Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 16 - ಕನ್ನಡ ಸತ್ಯವೇದವು J.V. (BSI)


ದೇವರು ಇಸ್ರಾಯೇಲ್ಯರಿಗೆ ಅರಣ್ಯದಲ್ಲಿ ಲಾವಕ್ಕಿಗಳನ್ನೂ ಮನ್ನವನ್ನೂ ಕೊಟ್ಟದ್ದು

1 ಇಸ್ರಾಯೇಲ್ಯರ ಸಮೂಹವೆಲ್ಲಾ ಏಲೀವಿುನಿಂದ ಹೊರಟ ಮೇಲೆ ಅವರು ಐಗುಪ್ತದೇಶವನ್ನು ಬಿಟ್ಟ ಎರಡನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಏಲೀವಿುಗೂ ಸೀನಾಯಿ ಬೆಟ್ಟಕ್ಕೂ ನಡುವೆಯಿರುವ ಸೀನೆಂಬ ಅರಣ್ಯಕ್ಕೆ ಬಂದರು.

2 ಅರಣ್ಯದಲ್ಲಿ ಇಸ್ರಾಯೇಲ್ಯರ ಸಮೂಹವೆಲ್ಲಾ ಮೋಶೆ ಆರೋನರ ಮೇಲೆ ಗುಣುಗುಟ್ಟಿ

3 ಅವರಿಗೆ - ಈ ಸಮೂಹವನ್ನೆಲ್ಲ ಹಸಿವೆಯಿಂದ ಸಾಯಿಸಬೇಕೆಂದು ನೀವು ಈ ಅರಣ್ಯದೊಳಕ್ಕೆ ನಮ್ಮನ್ನು ಕರಕೊಂಡು ಬಂದಿರಷ್ಟೆ. ನಾವು ಐಗುಪ್ತದೇಶದಲ್ಲಿದ್ದಾಗ ಯೆಹೋವನ ಕೈಯಿಂದ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು; ಆಗ ಮಾಂಸಪಾತ್ರೆಗಳ ಬಳಿಯಲ್ಲಿ ಕೂತು ಹೊಟ್ಟೇತುಂಬ ಊಟಮಾಡುತ್ತಿದ್ದೆವಲ್ಲಾ ಎಂದು ಹೇಳಿದರು.

4 ಆಗ ಯೆಹೋವನು ಮೋಶೆಗೆ - ಇಗೋ ನಾನು ಆಕಾಶದಿಂದ ನಿಮಗೋಸ್ಕರ ಆಹಾರವನ್ನು ಸುರಿಸುವೆನು. ಈ ಜನರು ಪ್ರತಿದಿನವೂ ಹೊರಗೆ ಹೋಗಿ ಆಯಾ ದಿನಕ್ಕೆ ಬೇಕಾದಷ್ಟು ಮಾತ್ರ ಕೂಡಿಸಿಕೊಳ್ಳಬೇಕು. ಇದರಿಂದ ಇವರು ನನ್ನ ಬೋಧನೆಯನ್ನು ಅನುಸರಿಸಿ ನಡೆಯುವವರೋ ಅಲ್ಲವೋ ಎಂದು ಪರೀಕ್ಷಿಸಿ ತಿಳಿಯುತ್ತೇನೆ.

5 ಆರನೆಯ ದಿನದಲ್ಲಿ ಮಾತ್ರ ಅವರು ತಂದದ್ದನ್ನು ಸಿದ್ಧಪಡಿಸಿಕೊಳ್ಳುವಾಗ ಅದು ಪ್ರತಿದಿನ ಕೂಡಿಸಿಕೊಂಡದ್ದಕ್ಕಿಂತಲೂ ಎರಡರಷ್ಟಾಗಿರುವದು ಎಂದು ಹೇಳಿದನು.

6 ಮೋಶೆ ಆರೋನರು ಇಸ್ರಾಯೇಲ್ಯರೆಲ್ಲರಿಗೆ - ನಿಮ್ಮನ್ನು ಐಗುಪ್ತದೇಶದಿಂದ ಬಿಡಿಸಿದವನು ಯೆಹೋವನೇ ಎಂಬದು ಸಾಯಂಕಾಲದಲ್ಲಿ ನಿಮಗೆ ಗೊತ್ತಾಗುವದು;

7 ಹೊತ್ತಾರೆಯಲ್ಲಿಯೂ ಆತನ ಮಹಿಮೆಯು ನಿಮಗೆ ಕಾಣಬರುವದು. ನೀವು ಯೆಹೋವನ ಮೇಲೆ ಗುಣುಗುಟ್ಟುವ ಮಾತುಗಳು ಆತನಿಗೆ ಕೇಳಿಸಿದವು; ನಮ್ಮ ಮೇಲೆ ನೀವು ಗುಣುಗುಟ್ಟುವದೇನು? ನಾವು ಎಷ್ಟು ಮಾತ್ರದವರು ಎಂದು ಹೇಳಿದರು.

8 ಮೋಶೆ - ಯೆಹೋವನು ಸಾಯಂಕಾಲದ ಹೊತ್ತಿನಲ್ಲಿ ನಿಮಗೆ ಮಾಂಸಾಹಾರವನ್ನೂ ಹೊತ್ತಾರೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನೂ ಕೊಡುವನು. ನೀವು ಗುಣುಗುಟ್ಟುವ ಮಾತುಗಳು ಯೆಹೋವನಿಗೆ ಕೇಳಿಸಿದವು; ಆ ಗುಣುಗುಟ್ಟುವಿಕೆ ಯೆಹೋವನಿಗೇ ಹೊರತು ನಮಗಲ್ಲ; ನಾವು ಎಷ್ಟು ಮಾತ್ರದವರು ಎಂದನು.

9 ಮತ್ತು ಮೋಶೆಯು ಆರೋನನಿಗೆ - ನೀನು ಇಸ್ರಾಯೇಲ್ಯರ ಸಮೂಹದ ಬಳಿಗೆ ಹೋಗಿ ಅವರಿಗೆ - ಯೆಹೋವನು ನಿಮ್ಮ ಗುಣುಗುಟ್ಟುವಿಕೆಯನ್ನು ಕೇಳಿದ್ದಾನಾದದರಿಂದ ನೀವೆಲ್ಲರೂ ಆತನ ಸನ್ನಿಧಿಗೆ ಕೂಡಿ ಬರಬೇಕೆಂದು ಆಜ್ಞಾಪಿಸು ಎಂದು ಹೇಳಿದನು.

10 ಆರೋನನು ಇಸ್ರಾಯೇಲ್ಯರ ಸಮೂಹಕ್ಕೆಲ್ಲಾ ಈ ಮಾತುಗಳನ್ನು ತಿಳಿಸುತ್ತಿರುವಾಗ ಅವರು ಅರಣ್ಯದ ಕಡೆಗೆ ನೋಡಲಾಗಿ ಮೇಘದಲ್ಲಿ ಯೆಹೋವನ ತೇಜಸ್ಸು ಅವರಿಗೆ ಕಾಣಿಸಿತು.

11 ಯೆಹೋವನು ಮೋಶೆಯ ಸಂಗಡ ಮಾತಾಡಿ ಹೇಳಿದ್ದೇನಂದರೆ -

12 ಇಸ್ರಾಯೇಲ್ಯರ ಗುಣುಗುಟ್ಟುವಿಕೆಯು ನನಗೆ ಕೇಳಿಸಿತು. ನೀನು ಅವರಿಗೆ - ಸಾಯಂಕಾಲದಲ್ಲಿ ಮಾಂಸವನ್ನೂ ಹೊತ್ತಾರೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನೂ ತಿನ್ನುವಿರಿ; ಇದರಿಂದ ನಾನು ನಿಮ್ಮ ದೇವರಾದ ಯೆಹೋವನೆಂಬದು ನಿಮಗೆ ಗೊತ್ತಾಗುವದೆಂದು ಹೇಳಬೇಕು ಎಂಬದೇ.

13 ಸಾಯಂಕಾಲವಾಗುತ್ತಲೇ ಲಾವಕ್ಕಿಗಳು ಬಂದು ಅವರ ಪಾಳೆಯವನ್ನು ಮುಚ್ಚಿಕೊಂಡವು. ಅದಲ್ಲದೆ ಹೊತ್ತಾರೆಯಲ್ಲಿ ಮಂಜು ಪಾಳೆಯದ ಸುತ್ತಲೂ ಬಿದ್ದಿತು;

14 ಆ ಮಂಜು ಆರಿಹೋದನಂತರ ಅರಣ್ಯದ ನೆಲದಲ್ಲಿ ಮಂಜಿನ ಹನಿಗಳಂತೆ ಏನೋ ಸಣ್ಣಸಣ್ಣ ರವೆಗಳು ಕಾಣಿಸಿದವು.

15 ಇಸ್ರಾಯೇಲ್ಯರು ಅದನ್ನು ಕಂಡು ಇಂಥದೆಂದು ತಿಳಿಯದೆ ಒಬ್ಬರಿಗೊಬ್ಬರು ಇದೇನಿರಬಹುದು ಎಂದು ಹೇಳಿಕೊಂಡರು. ಮೋಶೆ ಅವರಿಗೆ - ಇದು ಯೆಹೋವನು ನಿಮಗೋಸ್ಕರ ಕೊಟ್ಟ ಆಹಾರವು; ಯೆಹೋವನು ಇದರ ವಿಷಯದಲ್ಲಿ ಆಜ್ಞಾಪಿಸಿದ್ದೇನಂದರೆ -

16 ಪ್ರತಿಯೊಬ್ಬನು ತನ್ನ ಕುಟುಂಬದವರ ಸಂಖ್ಯಾನುಸಾರ ತಲೆಗೆ ಒಂದು ಗೋಮೆರಿನ ಮೇರೆಗೆ ತನ್ನ ಡೇರೆಯವರಿಗೋಸ್ಕರ ಕೂಡಿಸಿಕೊಳ್ಳಲಿ; ಒಬ್ಬೊಬ್ಬನು ಅಷ್ಟೇ ಸರಾಸರಿಯಾಗಿ ತಿನ್ನುವದುಂಟಲ್ಲವೇ ಎಂದು ಹೇಳಿದನು.

17 ಇಸ್ರಾಯೇಲ್ಯರು ಹಾಗೆಯೇ ಮಾಡಿ ಕೆಲವರು ಹೆಚ್ಚಾಗಿ ಕೆಲವರು ಕಡಿಮೆಯಾಗಿ ಕೂಡಿಸಿಕೊಂಡು ಗೋಮೆರಿನಿಂದ ಅಳತೆ ಮಾಡಿದರು.

18 ಬಹಳ ಕೂಡಿಸಿದವನಿಗೆ ಏನೂ ಹೆಚ್ಚಾಗಲಿಲ್ಲ, ಸ್ವಲ್ಪವಾಗಿ ಕೂಡಿಸಿದವನಿಗೆ ಏನೂ ಕಡಿಮೆಯಾಗಲಿಲ್ಲ; ಪ್ರತಿಯೊಬ್ಬನು ತನ್ನ ಭೋಜನಕ್ಕೆ ಸರಿಯಾಗಿಯೇ ಕೂಡಿಸಿಕೊಂಡಿದ್ದನು.

19 ಅದಲ್ಲದೆ ಮೋಶೆ ಅವರಿಗೆ - ಯಾರೂ ಇದನ್ನು ಮಾರಣೆ ದಿನದ ತನಕ ಇಟ್ಟುಕೊಳ್ಳಕೂಡದು ಎಂದು ಹೇಳಿದನು.

20 ಆದಾಗ್ಯೂ ಅವರಲ್ಲಿ ಕೆಲವರು ಮೋಶೆಯ ಮಾತನ್ನು ಕೇಳದೆ ಅದರಲ್ಲಿ ಸ್ವಲ್ಪವನ್ನು ಮರುದಿವಸದ ತನಕ ಇಟ್ಟುಕೊಂಡಾಗ ಅದು ಹುಳಬಿದ್ದು ನಾತಹಿಡಿದು ಕೆಟ್ಟುಹೋಯಿತು. ಅದಕ್ಕೆ ಮೋಶೆ ಅವರ ಮೇಲೆ ಸಿಟ್ಟುಗೊಂಡನು.

21 ಜನರು ದಿನದಿನಕ್ಕೆ ಹೊತ್ತಾರೆಯಲ್ಲಿ ತಮ್ಮತಮ್ಮ ಭೋಜನಕ್ಕೆ ತಕ್ಕಷ್ಟು ಕೂಡಿಸಿಕೊಂಡರು. ಬಿಸಿಲು ಹೆಚ್ಚಿದಾಗ ಅದು ಕರಗಿಹೋಯಿತು.

22 ಆರನೆಯ ದಿನ ಕೂಡಿಸಿಕೊಳ್ಳುವಲ್ಲಿ ಎರಡರಷ್ಟು ಆಹಾರವು ಅಂದರೆ ಒಬ್ಬೊಬ್ಬನಿಗೆ ಎರಡೆರಡು ಗೋಮೆರಿನ ಮೇರೆಗೆ ದೊರೆತದ್ದರಿಂದ ಸಮೂಹದ ಅಧಿಕಾರಿಗಳೆಲ್ಲರು ಮೋಶೆಯ ಬಳಿಗೆ ಬಂದು ಈ ಸಂಗತಿಯನ್ನು ತಿಳಿಸಿದರು.

23 ಅದಕ್ಕೆ ಅವನು - ಇದು ಯೆಹೋವನು ಹೇಳಿದ ಮಾತು; ನಾಳೆ ವಿರಾಮಮಾಡಿಕೊಳ್ಳತಕ್ಕ ಯೆಹೋವನ ಪರಿಶುದ್ಧ ಸಬ್ಬತ್ ದಿನವಾಗಿದೆ. [ಈ ಹೊತ್ತಿಗೆ] ಸುಡಬೇಕಾದದ್ದನ್ನು ಸುಟ್ಟು ಬೇಯಿಸಬೇಕಾದದ್ದನ್ನು ಬೇಯಿಸಿದ ನಂತರ ವಿುಕ್ಕದ್ದನ್ನು ನಾಳೆಯ ತನಕ ಇಟ್ಟುಕೊಳ್ಳಿರಿ ಅಂದನು.

24 ಮೋಶೆ ಆಜ್ಞಾಪಿಸಿದಂತೆ ಅವರು ಮರುದಿನದ ತನಕ ಅದನ್ನು ಇಟ್ಟುಕೊಂಡರು; ಅದು ನಾರಲಿಲ್ಲ, ಹುಳವೂ ಬೀಳಲಿಲ್ಲ.

25 ಆಗ ಮೋಶೆ ಅವರಿಗೆ - ಈ ಹೊತ್ತು ಅದನ್ನು ಊಟ ಮಾಡಿರಿ; ಈ ದಿನವು ಯೆಹೋವನ ಸಬ್ಬತ್ ದಿನವಾದದರಿಂದ ಈ ಹೊತ್ತು ಅದು ಅಡವಿಯಲ್ಲಿ ದೊರೆಯುವದಿಲ್ಲ.

26 ಆರು ದಿವಸ ಅದನ್ನು ಕೂಡಿಸಬಹುದು; ಏಳನೆಯ ದಿನ ಸಬ್ಬತಾದದರಿಂದ ಅದು ದೊರೆಯುವದೇ ಇಲ್ಲ ಎಂದು ಹೇಳಿದನು. ಹಾಗೆಯೇ ಆಯಿತು.

27 ಜನರಲ್ಲಿ ಕೆಲವರು ಏಳನೆಯ ದಿನದಲ್ಲಿ ಅದನ್ನು ಕೂಡಿಸಿಕೊಳ್ಳುವದಕ್ಕೆ ಹೋದಾಗ ಅವರಿಗೆ ಏನೂ ಸಿಕ್ಕಲಿಲ್ಲ.

28 ಆಗ ಯೆಹೋವನು ಮೋಶೆಗೆ - ನೀವು ಎಲ್ಲಿಯವರೆಗೂ ನನ್ನ ಆಜ್ಞೆಯನ್ನೂ ನಾನು ಮಾಡಿರುವ ನಿಯಮವನ್ನೂ ಅನುಸರಿಸದೆ ಅಲಕ್ಷ್ಯ ಮಾಡುವಿರೋ;

29 ನೋಡಿರಿ, ನೀವು ಸಬ್ಬತ್ ದಿನವನ್ನು ಆಚರಿಸಬೇಕೆಂದು ನಾನು ಅಪ್ಪಣೆ ಮಾಡಿರುವದರಿಂದಲೇ ಆರನೆಯ ದಿನದಲ್ಲಿ ಎರಡು ದಿನದ ಆಹಾರವು ನಿಮಗೆ ದೊರಕುವಂತೆ ಅನುಗ್ರಹಿಸಿದ್ದೇನೆ. ನಿಮ್ಮಲ್ಲಿ ಪ್ರತಿಯೊಬ್ಬನು ತಾನಿರುವಲ್ಲಿಯೇ ಇರಬೇಕು; ಏಳನೆಯ ದಿನದಲ್ಲಿ ಒಬ್ಬನೂ ತನ್ನ ಸ್ಥಳವನ್ನು ಬಿಟ್ಟು ಹೊರಗೆ ಹೋಗಕೂಡದು ಎಂದು ಹೇಳಿದನು.

30 ಆದದರಿಂದ ಏಳನೆಯ ದಿನದಲ್ಲಿ ಜನರು ಕೆಲಸವನ್ನು ಮಾಡದೆ ಇದ್ದರು.

31 ಇಸ್ರಾಯೇಲ್ಯರು ಆ ಆಹಾರಕ್ಕೆ ಮನ್ನ ಎಂದು ಹೆಸರಿಟ್ಟರು. ಅದು ಬಿಳೀ ಕೊತ್ತುಂಬರಿ ಕಾಳಿನಂತಿದ್ದು ರುಚಿಯಲ್ಲಿ ಜೇನುತುಪ್ಪ ಕಲಸಿದ ದೋಸೆಗಳ ಹಾಗಿತ್ತು.

32 ಮೋಶೆಯು ಜನರಿಗೆ - ಯೆಹೋವನು ಇದರ ವಿಷಯದಲ್ಲಿ ಆಜ್ಞಾಪಿಸಿದ್ದೇನಂದರೆ - ನಾನು ಐಗುಪ್ತದೇಶದಿಂದ ನಿಮ್ಮನ್ನು ಹೊರಗೆ ಬರಮಾಡಿದಾಗ ಅರಣ್ಯದಲ್ಲಿ ತಿನ್ನುವದಕ್ಕೆ ಕೊಟ್ಟ ಆಹಾರವನ್ನು ನಿಮ್ಮ ಸಂತಾನದವರು ನೋಡುವ ಹಾಗೆ ಅವರಿಗೋಸ್ಕರ ನೀವು ಒಂದು ಗೋಮೆರ್ ತುಂಬಾ ಮನ್ನವನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದನು.

33 ಆದಕಾರಣ ಮೋಶೆಯು ಆರೋನನಿಗೆ - ನೀನು ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಒಂದು ಗೋಮೆರಿನಷ್ಟು ಮನ್ನವನ್ನು ಹಾಕಿ ನಿಮ್ಮ ಸಂತತಿಯವರು ನೋಡುವದಕ್ಕೋಸ್ಕರ ಅದನ್ನು ಯೆಹೋವನ ಸನ್ನಿಧಿಯಲ್ಲಿ ಇಡು ಎಂದು ಹೇಳಿದನು.

34 ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಆರೋನನು ಮಾಡಿ ಆಜ್ಞಾಶಾಸನ ಮಂಜೂಷದ ಮುಂದೆ ಅದನ್ನು ಇಟ್ಟನು.

35 ಇಸ್ರಾಯೇಲ್ಯರು ಜನವಾಸವಿರುವ ಪ್ರದೇಶಕ್ಕೆ ಬರುವ ತನಕ ಅಂದರೆ ಕಾನಾನ್ ದೇಶದ ಮೇರೆಯನ್ನು ಸೇರುವ ತನಕ ನಾಲ್ವತ್ತು ವರುಷ ಮನ್ನವನ್ನೇ ಊಟಮಾಡುತ್ತಿದ್ದರು.

36 ಗೋಮೆರೆಂಬದು ಏಫಾದಲ್ಲಿ ಹತ್ತನೆಯ ಒಂದು ಪಾಲು ಹಿಡಿಯುವದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು