು ಕುರುಡರಂತೆ ಮಾಡುತ್ತದೆ, ನಿರಪರಾಧಿಯಾದವನ ನ್ಯಾಯವನ್ನು ಕೆಡಿಸುತ್ತದೆ. 9 ಪರದೇಶಸ್ಥರಿಗೆ ಉಪದ್ರವಕೊಡಬಾರದು. ನೀವೂ ಐಗುಪ್ತದೇಶದಲ್ಲಿ ಪರದೇಶಸ್ಥರಾಗಿದ್ದಿರಷ್ಟೆ; ಅಂಥವರ ಮನೋವ್ಯಥೆಯನ್ನು ತಿಳಿದೇ ಇರುತ್ತೀರಿ. 10 ಆರು ವರುಷ ನಿಮ್ಮ ಹೊಲದಲ್ಲಿ ಬೀಜಬಿತ್ತಿ ಅದರ ಬೆಳೆಯನ್ನು ತೆಗೆದುಕೊಂಡು ಏಳನೆಯ ವರುಷದಲ್ಲಿ ಆ ಭೂವಿುಯನ್ನು ಬೀಳುಬಿಡಬೇಕು. 11 ನಿಮ್ಮ ದೇಶದ ಬಡವರು ಅದರಲ್ಲಿ ಬೆಳೆಯುವದನ್ನು ತಿನ್ನಲಿ; ವಿುಕ್ಕದ್ದನ್ನು ಕಾಡುಮೃಗಗಳು ಮೇಯಲಿ. ನಿಮ್ಮ ದ್ರಾಕ್ಷೇತೋಟಗಳ ವಿಷಯದಲ್ಲಿಯೂ ಎಣ್ಣೇ ಮರಗಳ ತೋಪುಗಳ ವಿಷಯದಲ್ಲಿಯೂ ಅದೇ ರೀತಿಯಲ್ಲಿ ಮಾಡಬೇಕು. 12 ಆರು ದಿವಸಗಳು ನಿಮ್ಮ ಕೆಲಸವನ್ನು ನಡಿಸಿ ಏಳನೆಯ ದಿನದಲ್ಲಿ ಯಾವ ಕೆಲಸವನ್ನೂ ಮಾಡದೆ ಇರಬೇಕು. ಆ ಹೊತ್ತು ನಿಮ್ಮ ಎತ್ತುಗಳೂ ಕತ್ತೆಗಳೂ ದಾಸದಾಸಿಯರೂ ಪರದೇಶಸ್ಥರೂ ವಿಶ್ರವಿುಸಿಕೊಳ್ಳಲಿ. 13 ನಾನು ನಿಮಗೆ ಹೇಳಿದ್ದನ್ನೆಲ್ಲಾ ಜಾಗರೂಕತೆಯಾಗಿ ಕೈಕೊಳ್ಳಬೇಕು. ಬೇರೆ ಯಾವ ದೇವರ ಹೆಸರನ್ನು ಸ್ಮರಿಸಲೂ ಕೂಡದು; ಉಚ್ಚರಿಸಲೂ ಕೂಡದು. 14 ನೀವು ವರುಷಕ್ಕೆ ಮೂರಾವರ್ತಿ ನನಗೆ ಜಾತ್ರೆ ಮಾಡಬೇಕು. 15 ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಜಾತ್ರೆ ಒಂದು. ನಾನು ನಿಮಗೆ ಆಜ್ಞಾಪಿಸಿದಂತೆ ನೀವು ಚೈತ್ರಮಾಸದ ನೇಮಕವಾದ ಕಾಲದಲ್ಲಿ ಏಳು ದಿವಸವೂ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಆ ಮಾಸದಲ್ಲೇ ಐಗುಪ್ತದೇಶದಿಂದ ಹೊರಟುಬಂದಿರಲ್ಲಾ. ಒಬ್ಬನೂ ಕೈಯಲ್ಲಿ ಕಾಣಿಕೆಯಿಲ್ಲದೆ ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಕೂಡದು. 16 ಅದಲ್ಲದೆ ನೀವು ಬಿತ್ತಿದ ಹೊಲದಲ್ಲಿ ಪ್ರಥಮಫಲವು ದೊರೆತಾಗ ಸುಗ್ಗಿಯ ಜಾತ್ರೆಯನ್ನೂ ಹೊಲತೋಟಗಳ ಬೆಳೆಯನ್ನು ಕೂಡಿಸುವಾಗ ಅಂದರೆ ವರುಷದ ಕೊನೆಯಲ್ಲಿ ಫಲಸಂಗ್ರಹ ಜಾತ್ರೆಯನ್ನೂ ಆಚರಿಸಬೇಕು. 17 ವರುಷಕ್ಕೆ ಮೂರಾವರ್ತಿ ನಿಮ್ಮಲ್ಲಿರುವ ಗಂಡಸರೆಲ್ಲರು ಕರ್ತನಾದ ಯೆಹೋವನ ಸನ್ನಿಧಿಗೆ ಬರಬೇಕು. 18 ನನಗೆ ಯಜ್ಞವನ್ನು ಮಾಡುವಾಗ ಆ ಯಜ್ಞಪಶುವಿನ ರಕ್ತದೊಡನೆ ಹುಳಿಯಾದ ಹಿಟ್ಟನ್ನು ಸಮರ್ಪಿಸಬಾರದು. ನನ್ನ ಜಾತ್ರೆಯಲ್ಲಿ ನೀವು ನನಗೆ ಸಮರ್ಪಿಸಬೇಕಾದ ಪಶುವಿನ ವಪೆಯನ್ನು ಮಾರಣೆ ದಿನದವರೆಗೂ ಇಡಲೇಬಾರದು. 19 ನಿಮ್ಮ ಬೆಳೆಯ ಪ್ರಥಮಫಲದಲ್ಲಿ ಉತ್ಕೃಷ್ಟವಾದದ್ದನ್ನು ನಿಮ್ಮ ದೇವರಾದ ಯೆಹೋವನ ಮಂದಿರಕ್ಕೆ ತರಬೇಕು. ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು. 20 ಇಗೋ, ದಾರಿಯಲ್ಲಿ ನಿಮ್ಮನ್ನು ಕಾಪಾಡುವದಕ್ಕೂ ನಾನು ಗೊತ್ತುಮಾಡಿರುವ ಸ್ಧಳಕ್ಕೆ ಕರತರುವದಕ್ಕೂ ದೂತನನ್ನು ನಿಮ್ಮ ಮುಂದುಗಡೆಯಲ್ಲಿ ಕಳುಹಿಸುತ್ತೇನೆ. 21 ನೀವು ಆತನಲ್ಲಿ ಲಕ್ಷ್ಯವಿಟ್ಟು ಆತನ ಮಾತಿಗೆ ಕಿವಿಗೊಡಬೇಕು; ಆತನಿಗೆ ಅವಿಧೇಯರಾಗಿರಬಾರದು; ಅವಿಧೇಯರಾದರೆ ನಿಮ್ಮನ್ನು ಕ್ಷವಿುಸಲಾರನು; ನನ್ನ ನಾಮಮಹಿಮೆ ಆತನಲ್ಲಿ ಇರುವದು. 22 ನೀವು ಆತನ ಮಾತನ್ನು ಶ್ರದ್ಧೆಯಿಂದ ಲಾಲಿಸಿ ನನ್ನ ಆಜ್ಞೆಗಳನ್ನೆಲ್ಲಾ ನಡಿಸಿದರೆ ನಾನು ನಿಮ್ಮ ಶತ್ರುಗಳಿಗೆ ಶತ್ರುವಾಗಿಯೂ ನಿಮ್ಮನ್ನು ಪೀಡಿಸುವವರನ್ನು ಪೀಡಿಸುವವನಾಗಿಯೂ ಇರುವೆನು. 23 ನನ್ನ ದೂತನು ನಿಮ್ಮ ಮುಂದೆ ಮುಂದೆ ನಡೆದು ಅಮೋರಿಯರೂ ಹಿತ್ತಿಯರೂ ಪೆರಿಜೀಯರೂ ಕಾನಾನ್ಯರೂ ಹಿವ್ವಿಯರೂ ಯೆಬೂಸಿಯರೂ ಇರುವ ದೇಶಕ್ಕೆ ನಿಮ್ಮನ್ನು ಸೇರಿಸುವನು; ಅವರನ್ನಾದರೋ ನಾನು ನಿರ್ಮೂಲಮಾಡುವೆನು. 24 ಅವರ ದೇವತೆಗಳನ್ನು ನೀವು ನಮಸ್ಕರಿಸಲೂಬಾರದು, ಪೂಜಿಸಲೂಬಾರದು; ಅವರ ಆಚರಣೆಗಳನ್ನು ಅನುಸರಿಸಲೇಬಾರದು. ಆ ಜನಗಳನ್ನು ನಿರ್ಮೂಲ ಮಾಡಿ ವಿಗ್ರಹಸ್ತಂಭಗಳನ್ನು ನಾಶನ ಮಾಡಬೇಕು. 25 ನಿಮ್ಮ ದೇವರಾದ ಯೆಹೋವನೊಬ್ಬನನ್ನೇ ಆರಾಧಿಸಬೇಕು; ಆಗ ಆತನು ನಿಮ್ಮ ಅನ್ನಪಾನಗಳನ್ನು ಆಶೀರ್ವದಿಸುವನು. ನಿಮ್ಮೊಳಗೆ ಯಾವ ವ್ಯಾಧಿಯೂ ಉಂಟಾಗದಂತೆ ಮಾಡುವೆನು; 26 ನಿಮ್ಮ ದೇಶದಲ್ಲಿ ಗರ್ಭಸ್ರಾವವಾಗಲಿ ಬಂಜೇತನವಾಗಲಿ ಇರುವದೇ ಇಲ್ಲ; ನಿಮಗೆ ಸಂಪೂರ್ಣವಾದ ಆಯುಸ್ಸನ್ನು ಕೊಡುವೆನು. 27 ನೀವು ಹೋಗುವ ಎಲ್ಲಾ ಕಡೆಯಲ್ಲಿಯೂ ನಾನು ಜನಗಳ ಮನಸ್ಸಿನಲ್ಲಿ ಹೆದರಿಕೆಯನ್ನು ಹುಟ್ಟಿಸಿ ಕಳವಳವನ್ನು ಉಂಟು ಮಾಡಿ ನಿಮ್ಮನ್ನು ವಿರೋಧಿಸುವವರನ್ನು ಓಡಿಹೋಗುವಂತೆ ಮಾಡುವೆನು. 28 ಅದಲ್ಲದೆ ಕಡಜದ ಹುಳಗಳನ್ನು ನಿಮ್ಮ ಮುಂಚಿತವಾಗಿ ಕಳುಹಿಸುವೆನು; ಹಿವ್ವಿಯರೂ ಕಾನಾನ್ಯರೂ ಹಿತ್ತಿಯರೂ ನಿಮ್ಮ ಮುಂದೆ ನಿಲ್ಲದಂತೆ ಅವು ಅವರನ್ನು ಓಡಿಸಿಬಿಡುವವು. 29 ಆದರೆ ನಾನು ಒಂದೇ ವರುಷದೊಳಗೆ ಅವರೆಲ್ಲರನ್ನೂ ಅಲ್ಲಿಂದ ಹೊರಡಿಸುವದಿಲ್ಲ; ಯಾಕಂದರೆ ದೇಶದಲ್ಲಿ ಜನರು ಕಡಿಮೆಯಾಗುವದರಿಂದ ಕಾಡುಮೃಗಗಳು ಹೆಚ್ಚಿ ನಿಮಗೆ ತೊಂದರೆಗೆ ಕಾರಣವಾದೀತು. 30 ನೀವು ಅಭಿವೃದ್ಧಿಯಾಗಿ ದೇಶದಲ್ಲೆಲ್ಲಾ ತುಂಬಿಕೊಳ್ಳುವ ತನಕ ಅವರನ್ನು ಸ್ವಲ್ಪಸ್ವಲ್ಪವಾಗಿ ಹೊರಡಿಸುತ್ತಿರುವೆನು. 31 ಕೆಂಪುಸಮುದ್ರದಿಂದ ಫಿಲಿಷ್ಟಿಯರ ದೇಶದ ಬಳಿಯಲ್ಲಿರುವ ಸಮುದ್ರದವರೆಗೂ ಮತ್ತು ಈ ಅರಣ್ಯದಿಂದ ಯೂಫ್ರೇಟೀಸ್ ಮಹಾನದಿಯವರೆಗೂ ಇರುವ ದೇಶವನ್ನೆಲ್ಲಾ ನಿಮಗೆ ನೇವಿುಸಿ ಅದರಲ್ಲಿರುವ ನಿವಾಸಿಗಳನ್ನು ನಿಮಗೆ ಅಧೀನಪಡಿಸುವೆನು. ನೀವು ಅವರನ್ನು ಹೊರಡಿಸುವಿರಿ. 32 ನೀವು ಅವರೊಡನೆಯಾಗಲಿ ಅವರ ದೇವತೆಗಳೊಡನೆಯಾಗಲಿ ಯಾವ ವಿಧವಾದ ಒಡಂಬಡಿಕೆಯನ್ನೂ ಮಾಡಿಕೊಳ್ಳಬಾರದು. 33 ಅವರು ನಿಮ್ಮ ದೇಶದಲ್ಲೇ ವಾಸವಾಗಿರಬಾರದು; ವಾಸವಾಗಿದ್ದರೆ ನನಗೆ ವಿರೋಧವಾಗಿ ನಿಮ್ಮಲ್ಲಿ ದ್ರೋಹಬುದ್ಧಿಯನ್ನು ಹುಟ್ಟಿಸಾರು; ನೀವು ಅವರ ದೇವತೆಗಳನ್ನು ಪೂಜಿಸಿದರೆ ಆ ಪೂಜೆಯು ನಿಮಗೆ ಉರುಲಾಗುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India