ವಿಮೋಚನಕಾಂಡ 18 - ಕನ್ನಡ ಸತ್ಯವೇದವು J.V. (BSI)ಮೋಶೆ ತನ್ನ ಮಾವನ ಆಲೋಚನೆಯಂತೆ ನ್ಯಾಯಾಧಿಪತಿಗಳನ್ನು ನೇವಿುಸಿದ್ದು 1 ದೇವರು ಮೋಶೆಗೂ ತನ್ನ ಜನರಾದ ಇಸ್ರಾಯೇಲ್ಯರಿಗೂ ಮಹೋಪಕಾರಗಳನ್ನು ಮಾಡಿದ್ದನ್ನೂ ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಕರತಂದದ್ದನ್ನೂ ವಿುದ್ಯಾನ್ಯರ ಆಚಾರ್ಯನೂ ಮೋಶೆಯ ಮಾವನೂ ಆಗಿದ್ದ ಇತ್ರೋವನು ಕೇಳಿದಾಗ 2 ಅವನು ತನ್ನ ಬಳಿಗೆ ಕಳುಹಿಸಲ್ಪಟ್ಟ ಮೋಶೆಯ ಹೆಂಡತಿಯಾದ ಚಿಪ್ಪೋರಳನ್ನೂ ಆಕೆಯ ಇಬ್ಬರು ಗಂಡು ಮಕ್ಕಳನ್ನೂ ಕರಕೊಂಡು ಬಂದನು. 3 ಮೋಶೆ - ನಾನು ಅನ್ಯದೇಶದ ಪ್ರವಾಸಿಯಾಗಿದ್ದೇನೆಂದು ಹೇಳಿ ತನ್ನ ಹಿರೀ ಮಗನಿಗೆ ಗೇರ್ಷೋಮೆಂದು ಹೆಸರಿಟ್ಟಿದ್ದನು; 4 ನನ್ನ ತಂದೆಯ ದೇವರು ನನಗೆ ಸಹಾಯಕನಾಗಿದ್ದು ನನ್ನನ್ನು ಫರೋಹನ ಕತ್ತಿಗೆ ತಪ್ಪಿಸಿ ಕಾಪಾಡಿದನು ಎಂದು ಹೇಳಿ ಕಿರೀ ಮಗನಿಗೆ ಎಲೀಯೆಜೆರ್ ಎಂದು ಹೆಸರಿಟ್ಟಿದ್ದನು. 5 ಮೋಶೆಯ ಮಾವನಾದ ಇತ್ರೋವನು ಮೋಶೆಯ ಮಕ್ಕಳನ್ನೂ ಹೆಂಡತಿಯನ್ನೂ ಕರೆದುಕೊಂಡು ಅರಣ್ಯದಲ್ಲಿ ದೇವರ ಬೆಟ್ಟದ ಹತ್ತಿರ ಇಳುಕೊಂಡಿದ್ದ ಮೋಶೆಯ ಬಳಿಗೆ ಬಂದನು. 6 ಅವನು ಮೋಶೆಗೆ - ನಿನ್ನ ಮಾವನಾದ ನಾನೂ ನಿನ್ನ ಹೆಂಡತಿಯೂ ಆಕೆಯ ಇಬ್ಬರು ಮಕ್ಕಳೂ ಬಂದಿದ್ದೇವೆಂದು ಹೇಳಿಕಳುಹಿಸಿದಾಗ 7 ಅವನು ತನ್ನ ಮಾವನನ್ನು ಎದುರುಗೊಳ್ಳುವದಕ್ಕೆ ಹೊರಟು ವಂದಿಸಿ ಮುದ್ದಿಟ್ಟನು. ಅವರು ಪರಸ್ಪರ ಯೋಗಕ್ಷೇಮವನ್ನು ವಿಚಾರಿಸಿದ ಮೇಲೆ ಡೇರೆಯೊಳಕ್ಕೆ ಬಂದರು. 8 ತರುವಾಯ ಮೋಶೆಯು - ಯೆಹೋವನು ಇಸ್ರಾಯೇಲ್ಯರಿಗೋಸ್ಕರ ಫರೋಹನಿಗೂ ಐಗುಪ್ತ್ಯರಿಗೂ ಮಾಡಿದ್ದೆಲ್ಲವನ್ನೂ ದಾರಿಯಲ್ಲಿ ತಮಗುಂಟಾದ ಎಲ್ಲಾ ಕಷ್ಟಗಳನ್ನೂ ಯೆಹೋವನು ಆ ಕಷ್ಟಗಳಿಂದ ತಪ್ಪಿಸಿದ್ದನ್ನೂ ಮಾವನಿಗೆ ವಿವರಿಸಲಾಗಿ 9 ಯೆಹೋವನು ಐಗುಪ್ತ್ಯರ ಕೈಯಿಂದ ಇಸ್ರಾಯೇಲ್ಯರನ್ನು ಬಿಡಿಸಿ ಅವರಿಗೆ ಇಷ್ಟೆಲ್ಲಾ ಉಪಕಾರವನ್ನು ಮಾಡಿದ್ದಕ್ಕಾಗಿ ಇತ್ರೋವನು ಸಂತೋಷಿಸಿ - 10 ಐಗುಪ್ತ್ಯರ ಕೈಯಿಂದಲೂ ಫರೋಹನ ಕೈಯಿಂದಲೂ ನಿಮ್ಮನ್ನು ಬಿಡುಗಡೆಮಾಡಿದ ಯೆಹೋವನಿಗೆ ಸ್ತೋತ್ರವಾಗಲಿ. 11 ಆತನು ತನ್ನ ಜನರನ್ನು ಅವರ ಕೈಯಿಂದ ಬಿಡಿಸಿ ಆ ಐಗುಪ್ತ್ಯರು ಯಾವ ವಿಷಯದಲ್ಲಿ ಗರ್ವಪಡುತ್ತಿದ್ದರೋ ಆ ವಿಷಯದಲ್ಲಿ ಅವರನ್ನು ತಗ್ಗಿಸಿದ್ದರಿಂದ ಯೆಹೋವನೇ ಎಲ್ಲಾ ದೇವರುಗಳಿಗಿಂತಲೂ ದೊಡ್ಡವನೆಂದು ಈಗ ತಿಳಿದುಕೊಂಡಿದ್ದೇನೆ ಅಂದನು. 12 ಅದಲ್ಲದೆ ಮೋಶೆಯ ಮಾವನಾದ ಇತ್ರೋವನು ದೇವರಿಗೆ ಸರ್ವಾಂಗಹೋಮ ಯಜ್ಞಗಳನ್ನು ಸಮರ್ಪಿಸಲಾಗಿ ಆರೋನನೂ ಇಸ್ರಾಯೇಲ್ಯರ ಹಿರಿಯರೆಲ್ಲರೂ ಅವನ ಸಂಗಡ ದೇವರ ಸನ್ನಿಧಿಯಲ್ಲಿ ಸಹಭೋಜನವನ್ನು ಮಾಡುವದಕ್ಕೆ ಬಂದರು. 13 ಮಾರಣೆದಿನ ಮೋಶೆ ಜನರಿಗೆ ನ್ಯಾಯತೀರಿಸುವದಕ್ಕಾಗಿ ಕೂತಿರಲು ಪ್ರಾತಃಕಾಲದಿಂದ ಸಾಯಂಕಾಲದವರೆಗೂ ಜನರು ಅವನ ಹತ್ತಿರ ನಿಂತಿದ್ದರು. 14 ಮೋಶೆಯು ಜನರಿಗೋಸ್ಕರ ಮಾಡಿದ್ದೆಲ್ಲವನ್ನೂ ಅವನ ಮಾವನು ನೋಡಿ ಅವನಿಗೆ - ನೀನು ಯಾತಕ್ಕೆ ಜನರಿಗೊಸ್ಕರ ಇಷ್ಟು ಪ್ರಯಾಸಪಡುತ್ತಿ? ಪ್ರಾತಃಕಾಲ ಮೊದಲುಗೊಂಡು ಸಾಯಂಕಾಲದವರೆಗೂ ಜನರು ನಿನ್ನ ಹತ್ತಿರ ನಿಲ್ಲುತ್ತಾರಲ್ಲಾ; 15 ಯಾತಕ್ಕೆ ನೀನೊಬ್ಬನೇ ನ್ಯಾಯತೀರಿಸುವದಕ್ಕೆ ಕೂತಿರುತ್ತಿ ಎಂದು ಕೇಳಲು ಮೋಶೆ ಅವನಿಗೆ - ದೇವರ ತೀರ್ಪನ್ನು ತಿಳುಕೊಳ್ಳುವದಕ್ಕಾಗಿ ಜನರು ನನ್ನ ಹತ್ತಿರ ಬರುತ್ತಾರೆ; 16 ಅವರೊಳಗೆ ವ್ಯಾಜ್ಯವೇನಾದರೂ ಉಂಟಾಗಿದ್ದರೆ ನನ್ನ ಬಳಿಗೆ ಬರುತ್ತಾರೆ; ನಾನು ವಿಚಾರಣೆಮಾಡಿ ಅವರಿಗೆ ನ್ಯಾಯತೀರಿಸಿ ದೇವರ ಆಜ್ಞಾವಿಧಿಗಳನ್ನು ಬೋಧಿಸುತ್ತೇನೆ ಎಂದು ಹೇಳಿದನು. 17 ಅದನ್ನು ಕೇಳಿ ಮೋಶೆಯ ಮಾವನು ಅವನಿಗೆ - ನೀನು ಮಾಡುವ ಕಾರ್ಯಕ್ರಮವು ಒಳ್ಳೇದಲ್ಲ. 18 ಈ ಕೆಲಸ ಬಹು ಕಷ್ಟವಾದದ್ದು; ನೀನೊಬ್ಬನೇ ಅದನ್ನು ನಡಿಸಲಾರಿ; ನೀನೂ ನಿನ್ನ ಸಂಗಡ ಇರುವ ಜನರೂ ನಿಶ್ಚಯವಾಗಿ ಬಳಲಿಹೋಗುವಿರಿ. 19 ನನ್ನ ಮಾತನ್ನು ಕೇಳು, ನಾನು ನಿನಗೆ ಒಂದು ಆಲೋಚನೆಯನ್ನು ಹೇಳುತ್ತೇನೆ; ಮತ್ತು ದೇವರು ನಿನ್ನ ಸಂಗಡ ಇರಲಿ. ನೀನು ಜನರಿಗೂ ದೇವರಿಗೂ ಮಧ್ಯಸ್ಥನಾಗಿದ್ದು ಜನರ ವ್ಯಾಜ್ಯಗಳನ್ನು ದೇವರ ಹತ್ತಿರಕ್ಕೆ ತರಬೇಕು; 20 ಮತ್ತು ನೀನು ದೇವರ ಆಜ್ಞಾವಿಧಿಗಳನ್ನು ಬೋಧಿಸಿ ಅವರು ನಡೆಯಬೇಕಾದ ಮಾರ್ಗವನ್ನೂ ಮಾಡಬೇಕಾದ ಕಾರ್ಯಗಳನ್ನೂ ಅವರಿಗೆ ತಿಳಿಯಪಡಿಸಬೇಕು. 21 ಆದರೆ ನೀನು ಸಮಸ್ತ ಜನರೊಳಗೆ ಸಮರ್ಥರೂ ದೇವಭಕ್ತರೂ ನಂಬಿಗಸ್ತರೂ ಲಂಚಮುಟ್ಟದವರೂ ಆಗಿರುವ ಪುರುಷರನ್ನು ಆರಿಸಿಕೊಂಡು ಅವರನ್ನು ಸಾವಿರ ಮಂದಿಯ ಮೇಲೆಯೂ ನೂರು ಮಂದಿಯ ಮೇಲೆಯೂ ಐವತ್ತು ಮಂದಿಯ ಮೇಲೆಯೂ ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇವಿುಸಬೇಕು. 22 ಅವರೇ ಯಾವಾಗಲೂ ಜನರಿಗೆ ನ್ಯಾಯವನ್ನು ತೀರಿಸಲಿ. ಅವರು ದೊಡ್ಡ ವ್ಯಾಜ್ಯಗಳನ್ನು ನಿನ್ನ ಮುಂದೆ ತರಲಿ; ಸಣ್ಣ ವ್ಯಾಜ್ಯಗಳನ್ನೆಲ್ಲಾ ತಾವೇ ತೀರಿಸಲಿ. ಅವರು ನಿನ್ನೊಂದಿಗೆ ಈ ಭಾರವನ್ನು ಹೊರುವದರಿಂದ ನಿನಗೆ ಸುಲಭವಾಗಿರುವದು. 23 ದೇವರು ಹೀಗೆ ಮಾಡುವದಕ್ಕೆ ನಿನಗೆ ಅಪ್ಪಣೆ ಕೊಡುವದಾದರೆ ನೀನು ಈ ಕೆಲಸದ ಭಾರವನ್ನು ನಿರ್ವಹಿಸಲಾಗುವದು; ಇದು ಮಾತ್ರವಲ್ಲದೆ ಈ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಸಂತೋಷವಾಗಿ ಹೋಗುವರು ಎಂದು ಹೇಳಿದನು. 24 ಮೋಶೆ ತನ್ನ ಮಾವನ ಮಾತಿಗೆ ಒಪ್ಪಿಕೊಂಡು ಅವನು ಹೇಳಿದಂತೆಯೇ ಮಾಡಿದನು. 25 ಅವನು ಇಸ್ರಾಯೇಲ್ಯರೆಲ್ಲರಲ್ಲಿ ಸಮರ್ಥರಾದವರನ್ನು ಆರಿಸಿಕೊಂಡು ಸಾವಿರ ಮಂದಿಯ ಮೇಲೆಯೂ ನೂರು ಮಂದಿಯ ಮೇಲೆಯೂ ಐವತ್ತು ಮಂದಿಯ ಮೇಲೆಯೂ ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇವಿುಸಿದನು. 26 ಇವರು ಯಾವಾಗಲೂ ಜನರಿಗೆ ನ್ಯಾಯತೀರಿಸುವವರಾಗಿ ಕಠಿಣವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಾ ಸುಲಭ ವ್ಯಾಜ್ಯಗಳನ್ನು ತಾವೇ ತೀರಿಸುತ್ತಾ ಬಂದರು. 27 ತರುವಾಯ ಮೋಶೆ ತನ್ನ ಮಾವನಿಗೆ ಅಪ್ಪಣೆ ಕೊಡಲಾಗಿ ಅವನು ಸ್ವದೇಶಕ್ಕೆ ಹೊರಟುಹೋದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India