ವಿಮೋಚನಕಾಂಡ 11 - ಕನ್ನಡ ಸತ್ಯವೇದವು J.V. (BSI)ಯೆಹೋವನು ಘೋರವಾದ ಇನ್ನೊಂದು ಉಪದ್ರವವನ್ನು ಐಗುಪ್ತ್ಯರಿಗೆ ಬರಮಾಡುವೆನೆಂದು ಮುಂತಿಳಿಸಿದ್ದು 1 ಯೆಹೋವನು ಮೋಶೆಗೆ ಇಂತೆಂದನು - ಫರೋಹನಿಗೂ ಐಗುಪ್ತ್ಯರಿಗೂ ಇನ್ನೊಂದು ಉಪದ್ರವವನ್ನು ಬರಮಾಡುತ್ತೇನೆ; ಅದು ಬಂದ ನಂತರ ಅವನು ನಿಮಗೆ ಇಲ್ಲಿಂದ ಹೋಗುವದಕ್ಕೆ ಅಪ್ಪಣೆಕೊಡುವದು ಮಾತ್ರವಲ್ಲದೆ ನಿಮ್ಮೆಲ್ಲರನ್ನು ಅಟ್ಟಿಬಿಡುವನು. 2 ಆದದರಿಂದ ಸ್ತ್ರೀಪುರುಷರೆಲ್ಲರೂ ತಮ್ಮತಮ್ಮ ನೆರೆಹೊರೆಯವರಿಂದ ಬೆಳ್ಳಿಬಂಗಾರದ ಒಡವೆಗಳನ್ನು ಕೇಳಿಕೊಳ್ಳಬೇಕೆಂಬದಾಗಿ ಜನರಿಗೆ ಸ್ಪಷ್ಟವಾಗಿ ಹೇಳು ಅಂದನು. 3 ಯೆಹೋವನು ಇಸ್ರಾಯೇಲ್ಯರ ಮೇಲೆ ಐಗುಪ್ತ್ಯರಲ್ಲಿ ದಯೆಯನ್ನು ಹುಟ್ಟಿಸಿದನು. ಇದಲ್ಲದೆ ಐಗುಪ್ತದೇಶದಲ್ಲಿ ಫರೋಹನ ಪ್ರಜಾಪರಿವಾರದವರು ಆ ಮೋಶೆಯನ್ನು ಮಹಾಪುರುಷನೆಂದು ತಿಳಿದುಕೊಂಡರು. 4 ಮೋಶೆ ಫರೋಹನಿಗೆ - ಯೆಹೋವನು ಅಪ್ಪಣೆ ಮಾಡುವದೇನಂದರೆ - ನಾನು ಮಧ್ಯರಾತ್ರಿಯಲ್ಲಿ ಐಗುಪ್ತ್ಯರ ನಡುವೆ ಹಾದುಹೋಗುವೆನು; 5 ಆಗ ಸಿಂಹಾಸನದ ಮೇಲೆ ಕೂತಿರುವ ಫರೋಹನ ಚೊಚ್ಚಲುಮಗನು ಮೊದಲುಗೊಂಡು ಬೀಸುವ ಕಲ್ಲಿನ ಹಿಂದೆ ಕೂತಿರುವ ದಾಸಿಯ ಚೊಚ್ಚಲುಮಗನವರೆಗೂ ಐಗುಪ್ತದೇಶದಲ್ಲಿ ಚೊಚ್ಚಲುಮಕ್ಕಳೆಲ್ಲರೂ ಸಾಯುವರು; ಪಶುಗಳಲ್ಲೂ ಚೊಚ್ಚಲಾದವುಗಳೆಲ್ಲಾ ಸಾಯುವವು. 6 ಆಗ ಐಗುಪ್ತ ದೇಶದಲ್ಲೆಲ್ಲಾ ದೊಡ್ಡ ಗೋಳಾಟವುಂಟಾಗುವದು; ಅಂಥ ಗೋಳಾಟ ಈವರೆಗೆ ಎಂದೂ ಆಗಿಲ್ಲ, ಮುಂದೆಯೂ ಆಗುವದಿಲ್ಲ. 7 ಆದರೆ ಐಗುಪ್ತ್ಯರಿಗೂ ಇಸ್ರಾಯೇಲ್ಯರಿಗೂ ಯೆಹೋವನು ವ್ಯತ್ಯಾಸಮಾಡಿದ್ದಾನೆಂಬದು ನಿಮಗೆ ತಿಳಿಯುವಂತೆ ಇಸ್ರಾಯೇಲ್ಯರಲ್ಲಿರುವ ಮನುಷ್ಯರ ಮೇಲಾಗಲಿ ಪಶುಗಳ ಮೇಲಾಗಲಿ ಒಂದು ನಾಯಿಯಾದರೂ ಬೊಗಳುವದಿಲ್ಲ. 8 ಆಗ ನಿನ್ನ ಪರಿವಾರದವರಾದ ಇವರೆಲ್ಲರೂ ನನ್ನ ಬಳಿಗೆ ಬಂದು ಅಡ್ಡಬಿದ್ದು - ನೀನೂ ನಿನ್ನ ಅಧೀನದಲ್ಲಿರುವ ಜನರೆಲ್ಲರೂ ನಮ್ಮನ್ನು ಬಿಟ್ಟುಹೋಗಬೇಕೆಂದು ಬೇಡುವರು; ಆಮೇಲೆ ನಾನು ಹೊರಟುಹೋಗುವೆನು ಎಂದು ಹೇಳಿದನು. ಮೋಶೆ ಈ ಮಾತನ್ನು ಹೇಳಿ ಕಿಡಿಕಿಡಿಯಾಗಿ ಫರೋಹನನ್ನು ಬಿಟ್ಟು ಹೊರಟುಹೋದನು. 9 ಯೆಹೋವನು ಮೋಶೆಗೆ - ಫರೋಹನು ನಿಮ್ಮ ಮಾತನ್ನು ಕೇಳುವದಿಲ್ಲವಾದದರಿಂದ ಐಗುಪ್ತದೇಶದಲ್ಲಿ ಮಹತ್ಕಾರ್ಯಗಳನ್ನು ಹೆಚ್ಚಾಗಿ ನಡಿಸುವದಕ್ಕೆ ನನಗೆ ಆಸ್ಪದವಾಗುವದೆಂಬದಾಗಿ ಹೇಳಿದ್ದನಷ್ಟೆ. 10 ಮೋಶೆ ಆರೋನರು ಫರೋಹನ ಮುಂದೆ ಆ ಮಹತ್ಕಾರ್ಯಗಳನ್ನೆಲ್ಲಾ ಮಾಡಿದಾಗ್ಯೂ ಯೆಹೋವನು ಫರೋಹನ ಹೃದಯವನ್ನು ಕಠಿಣಮಾಡಿದ್ದದರಿಂದ ಫರೋಹನು ಇಸ್ರಾಯೇಲ್ಯರಿಗೆ ತನ್ನ ದೇಶವನ್ನು ಬಿಟ್ಟು ಹೊರಡುವದಕ್ಕೆ ಅಪ್ಪಣೆ ಕೊಡದೆಹೋದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India