ವಿಮೋಚನಕಾಂಡ 15 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲ್ಯರು ಹಾಡಿದ ಜಯಗೀತ 1 ಆಗ ಮೋಶೆಯೂ ಇಸ್ರಾಯೇಲ್ಯರೂ ಯೆಹೋವನ ಸ್ತೋತ್ರಕ್ಕಾಗಿ ಈ ಕೀರ್ತನೆಯನ್ನು ಹಾಡಿದರು - ಯೆಹೋವನ ಸ್ತೋತ್ರವನ್ನು ಗಾನ ಮಾಡೋಣ; ಆತನು ಮಹಾ ಜಯಶಾಲಿಯಾದನು; ಕುದುರೆಗಳನ್ನೂ ರಾಹುತರನ್ನೂ ಸಮುದ್ರದಲ್ಲಿ ಕೆಡವಿನಾಶ ಮಾಡಿದ್ದಾನೆ. 2 ನನ್ನ ಬಲವೂ ಕೀರ್ತನೆಯೂ ಯಾಹುವೇ, ಆತನಿಂದ ನನಗೆ ರಕ್ಷಣೆಯುಂಟಾಯಿತು. ನಮ್ಮ ದೇವರು ಆತನೇ, ಆತನನ್ನು ವರ್ಣಿಸುವೆವು; ನಮ್ಮ ಪಿತೃಗಳ ದೇವರು ಆತನೇ, ಆತನ ಮಹಿಮೆಯನ್ನು ಪ್ರಖ್ಯಾತಿಪಡಿಸುವೆವು. 3 ಯೆಹೋವನು ಯುದ್ಧಶೂರನು; ಆತನ ನಾಮಧೇಯವು ಯೆಹೋವನೇ. 4 ಆತನು ಫರೋಹನ ರಥಗಳನ್ನೂ ಸೈನಿಕರನ್ನೂ ಸಮುದ್ರದಲ್ಲಿ ಕೆಡವಿದನು; ಅವನ ಶ್ರೇಷ್ಠವೀರರನ್ನು ಕೆಂಪುಸಮುದ್ರದಲ್ಲಿ ಮುಳುಗಿಸಿಬಿಟ್ಟನು. 5 ಸಾಗರವು ಅವರನ್ನು ಮುಚ್ಚಿಬಿಟ್ಟಿತು; ಕಲ್ಲಿನಂತೆ ಧಡಲ್ಲೆಂದು ಸಮುದ್ರದ ತಳವನ್ನು ಸೇರಿದರು. 6 ಯೆಹೋವನೇ, ನಿನ್ನ ಭುಜಬಲವು ಎಷ್ಟೋ ಘನವಾದದ್ದು; ಯೆಹೋವನೇ, ನಿನ್ನ ಭುಜಬಲವು ನಿನ್ನ ಶತ್ರುಗಳನ್ನು ಪುಡಿಪುಡಿ ಮಾಡುತ್ತದೆ. 7 ನೀನು ಅತ್ಯಧಿಕ ಮಹತ್ವವುಳ್ಳವನಾಗಿ ನಿನಗೆದುರಾಗಿ ನಿಲ್ಲುವವರನ್ನು ಕೆಡವಿಬಿಡುತ್ತೀ, ನಿನ್ನ ಕೋಪಾಗ್ನಿಯು ಹೊರಟು ಅವರನ್ನು ಒಣಗಿದ ಹುಲ್ಲನ್ನೋ ಎಂಬಂತೆ ಭಸ್ಮ ಮಾಡುತ್ತದೆ. 8 ನೀನು ಸಿಟ್ಟಿನಿಂದ ಮುಸುಗರೆದಾಗ ಸಮುದ್ರದ ನೀರು ಒಡ್ಡಿನಂತಾಯಿತು. ಪ್ರವಾಹವು ಗೋಡೆಯೋಪಾದಿಯಲ್ಲಿ ನಿಂತುಕೊಂಡಿತು. ಸಾಗರ ಗರ್ಭದೊಳಗಣ ಜಲವು ಗಟ್ಟಿಯಾಯಿತು. 9 ನಾವು ಇವರನ್ನು ಹಿಂದಟ್ಟಿ ಹಿಡಿಯುವೆವು, ಅವರ ಸೊತ್ತನ್ನು ಅಪಹರಿಸಿ ಹಂಚಿಕೊಳ್ಳುವೆವು, ಅವರಲ್ಲಿ ನಮ್ಮ ಕೋರಿಕೆಯನ್ನು ತೀರಿಸಿಕೊಳ್ಳುವೆವು, ನಾವು ಕತ್ತಿಯನ್ನು ಹಿರಿದು ಭುಜಬಲದಿಂದ ಅವರನ್ನು ಸಂಹಾರ ಮಾಡುವೆವು ಎಂಬದಾಗಿ ನಮ್ಮ ಶತ್ರುಗಳು ಮಾತಾಡಿಕೊಳ್ಳುತ್ತಿದ್ದರು. 10 ಆದರೆ ನೀನು ಉಸುರುಗಾಳಿಯಿಂದ ಊದಲು ಸಮುದ್ರವು ಅವರನ್ನು ಮುಚ್ಚಿತು, ಅವರು ಮಹಾಸಾಗರದೊಳಗೆ ಸೀಸದ ಗುಂಡಿನಂತೆ ಮುಳುಗಿಹೋದರು. 11 ಯೆಹೋವನೇ, ದೇವರುಗಳಲ್ಲಿ ನಿನ್ನ ಸಮಾನನು ಯಾವನು? ಪರಿಶುದ್ಧತ್ವದಿಂದ ಸರ್ವೋತ್ತಮನೂ ಪ್ರಖ್ಯಾತ ಕೃತ್ಯಗಳನ್ನು ಮಾಡಿರುವದರಿಂದ ಭಯಂಕರನೂ ಅದ್ಭುತಗಳನ್ನು ನಡಿಸುವವನೂ ಆಗಿರುವ ನಿನಗೆ ಸಮಾನನು ಎಲ್ಲಿ? 12 ನೀನು ನಿನ್ನ ಬಲಗೈಯನ್ನು ಚಾಚಿದಾಗ ಭೂವಿುಯು ಬಾಯ್ದೆರೆದು ಶತ್ರುಗಳನ್ನು ನುಂಗಿಬಿಟ್ಟಿತಲ್ಲಾ; 13 ನೀನು ಬಿಡುಗಡೆ ಮಾಡಿದ ಪ್ರಜೆಯನ್ನೋ ಪ್ರೀತಿಯಿಂದ ನಡಿಸಿಕೊಂಡು ನಿನ್ನ ಪರಿಶುದ್ಧ ನಿವಾಸಸ್ಥಾನದ ತನಕ ನಿನ್ನ ಶಕ್ತಿಯಿಂದ ಬರಮಾಡಿದಿ. 14 ಜನಾಂಗಗಳು ಇದನ್ನು ಕೇಳಿ ನಡುಗುತ್ತಿರುವವು; 15 ಫಿಲಿಷ್ಟಿಯರಿಗೆ ಸಂಕಟವಾಯಿತು; ಎದೋಮ್ಯರ ಕುಲಪತಿಗಳು ಕಳವಳಗೊಂಡರು; ಮೋವಾಬ್ಯರ ಮುಖಂಡರು ಗಡಗಡನೆ ನಡುಗುತ್ತಾರೆ; ಕಾನಾನ್ ದೇಶದವರು ಕರಗಿಹೋದರು; 16 ಗಾಬರಿಯೂ ಹೆದರಿಕೆಯೂ ಅವರನ್ನು ಹಿಡಿದವೆ. ನಿನ್ನ ಭುಜಬಲದ ದೆಸೆಯಿಂದ ಅವರು ಕಲ್ಲಿನಂತೆ ಸ್ತಬ್ಧರಾಗಿದ್ದಾರೆ. ಅಷ್ಟರಲ್ಲಿ ಯೆಹೋವನೇ, ನೀನು ಸಂಪಾದಿಸಿಕೊಂಡ ನಿನ್ನ ಪ್ರಜೆಗಳು ಸಾಗಿಹೋಗಿ ದೇಶವನ್ನು ಸೇರುವರು. 17 ನೀನು ಅವರನ್ನು ನಿನ್ನ ಸ್ವಕೀಯ ದೇಶವಾಗಿರುವ ಬೆಟ್ಟದ ಸೀಮೆಗೆ ತಂದು ಸ್ಥಾಪಿಸುವಿ. ಯೆಹೋವನೇ, ನೀನು ಸ್ವಂತ ನಿವಾಸಕ್ಕಾಗಿ ಏರ್ಪಡಿಸಿಕೊಂಡಿರುವ ಸ್ಥಾನವಾಗಿಯೂ ಕರ್ತನೇ, ನೀನು ಸಿದ್ಧಪಡಿಸಿಕೊಂಡಿರುವ ಪವಿತ್ರಾಲಯವಾಗಿಯೂ ಇರುವಲ್ಲಿಗೆ ಅವರನ್ನು ಬರಮಾಡುವಿ. 18 ಯೆಹೋವನೇ ಯುಗಯುಗಾಂತರಗಳಲ್ಲಿಯೂ ಆಳುವನು. 19 [ಈ ಜಯಗೀತಕ್ಕೆ ಕಾರಣವೇನಂದರೆ -] ಫರೋಹನ ಕುದುರೆಗಳೂ ರಥಗಳೂ ರಾಹುತರೂ ಸಮುದ್ರದಲ್ಲಿ ಹೊಕ್ಕು ನಡೆಯಲು ಯೆಹೋವನು ಸಮುದ್ರದ ನೀರನ್ನು ಅವರ ಮೇಲೆ ತಿರಿಗಿ ಬರಮಾಡಿ ಮುಳುಗಿಸಿಬಿಟ್ಟನು; ಇಸ್ರಾಯೇಲ್ಯರಾದರೋ ಸಮುದ್ರದ ಮಧ್ಯದೊಳಗೆ ಒಣನೆಲದಲ್ಲಿ ನಡೆದುಹೋದರು. 20 ಆರೋನನ ಅಕ್ಕನಾದ ವಿುರ್ಯಾಮಳು ಪ್ರವಾದಿನಿಯಾಗಿದ್ದು ದಮ್ಮಡಿಯನ್ನು ಕೈಯಲ್ಲಿ ತೆಗೆದುಕೊಂಡಳು. ಸ್ತ್ರೀಯರೆಲ್ಲರೂ ದಮ್ಮಡಿಗಳನ್ನು ಹಿಡಿದು ನಾಟ್ಯವಾಡುತ್ತಾ ಆಕೆಯ ಹಿಂದೆ ಹೋಗುತ್ತಿರಲು 21 ವಿುರ್ಯಾಮಳು ಅವರ ಹಾಡಿಗೆ ಹೀಗೆ ಪಲ್ಲವಿ ಹಾಡಿದಳು- ಯೆಹೋವನನ್ನು ಗಾನಮಾಡಿರಿ; ಆತನು ಮಹಾಜಯಶಾಲಿಯಾದನು; ಕುದುರೆಗಳನ್ನೂ ರಾಹುತರನ್ನೂ ಸಮುದ್ರದಲ್ಲಿ ಕೆಡವಿ ನಾಶಮಾಡಿದ್ದಾನೆ. ಇಸ್ರಾಯೇಲ್ಯರು ಸೀನಾಯಿಬೆಟ್ಟಕ್ಕೆ ಯಾತ್ರೆಹೋದದ್ದು. ( 15.22—18.27 ) ಅರಣ್ಯದಲ್ಲಿ ಅವರಿಗೋಸ್ಕರ ಕಹಿನೀರು ಸಿಹಿಯಾದದ್ದು 22 ಬಳಿಕ ಮೋಶೆಯು ಇಸ್ರಾಯೇಲ್ಯರನ್ನು ಕೆಂಪು ಸಮುದ್ರದ ಬಳಿಯಿಂದ ಪ್ರಯಾಣ ಮಾಡಿಸಲು ಅವರು ಶೂರಿನ ಅರಣ್ಯದೊಳಗೆ ಮೂರು ದಿನ ನಡೆದು ಹೋದರು. ಅಲ್ಲಿ ಅವರಿಗೆ ನೀರು ಸಿಕ್ಕಲೇ ಇಲ್ಲ. 23 ತರುವಾಯ ಮಾರಾ ಎಂಬ ಸ್ಥಳವನ್ನು ಸೇರಿದರು; ಆದರೆ ಆ ಸ್ಥಳದ ನೀರು ಕಹಿಯಾಗಿದ್ದದರಿಂದ ಅವರಿಗೆ ಅದನ್ನು ಕುಡಿಯುವದಕ್ಕಾಗದೆ ಹೋಯಿತು. ಅದರಿಂದಲೇ ಆ ಸ್ಥಳಕ್ಕೆ ಮಾರಾ ಎಂದು ಹೆಸರಾಯಿತು. 24 ಜನರು - ನಾವೇನು ಕುಡಿಯಬೇಕೆಂದು ಮೋಶೆಯ ಮೇಲೆ ಗುಣುಗುಟ್ಟುತ್ತಿರಲು ಮೋಶೆಯು ಯೆಹೋವನನ್ನು ಪ್ರಾರ್ಥಿಸಿದನು. 25 ಆಗ ಯೆಹೋವನು ಅವನಿಗೆ ಒಂದು ಗಿಡವನ್ನು ತೋರಿಸಿದನು. ಅದನ್ನು ಆ ನೀರಿನಲ್ಲಿ ಹಾಕಿದಾಗ ನೀರು ಸಿಹಿಯಾಯಿತು. ಅಲ್ಲಿ ಯೆಹೋವನು ಇಸ್ರಾಯೇಲ್ಯರಿಗಾಗಿ ಒಂದು ನಿಯಮವನ್ನು ನಿರ್ಣಯಮಾಡಿ ಅವರನ್ನು ಪರೀಕ್ಷಿಸಿ ಹೀಗಂದನು - 26 ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ಆತನ ದೃಷ್ಟಿಗೆ ಸರಿಬೀಳುವದನ್ನು ಮಾಡಿ ಆತನ ಆಜ್ಞೆಗಳಿಗೆ ವಿಧೇಯರಾಗಿದ್ದು ಆತನ ಕಟ್ಟಳೆಗಳನ್ನೆಲ್ಲಾ ಅನುಸರಿಸಿ ನಡೆದರೆ ನಾನು ಐಗುಪ್ತ್ಯರಿಗೆ ಉಂಟುಮಾಡಿದ ವ್ಯಾಧಿಗಳಲ್ಲಿ ಒಂದನ್ನೂ ನಿಮಗೆ ಬರಗೊಡಿಸುವದಿಲ್ಲ. ಯೆಹೋವನೆಂಬ ನಾನೇ ನಿಮಗೆ ಆರೋಗ್ಯದಾಯಕನು. 27 ತರುವಾಯ ಅವರು ಏಲೀವಿುಗೆ ಬಂದರು. ಅಲ್ಲಿ ಹನ್ನೆರಡು ನೀರಿನ ಒರತೆಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದದರಿಂದ ಆ ನೀರಿನ ಬಳಿಯಲ್ಲಿ ಇಳುಕೊಂಡರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India