Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 20 - ಕನ್ನಡ ಸತ್ಯವೇದವು J.V. (BSI)


ದಶಾಜ್ಞೆಗಳು

1 ದೇವರು ಮುಂದಣ ಆಜ್ಞೆಗಳನ್ನೆಲ್ಲಾ ಕೊಟ್ಟನು -

2 ನೀನು ದಾಸತ್ವದಲ್ಲಿದ್ದ ಐಗುಪ್ತದೇಶದೊಳಗಿಂದ ನಿನ್ನನ್ನು ಬಿಡುಗಡೆ ಮಾಡಿದ ಯೆಹೋವನು ಎಂಬ ನಿನ್ನ ದೇವರು ನಾನೇ.

3 ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು.

4 ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂವಿುಯಲ್ಲಾಗಲಿ ಭೂವಿುಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು.

5 ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜೆಮಾಡಲೂ ಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದವನಾದದರಿಂದ ನನ್ನನ್ನು ದ್ವೇಷಿಸುವವರ ವಿಷಯದಲ್ಲಿ ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನಾಗಿಯೂ

6 ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೋ ಸಾವಿರ ತಲೆಗಳವರೆಗೆ ದಯೆ ತೋರಿಸುವವನಾಗಿಯೂ ಇದ್ದೇನೆ.

7 ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಎತ್ತಬಾರದು. ಯೆಹೋವನು ತನ್ನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಎತ್ತುವವನನ್ನು ಶಿಕ್ಷಿಸದೆ ಬಿಡುವದಿಲ್ಲ.

8 ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಣೆಗೆ ತರುವದಕ್ಕೆ ಜ್ಞಾಪಕದಲ್ಲಿಟ್ಟುಕೊಳ್ಳಬೇಕು.

9 ಆರು ದಿವಸಗಳಲ್ಲಿ ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಬೇಕು.

10 ಏಳನೆಯ ದಿನವು ನಿನ್ನ ದೇವರಾದ ಯೆಹೋವನಿಗೆ ಮೀಸಲಾದ ವಿಶ್ರಾಂತಿ ದಿನವಾಗಿದೆ; ಅದರಲ್ಲಿ ನೀನು ಯಾವ ಕೆಲಸವನ್ನೂ ಮಾಡಬಾರದು. ನಿನ್ನ ಗಂಡು ಮಕ್ಕಳು ಹೆಣ್ಣು ಮಕ್ಕಳು ಗಂಡಾಳು ಹೆಣ್ಣಾಳು ಪಶುಗಳು ನಿನ್ನ ಊರಲ್ಲಿ ಇರುವ ಅನ್ಯದೇಶದವರು ಯಾವ ಕೆಲಸವನ್ನೂ ಮಾಡಬಾರದು.

11 ಆರು ದಿನಗಳಲ್ಲಿ ಯೆಹೋವನು ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಾಣಮಾಡಿ ಏಳನೆಯ ದಿನದಲ್ಲಿ ವಿಶ್ರವಿುಸಿಕೊಂಡನು. ಆದದರಿಂದ ಯೆಹೋವನು ಸಬ್ಬತ್ ದಿನವನ್ನು ತನ್ನ ದಿನವಾಗಿರಲಿ ಎಂದು ಆಶೀರ್ವದಿಸಿದನು.

12 ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಇರುವಿ.

13 ನರಹತ್ಯ ಮಾಡಬಾರದು.

14 ವ್ಯಭಿಚಾರ ಮಾಡಬಾರದು.

15 ಕದಿಯಬಾರದು.

16 ಮತ್ತೊಬ್ಬನ ಮೇಲೆ ಸುಳ್ಳುಸಾಕ್ಷಿ ಹೇಳಬಾರದು.

17 ಮತ್ತೊಬ್ಬನ ಮನೆಯನ್ನು ಆಶಿಸಬಾರದು; ಮತ್ತೊಬ್ಬನ ಹೆಂಡತಿ ಗಂಡಾಳು ಹೆಣ್ಣಾಳು ಎತ್ತು ಕತ್ತೆ ಮುಂತಾದ ಯಾವದನ್ನೂ ಆಶಿಸಬಾರದು.

18 ಆ ಗುಡುಗುವಿುಂಚುಗಳನ್ನೂ ತುತೂರಿ ಧ್ವನಿಯಾಗುತ್ತಿರುವದನ್ನೂ ಬೆಟ್ಟದಿಂದ ಹೊಗೆ ಹೊರಡುವದನ್ನೂ ಜನರೆಲ್ಲರು ನೋಡಿ ನಡುಗುತ್ತಾ ದೂರದಲ್ಲಿ ನಿಂತುಕೊಂಡರು.

19 ಅವರು ಮೋಶೆಗೆ - ನೀನೇ ನಮ್ಮ ಸಂಗಡ ಮಾತಾಡು; ನಾವು ಕೇಳುವೆವು. ದೇವರು ನಮ್ಮ ಸಂಗಡ ಮಾತಾಡಿದರೆ ನಾವು ಸತ್ತೇವು ಎಂದು ಹೇಳಿದರು.

20 ಅದಕ್ಕೆ ಮೋಶೆ - ಭಯಪಡಬೇಡಿರಿ. ದೇವರು ನಿಮ್ಮನ್ನು ಪರೀಕ್ಷಿಸಬೇಕೆಂತಲೂ ತನಗೆ ಭಯಪಟ್ಟು ನೀವು ಪಾಪವನ್ನು ಮಾಡದೆ ಇರಬೇಕೆಂತಲೂ ಬಂದಿದ್ದಾನೆ ಅಂದನು.

21 ಜನರು ದೂರದಲ್ಲಿ ನಿಂತಿದ್ದರು; ಮೋಶೆಯೋ ದೇವರಿರುವ ಆ ಕಾರ್ಗತ್ತಲಿನ ಸಮೀಪಕ್ಕೆ ಸೇರಿದನು.


ನಿಬಂಧನಗ್ರಂಥವೆಂಬ ಧರ್ಮಶಾಸ್ತ್ರವು

22 ಯೆಹೋವನು ಮೋಶೆಗೆ ಹೀಗಂದನು - ನೀನು ಇಸ್ರಾಯೇಲ್ಯರಿಗೆ ಹೇಳಬೇಕಾದದ್ದೇನಂದರೆ - ನಾನು ಆಕಾಶದಿಂದ ನಿಮ್ಮ ಸಂಗಡ ಮಾತಾಡಿದ್ದನ್ನು ನೋಡಿದ್ದೀರಷ್ಟೆ.

23 ಆದದರಿಂದ ನೀವು ಬೆಳ್ಳಿಬಂಗಾರಗಳಿಂದ ದೇವರುಗಳನ್ನು ಮಾಡಿಕೊಂಡು ನನ್ನ ಜೊತೆಯಲ್ಲಿ ಸೇರಿಸಕೂಡದು.

24 ನೀವು ನನ್ನ ಯಜ್ಞವೇದಿಯನ್ನು ಮಣ್ಣಿನಿಂದ ಮಾಡಬೇಕು. ನೀವು ಸರ್ವಾಂಗ ಹೋಮಮಾಡುವಾಗಲೂ ಸಮಾಧಾನ ಯಜ್ಞಮಾಡುವಾಗಲೂ ನಿಮ್ಮ ಕುರಿದನಗಳನ್ನು ಅಂಥ ವೇದಿಯಲ್ಲಿಯೇ ಸಮರ್ಪಿಸಬೇಕು. ನಾನು ನನ್ನ ಹೆಸರನ್ನು ನಿಮ್ಮ ನೆನಪಿಗೆ ಬರಮಾಡುವ ಎಲ್ಲಾ ಸ್ಥಳಗಳಲ್ಲಿಯೂ ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು.

25 ನೀವು ನನಗಾಗಿ ಕಲ್ಲಿನಿಂದ ಯಜ್ಞವೇದಿಯನ್ನು ಕಟ್ಟಬೇಕಾದರೆ ಕೆತ್ತಿರುವ ಕಲ್ಲುಗಳಿಂದ ಕಟ್ಟಕೂಡದು; ಅದಕ್ಕೆ ಉಳಿ ಮುಂತಾದದ್ದನ್ನು ಉಪಯೋಗಿಸಿದರೆ ಅದು ಅಪರಿಶುದ್ಧವಾಗುವದು.

26 ಅದಲ್ಲದೆ ನನ್ನ ಯಜ್ಞವೇದಿಯನ್ನು ಮೆಟ್ಲುಗಳಿಂದ ಏರಕೂಡದು; ಹಾಗೆ ಏರಿದರೆ ನಿಮ್ಮ ರಹಸ್ಯಾಂಗವು ಕಾಣಿಸೀತು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು