Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 21 - ಕನ್ನಡ ಸತ್ಯವೇದವು J.V. (BSI)

1 ಮತ್ತು ನೀನು ಅವರಿಗೆ ನೇವಿುಸಬೇಕಾದ ನ್ಯಾಯವಿಧಿಗಳು ಯಾವವಂದರೆ -

2 ನಿಮ್ಮಲ್ಲಿ ಯಾವನಾದರೂ ಇಬ್ರಿಯನನ್ನು ದಾಸತ್ವಕ್ಕಾಗಿ ಕೊಂಡುಕೊಂಡರೆ ಆ ಇಬ್ರಿಯನು ಆರು ವರುಷ ದಾಸನಾಗಿದ್ದು ಏಳನೆಯ ವರುಷದಲ್ಲಿ ಏನೂ ಕೊಡದೆ ಬಿಡುಗಡೆಯಾಗಿ ಹೋಗಬೇಕು.

3 ಅವನು ಮದುವೆಯಿಲ್ಲದವನಾಗಿ ಬಂದಿದ್ದರೆ ಒಂಟಿಗನಾಗಿಯೇ ಹೊರಟುಹೋಗಬೇಕು. ಹೆಂಡತಿಯುಳ್ಳವನಾಗಿ ಬಂದಿದ್ದರೆ ಹೆಂಡತಿಯೂ ಅವನ ಜೊತೆಯಲ್ಲಿ ಹೋಗಬೇಕು.

4 ಅವನ ಯಜಮಾನನು ಅವನಿಗೆ ಮದುವೆಮಾಡಿಸಿದ ಪಕ್ಷದಲ್ಲಿ ಆ ಹೆಂಡತಿಯಲ್ಲಿ ಗಂಡು ಇಲ್ಲವೆ ಹೆಣ್ಣು ಮಕ್ಕಳು ಹುಟ್ಟಿದ್ದರೆ ಆ ಹೆಂಡತಿಯೂ ಅವಳ ಮಕ್ಕಳೂ ಯಜಮಾನನ ಸೊತ್ತಾಗುವರು; ದಾಸನು ಒಂಟಿಗನಾಗಿಯೇ ಹೊರಟುಹೋಗಬೇಕು.

5 ಆದರೆ ಆ ದಾಸನು - ನಾನು ನನ್ನ ಯಜಮಾನನನ್ನೂ ನನ್ನ ಹೆಂಡತಿ ಮಕ್ಕಳನ್ನೂ ಪ್ರೀತಿಸುತ್ತೇನಾದದರಿಂದ ಅವರನ್ನು ಅಗಲಿ ಬಿಡುಗಡೆಯಾಗಿ ಹೋಗಲೊಲ್ಲೆನೆಂದು ದೃಢವಾಗಿ ಹೇಳಿದರೆ

6 ಅವನ ಯಜಮಾನನು ದೇವರ ಬಳಿಗೆ ಅವನನ್ನು ಕರಕೊಂಡು ಬಂದು ಕದದ ಹತ್ತಿರ ಅಥವಾ ಬಾಗಲಿನ ನಿಲುವುಪಟ್ಟಿಗಳ ಹತ್ತಿರ ನಿಲ್ಲಿಸಿ ಅವನ ಕಿವಿಯನ್ನು ಸಲಾಕೆಯಿಂದ ಚುಚ್ಚಬೇಕು. ಆ ಹೊತ್ತಿನಿಂದ ಇವನು ಶಾಶ್ವತವಾಗಿ ಅವನಿಗೆ ದಾಸನಾಗಿರಬೇಕು.

7 ಯಾವನಾದರೂ ತನ್ನ ಮಗಳನ್ನು ದಾಸಿಯಾಗುವದಕ್ಕೆ ಮಾರಿದರೆ ಪುರುಷರಾದ ದಾಸರು ಬಿಡುಗಡೆಯಾಗಿ ಹೋಗುವ ಪ್ರಕಾರ ಅವಳು ಬಿಡುಗಡೆಯಾಗಿ ಹೋಗಕೂಡದು.

8 ಅವಳನ್ನು ಗೊತ್ತು ಮಾಡಿಕೊಂಡ ಯಜಮಾನನಿಗೆ ಅವಳಲ್ಲಿ ಇಷ್ಟವಿಲ್ಲದೆ ಹೋದರೆ ಬಿಡಿಸಿಕೊಳ್ಳಲಿಕ್ಕೆ ಅವಳಿಗೆ ಅನುಕೂಲಕೊಡಬೇಕು. ಅವನು ಕೊಟ್ಟ ಮಾತನ್ನು ತಪ್ಪಿದವನಾದದರಿಂದ ಅನ್ಯಜನರಿಗೆ ಅವಳನ್ನು ಮಾರುವದಕ್ಕೆ ಅವನಿಗೆ ಅಧಿಕಾರವಿಲ್ಲ.

9 ಅವನು ತನ್ನ ಮಗನಿಗೆ ಅವಳನ್ನು ಗೊತ್ತುಮಾಡಿಕೊಂಡರೆ ಸೊಸೆಯಂತೆ ಭಾವಿಸಬೇಕು.

10 ಯಜಮಾನನು ಇನ್ನೊಬ್ಬಳನ್ನು ಸೇರಿಸಿಕೊಂಡರೂ ಮೊದಲನೆಯವಳಿಗೆ ಅನ್ನವಸ್ತ್ರ ಸಹವಾಸಗಳನ್ನು ಕಡಿಮೆಮಾಡಕೂಡದು.

11 ಈ ಮೂರರಲ್ಲಿ ಯಾವದನ್ನೂ ನಡಿಸದೆ ಹೋದರೆ ಅವಳು ಏನೂ ಕೊಡದೆ ಬಿಡುಗಡೆಯಾಗಿ ಹೋಗಬಹುದು.

12 ಮನುಷ್ಯನನ್ನು ಹೊಡೆದು ಕೊಂದವನಿಗೆ ಮರಣ ಶಿಕ್ಷೆಯಾಗಬೇಕು.

13 ಆದರೆ ಕೊಲ್ಲಬೇಕೆಂಬ ಅಭಿಪ್ರಾಯವಿಲ್ಲದೆ ದೇವರ ಸಂಕಲ್ಪದಿಂದ ಹತ್ಯ ನಡೆದರೆ ಆ ಹತ್ಯ ಮಾಡಿದವನು ನಾನು ನೇವಿುಸುವ ಆಶ್ರಯಸ್ಥಳಕ್ಕೆ ಓಡಿಹೋಗಿ ಬದುಕಬಹುದು.

14 ಕೊಲ್ಲಬೇಕೆಂಬ ಉದ್ದೇಶದಿಂದಲೇ ಮತ್ತೊಬ್ಬನನ್ನು ಮೋಸದಿಂದ ಕೊಂದವನನ್ನು ನನ್ನ ಯಜ್ಞವೇದಿಯ ಬಳಿಯಿಂದಲೂ ಎಳೆದು ಅವನಿಗೆ ಮರಣಶಿಕ್ಷೆಯನ್ನು ಕೊಡಬೇಕು.

15 ತಂದೆಯನ್ನಾಗಲಿ ತಾಯಿಯನ್ನಾಗಲಿ ಹೊಡೆದವನಿಗೆ ಮರಣಶಿಕ್ಷೆಯಾಗಬೇಕು.

16 ಮನುಷ್ಯನನ್ನು ಕದ್ದವನಿಗೆ ಅವನನ್ನು ಮಾರಿದರೂ ತನ್ನಲ್ಲಿಯೇ ಇಟ್ಟುಕೊಂಡರೂ ಮರಣಶಿಕ್ಷೆಯಾಗಬೇಕು.

17 ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣಶಿಕ್ಷೆಯಾಗಬೇಕು.

18 ಇಬ್ಬರು ಜಗಳವಾಡುತ್ತಿರಲಾಗಿ ಒಬ್ಬನು ಮತ್ತೊಬ್ಬನನ್ನು ಕಲ್ಲಿನಿಂದಾಗಲಿ ಮುಷ್ಟಿಯಿಂದಾಗಲಿ ಹೊಡೆದದರಿಂದ ಗಾಯಪಟ್ಟವನು ಸಾಯದೆ ಕೆಲವು ಕಾಲ ಹಾಸಿಗೆಯಲ್ಲಿ ಬಿದ್ದುಕೊಂಡು ತರುವಾಯ ಎದ್ದು ಕೋಲೂರಿಕೊಂಡು ತಿರುಗಾಡಿದರೆ ಹೊಡೆದವನಿಗೆ ಶಿಕ್ಷೆಯನ್ನು ವಿಧಿಸಕೂಡದು;

19 ಆದರೂ ಆ ಮನುಷ್ಯನು ಕೆಲಸಮಾಡಲಾರದೆಹೋದ ಕಾಲಕ್ಕೆ ಅವನು ತಕ್ಕಷ್ಟು ಹಣಕೊಟ್ಟು ಅವನನ್ನು ಪೂರ್ಣವಾಗಿ ಸ್ವಸ್ಥಪಡಿಸಬೇಕು.

20 ಒಬ್ಬನು ತನ್ನ ದಾಸನನ್ನಾಗಲಿ ದಾಸಿಯನ್ನಾಗಲಿ ಕೋಲಿನಿಂದ ಹೊಡೆದು ಸಾಯುವಂತೆ ಮಾಡಿದರೆ ಅವನಿಗೆ ತಕ್ಕ ಶಿಕ್ಷೆ ಯಾಗಬೇಕು.

21 ಆ ದಾಸನು ಆಗಲೇ ಸಾಯದೆ ಒಂದೆರಡು ದಿವಸ ಉಳಿದರೆ ಯಜಮಾನನಿಗೆ ಶಿಕ್ಷೆಯನ್ನು ವಿಧಿಸಕೂಡದು; ಆ ದಾಸನು ಅವನ ಸೊತ್ತಷ್ಟೆ.

22 ಮನುಷ್ಯರು ಜಗಳವಾಡುತ್ತಿರಲಾಗಿ ಗರ್ಭಿಣಿಯಾದ ಹೆಂಗಸಿಗೆ ಏಟು ತಗಲಿದದರಿಂದ ಅವಳಿಗೆ ಗರ್ಭಸ್ರಾವವೇ ಹೊರತಾಗಿ ಬೇರೆ ಯಾವ ಹಾನಿಯೂ ಆಗದೆ ಹೋದರೆ ಹೆಂಗಸಿನ ಗಂಡನು ನ್ಯಾಯಾಧಿಪತಿಗಳ ಸಮ್ಮತಿಯಿಂದ ಎಷ್ಟು ಹಣವನ್ನು ಗೊತ್ತು ಮಾಡುತ್ತಾನೋ ಹೊಡೆದವನು ಅಷ್ಟನ್ನು ಕೊಡಬೇಕು.

23 ಬೇರೆ ಹಾನಿಯಾದ ಪಕ್ಷಕ್ಕೆ ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೊಡಿಸಬೇಕು.

24 ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು, ಬರೆಗೆ ಬರೆ, ಗಾಯಕ್ಕೆ ಗಾಯ, ಏಟಿಗೆ ಏಟು,

25 ಈ ಮೇರೆಗೆ ಪ್ರತಿದಂಡನೆಯಾಗಬೇಕು.

26 ಯಾವನಾದರೂ ತನ್ನ ದಾಸನ ಅಥವಾ ದಾಸಿಯ ಕಣ್ಣನ್ನು ಹೊಡೆದು ನಷ್ಟ ಪಡಿಸಿದರೆ ಆದಕ್ಕಾಗಿ ಆ ದಾಸನನ್ನು ಬಿಡುಗಡೆಯಾಗಿ ಹೋಗಗೊಡಿಸಬೇಕು.

27 ದಾಸನ ಅಥವಾ ದಾಸಿಯ ಹಲ್ಲನ್ನು ಉದುರಬಡಿದರೆ ಅದಕ್ಕಾಗಿ ಆ ದಾಸನನ್ನು ಬಿಡುಗಡೆಯಾಗಿ ಹೋಗಗೊಡಿಸಬೇಕು.

28 ಎತ್ತು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ಹಾದುಕೊಂದರೆ ಆ ಎತ್ತನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕು; ಅದರ ಮಾಂಸವನ್ನು ತಿನ್ನಕೂಡದು; ಆ ಎತ್ತಿನ ಒಡೆಯನೋ ನಿರ್ದೋಷಿ.

29 ಆದರೆ ಆ ಎತ್ತು ತತ್ಪೂರ್ವದಲ್ಲಿ ಹಾಯುವ ಸ್ವಭಾವದ್ದೆಂದು ಒಡೆಯನು ಎಚ್ಚರಿಕೆಯನ್ನು ಹೊಂದಿದಾಗ್ಯೂ ಅದನ್ನು ಕಟ್ಟಿಹಾಕದೆ ಹೋದದರಿಂದ ಅದು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ಸಾಯಿಸಿದ್ದಾದರೆ ಆ ಎತ್ತನ್ನು ಕಲ್ಲೆಸೆದು ಕೊಲ್ಲಬೇಕಲ್ಲದೆ ಒಡೆಯನೂ ಮರಣಶಿಕ್ಷೆಗೆ ಗುರಿಯಾಗುವನು.

30 ಆದರೆ ಆ ಒಡೆಯನು ತನ್ನ ಪ್ರಾಣವನ್ನು ಬಿಡಿಸಿಕೊಳ್ಳುವದಕ್ಕೆ ಹಣವನ್ನು ಈಡಾಗಿ ಕೊಡಬಹುದೆಂದು [ನ್ಯಾಯಾಧಿಪತಿಗಳು] ತೀರ್ಮಾನಿಸಿದರೆ ನೇಮಕವಾದ ಹಣವನ್ನು ಅವನು ಕೊಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳಬಹುದು.

31 ಆ ಎತ್ತಿನಿಂದ ತಿವಿಸಿಕೊಂಡು ಸತ್ತವನು ಹುಡುಗನಾದರೆ ಅಥವಾ ಹುಡುಗಿಯಾದರೆ ಇದೇ ರೀತಿಯಾಗಿ ನ್ಯಾಯಾಧಿಪತಿಗಳು ತೀರ್ಮಾನಿಸಬೇಕು.

32 ತಿವಿಸಿಕೊಂಡು ಸತ್ತವನು ದಾಸನು ಅಥವಾ ದಾಸಿಯು ಆಗಿದ್ದ ಪಕ್ಷಕ್ಕೆ ಅವರ ಯಜಮಾನನಿಗೆ ಮೂವತ್ತು ರೂಪಾಯಿ ಈಡುಕೊಡಿಸಬೇಕು, ಮತ್ತು ಆ ಎತ್ತನ್ನು ಕಲ್ಲೆಸೆದು ಕೊಲ್ಲಿಸಬೇಕು.

33 ಒಬ್ಬನು ಕುಣಿತೆಗೆದದರಿಂದ ಇಲ್ಲವೆ ಕುಣಿ ಅಗೆದು ಮುಚ್ಚದೆಹೋದದರಿಂದ ಮತ್ತೊಬ್ಬನ ಎತ್ತಾಗಲಿ ಕತ್ತೆಯಾಗಲಿ ಅದರಲ್ಲಿ ಬಿದ್ದು ಸತ್ತರೆ

34 ಆ ಕುಣಿ ಅಗೆಸಿದವನು ಉಂಟಾದ ನಷ್ಟಕ್ಕೆ ಪ್ರತಿಯಾಗಿ ಈಡುಕೊಡಬೇಕು. ಆ ದನದ ಒಡೆಯನಿಗೆ ಅದರ ಕ್ರಯವನ್ನು ಕೊಡಬೇಕು. ಸತ್ತ ದನವನ್ನು ತಾನೇ ತೆಗೆದುಕೊಳ್ಳಬಹುದು.

35 ಒಬ್ಬನ ಎತ್ತು ಮತ್ತೊಬ್ಬನ ಎತ್ತನ್ನು ಹಾದು ಕೊಂದರೆ ಜೀವದಿಂದಿರುವ ಎತ್ತನ್ನು ಮಾರಿ ಅದರ ಕ್ರಯವನ್ನು ಸಮವಾಗಿ ಹಂಚಬೇಕು. ಸತ್ತ ಎತ್ತನ್ನು ಸಮವಾಗಿ ಹಂಚಬೇಕು.

36 ಆದರೆ ಅದಕ್ಕೆ ಮುಂಚಿತವಾಗಿ ಆ ಎತ್ತು ಹಾಯುವಂಥದೇ ಎಂದು ತಿಳಿದಿದ್ದಾಗ್ಯೂ ಅದರ ಒಡೆಯನು ಅದನ್ನು ಕಟ್ಟಿಹಾಕದೆ ಹೋದದ್ದಾದರೆ ಅವನು ಎತ್ತಿಗೆ ಪ್ರತಿಯಾಗಿ ಎತ್ತನ್ನು ಕೊಡಬೇಕು; ಸತ್ತ ಎತ್ತನ್ನು ತಾನೇ ತೆಗೆದುಕೊಳ್ಳಬಹುದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು