Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 2 - ಕನ್ನಡ ಸತ್ಯವೇದವು J.V. (BSI)


ಮೋಶೆಯ ಜನನವೂ ಬಾಲ್ಯವೂ

1 ಹೀಗಿರುವಲ್ಲಿ ಲೇವಿಯ ವಂಶಸ್ಥನಾದ ಒಬ್ಬ ಮನುಷ್ಯನು ಲೇವಿಯ ಕುಲದ ಕನ್ನಿಕೆಯನ್ನು ಮದುವೆ ಮಾಡಿಕೊಂಡನು.

2 ಆಕೆ ಗರ್ಭಿಣಿಯಾಗಿ ಗಂಡುಮಗುವನ್ನು ಹೆತ್ತು ಅದು ಚೆಲುವಾದ ಕೂಸೆಂದು ತಿಳಿದು ಮೂರು ತಿಂಗಳು ಬಚ್ಚಿಟ್ಟಳು.

3 ಆಕೆ ಅದನ್ನು ಇನ್ನು ಹೆಚ್ಚು ಕಾಲ ಮರೆಮಾಡಲಾರದೆ ಆಪಿನ ಪೆಟ್ಟಿಗೆಯನ್ನು ತೆಗೆದುಕೊಂಡು ಜೇಡಿಮಣ್ಣನ್ನೂ ರಾಳವನ್ನೂ ಹಚ್ಚಿ ಕೂಸನ್ನು ಅದರಲ್ಲಿ ಮಲಗಿಸಿ ನೈಲ್ ನದಿಯ ಅಂಚಿನಲ್ಲಿರುವ ಜಂಬುಹುಲ್ಲಿನಲ್ಲಿಟ್ಟಳು.

4 ಕೂಸಿಗೆ ಏನಾಗುವದೆಂದು ತಿಳುಕೊಳ್ಳುವದಕ್ಕೆ ಅದರ ಅಕ್ಕನು ಸ್ವಲ್ಪದೂರದಲ್ಲಿ ನಿಂತುಕೊಂಡಳು.

5 ಅಷ್ಟರಲ್ಲಿ ಫರೋಹನ ಕುಮಾರ್ತೆಯು ಸ್ನಾನಕ್ಕಾಗಿ ಆ ನದಿಯ ಬಳಿಗೆ ಇಳಿದು ಬಂದಳು; ಆಕೆಯ ಗೆಳತಿಯರು ನದಿಯ ದಡದಲ್ಲಿ ತಿರುಗಾಡುತ್ತಿದ್ದರು. ಆಕೆ ಜಂಬುಹುಲ್ಲಿನಲ್ಲಿ ಪೆಟ್ಟಿಗೆಯನ್ನು ಕಂಡು ದಾಸಿಯನ್ನು ಕಳುಹಿಸಿ ತರಿಸಿದಳು.

6 ಅದನ್ನು ತೆರೆದು ನೋಡುವಾಗ ಆಹಾ, ಅಳುವ ಕೂಸು. ಆಕೆ ಅದರ ಮೇಲೆ ಕನಿಕರಪಟ್ಟು - ಇದು ಇಬ್ರಿಯರ ಮಕ್ಕಳಲ್ಲಿ ಒಂದಾಗಿರಬಹುದೆಂದು ಹೇಳಿದಳು.

7 ಆಗಲೇ ಅದರ ಅಕ್ಕ ಬಂದು ಫರೋಹನ ಕುಮಾರ್ತೆಗೆ - ನಿನಗೋಸ್ಕರ ಈ ಕೂಸನ್ನು ಮೊಲೆಕೊಟ್ಟು ಸಾಕುವದಕ್ಕೆ ಇಬ್ರಿಯ ಸ್ತ್ರೀಯರಲ್ಲಿ ಒಬ್ಬ ದಾದಿಯನ್ನು ನಾನು ಕರೆದುಕೊಂಡು ಬರಲೋ ಎಂದು ಕೇಳಲು

8 ಫರೋಹನ ಕುಮಾರ್ತೆ- ಹಾಗೇ ಮಾಡು ಅಂದಳು. ಆ ಹುಡುಗಿ ಹೋಗಿ ಕೂಸಿನ ತಾಯಿಯನ್ನೇ ಕರತಂದಳು.

9 ಫರೋಹನ ಕುಮಾರ್ತೆ ಅವಳಿಗೆ - ನೀನು ಈ ಮಗುವನ್ನು ತೆಗೆದುಕೊಂಡು ಹೋಗಿ ನನಗೋಸ್ಕರ ಸಾಕಮ್ಮಾ; ನಾನೇ ನಿನಗೆ ಸಂಬಳವನ್ನು ಕೊಡುವೆನು ಎಂದು ಹೇಳಲಾಗಿ ಆ ಸ್ತ್ರೀಯು ಕೂಸನ್ನು ತೆಗೆದುಕೊಂಡು ಸಾಕಿದಳು.

10 ಆ ಹುಡುಗನು ಬೆಳೆದಾಗ ಅವನನ್ನು ಫರೋಹನ ಕುಮಾರ್ತೆಯ ಬಳಿಗೆ ತೆಗೆದುಕೊಂಡು ಬಂದಳು; ಅವನು ಆಕೆಗೆ ಮಗನಾದನು. ಇವನನ್ನು ನೀರಿನೊಳಗಿಂದ ಎಳೆದಿದ್ದೇನೆಂದು ಹೇಳಿ ಆಕೆ ಅವನಿಗೆ ಮೋಶೆ ಎಂದು ಹೆಸರಿಟ್ಟಳು.


ಮೋಶೆಯು ವಿುದ್ಯಾನ್‍ದೇಶಕ್ಕೆ ಓಡಿಹೋದದ್ದು

11 ಮೋಶೆ ದೊಡ್ಡವನಾದ ಮೇಲೆ ಸ್ವಜನರ ಬಳಿಗೆ ಹೋಗಿ ಇವರ ಬಿಟ್ಟೀಕೆಲಸಗಳನ್ನು ನೋಡುತ್ತಿದ್ದನು. ಒಂದು ದಿವಸ ಅವನು ತನ್ನ ಜನರಾದ ಇಬ್ರಿಯರೊಳಗೆ ಒಬ್ಬನನ್ನು ಐಗುಪ್ತ್ಯನೊಬ್ಬನು ಹೊಡೆಯುವದನ್ನು ಕಂಡು

12 ಮೋಶೆ ಅತ್ತಿತ್ತ ನೋಡಿ ಯಾರೂ ಇಲ್ಲವೆಂದು ತಿಳಿದು ಆ ಐಗುಪ್ತ್ಯನನ್ನು ಹೊಡೆದುಹಾಕಿ ಅವನ ಶವವನ್ನು ಮರಳಿನಲ್ಲಿ ಮುಚ್ಚಿಟ್ಟನು.

13 ಮರುದಿವಸ ಅವನು ಹೊರಟುಹೋಗಿ ನೋಡಿದಾಗ ಇಬ್ಬರು ಇಬ್ರಿಯರೇ ಜಗಳವಾಡುತ್ತಿದ್ದರು. ಅನ್ಯಾಯ ಮಾಡುತ್ತಿದ್ದವನಿಗೆ ಅವನು - ಏನಯ್ಯಾ, ನೀನು ಯಾಕೆ ಸ್ವಕುಲದವನನ್ನು ಹೊಡೆಯುತ್ತೀ ಎಂದು ಕೇಳಿದಾಗ

14 ಆ ಮನುಷ್ಯನು - ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಇಟ್ಟವರು ಯಾರು? ಆ ಐಗುಪ್ತ್ಯನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಂದುಹಾಕಬೇಕೆಂದಿದ್ದೀಯೋ ಅಂದನು. ಈ ಮಾತನ್ನು ಕೇಳಿ ಮೋಶೆ - ಆ ಕಾರ್ಯವು ಬೈಲಿಗೆ ಬಂತಲ್ಲಾ ಅಂದುಕೊಂಡು ಅಂಜಿದನು.

15 ನಡೆದ ಸಂಗತಿಯು ಫರೋಹನಿಗೆ ತಿಳಿದುಬಂದಾಗ ಅವನು ಮೋಶೆಯನ್ನು ಕೊಲ್ಲಿಸಬೇಕೆಂದು ಆಲೋಚಿಸಿದ್ದರಿಂದ ಮೋಶೆ ಫರೋಹನ ಬಳಿಯಿಂದ ಓಡಿಹೋಗಿ ವಿುದ್ಯಾನ್ ದೇಶವನ್ನು ಸೇರಿದನು.

16 ಅಲ್ಲಿ ಒಂದು ಬಾವಿಯ ಹತ್ತಿರ ಕೂತುಕೊಂಡಿರಲು ವಿುದ್ಯಾನ್ಯರ ಆಚಾರ್ಯನ ಏಳುಮಂದಿ ಹೆಣ್ಣುಮಕ್ಕಳು ಬಂದು ತಂದೆಯ ಕುರಿಗಳಿಗೆ ಕುಡಿಸುವದಕ್ಕೋಸ್ಕರ ನೀರು ಸೇದಿ ದೋಣಿಗಳಲ್ಲಿ ಹಾಕುತ್ತಿದ್ದರು.

17 ಕುರುಬರು ಬಂದು ಅವರನ್ನು ಬಾವಿಯ ಬಳಿಯಿಂದ ಓಡಿಸಲು ಮೋಶೆ ಅವರಿಗೆ ಸಹಾಯವಾಗಿ ಬಂದು ಅವರ ಕುರಿಗಳಿಗೆ ಕುಡಿಸಿದನು.

18 ತರುವಾಯ ಅವರು ತಮ್ಮ ತಂದೆಯಾದ ರೆಗೂವೇಲನ ಬಳಿಗೆ ಬಂದಾಗ ಅವನು - ನೀವು ಈ ಹೊತ್ತು ಬೇಗ ಬಂದಿರಿ, ಇದು ಹೇಗೆ ಎಂದು ಕೇಳಲಾಗಿ ಅವರು -

19 ಐಗುಪ್ತ್ಯನಾದ ಒಬ್ಬ ಮನುಷ್ಯನು ನಮ್ಮನ್ನು ಕುರುಬರ ಕೈಗೆ ತಪ್ಪಿಸಿದನು; ಇಷ್ಟು ಮಾತ್ರವಲ್ಲದೆ ಅವನು ನಮಗೋಸ್ಕರ ನೀರು ಸೇದಿ ಕುರಿಗಳಿಗೆ ಕುಡಿಸಿದನು ಅಂದರು.

20 ಅವರ ತಂದೆ ಅವರಿಗೆ - ಆ ಮನುಷ್ಯನೆಲ್ಲಿ? ಅವನನ್ನು ಯಾಕೆ ಬಿಟ್ಟು ಬಂದಿರಿ? ಊಟ ಮಾಡುವದಕ್ಕೆ ಕರೆಯಿರಿ ಎಂದು ಹೇಳಿದನು.

21 ಮೋಶೆಯು ಆ ಮನುಷ್ಯನ ಸಂಗಡ ವಾಸಮಾಡುವದಕ್ಕೆ ಒಪ್ಪಿಕೊಂಡನು. ಅವನು ತನ್ನ ಮಗಳಾದ ಚಿಪ್ಪೋರಳನ್ನು ಮೋಶೆಗೆ ಕೊಟ್ಟನು.

22 ಆಕೆ ಗಂಡು ಮಗುವನ್ನು ಹೆರಲು, ಮೋಶೆ - ನಾನು ಅನ್ಯದೇಶದಲ್ಲಿ ಪ್ರವಾಸಿಯಾಗಿದ್ದೇನೆ ಎಂದು ಹೇಳಿ ಅದಕ್ಕೆ ಗೇರ್ಷೋಮ್ ಎಂದು ಹೆಸರಿಟ್ಟನು.


ದೇವರು ಇಸ್ರಾಯೇಲ್ಯರನ್ನು ಬಿಡಿಸುವದಕ್ಕೆ ಮೋಶೆಯನ್ನು ನೇವಿುಸಿದ್ದು

23 ಈ ಮೇರೆಗೆ ಬಹಳ ದಿನಗಳು ಕಳೆದ ಮೇಲೆ ಐಗುಪ್ತ ದೇಶದ ಅರಸನು ಸತ್ತನು. ಇಸ್ರಾಯೇಲ್ಯರು ತಾವು ಮಾಡಬೇಕಾದ ಬಿಟ್ಟೀ ಕೆಲಸಕ್ಕಾಗಿ ನಿಟ್ಟುಸುರು ಬಿಟ್ಟು ಗೋಳಾಡುತ್ತಾ ಇದ್ದರು. ಆ ಗೋಳು ದೇವರಿಗೆ ಮುಟ್ಟಿತು.

24 ದೇವರು ಅವರ ನರಳಾಟವನ್ನು ಕೇಳಿ ತಾನು ಅಬ್ರಹಾಮ ಇಸಾಕ ಯಾಕೋಬರಿಗೆ ಮಾಡಿದ ವಾಗ್ದಾನವನ್ನು ನೆನಪಿಗೆ ತಂದುಕೊಂಡು

25 ಇಸ್ರಾಯೇಲ್ಯರನ್ನು ನೋಡಿ ಅವರಲ್ಲಿ ಲಕ್ಷ್ಯವಿಟ್ಟನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು