ರೋಮಾಪುರದವರಿಗೆ 9 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲ್ಯರ ಅಪನಂಬಿಕೆಯು ಅತ್ಯಂತ ದುಃಖಕರವಾದದ್ದು 1 ನನಗೆ ಮಹಾದುಃಖವೂ ನನ್ನ ಹೃದಯದಲ್ಲಿ ಎಡೆಬಿಡದೆ ವೇದನೆಯೂ ಉಂಟು. 2 ಈ ಮಾತನ್ನು ಸುಳ್ಳಾಡದೆ ಕ್ರಿಸ್ತನ ಮುಂದೆ ಸತ್ಯವಾಗಿ ಹೇಳುತ್ತೇನೆ; ಪವಿತ್ರಾತ್ಮಾಧೀನವಾಗಿರುವ ನನ್ನ ಮನಸ್ಸೇ ಸಾಕ್ಷಿ. 3 ಶರೀರಸಂಬಂಧವಾಗಿ ಸ್ವಜನರಾಗಿರುವ ನನ್ನ ಸಹೋದರರಿಗೋಸ್ಕರ ನಾನೇ ಸಾಧ್ಯವಾದರೆ ಕ್ರಿಸ್ತನನ್ನು ಅಗಲಿ ಶಾಪಗ್ರಸ್ತನಾಗುವದಕ್ಕೆ ಒಪ್ಪಿಕೊಂಡೇನು. 4 ಅವರು ಇಸ್ರಾಯೇಲನ ವಂಶದವರೂ ದೇವರು ಪುತ್ರರಾಗಿ ಸ್ವೀಕರಿಸಿದವರೂ ಆಗಿದ್ದಾರೆ. ಅವರಲ್ಲಿ ದೇವರ ತೇಜಸ್ಸಾನ್ನಿಧ್ಯವು ಇದೆ; ಅವರ ಸಂಗಡ ದೇವರು ಒಡಂಬಡಿಕೆಗಳನ್ನು ಮಾಡಿಕೊಂಡನು; ಅವರಿಗೆ ಧರ್ಮಶಾಸ್ತ್ರವೂ ದೇವಾಲಯದಲ್ಲಿ ನಡೆಯುವ ಆರಾಧನೆಯೂ ವಾಗ್ದಾನಗಳೂ ಕೊಡೋಣವಾದವು. 5 ಅಬ್ರಹಾಮ ಇಸಾಕ ಯಾಕೋಬರು ಅವರ ಪಿತೃಗಳೇ. ಕ್ರಿಸ್ತನು ಶರೀರಸಂಬಂಧವಾಗಿ ಅವರ ವಂಶದಲ್ಲಿಯೇ ಹುಟ್ಟಿದವನು, ಆತನು ಎಲ್ಲಾದರ ಮೇಲೆ ಒಡೆಯನೂ ನಿರಂತರ ಸ್ತುತಿ ಹೊಂದತಕ್ಕ ದೇವರೂ ಆಗಿದ್ದಾನೆ. ಆಮೆನ್. ದೇವರು ಇಸ್ರಾಯೇಲ್ಯರನ್ನು ತಳ್ಳಿಬಿಟ್ಟದ್ದು ಆತನ ವಾಗ್ದಾನಗಳಿಗೆ ವಿರುದ್ಧವಾದದ್ದಲ್ಲ 6 ದೇವರು ಹೇಳಿದ ಮಾತು ತಪ್ಪಿತೆಂದು ನಾವು ಭಾವಿಸಕೂಡದು. ಯಾಕಂದರೆ ಇಸ್ರಾಯೇಲ್ ವಂಶದಲ್ಲಿ ಹುಟ್ಟಿದವರೆಲ್ಲರೂ ಇಸ್ರಾಯೇಲ್ಯರಲ್ಲ; 7 ಹಾಗೆಯೇ ಅಬ್ರಹಾಮನ ವಂಶದಲ್ಲಿ ಹುಟ್ಟಿದ ಮಾತ್ರಕ್ಕೆ ಅವರೆಲ್ಲರು ಮಕ್ಕಳೆಂದು ಎಣಿಸಲ್ಪಡುವದಿಲ್ಲ. ಆದರೆ - ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು ಎಂದು ದೇವರು ಹೇಳಿದನು. 8 ಆ ಮಾತಿನ ಅರ್ಥವೇನಂದರೆ ಶರೀರಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ, ವಾಗ್ದಾನಸಂಬಂಧವಾಗಿ ಹುಟ್ಟಿದವರೇ ಅಬ್ರಹಾಮನ ಸಂತತಿಯವರೆಂದು ಎಣಿಸಲ್ಪಡುವರು ಎಂಬದು. 9 ಮುಂದಿನ ವರುಷದ ಇದೇ ಕಾಲದಲ್ಲಿ ನಾನು ಬರುವೆನು, ಆಗ ಸಾರಳಿಗೆ ಮಗನು ಇರುವನು ಎಂಬ ಮಾತು ವಾಗ್ದಾನವಾಗಿದೆಯಷ್ಟೆ. 10 ಇದು ಮಾತ್ರವಲ್ಲದೆ ರೆಬೆಕ್ಕಳು ಸಹ ನಮ್ಮ ಪಿತೃವಾದ ಇಸಾಕನಿಂದ ಅವಳಿ ಜವಳಿ ಮಕ್ಕಳಿಗೆ ಬಸುರಾದಾಗ ಅದರಂತೆಯೇ ಆಯಿತು. 11-12 ಆ ಮಕ್ಕಳು ಒಬ್ಬ ತಂದೆಯ ಮಕ್ಕಳಾಗಿದ್ದರೂ ಅವರು ಇನ್ನು ಹುಟ್ಟದೆಯೂ ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ ಮಾಡದೆಯೂ ಇದ್ದಾಗ - ಹಿರಿಯನು ಕಿರಿಯನಿಗೆ ಸೇವೆ ಮಾಡುವನೆಂಬದಾಗಿ ಆಕೆಗೆ ಹೇಳಲ್ಪಟ್ಟಿತು. ಇದರಿಂದ ದೇವರು ತನಗೆ ಮನಸ್ಸಿದ್ದವರನ್ನು ಆರಿಸಿಕೊಳ್ಳುತ್ತಾನೆಂಬ ಸಂಕಲ್ಪವು ಸ್ಥಿರವಾಗಿರಬೇಕೆಂದು ತೋರಿಸಿದನು. ಆ ಸಂಕಲ್ಪವು ಪುಣ್ಯಕ್ರಿಯೆಗಳ ಮೇಲೆ ಆಧಾರಗೊಳ್ಳದೆ ಕರೆಯುವಾತನ ಚಿತ್ತದ ಮೇಲೆಯೇ ಆಧಾರಗೊಂಡಿದೆ. 13 ಇದಕ್ಕನುಸಾರವಾಗಿ - ಯಾಕೋಬನನ್ನು ಪ್ರೀತಿಸಿದನು, ಏಸಾವನನ್ನು ದ್ವೇಷಿಸಿದೆನು ಎಂದು ಬರೆದದೆ. ದೇವರು ಇಸ್ರಾಯೇಲ್ಯರನ್ನು ತಳ್ಳಿಬಿಟ್ಟದ್ದು ಆತನ ನ್ಯಾಯಕ್ಕೆ ವಿರುದ್ಧವಾದದ್ದಲ್ಲ 14 ಹಾಗಾದರೆ ಏನು ಹೇಳೋಣ? ದೇವರಲ್ಲಿ ಅನ್ಯಾಯ ಉಂಟೋ? ಎಂದಿಗೂ ಇಲ್ಲ. 15 ಯಾವನ ಮೇಲೆ ನನ್ನ ಕರುಣೆ ಉಂಟೋ ಅವನನ್ನು ಕರುಣಿಸುವೆನು, ಯಾವನ ಮೇಲೆ ನನ್ನ ಕನಿಕರವದೆಯೋ ಅವನಿಗೆ ಕನಿಕರ ತೋರಿಸುವೆನು ಎಂದು ದೇವರು ಮೋಶೆಗೆ ಹೇಳಿರುತ್ತಾನಷ್ಟೆ. 16 ಆದದರಿಂದ ದೇವರ ದಯವು ಮನುಷ್ಯರಿಗೆ ಇಚ್ಫೈಸುವದರಿಂದಾಗಲಿ ಪ್ರಯತ್ನಿಸುವದರಿಂದಾಗಲಿ ದೊರೆಯದೆ ದೇವರು ಕರುಣಿಸುವದರಿಂದಲೇ ದೊರೆಯುತ್ತದೆ. 17 ದೇವರು ಫರೋಹನನ್ನು ಕುರಿತು - ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಖ್ಯಾತಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಉನ್ನತಸ್ಥಾನಕ್ಕೆ ತಂದಿದ್ದೇನೆಂದು ಹೇಳಿದನೆಂಬದಾಗಿ ಶಾಸ್ತ್ರೋಕ್ತಿ ಉಂಟು. 18 ದೇವರು ಯಾರನ್ನು ಕರುಣಿಸಿದರೂ ಯಾರನ್ನು ಕಠಿಣಪಡಿಸಿದರೂ ಅದೆಲ್ಲವು ಆತನ ಇಷ್ಟಾನುಸಾರವಾಗಿಯೇ ಇದೆ ಎಂಬದು ಇದರಿಂದ ತೋರಿಬರುತ್ತದೆ. 19 ದೇವರ ಇಷ್ಟವನ್ನು ಎದುರಿಸುವವರು ಇಲ್ಲದಿರುವಲ್ಲಿ ಆತನು ತಪ್ಪುಹಿಡಿಯುವದು ಹೇಗೆ ಎಂದು ನನ್ನನ್ನು ಕೇಳುವಿ. 20 ಎಲೋ ಮನುಷ್ಯನೇ, ಹಾಗನ್ನಬೇಡ; ದೇವರಿಗೆ ಎದುರುಮಾತಾಡುವದಕ್ಕೆ ನೀನು ಎಷ್ಟರವನು? ರೂಪಿಸಲ್ಪಟ್ಟದ್ದು ರೂಪಿಸಿದವನಿಗೆ - ನನ್ನನ್ನು ಹೀಗೇಕೆ ಮಾಡಿದೆ ಎಂದು ಕೇಳುವದುಂಟೇ? 21 ಉತ್ತಮವಾದ ಬಳಕೆಗೆ ಒಂದು ಪಾತ್ರೆಯನ್ನೂ ಹೀನವಾದ ಬಳಕೆಗೆ ಮತ್ತೊಂದು ಪಾತ್ರೆಯನ್ನೂ ಒಂದೇ ಮುದ್ದೆಯಿಂದ ಮಾಡುವದಕ್ಕೆ ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿಲ್ಲವೋ? 22 ಆದರೆ ದೇವರು ತನ್ನ ಕೋಪವನ್ನು ತೋರಿಸಿ ತನ್ನ ಶಕ್ತಿಯನ್ನು ಪ್ರಸಿದ್ಧಿಪಡಿಸಬೇಕೆಂದಿದ್ದರೂ ಹಾಗೆ ಮಾಡದೆ ತನ್ನ ಕೋಪಕ್ಕೆ ಗುರಿಯಾದ ನಾಶನಪಾತ್ರರನ್ನು ಬಹು ಸೈರಣೆಯಿಂದ ಸೈರಿಸಿಕೊಂಡಿದ್ದಾನೆ. 23 ಮತ್ತು ಪ್ರಭಾವ ಹೊಂದುವದಕ್ಕೆ ತಾನು ಮುಂದಾಗಿ ಸಿದ್ಧಮಾಡಿದ ಕರುಣಾಪಾತ್ರರಲ್ಲಿ ತನ್ನ ಮಹಿಮಾತಿಶಯವನ್ನು ತೋರ್ಪಡಿಸಿದ್ದಾನೆ. 24 ಆತನು ಕರುಣಿಸಿದ ನಮ್ಮನ್ನು ಯೆಹೂದ್ಯರೊಳಗಿಂದ ಮಾತ್ರ ಕರೆಯದೆ ಹೋಶೇಯನ ಗ್ರಂಥದ ವಚನದಲ್ಲಿ ತಾನು ಸೂಚಿಸಿದಂತೆ ಅನ್ಯಜನರೊಳಗಿಂದ ಸಹ ಕರೆದನು. 25 ಆ ವಚನವೇನಂದರೆ - ನನ್ನ ಜನವಲ್ಲದ್ದನ್ನು ನನ್ನ ಜನವೆಂದೂ ನನಗೆ ಅಪ್ರಿಯವಾದವಳನ್ನು ಪ್ರಿಯಳೆಂದೂ ಹೇಳುವೆನು. 26 ಮತ್ತು ಯಾವ ಸ್ಥಳದಲ್ಲಿ - ನೀವು ನನ್ನ ಜನರಲ್ಲವೆಂದು ಅವರಿಗೆ ಹೇಳಲ್ಪಟ್ಟಿತೋ ಆ ಸ್ಥಳದಲ್ಲಿಯೇ ಅವರು ಜೀವವುಳ್ಳ ದೇವರ ಪುತ್ರರು ಎನಿಸಿಕೊಳ್ಳುವರು ಎಂಬದು. 27 ಇದಲ್ಲದೆ ಯೆಶಾಯನು ಇಸ್ರಾಯೇಲ್ ಜನರ ವಿಷಯದಲ್ಲಿ - ಕರ್ತನು ಈ ದೇಶದವರ ವಿಷಯ ಪೂರ್ಣವಾಗಿಯೂ ತೀವ್ರವಾಗಿಯೂ ಲೆಕ್ಕವನ್ನು ತೀರಿಸುವನಾದದರಿಂದ ಇಸ್ರಾಯೇಲ್ಯರ ಸಂಖ್ಯೆಯು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿದ್ದರೂ ಅವರಲ್ಲಿ ಒಂದು ಅಂಶ ಮಾತ್ರ ರಕ್ಷಣೆಹೊಂದುವದೆಂದು ಕೂಗಿ ಹೇಳುತ್ತಾನೆ. 28 ಅದೇ ಅಭಿಪ್ರಾಯದಿಂದ ಯೆಶಾಯನು ಮತ್ತೊಂದು ವಚನದಲ್ಲಿ - 29 ಸೇನಾಧೀಶ್ವರನಾದ ಕರ್ತನು ನಮಗೆ ಸಂತಾನವನ್ನು ಉಳಿಸದೆ ಹೋಗಿದ್ದರೆ ಸೊದೋವಿುನ ಗತಿಯೇ ನಮಗಾಗುತ್ತಿತ್ತು, ಗೊಮೋರದ ದುರ್ದಶೆಯೇ ಸಂಭವಿಸುತ್ತಿತ್ತು ಎಂದು ಹೇಳುತ್ತಾನೆ. ಇಸ್ರಾಯೇಲ್ಯರನ್ನು ದೇವರು ತಳ್ಳಿಬಿಟ್ಟದ್ದಕ್ಕೆ ಇಸ್ರಾಯೇಲ್ಯರೇ ಕಾರಣ 30 ಹಾಗಾದರೆ ಏನು ಹೇಳೋಣ? ನೀತಿಯನ್ನು ಹೊಂದುವದಕ್ಕೆ ಪ್ರಯತ್ನಮಾಡದ ಅನ್ಯಜನರಿಗೆ ನೀತಿಯು ಅಂದರೆ ನಂಬಿಕೆಯಿಂದುಂಟಾಗುವ ನೀತಿಯು ದೊರಕಿತು. 31 ಆದರೆ ಇಸ್ರಾಯೇಲ್ಯರು ನೀತಿಯನ್ನು ದೊರಕಿಸುವ ಧರ್ಮವನ್ನು ಹಿಡಿಯಬೇಕೆಂದು ಪ್ರಯತ್ನಿಸಿದರೂ ಆ ಧರ್ಮವನ್ನು ಹಿಡಿಯಲಾರದೆ ಹೋದರೆಂದು ಹೇಳಬೇಕು. 32 ಅದಕ್ಕೆ ಕಾರಣವೇನು? ಅವರು ನಂಬಿಕೆಯನ್ನು ಆಧಾರಮಾಡಿಕೊಳ್ಳದೆ ನೇಮನಿಷ್ಠೆಗಳನ್ನು ಆಧಾರಮಾಡಿಕೊಂಡದ್ದೇ ಕಾರಣ. 33 ಇಗೋ, ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆಂತಲೂ ಅದರ ಮೇಲೆ ನಂಬಿಕೆಯಿಡುವವನು ಆಶಾಭಂಗಪಡುವದಿಲ್ಲವೆಂತಲೂ ಶಾಸ್ತ್ರದಲ್ಲಿ ಬರೆದದೆಯಲ್ಲಾ. ಆ ಎಡವುವ ಕಲ್ಲಿಗೆ ಅವರು ಎಡವಿಬಿದ್ದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India