Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 13 - ಕನ್ನಡ ಸತ್ಯವೇದವು J.V. (BSI)

1-2 ಯೆಹೋವನು ಮೋಶೆಗೆ - ಇಸ್ರಾಯೇಲ್ಯರು ತಮ್ಮೊಳಗಾಗಲಿ ತಮ್ಮ ಪಶುಗಳೊಳಗಾಗಲಿ ಪ್ರಥಮ ಗರ್ಭವನ್ನು ಅಂದರೆ ಚೊಚ್ಚಲಾಗಿ ಹುಟ್ಟಿದ್ದೆಲ್ಲವನ್ನೂ ನನಗೆ ಮೀಸಲಾಗಿಡಬೇಕು; ಅದು ನನ್ನದೇ ಎಂದು ಹೇಳಿದನು.

3 ಮೋಶೆ ಇಸ್ರಾಯೇಲ್ಯರಿಗೆ - ನೀವು ದಾಸತ್ವದಲ್ಲಿದ್ದ ಐಗುಪ್ತ ದೇಶದೊಳಗಿಂದ ಬಿಡುಗಡೆಯಾದ ಈ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಯೆಹೋವನು ತನ್ನ ಭುಜಬಲದಿಂದ ನಿಮ್ಮನ್ನು ಆ ಸ್ಥಳದಿಂದ ಬಿಡಿಸಿದನಲ್ಲಾ. ಈ ದಿನದಲ್ಲಿ ನೀವು ಹುಳಿಬೆರೆತದ್ದನ್ನು ತಿನ್ನಕೂಡದು.

4 ಚೈತ್ರ ಮಾಸದ ಈ ದಿನದಲ್ಲೇ ಹೊರಡುವವರಾಗಿದ್ದೀರಷ್ಟೆ.

5 ಯೆಹೋವನು ನಿಮ್ಮ ಪಿತೃಗಳಿಗೆ ಪ್ರಮಾಣವಾಗಿ ಹೇಳಿದಂತೆ ನಿಮ್ಮನ್ನು ಹಾಲೂ ಜೇನೂ ಹರಿಯುವ ದೇಶಕ್ಕೆ ಅಂದರೆ ಕಾನಾನ್ಯರೂ ಹಿತ್ತಿಯರೂ ಅಮೋರಿಯರೂ ಹಿವ್ವಿಯರೂ ಯೆಬೂಸಿಯರೂ ವಾಸವಾಗಿರುವ ದೇಶಕ್ಕೆ ಕರತಂದು, ಅದನ್ನು ನಿಮಗೆ ಕೊಟ್ಟಾಗ ನೀವು ಈ ತಿಂಗಳಲ್ಲಿ ಈ ಆಚಾರವನ್ನು ನಡಿಸಬೇಕು.

6 ಏಳು ದಿವಸ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು; ಏಳನೆಯ ದಿನದಲ್ಲಿ ಯೆಹೋವನ ಘನಕ್ಕಾಗಿ ಹಬ್ಬ ಮಾಡಬೇಕು.

7 ಆ ಏಳು ದಿವಸವೂ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕೇ ಹೊರತು ನಿಮ್ಮ ದೇಶದಲ್ಲೆಲ್ಲಾ ಹುಳಿಹಿಟ್ಟಾಗಲಿ ಹುಳಿಯಾಗಲಿ ನಿಮ್ಮ ಬಳಿಯಲ್ಲಿ ಇರಲೇಕೂಡದು.

8 ಆ ದಿನದಲ್ಲಿ ನೀವು ನಿಮ್ಮ ಮಕ್ಕಳಿಗೆ - ನಮ್ಮ ಜನವು ಐಗುಪ್ತದೇಶದಿಂದ ಹೊರಟು ಬಂದಾಗ ಯೆಹೋವನು ನಮಗೋಸ್ಕರ ಮಾಡಿದ್ದನ್ನು ನೆನಸುವದಕ್ಕಾಗಿ ಈ ಆಚರಣೆಯನ್ನು ನಡಿಸುತ್ತೇವೆಂಬದಾಗಿ ತಿಳಿಸಬೇಕು.

9 ಯೆಹೋವನು ತನ್ನ ಭುಜಬಲದಿಂದ ನಿಮ್ಮನ್ನು ಐಗುಪ್ತದೇಶದಿಂದ ಬಿಡಿಸಿದನಾದದರಿಂದ ಆತನ ನಿಯಮವನ್ನು ಕುರಿತು ನೀವು ಮಾತಾಡಬೇಕೆಂಬದಕ್ಕಾಗಿ ಈ ಆಚಾರವು ನಿಮಗೆ ಕೈಯಲ್ಲಿ ಕಟ್ಟಿಕೊಂಡಿರುವ ದಾರದಂತೆಯೂ ಹುಬ್ಬುಗಳ ನಡುವೆ ಕಟ್ಟಿಕೊಂಡಿರುವ ಜ್ಞಾಪಕಪಟ್ಟಿಯಂತೆಯೂ ಇರುವದು.

10 ವರುಷ ವರುಷಕ್ಕೆ ನಿಯವಿುತವಾದ ಕಾಲದಲ್ಲಿ ನೀವು ಈ ಆಚಾರವನ್ನು ನಡಿಸಬೇಕು.

11 ಯೆಹೋವನು ತಾನು ನಿಮಗೂ ನಿಮ್ಮ ಪಿತೃಗಳಿಗೂ ಕೊಟ್ಟ ಪ್ರಮಾಣವಚನದ ಮೇರೆಗೆ ನಿಮ್ಮನ್ನು ಕಾನಾನ್ಯರ ದೇಶಕ್ಕೆ ಬರಮಾಡಿ ಆ ದೇಶವನ್ನು ನಿಮಗೆ ಕೊಟ್ಟ ನಂತರ

12 ನಿಮ್ಮಲ್ಲಿಯೂ ನಿಮ್ಮ ಪಶುಗಳಲ್ಲಿಯೂ ಹುಟ್ಟುವ ಪ್ರಥಮಗರ್ಭವನ್ನೆಲ್ಲಾ ಗಂಡಾದ ಪಕ್ಷಕ್ಕೆ ಯೆಹೋವನ ಭಾಗವೆಂದು ತಿಳಿದುಕೊಂಡು ಆತನಿಗೆ ಸಮರ್ಪಿಸಬೇಕು.

13 ಕತ್ತೆಯ ಚೊಚ್ಚಲುಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ಆ ಕತ್ತೇಮರಿಯನ್ನು ಬಿಡಿಸಿಕೊಳ್ಳಬಹುದು; ಹಾಗೆ ಬಿಡಿಸಲೊಲ್ಲದೆ ಹೋದರೆ ಅದರ ಕುತ್ತಿಗೆ ಮುರಿದು ಕೊಲ್ಲಬೇಕು. ಮನುಷ್ಯರ ಚೊಚ್ಚಲುಗಂಡನ್ನಾದರೋ ಬದಲುಕೊಟ್ಟು ಬಿಡಿಸಿಕೊಳ್ಳಲೇಬೇಕು.

14 ಇನ್ನು ಮೇಲೆ ನಿಮ್ಮ ಮಕ್ಕಳು - ಇದು ಯಾತಕ್ಕೆ ಎಂದು ವಿಚಾರಿಸುವಾಗ ನೀವು ಅವರಿಗೆ - ನಾವು ದಾಸತ್ವದಲ್ಲಿದ್ದ ಐಗುಪ್ತದೇಶದೊಳಗಿಂದ ಯೆಹೋವನು ಭುಜಬಲದಿಂದ ನಮ್ಮನ್ನು ಬಿಡಿಸಿದನು.

15 ಫರೋಹನು ಹಟಹಿಡಿದು ನಮ್ಮನ್ನು ಹೋಗಗೊಡಿಸದೆ ಇದ್ದಾಗ ಯೆಹೋವನು ಐಗುಪ್ತ ದೇಶದಲ್ಲಿದ್ದ ಮನುಷ್ಯರ ಚೊಚ್ಚಲು ಮಕ್ಕಳನ್ನೂ ಪಶುಗಳ ಚೊಚ್ಚಲುಮರಿಗಳನ್ನೂ ಅಂತೂ ಆ ದೇಶದ ಚೊಚ್ಚಲಾಗಿದ್ದದ್ದನ್ನೆಲ್ಲಾ ಸಂಹಾರ ಮಾಡಿದನು. ಆದಕಾರಣ ಗಂಡಾದ ಪ್ರಥಮ ಗರ್ಭವನ್ನೆಲ್ಲಾ ನಾವು ಯೆಹೋವನಿಗೆ ಸಮರ್ಪಿಸುವದುಂಟು; ಮನುಷ್ಯರಿಂದಾದ ಪ್ರಥಮಗರ್ಭವನ್ನಾದರೋ ಬದಲು ಕೊಟ್ಟು ಬಿಡಿಸುತ್ತೇವೆ ಎಂದು ಹೇಳಬೇಕು.

16 ಯೆಹೋವನು ಭುಜಬಲದಿಂದ ನಮ್ಮನ್ನು ಐಗುಪ್ತದೇಶದಿಂದ ಬಿಡಿಸಿದ ಸಂಗತಿಯನ್ನು ನೀವು ಜ್ಞಾಪಕದಲ್ಲಿಟ್ಟುಕೊಳ್ಳುವದಕ್ಕೆ ಈ ಪದ್ಧತಿಯು ಕೈಗೆ ಕಟ್ಟಿಕೊಂಡಿರುವ ದಾರದಂತೆಯೂ ಹುಬ್ಬುಗಳ ನಡುವೆ ಕಟ್ಟಿಕೊಂಡಿರುವ ಜ್ಞಾಪಕಪಟ್ಟಿಯಂತೆಯೂ ಇರುವದು.


ಇಸ್ರಾಯೇಲ್ಯರು ಐಗುಪ್ತದೇಶವನ್ನು ಬಿಟ್ಟು ಹೋದದ್ದು; ಫರೋಹನ ಸೈನ್ಯವು ಸಮುದ್ರದಲ್ಲಿ ಮುಣುಗಿಹೋದದ್ದು

17 ಫರೋಹನು ಇಸ್ರಾಯೇಲ್ಯರಿಗೆ ಹೋಗುವದಕ್ಕೆ ಅಪ್ಪಣೆ ಕೊಟ್ಟಾಗ ಫಿಲಿಷ್ಟಿಯರ ದೇಶದೊಳಗಣ ಮಾರ್ಗ ಹತ್ತಿರವಿದ್ದರೂ ದೇವರು ಆ ದಾರಿಯಲ್ಲಿ ಅವರನ್ನು ನಡಿಸದೆ ಕೆಂಪುಸಮುದ್ರದ ಬಳಿಯಲ್ಲಿರುವ ಮರಳು ಕಾಡಿನ ದಾರಿಯಲ್ಲಿಯೇ ಸುತ್ತಾಗಿ ನಡಿಸಿಕೊಂಡುಹೋದನು.

18 ಆತನು - ಈ ಜನರಿಗೆ ಯುದ್ಧಪ್ರಾಪ್ತವಾದರೆ ಅವರು ಧೈರ್ಯಗೆಟ್ಟು ಐಗುಪ್ತದೇಶಕ್ಕೆ ಹಿಂದಿರುಗಾರು ಅಂದುಕೊಂಡನು. ಇಸ್ರಾಯೇಲ್ಯರು ಯುದ್ಧಸನ್ನದ್ಧರಾಗಿ ಐಗುಪ್ತದೇಶದಿಂದ ಹೊರಟರು.

19 ಇದಲ್ಲದೆ ಯೋಸೇಫನು ಇಸ್ರಾಯೇಲ್ಯರಿಗೆ - ದೇವರು ನಿಸ್ಸಂದೇಹವಾಗಿ ನಿಮ್ಮನ್ನು ಪರಾಂಬರಿಸಿ ತನ್ನ ವಾಗ್ದಾನವನ್ನು ನೆರವೇರಿಸುವನಾದದರಿಂದ ನೀವು ಹೋಗುವಾಗ ನನ್ನ ಶವವನ್ನು ನಿಮ್ಮ ಸಂಗಡ ತೆಗೆದುಕೊಂಡು ಹೋಗಬೇಕೆಂದು ಹೇಳಿ ಖಂಡಿತವಾದ ಪ್ರಮಾಣವನ್ನು ಮಾಡಿಸಿದ್ದದರಿಂದ ಮೋಶೆಯು ಅವನ ಶವವನ್ನು ಸಂಗಡ ತೆಗೆದುಕೊಂಡು ಹೋದನು.

20 ಅವರು ಸುಕ್ಕೋತಿನಿಂದ ಪ್ರಯಾಣ ಮಾಡಿ ಮರಳುಕಾಡಿನ ಅಂಚಿನಲ್ಲಿರುವ ಏತಾವಿುನಲ್ಲಿ ಇಳಿದು ಕೊಂಡರು.

21 ಯೆಹೋವನು ಹಗಲುಹೊತ್ತಿನಲ್ಲಿ ದಾರಿತೋರಿಸುವದಕ್ಕೆ ಮೇಘಸ್ತಂಭದಲ್ಲಿಯೂ ರಾತ್ರಿವೇಳೆಯಲ್ಲಿ ಬೆಳಕುಕೊಡುವದಕ್ಕೆ ಅಗ್ನಿಸ್ತಂಭದಲ್ಲಿಯೂ ಇದ್ದು ಅವರ ಮುಂಭಾಗದಲ್ಲಿ ಹೋದನು. ಈ ರೀತಿಯಲ್ಲಿ ಅವರು ಹಗಲಿರುಳು ಪ್ರಯಾಣಮಾಡಿದರು.

22 ಹಗಲಲ್ಲಿ ಮೇಘಸ್ತಂಭವೂ ರಾತ್ರಿಯಲ್ಲಿ ಅಗ್ನಿಸ್ತಂಭವೂ ಜನರ ಮುಂದೆ ತಪ್ಪದೆ ಕಾಣಿಸಿದವು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು