Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ರೋಮಾಪುರದವರಿಗೆ 7 - ಕನ್ನಡ ಸತ್ಯವೇದವು J.V. (BSI)


ಕ್ರಿಸ್ತನಲ್ಲಿ ಐಕ್ಯವಾದವರಿಗೆ ಧರ್ಮಶಾಸ್ತ್ರದ ಹಂಗು ತಪ್ಪಿದ್ದು

1 ಸಹೋದರರೇ, ಧರ್ಮಶಾಸ್ತ್ರವನ್ನು ತಿಳಿದವರಿಗೆ ನಾನು ಹೇಳುವದೇನಂದರೆ - ಒಬ್ಬ ಮನುಷ್ಯನು ಜೀವದಿಂದಿರುವ ತನಕ ಮಾತ್ರ ಅವನ ಮೇಲೆ ಧರ್ಮಶಾಸ್ತ್ರದ ಅಧಿಕಾರವು ನಡೆಯುತ್ತದೆಂಬದು ನಿಮಗೆ ಗೊತ್ತಿಲ್ಲವೇ?

2 ಅದಕ್ಕೆ ದೃಷ್ಟಾಂತ - ಗಂಡನು ಜೀವದಿಂದಿರುವ ತನಕ ಹೆಂಡತಿಯು ನ್ಯಾಯದ ಪ್ರಕಾರ ಅವನಿಗೆ ಬದ್ಧಳಾಗಿರುವಳು; ಗಂಡನು ಸತ್ತರೆ ಗಂಡನ ಹಂಗು ಆಕೆಗೆ ತಪ್ಪುವದು.

3 ಹೀಗಿರಲಾಗಿ ಗಂಡನು ಜೀವದಿಂದಿರುವಾಗ ಆಕೆ ಬೇರೊಬ್ಬನನ್ನು ಸೇರಿದರೆ ವ್ಯಭಿಚಾರಿಣಿ ಎನಿಸಿಕೊಳ್ಳುವಳು. ಆದರೆ ಗಂಡನು ಸತ್ತ ಮೇಲೆ ಅವನ ಹಂಗು ತಪ್ಪಿದ್ದರಿಂದ ಆಕೆ ಮತ್ತೊಬ್ಬ ಗಂಡನನ್ನು ಮಾಡಿಕೊಂಡರೂ ವ್ಯಭಿಚಾರಿಣಿಯಲ್ಲ.

4 ಹಾಗೆಯೇ ನನ್ನ ಸಹೋದರರೇ, ನೀವು ಸಹ ಕ್ರಿಸ್ತನ ದೇಹದ ಮೂಲಕವಾಗಿ ಧರ್ಮಶಾಸ್ತ್ರದ ಪಾಲಿಗೆ ಸತ್ತಿರಿ. ದೇವರಿಗೆ ಫಲವಾಗುವದಕ್ಕಾಗಿ ಮತ್ತೊಬ್ಬನನ್ನು ಅಂದರೆ ಸತ್ತು ಜೀವಿತನಾಗಿ ಎದ್ದಾತನನ್ನು ಸೇರಿಕೊಂಡಿರಿ.

5 ನಾವು ಶರೀರಾಧೀನಸ್ವಭಾವವನ್ನು ಅನುಸರಿಸುತ್ತಿದ್ದಾಗ ದುರಾಶೆಗಳು ಧರ್ಮಶಾಸ್ತ್ರದಿಂದಲೇ ಪ್ರೇರಿತವಾಗಿ ನಮ್ಮ ಅಂಗಗಳಲ್ಲಿ ಯತ್ನೈಸುತ್ತಾ ಮರಣಕ್ಕೆ ಫಲವನ್ನು ಹುಟ್ಟಿಸುತ್ತಿದ್ದವು.

6 ಈಗಲಾದರೋ ನಮ್ಮನ್ನು ವಶಮಾಡಿಕೊಂಡಿದ್ದ ಧರ್ಮಶಾಸ್ತ್ರದ ಪಾಲಿಗೆ ನಾವು ಸತ್ತಕಾರಣ ಆ ಧರ್ಮಶಾಸ್ತ್ರದಿಂದ ವಿಮುಕ್ತರಾಗಿದ್ದೇವೆ. ಹೀಗಿರಲಾಗಿ ಶಾಸ್ತ್ರದ ಹೊರಗಣ ಅರ್ಥಕ್ಕೆ ಅನುಕೂಲವಾದ ಹಳೇ ರೀತಿಯಲ್ಲಿ ನಾವು ದೇವರನ್ನು ಸೇವಿಸುವವರಲ್ಲ. ಪವಿತ್ರಾತ್ಮಪ್ರೇರಿತವಾದ ಹೊಸ ರೀತಿಯಲ್ಲಿ ಆತನನ್ನು ಸೇವಿಸುವವರಾಗಿದ್ದೇವೆ.


ಪಾಪದಿಂದ ಬಿಡಿಸಲು ಧರ್ಮಶಾಸ್ತ್ರಕ್ಕೆ ಶಕ್ತಿಸಾಲದು

7 ಹಾಗಾದರೆ ಏನು ಹೇಳೋಣ? ಧರ್ಮಶಾಸ್ತ್ರವು ಪಾಪಸ್ವರೂಪವೋ? ಎಂದಿಗೂ ಅಲ್ಲ. ಧರ್ಮಶಾಸ್ತ್ರದಿಂದಲೇ ಹೊರತು ಪಾಪವೆಂಬದು ಏನೋ ನನಗೆ ಗೊತ್ತಾಗುತ್ತಿರಲಿಲ್ಲ. ದೃಷ್ಟಾಂತವಾಗಿ, ಆಶಿಸಬಾರದೆಂದು ಧರ್ಮಶಾಸ್ತ್ರವು ಹೇಳದಿದ್ದರೆ ದುರಾಶೆಯೆಂದರೆ ಏನೋ ನನಗೆ ತಿಳಿಯುತ್ತಿದ್ದಿಲ್ಲ.

8 ಆದರೆ ಪಾಪವು ಈ ಆಜ್ಞೆಯಿಂದ ಅನುಕೂಲ ಹೊಂದಿ ಸಕಲವಿಧವಾದ ದುರಾಶೆಗಳನ್ನು ನನ್ನಲ್ಲಿ ಹುಟ್ಟಿಸಿತು. ಧರ್ಮಶಾಸ್ತ್ರವು ಇಲ್ಲದಿರುವಾಗ ಪಾಪವು ಅಚೇತನವಾಗಿದೆ.

9 ಮೊದಲು ನಾನು ಧರ್ಮಶಾಸ್ತ್ರವಿಲ್ಲದವನಾಗಿದ್ದು ಜೀವದಿಂದಿದ್ದೆನು. ಆಜ್ಞೆಯು ಬಂದಾಗ ಪಾಪಕ್ಕೆ ಜೀವ ಬಂತು, ನಾನು ಸತ್ತೆನು.

10 ಜೀವಿಸುವದಕ್ಕಾಗಿ ಕೊಟ್ಟಿರುವ ಆಜ್ಞೆಯೇ ಮರಣಕ್ಕೆ ಕಾರಣವಾಯಿತೆಂದು ನನಗೆ ಕಂಡು ಬಂತು.

11 ಹೇಗಂದರೆ ಪಾಪವು ಆಜ್ಞೆಯಿಂದ ಅನುಕೂಲಹೊಂದಿ ನನ್ನನ್ನು ವಂಚಿಸಿ ಆ ಆಜ್ಞೆಯ ಮೂಲಕವೇ ನನ್ನನ್ನು ಕೊಂದಿತು.

12 ಹೀಗಿರಲಾಗಿ ಧರ್ಮಶಾಸ್ತ್ರವು ಪರಿಶುದ್ಧವಾದದ್ದು. ಮತ್ತು ಆಜ್ಞೆಯು ಪರಿಶುದ್ಧವೂ ನ್ಯಾಯವೂ ಹಿತವೂ ಆಗಿರುವಂಥದು ಸರಿ.

13 ಹಾಗಾದರೆ ಹಿತವಾದದ್ದು ನನಗೆ ಮರಣಕ್ಕೆ ಕಾರಣವಾಯಿತೋ? ಹಾಗೆ ಎಂದಿಗೂ ಹೇಳಬಾರದು. ಪಾಪವೇ ಮರಣಕ್ಕೆ ಕಾರಣವಾದದ್ದು; ಅದು ಹಿತವಾದದರ ಮೂಲಕ ನನಗೆ ಮರಣವನ್ನು ಉಂಟುಮಾಡಿದ್ದರಿಂದ ಪಾಪವೇ ಎಂದು ಕಾಣಿಸಿಕೊಂಡಿತು; ಮತ್ತು ಆಜ್ಞೆಯ ಮೂಲಕ ಪಾಪವು ಕೇವಲ ಪಾಪಸ್ವರೂಪವೇ ಎಂದು ಕಾಣಬಂತು.

14 ಧರ್ಮಶಾಸ್ತ್ರವು ಪಾರಮಾರ್ಥಿಕವಾದದ್ದೆಂದು ನಾವು ಬಲ್ಲೆವು. ಆದರೆ ನಾನು ದೇಹಧರ್ಮಕ್ಕೆ ಒಳಗಾದವನೂ ಪಾಪದ ಸ್ವಾಧೀನದಲ್ಲಿರುವದಕ್ಕೆ ಮಾರಲ್ಪಟ್ಟವನೂ ಆಗಿದ್ದೇನೆ.

15 ಹೇಗಂದರೆ ನಾನು ಮಾಡುವದು ನನಗೇ ಗೊತ್ತಿಲ್ಲ; ಯಾವದನ್ನು ಮಾಡಬೇಕೆಂದು ನಾನು ಇಚ್ಫೈಸುತ್ತೇನೋ ಅದನ್ನು ನಡಿಸದೆ ನನಗೆ ಅಸಹ್ಯವಾದದ್ದನ್ನು ಮಾಡುತ್ತೇನೆ.

16 ಆದರೆ ನಾನು ಮಾಡುವಂಥದಕ್ಕೆ ನನ್ನ ಮನಸ್ಸು ಒಪ್ಪದಿದ್ದರೆ ಧರ್ಮಶಾಸ್ತ್ರವು ಉತ್ತಮವಾದದ್ದೆಂದು ಒಪ್ಪಿಕೊಂಡ ಹಾಗಾಯಿತು.

17 ಹೀಗಿರಲಾಗಿ ಆ ಅಸಹ್ಯವಾದದ್ದನ್ನು ಮಾಡುವವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡುತ್ತದೆ.

18 ನನ್ನಲ್ಲಿ ಅಂದರೆ ನನ್ನ ಶರೀರಾಧೀನಸ್ವಭಾವದಲ್ಲಿ ಒಳ್ಳೇದೇನೂ ವಾಸವಾಗಿಲ್ಲವೆಂದು ನನಗೆ ತಿಳಿದದೆ. ಒಳ್ಳೇದನ್ನು ಮಾಡುವದಕ್ಕೆ ನನಗೇನೋ ಮನಸ್ಸುಂಟು; ಆದರೆ ಅದನ್ನು ಮಾಡುವದು ನನ್ನಿಂದಾಗದು.

19 ನಾನು ಮೆಚ್ಚುವ ಒಳ್ಳೇ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ.

20 ಮಾಡಬಾರದೆನ್ನುವ ಕೆಲಸವನ್ನು ನಾನು ಮಾಡಿದರೆ ಅದನ್ನು ಮಾಡಿದವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು.

21 ಹೀಗಿರಲಾಗಿ ಒಳ್ಳೇದನ್ನು ಮಾಡಬೇಕೆಂದಿರುವ ನನಗೆ ಕೆಟ್ಟದ್ದೇ ಸಿದ್ಧವಾಗಿದೆಯೆಂಬ ನಿಯಮ ನನಗೆ ಕಾಣಬರುತ್ತದೆ.

22 ಅಂತರಾತ್ಮದೊಳಗೆ ದೇವರ ನಿಯಮದಲ್ಲಿ ಆನಂದ ಪಡುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮ ಉಂಟೆಂದು ನೋಡುತ್ತೇನೆ.

23 ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದಾಗಿದೆ.

24 ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು?

25 ಬಿಡಿಸುವವನು ಇದ್ದಾನೆಂಬದಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ. ಹೀಗಿರಲಾಗಿ ನನ್ನಷ್ಟಕ್ಕೆ ನಾನೇ ಮನಸ್ಸಿನಿಂದ ದೇವರ ನಿಯಮಕ್ಕೆ ಆಳಾಗಿಯೂ ಶರೀರಭಾವದಿಂದ ಪಾಪವೆಂಬ ನಿಯಮಕ್ಕೆ ಆಳಾಗಿಯೂ ನಡಕೊಳ್ಳುವವನಾಗಿದ್ದೇನೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು