ರೋಮಾಪುರದವರಿಗೆ 4 - ಕನ್ನಡ ಸತ್ಯವೇದವು J.V. (BSI)ಅಬ್ರಹಾಮನಾದರೂ ನಂಬಿಕೆಯಿಂದಲೇ ನೀತಿವಂತನಾದನೆಂಬ ತರ್ಕ 1 ಹಾಗಾದರೆ ವಂಶಾನುಕ್ರಮವಾಗಿ ನಮಗೆ ಮೂಲಪಿತೃವಾಗಿರುವ ಅಬ್ರಹಾಮನು ಏನು ಪಡಕೊಂಡನೆಂದು ಹೇಳಬೇಕು? 2 ಅಬ್ರಹಾಮನು ಪುಣ್ಯಕ್ರಿಯೆಗಳಿಂದಲೇ ನೀತಿವಂತನಾದ ಪಕ್ಷದಲ್ಲಿ ಹೊಗಳಿಕೊಳ್ಳುವದಕ್ಕೆ ಅವನಿಗೆ ಆಸ್ಪದವಿರುವದು. ಆದರೆ ದೇವರ ಮುಂದೆ ಹೊಗಳಿಕೊಳ್ಳುವದಕ್ಕೆ ಆಸ್ಪದವಿರುವದಿಲ್ಲ. 3 ಇದರ ವಿಷಯದಲ್ಲಿ ಶಾಸ್ತ್ರವು ಹೇಳುವದನ್ನು ಆಲೋಚಿಸಿರಿ. ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲ್ಪಟ್ಟಿತು ಎಂದು ಹೇಳುತ್ತದೆ. 4 ಕೆಲಸ ಮಾಡಿದವನಿಗೆ ಬರುವ ಕೂಲಿಯು ದಯದಿಂದ ದೊರಕುವಂಥದೆಂದು ಎಣಿಕೆಯಾಗುವದಿಲ್ಲ; ಅದು ಸಲ್ಲತಕ್ಕದ್ದೇ ಎಂದು ಎಣಿಕೆಯಾಗುವದು. 5 ಆದರೆ ಯಾವನು ಪುಣ್ಯಕ್ರಿಯೆಗಳನ್ನು ಮಾಡಿದವನಾಗಿರದೆ ಪಾಪಾತ್ಮರನ್ನು ನೀತಿವಂತರೆಂದು ನಿರ್ಣಯಿಸುವಾತನಲ್ಲಿ ನಂಬಿಕೆಯಿಡುತ್ತಾನೋ ಅವನ ನಂಬಿಕೆಯೇ ನೀತಿ ಎಂದು ಎಣಿಸಲ್ಪಡುವದು. 6 ದೇವರು ಯಾವನನ್ನು ಪುಣ್ಯಕ್ರಿಯೆಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾನೋ ಅವನು ಧನ್ಯನೆಂದು ದಾವೀದನು ಸಹ ಹೇಳುತ್ತಾನೆ. ಹೇಗಂದರೆ - 7 ಯಾರ ಅಪರಾಧಗಳು ಪರಿಹಾರವಾಗಿವೆಯೋ, ಯಾರ ಪಾಪಗಳು ಕ್ಷವಿುಸಲ್ಪಟ್ಟಿವೆಯೋ ಅವರೇ ಧನ್ಯರು. 8 ಕರ್ತನು ಯಾವನ ಪಾಪವನ್ನು ಲೆಕ್ಕಕ್ಕೆ ತರುವದಿಲ್ಲವೋ ಆ ಮನುಷ್ಯನೇ ಧನ್ಯನು. 9 ಈ ಶುಭವಚನವು ಸುನ್ನತಿಯಿದ್ದವರಿಗೆ ಮಾತ್ರವೋ? ಸುನ್ನತಿಯಿಲ್ಲದವರಿಗೆ ಸಹ ಆಗುತ್ತದೋ? ನೋಡೋಣ. ಅಬ್ರಹಾಮನ ಲೆಕ್ಕಕ್ಕೆ ಅವನ ನಂಬಿಕೆಯೇ ನೀತಿಯೆಂದು ಎಣಿಸಲ್ಪಟ್ಟಿತೆಂಬದಾಗಿ ಹೇಳುತ್ತೇವಲ್ಲಾ. 10 ಅದು ಯಾವಾಗ ಎಣಿಸಲ್ಪಟ್ಟಿತು? ಅವನಿಗೆ ಸುನ್ನತಿಯಾದ ಮೇಲೆಯೋ? ಸುನ್ನತಿಯಾಗುವದಕ್ಕೆ ಮೊದಲೋ? ಸುನ್ನತಿಯಾದ ಮೇಲೆ ಅಲ್ಲ, ಸುನ್ನತಿಯಾಗುವದಕ್ಕೆ ಮೊದಲೇ ಎಣಿಸಲ್ಪಟ್ಟಿತು. 11 ಆಮೇಲೆ ಸುನ್ನತಿಯೆಂಬ ಸಂಸ್ಕಾರವನ್ನು ಗುರುತಾಗಿ ಹೊಂದಿದನು. ಇದು ಸುನ್ನತಿಯಾಗುವದಕ್ಕೆ ಮೊದಲೇ ಅವನಿಗಿದ್ದ ನಂಬಿಕೆಯಿಂದಾದ ನೀತಿಗೆ ಮುದ್ರೆಯಾಗಿತ್ತು. ಹೀಗಿರುವದರಿಂದ ಅವನು ನಂಬುವವರೆಲ್ಲರಿಗೂ, ಅವರು ಸುನ್ನತಿಯಿಲ್ಲದವರಾದಾಗ್ಯೂ ಮೂಲತಂದೆಯಾದನು; ಅವರೂ ನೀತಿವಂತರೆಂದು ಎಣಿಸಲ್ಪಡುವರು. 12 ಇದಲ್ಲದೆ ಸುನ್ನತಿಯವರಲ್ಲಿ ಯಾರಾರು ಸುನ್ನತಿ ಹೊಂದಿದ್ದಲ್ಲದೆ ನಮ್ಮ ಪಿತೃವಾಗಿರುವ ಅಬ್ರಹಾಮನಿಗೆ ಸುನ್ನತಿಯಾಗುವದಕ್ಕೆ ಮುಂಚೆ ಇದ್ದ ನಂಬಿಕೆಯ ಹೆಜ್ಜೆಗಳನ್ನು ಹಿಡಿದು ನಡೆಯುತ್ತಾರೋ ಅವರಿಗೆ ಸಹ ಮೂಲ ತಂದೆಯಾಗಿದ್ದಾನೆ. 13 ನೀನು ಲೋಕಕ್ಕೆ ಬಾಧ್ಯನಾಗುವಿ ಎಂಬ ವಾಗ್ದಾನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿಗಾಗಲಿ ಧರ್ಮಶಾಸ್ತ್ರದಿಂದ ಆದದ್ದಲ್ಲ. ನಂಬಿಕೆಯೆಂಬ ನೀತಿಯಿಂದ ಆದದ್ದೇ. 14 ಧರ್ಮಶಾಸ್ತ್ರದವರು ಬಾಧ್ಯರಾಗಿದ್ದರೆ ನಂಬಿಕೆಯು ವ್ಯರ್ಥವಾಯಿತು, ವಾಗ್ದಾನವೂ ಬರೀದಾಯಿತು. 15 ಯಾಕಂದರೆ ಧರ್ಮಶಾಸ್ತ್ರವು ಜನರನ್ನು ದೇವರ ಕೋಪಕ್ಕೆ ಗುರಿಮಾಡುವಂಥದು. ಧರ್ಮಶಾಸ್ತ್ರವಿಲ್ಲದ ಪಕ್ಷದಲ್ಲಿ ಮೀರೋಣವೆಂಬದೂ ಇಲ್ಲ. 16 ಆದಕಾರಣ ಆ ಬಾಧ್ಯತೆಯು ಕೃಪೆಯಿಂದಲೇ ದೊರೆಯುವಂಥದಾಗಿರುವಂತೆ ಅದು ನಂಬಿಕೆಯ ಮೂಲಕ ಸಿಕ್ಕುತ್ತದೆ. ಹೀಗೆ ಆ ವಾಗ್ದಾನವು ಅಬ್ರಹಾಮನ ಸಂತತಿಯವರೆಲ್ಲರಿಗೂ, ಅಂದರೆ ಧರ್ಮಶಾಸ್ತ್ರವನ್ನು ಆಧಾರಮಾಡಿಕೊಂಡವರಿಗೆ ಮಾತ್ರವಲ್ಲದೆ ಅಬ್ರಹಾಮನಲ್ಲಿದ್ದಂಥ ನಂಬಿಕೆಯುಳ್ಳವರಿಗೆ ಸಹ ಸ್ಥಿರವಾಗಿ ನಿಲ್ಲುವದು. 17 ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತೃವಾಗಿ ನೇವಿುಸಿದ್ದೇನೆಂದು ಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಅಬ್ರಹಾಮನು ನಮ್ಮೆಲ್ಲರಿಗೂ ದೇವರ ಸನ್ನಿಧಿಯಲ್ಲಿ ಮೂಲ ಪಿತೃವಾಗಿದ್ದಾನೆ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಇಲ್ಲದ್ದನ್ನು ಇರುವದಾಗಿ ಕರೆಯುವವನಾಗಿಯೂ ಇದ್ದಾನೆಂದು ಅಬ್ರಹಾಮನು ನಂಬಿದನು. 18 ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವದು ಎಂಬದಾಗಿ ತನಗೆ ಹೇಳಲ್ಪಟ್ಟ ಮಾತು ನೆರವೇರುವದಕ್ಕೆ ಮಾರ್ಗ ತೋರದೆ ಇರುವದರಿಂದ ಅಬ್ರಹಾಮನು ತಾನು ಅನೇಕ ಜನಾಂಗಗಳಿಗೆ ಮೂಲಪಿತೃವಾಗುವೆನೆಂಬ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ ನಿರೀಕ್ಷಿಸಿ ನಂಬಿದನು. 19 ಅವನು ಹೆಚ್ಚುಕಡಿಮೆ ನೂರು ವರುಷದವನಾಗಿದ್ದು ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ ಸಾರಳಿಗೆ ಗರ್ಭಕಾಲ ಕಳೆದುಹೋಯಿತೆಂದೂ ಯೋಚಿಸಿದಾಗ್ಯೂ ಅವನ ನಂಬಿಕೆಯು ಕುಂದಲಿಲ್ಲ. 20 ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ. 21 ದೇವರನ್ನು ಘನಪಡಿಸುವವನಾಗಿ ಆತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟು ದೃಢನಂಬಿಕೆಯುಳ್ಳವನಾದನು. 22 ಆದದರಿಂದ ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು. 23 ಆದರೆ ಅದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತೆಂಬದು ಅವನಿಗೋಸ್ಕರ ಮಾತ್ರವಲ್ಲದೆ ನಮಗೋಸ್ಕರವೂ ಬರೆದಿರುವದು. 24 ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರನ್ನು ನಂಬುವ ನಮಗೂ ನಂಬಿಕೆಯು ನೀತಿಯೆಂದು ಎಣಿಸಲ್ಪಡುವದು. 25 ದೇವರು ಆತನನ್ನು ನಮ್ಮ ಅಪರಾಧಗಳ ನಿವಿುತ್ತ ಮರಣಕ್ಕೆ ಒಪ್ಪಿಸಿಕೊಟ್ಟು ನಮಗೆ ನೀತಿವಂತರೆಂಬ ನಿರ್ಣಯವು ಉಂಟಾಗುವ ನಿವಿುತ್ತ ಜೀವದಿಂದ ಎಬ್ಬಿಸಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India