Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ರೋಮಾಪುರದವರಿಗೆ 3 - ಕನ್ನಡ ಸತ್ಯವೇದವು J.V. (BSI)

1 ಹಾಗಾದರೆ ಯೆಹೂದ್ಯರ ಶ್ರೇಷ್ಠತ್ವವೇನು? ಸುನ್ನತಿಯಿಂದ ಲಾಭವೇನು?

2 ಎಲ್ಲಾ ವಿಷಯಗಳಲ್ಲಿಯೂ ಬಹಳ ಉಂಟು. ಮೊದಲನೇದಾಗಿ ದೈವೋಕ್ತಿಗಳು ಅವರ ವಶಕ್ಕೆ ಒಪ್ಪಿಸಲ್ಪಟ್ಟವು.

3 ಅವರಲ್ಲಿ ಕೆಲವರು ನಂಬದೆ ಹೋಗಿದ್ದರೇನು? ಅವರು ನಂಬದೆ ಹೋದದರಿಂದ ದೇವರು ವಚನಕ್ಕೆ ತಪ್ಪುವವನಾದನೋ? ಎಂದಿಗೂ ಇಲ್ಲ;

4 ಎಲ್ಲಾ ಮನುಷ್ಯರು ಸುಳ್ಳುಗಾರರಾದರೂ ದೇವರು ಸತ್ಯವಂತನೇ ಸರಿ. ನೀನು ಎಲ್ಲಾ ನುಡಿಗಳಲ್ಲಿ ನ್ಯಾಯಸ್ಥನೆಂದು ಕಾಣಿಸಿಕೊಳ್ಳಬೇಕು, ನಿನ್ನ ಮೇಲೆ ವ್ಯಾಜ್ಯ ನಡೆಯುವಾಗ ನೀನು ಗೆಲ್ಲಬೇಕು ಎಂದು ಬರೆದದೆ.

5 ನಾವು ನೀತಿ ತಪ್ಪಿನಡೆಯುವದರಿಂದ ದೇವರಲ್ಲಿರುವ ನೀತಿ ಪ್ರಸಿದ್ಧಿಗೆ ಬರುವದಾದರೆ ನಾವು ಏನು ಹೇಳೋಣ? ಉಗ್ರದಂಡನೆಯನ್ನು ಮಾಡುವ ದೇವರು ಅನ್ಯಾಯಸ್ಥನೇನು? (ಈ ಮಾತನ್ನು ಲೋಕರೀತಿಯಾಗಿ ಆಡಿದ್ದೇನೆ.) ಎಂದಿಗೂ ಅಲ್ಲ.

6 ದೇವರು ಅನ್ಯಾಯಸ್ಥನಾಗಿದ್ದರೆ ಲೋಕಕ್ಕೆ ಹೇಗೆ ನ್ಯಾಯತೀರಿಸಾನು?

7 ನನ್ನ ಸುಳ್ಳಿನಿಂದ ದೇವರ ಸತ್ಯವು ಪ್ರಸಿದ್ಧಿಗೆ ಬಂದು ಆತನ ಮಹಿಮೆ ಹೆಚ್ಚಾದರೆ ಇನ್ನು ನನಗೆ ಪಾಪಿಯೆಂದು ತೀರ್ಪಾಗುವದು ಯಾಕೆ?

8 ಮೇಲು ಬರುವಂತೆ ಕೇಡು ಮಾಡೋಣ ಎಂದು ಯಾಕೆ ಹೇಳಬಾರದು? ಕೆಲವರು ನಮ್ಮನ್ನು ಕುರಿತು - ಇವರು ಹೀಗೆ ಬೋಧನೆಮಾಡುವವರೆಂದು ದೂಷಿಸಿ ಹೇಳುತ್ತಾರಲ್ಲ; ಅಂಥವರಿಗೆ ದಂಡನೆಯ ತೀರ್ಪಾಗುವದು ನ್ಯಾಯ.


ಮನುಷ್ಯರೆಲ್ಲರು ಅಪರಾಧಿಗಳೆಂಬದಕ್ಕೆ ಶಾಸ್ತ್ರಪ್ರಮಾಣ

9 ಹಾಗಾದರೆ ಏನು ಹೇಳಬೇಕು? ನಾವು ಅನ್ಯರಿಗಿಂತ ಉತ್ತಮಸ್ಥಾನದಲ್ಲಿದ್ದೇವೋ? ಎಷ್ಟು ಮಾತ್ರಕ್ಕೂ ಇಲ್ಲ. ಯೆಹೂದ್ಯರೇ ಆಗಲಿ ಗ್ರೀಕರೇ ಆಗಲಿ ಎಲ್ಲರೂ ಪಾಪಕ್ಕೆ ಒಳಬಿದ್ದವರೆಂದು ಮೊದಲೇ ತೋರಿಸಿಕೊಟ್ಟಿದ್ದೇವಲ್ಲಾ.

10 ಇದು ಶಾಸ್ತ್ರದಲ್ಲಿ ಬರೆದಿರುವ ಮಾತುಗಳಿಗೆ ಸರಿಯಾಗಿದೆ; ಅವು ಯಾವವಂದರೆ - ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ;

11 ತಿಳುವಳಿಕೆಯುಳ್ಳವನು ಇಲ್ಲ, ದೇವರನ್ನು ಹುಡುಕುವವನು ಇಲ್ಲ.

12 ಎಲ್ಲರೂ ದಾರಿತಪ್ಪಿ ನಡೆಯುತ್ತಾರೆ, ಎಲ್ಲರೂ ಕೆಲಸಕ್ಕೆ ಬಾರದವರಾದರು. ಒಳ್ಳೇದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ.

13 ಅವರ ಗಂಟಲು ತೆರೆದಿರುವ ಸಮಾಧಿಯಾಗಿದೆ. ಅವರು ನಾಲಿಗೆಯಿಂದ ವಂಚನೆಯ ಮಾತುಗಳನ್ನಾಡುತ್ತಾರೆ; ಅವರ ತುಟಿಗಳ ಹಿಂದೆ ಹಾವಿನ ವಿಷವದೆ.

14 ಅವರ ಬಾಯಿ ಶಾಪದಿಂದಲೂ ಕ್ರೋಧದ ಮಾತುಗಳಿಂದಲೂ ತುಂಬಿ ಅದೆ.

15 ಅವರ ಕಾಲುಗಳು ರಕ್ತವನ್ನು ಸುರಿಸಲು ಆತುರಪಡುತ್ತವೆ.

16 ಅವರು ಹೋದ ದಾರಿಗಳಲ್ಲಿ ನಾಶ ಸಂಕಟಗಳು ಉಂಟಾಗುತ್ತವೆ.

17 ಸಮಾಧಾನದ ಮಾರ್ಗವನ್ನೇ ಅರಿಯರು.

18 ಅವರ ಕಣ್ಣೆದುರಿಗೆ ದೇವರ ಭಯವೇ ಇಲ್ಲ ಎಂಬವುಗಳೇ.

19 ಧರ್ಮಶಾಸ್ತ್ರದ ನುಡಿಗಳೆಲ್ಲವು ಆ ಶಾಸ್ತ್ರಕ್ಕೆ ಒಳಗಾದವರಿಗೇ ಹೇಳಿವೆಯೆಂದು ಬಲ್ಲೆವಷ್ಟೆ; ಹೀಗೆ ಎಲ್ಲರ ಬಾಯಿ ಕಟ್ಟಿಹೋಗುವದು, ಲೋಕವೆಲ್ಲಾ ದೇವರ ಮುಂದೆ ಅಪರಾಧಿಯಾಗಿ ನಿಲ್ಲುವದು.

20 ಯಾಕಂದರೆ ಯಾವನಾದರೂ ನೇಮನಿಷ್ಠೆಗಳನ್ನನುಸರಿಸಿ ದೇವರ ಸನ್ನಿಧಿಯಲ್ಲಿ ನೀತಿವಂತನೆಂದು ನಿರ್ಣಯಿಸಲ್ಪಡುವದಿಲ್ಲ. ಧರ್ಮಶಾಸ್ತ್ರದಿಂದ ಪಾಪದ ಅರುಹು ಉಂಟಾಗುತ್ತದಷ್ಟೆ.


ಎಲ್ಲಾ ಮನುಷ್ಯರು ನೀತಿವಂತರಾಗುವದಕ್ಕೆ ಯೇಸು ಕ್ರಿಸ್ತನನ್ನು ನಂಬುವದೇ ಮಾರ್ಗ

21 ಈಗಲಾದರೋ ದೇವರಿಂದ ದೊರಕುವ ನೀತಿಯು ಧರ್ಮಶಾಸ್ತ್ರನಿಯಮಗಳಿಲ್ಲದೆ ಪ್ರಕಟವಾಗಿದೆ. ಅದು ಮೋಶೆಯ ಧರ್ಮಶಾಸ್ತ್ರದಿಂದಲೂ ಪ್ರವಾದಿಗಳ ನುಡಿಗಳಿಂದಲೂ ಸಾಕ್ಷಿಗೊಂಡಿರುತ್ತದೆ.

22 ದೇವರಿಂದಾಗುವ ಆ ನೀತಿಯು ಯಾವದಂದರೆ ಯೇಸು ಕ್ರಿಸ್ತನನ್ನು ನಂಬುವದರಿಂದಲೇ ನಂಬುವವರೆಲ್ಲರಿಗೆ ದೊರಕುವಂಥದು. ಹೆಚ್ಚುಕಡಿಮೆ ಏನೂ ಇಲ್ಲ.

23 ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.

24 ಅವರು ನೀತಿವಂತರೆಂದು ನಿರ್ಣಯ ಹೊಂದುವದು ದೇವರ ಉಚಿತಾರ್ಥವಾದ ಕೃಪೆಯಿಂದಲೇ ಕ್ರಿಸ್ತಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವದು.

25 ಈತನು ತನ್ನ ರಕ್ತವನ್ನು ಸುರಿಸಿ ನಂಬಿಕೆಯಿದ್ದವರಿಗಾಗಿ ಕೃಪಾಧಾರವಾಗಬೇಕೆಂದು ದೇವರು ಈತನನ್ನು ಮುಂದಿಟ್ಟನು.

26 ದೇವರು ಹಿಂದಿನ ಕಾಲದ ಪಾಪಗಳನ್ನು ದಂಡಿಸದೆ ಸಹಿಸಿಕೊಂಡಿರಲಾಗಿ ತನ್ನ ನೀತಿಯನ್ನು ಈಗಿನ ಕಾಲದಲ್ಲಿ ಹೀಗೆ ತೋರಿಸಿ ತಾನು ನೀತಿಸ್ವರೂಪನಾಗಿಯೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು ನೀತಿವಂತರೆಂದು ನಿರ್ಣಯಿಸುವವನಾಗಿಯೂ ಕಾಣಿಸಿಕೊಂಡಿದ್ದಾನೆ.

27 ಹಾಗಾದರೆ ಹೊಗಳಿಕೊಳ್ಳುವದಕ್ಕೆ ಆಸ್ಪದವೆಲ್ಲಿ? ಅದು ಇಲ್ಲದೆ ಹೋಯಿತು. ಯಾವ ಪ್ರಮಾಣದಿಂದ? ಕರ್ಮಮಾರ್ಗವನ್ನು ಅನುಸರಿಸುವದರಿಂದಲೋ? ಅಲ್ಲ; ವಿಶ್ವಾಸ ಮಾರ್ಗವನ್ನು ಅನುಸರಿಸುವದರಿಂದಲೇ.

28 ಧರ್ಮಪ್ರಮಾಣಸಂಬಂಧವಾದ ಕರ್ಮಗಳಿಲ್ಲದೆ ನಂಬಿಕೆಯಿಂದಲೇ ಮನುಷ್ಯರು ನೀತಿವಂತರೆಂದು ನಿರ್ಣಯಿಸಲ್ಪಡುವರೆಂಬದಾಗಿ ನಿಶ್ಚಯ ಮಾಡಿಕೊಂಡಿದ್ದೇವಲ್ಲಾ.

29 ದೇವರು ಯೆಹೂದ್ಯರಿಗೆ ಮಾತ್ರ ದೇವರಾಗಿದ್ದಾನೋ? ಅನ್ಯಜನಗಳಿಗೆ ಸಹ ದೇವರಲ್ಲವೇ? ಹೌದು. ದೇವರು ಒಬ್ಬನೇ ಆಗಿರಲಾಗಿ ಆತನು ಅನ್ಯಜನರಿಗೆ ಸಹ ದೇವರಾಗಿದ್ದಾನೆ.

30 ಆತನು ಸುನ್ನತಿಯವರನ್ನು ನೀತಿವಂತರೆಂದು ನಿರ್ಣಯಿಸುವದಕ್ಕೆ ಅವರ ನಂಬಿಕೆಯೇ ಆಧಾರ; ಸುನ್ನತಿಯಿಲ್ಲದವರನ್ನೂ ಹಾಗೆಯೇ ನಿರ್ಣಯಿಸುವದಕ್ಕೆ ನಂಬಿಕೆಯೇ ಕಾರಣ.

31 ಹಾಗಾದರೆ ನಂಬಿಕೆಯಿಂದ ಧರ್ಮಪ್ರಮಾಣವನ್ನು ನಿರರ್ಥಕಮಾಡುತ್ತೇವೋ? ಎಂದಿಗೂ ಇಲ್ಲ. ಧರ್ಮಪ್ರಮಾಣವನ್ನು ಸ್ಥಿರಪಡಿಸುತ್ತೇವೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು