Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ರೋಮಾಪುರದವರಿಗೆ 5 - ಕನ್ನಡ ಸತ್ಯವೇದವು J.V. (BSI)


ನಂಬಿರುವವರಿಗೆ ರಕ್ಷಣೆ ತಪ್ಪುವದಿಲ್ಲವೆಂಬ ಸಿದ್ಧಾಂತ

1 ಹೀಗಿರಲಾಗಿ ನಾವು ನಂಬಿಕೆಯಿಂದ ನೀತಿವಂತರಾದ ಕಾರಣ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೊಂದಿಗೆ ಉಂಟಾದ ಸಮಾಧಾನದಲ್ಲಿ ಇರೋಣ.

2 ನಾವು ಈಗ ನೆಲೆಗೊಂಡಿರುವ ದೇವರ ಕೃಪಾಶ್ರಯದಲ್ಲಿ ಆತನ ಮುಖಾಂತರವೇ ನಂಬಿಕೆಯಿಂದ ಪ್ರವೇಶವಾಯಿತು. ಮತ್ತು ದೇವರ ಮಹಿಮೆಯನ್ನು ಹೊಂದುವೆವೆಂಬ ಭರವಸದಿಂದ ಉಲ್ಲಾಸವಾಗಿದ್ದೇವೆ.

3 ಇದು ಮಾತ್ರವಲ್ಲದೆ ನಮಗೆ ಉಂಟಾಗುವ ಉಪದ್ರವಗಳಲ್ಲಿಯೂ ಉಲ್ಲಾಸವಾಗಿದ್ದೇವೆ.

4 ಯಾಕಂದರೆ ಉಪದ್ರವದಿಂದ ತಾಳ್ಮೆ ಹುಟ್ಟುತ್ತದೆ, ತಾಳ್ಮೆಯಿಂದ ಅನುಭವಸಿದ್ಧಿ ಹುಟ್ಟುತ್ತದೆ, ಅನುಭವದಿಂದ ನಿರೀಕ್ಷಣ ಹುಟ್ಟುತ್ತದೆಂದು ಬಲ್ಲೆವು.

5 ಈ ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವದಿಲ್ಲ; ನಮಗೆ ಕೊಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿರಸವು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿದದೆಯಲ್ಲಾ.

6 ನಾವು ಅಶಕ್ತರಾಗಿದ್ದಾಗಲೇ ಕ್ರಿಸ್ತನು ನೇವಿುತ ಕಾಲದಲ್ಲಿ ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟನು.

7 ನೀತಿವಂತರಿಗೋಸ್ಕರ ಯಾರಾದರೂ ಪ್ರಾಣಕೊಡುವದು ಅಪರೂಪ. ಉಪಕಾರಿಗೋಸ್ಕರ ಪ್ರಾಣಕೊಡುವದಕ್ಕೆ ಯಾವನಾದರೂ ಧೈರ್ಯಮಾಡಿದರೂ ಮಾಡಾನು.

8 ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.

9 ಈಗ ನಾವು ಆತನ ರಕ್ತದಿಂದ ನೀತಿವಂತರಾಗಿರಲಾಗಿ ಆತನ ಮೂಲಕ ಬರುವ ಕೋಪಕ್ಕೆ ತಪ್ಪಿಸಿಕೊಳ್ಳುವದು ಮತ್ತೂ ನಿಶ್ಚಯವಲ್ಲವೇ.

10 ದೇವರಿಗೆ ವೈರಿಗಳಾಗಿದ್ದ ನಾವು ಆತನ ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನವಾಗಿರಲಾಗಿ ಆತನ ಕೂಡ ಸಮಾಧಾನವಾದ ನಮಗೆ ಆ ಮಗನಿಗಿರುವ ಜೀವದಿಂದ ರಕ್ಷಣೆಯಾಗುವದು ಮತ್ತೂ ನಿಶ್ಚಯವಲ್ಲವೇ.

11 ಇಷ್ಟು ಮಾತ್ರವೇ ಅಲ್ಲದೆ ನಾವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಸಮಾಧಾನಸ್ಥಿತಿ ಹೊಂದಿದವರಾಗಿ ಆತನ ಮುಖಾಂತರ ದೇವರಲ್ಲಿ ಹರ್ಷಗೊಳ್ಳುತ್ತೇವೆ.


ಆದಾಮನಿಂದ ಎಲ್ಲರಿಗೂ ಮರಣವಾದಂತೆ ಕ್ರಿಸ್ತನನ್ನು ನಂಬಿದವರೆಲ್ಲರಿಗೂ ರಕ್ಷಣೆಯಾಗುವದೆಂಬ ಸಿದ್ಧಾಂತ

12 ಈ ವಿಷಯ ಹೇಗಂದರೆ - ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.

13 ಧರ್ಮಶಾಸ್ತ್ರ ಉಂಟಾಗುವದಕ್ಕೆ ಮುಂಚೆಯೇ ಪಾಪವು ಲೋಕದಲ್ಲಿತ್ತು; ಆದರೆ ಧರ್ಮಶಾಸ್ತ್ರವಿಲ್ಲದಿರುವಾಗ ಪಾಪವು ಲೆಕ್ಕಕ್ಕೆ ಬರುವದಿಲ್ಲ.

14 ಆದರೂ ಆದಾಮನ ಕಾಲದಿಂದ ಮೋಶೆಯ ಕಾಲದವರೆಗೂ ಮರಣದ ಆಳಿಕೆಯು ನಡೆಯುತ್ತಿತ್ತು. ಆದಾಮನು ದೇವಾಜ್ಞೆಮೀರಿ ಮಾಡಿದ ಪಾಪಕ್ಕೆ ಸಮಾನವಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ ಅದು ನಡೆಯುತ್ತಿತ್ತು. ಆ ಆದಾಮನು ಬರಬೇಕಾದ ಒಬ್ಬಾತನಿಗೆ ಸೂಚಕಪುರುಷನಾಗಿದ್ದಾನೆ.

15 ಆದರೆ ಆ ಅಪರಾಧದ ಸಂಗತಿಗೂ ದೇವರ ಕೃಪಾದಾನದ ಸಂಗತಿಗೂ ಬಹಳ ಹೆಚ್ಚುಕಡಿಮೆ ಉಂಟು. ಹೇಗಂದರೆ ಆ ಒಬ್ಬನ ಅಪರಾಧದಿಂದ ಎಲ್ಲಾ ಮನುಷ್ಯರು ಸತ್ತದ್ದು ನಿಶ್ಚಯವಾಗಿರಲಾಗಿ ದೇವರ ಕೃಪೆಯೂ ಯೇಸು ಕ್ರಿಸ್ತನೆಂಬ ಈ ಒಬ್ಬ ಪುರುಷನ ಕೃಪೆಯಿಂದ ಸಿಕ್ಕುವ ವರವೂ ಎಲ್ಲಾ ಮನುಷ್ಯರಿಗೆ ಹೇರಳವಾಗಿ ಸಿದ್ಧವಾಗಿರುವದು ಮತ್ತೂ ನಿಶ್ಚಯವಲ್ಲವೇ.

16 ಇದಲ್ಲದೆ ಪಾಪಮಾಡಿದ ಒಬ್ಬನಿಂದಲೇ ದುಷ್ಫಲ ಬಂದಂತೆ ಈ ವರವು ಬರಲಿಲ್ಲ; ಹೇಗಂದರೆ ಒಬ್ಬನೇ ಮನುಷ್ಯನ ಪಾಪದ ದೆಸೆಯಿಂದ ಸಾಯಬೇಕೆಂಬ ನಿರ್ಣಯವು ಉಂಟಾಯಿತು, ಆದರೆ ದೇವರ ಕೃಪಾದಾನವು ಅನೇಕರ ಅಪರಾಧಗಳ ಕಾರಣದಿಂದ ಉಂಟಾಗಿ ಅವರನ್ನು ನೀತಿವಂತರೆಂದು ನಿರ್ಣಯಿಸುವಂಥದಾಗಿದೆ.

17 ಒಬ್ಬನು ಮಾಡಿದ ಅಪರಾಧದಿಂದ ಮರಣವು ಉಂಟಾಗಿ ಆ ಒಬ್ಬನ ದೆಸೆಯಿಂದಲೇ ಆಳುವದಾದರೆ ದೇವರು ಧಾರಾಳವಾಗಿ ಅನುಗ್ರಹಿಸುವ ಕೃಪಾದಾನವನ್ನೂ ನೀತಿಯೆಂಬ ವರವನ್ನೂ ಹೊಂದಿದವರು ಯೇಸು ಕ್ರಿಸ್ತನೆಂಬ ಈ ಒಬ್ಬ ಪುರುಷನ ಮೂಲಕ ಜೀವಭರಿತರಾಗಿ ಆಳುವದು ಮತ್ತೂ ನಿಶ್ಚಯವಲ್ಲವೇ.

18 ಹೀಗಿರಲಾಗಿ ಒಂದೇ ಅಪರಾಧದ ಮೂಲಕ ಎಲ್ಲಾ ಮನುಷ್ಯರಿಗೆ ಸಾಯಬೇಕೆಂಬ ನಿರ್ಣಯವು ಹೇಗೆ ಉಂಟಾಯಿತೋ ಹಾಗೆಯೇ ಒಂದೇ ಸತ್ಕಾರ್ಯದಿಂದ ಎಲ್ಲಾ ಮನುಷ್ಯರಿಗೆ ನೀತಿವಂತರೆಂಬ ನಿರ್ಣಯವು ಉಂಟಾಗಿ ಜೀವವನ್ನು ಫಲಿಸುತ್ತದೆ.

19 ಒಬ್ಬನ ಅವಿಧೇಯತ್ವದಿಂದ ಎಲ್ಲರೂ ಹೇಗೆ ಪಾಪಿಗಳಾದರೋ ಹಾಗೆಯೇ ಒಬ್ಬನ ವಿಧೇಯತ್ವದಿಂದ ಎಲ್ಲರೂ ನೀತಿವಂತರಾಗುವರು.

20 ಅಪರಾಧಗಳು ಹೆಚ್ಚಾಗಿ ಕಂಡುಬರುವ ಹಾಗೆ ಧರ್ಮಶಾಸ್ತ್ರವು ಮಧ್ಯೆ ಬಂತು. ಆದರೆ ಪಾಪವು ಹೆಚ್ಚಿದಲ್ಲೇ ಕೃಪೆಯು ಎಷ್ಟೋ ಹೆಚ್ಚಾಗಿ ಪ್ರಬಲವಾಯಿತು.

21 ಹೀಗೆ ಪಾಪವು ಮರಣವನ್ನುಂಟುಮಾಡುತ್ತಾ ಅಧಿಕಾರವನ್ನು ನಡಿಸಿದ ಹಾಗೆಯೇ ದೇವರ ಕೃಪೆಯು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನೀತಿಯನ್ನು ಕೊಟ್ಟು ನಿತ್ಯಜೀವವನ್ನುಂಟುಮಾಡುತ್ತಾ ಅಧಿಕಾರವನ್ನು ನಡಿಸುವದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು