Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ರೋಮಾಪುರದವರಿಗೆ 2 - ಕನ್ನಡ ಸತ್ಯವೇದವು J.V. (BSI)


ಯೆಹೂದ್ಯರಾದರೂ ಅಪರಾಧಿಗಳು

1 ಆದದರಿಂದ ಎಲೈ ಮನುಷ್ಯನೇ, ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಯಾವನಾದರೂ ಸರಿಯೇ, ಉತ್ತರ ಹೇಳುವದಕ್ಕೆ ನಿನಗೆ ಮಾರ್ಗವಿಲ್ಲ. ಹೇಗಂದರೆ ಮತ್ತೊಬ್ಬರಲ್ಲಿ ದೋಷವೆಣಿಸುವದರಿಂದ ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು. ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಆ ದೋಷಗಳನ್ನೇ ನಡಿಸುತ್ತೀಯಲ್ಲಾ.

2 ಆದರೆ ಅಂಥವುಗಳನ್ನು ನಡಿಸುವವರ ವಿಷಯದಲ್ಲಿ ದೇವರು ಮಾಡುವ ತೀರ್ಪು ಸತ್ಯಕ್ಕನುಸಾರವಾಗಿಯೇ ಇರುವದೆಂದು ಬಲ್ಲೆವು.

3 ಎಲೈ ಮನುಷ್ಯನೇ, ಅಂಥವುಗಳನ್ನು ನಡಿಸುವವರಲ್ಲಿ ದೋಷವೆಣಿಸಿ ಅವುಗಳನ್ನೇ ಮಾಡುತ್ತಿರುವ ನೀನು ದೇವರ ದಂಡನೆಯ ತೀರ್ಪಿಗೆ ತಪ್ಪಿಸಿಕೊಂಡೇನೆಂದು ಯೋಚಿಸುತ್ತೀಯಾ?

4 ಆತನ ಅಪಾರವಾದ ದಯಾ ಸಹನ ದೀರ್ಘಶಾಂತಿಗಳನ್ನು ಅಸಡ್ಡೆಮಾಡುತ್ತೀಯಾ? ಮನಸ್ಸನ್ನು ಬೇರೆಮಾಡಿಕೊಳ್ಳುವದಕ್ಕೆ ದೇವರ ಉಪಕಾರವು ನಿನ್ನನ್ನು ಪ್ರೇರಿಸುತ್ತದೆಂಬದು ನಿನಗೆ ಗೊತ್ತಿಲ್ಲವೇ?

5 ನೀನು ನಿನ್ನ ಮೊಂಡತನವನ್ನೂ ಪಶ್ಚಾತ್ತಾಪವಿಲ್ಲದ ಮನಸ್ಸನ್ನೂ ಅನುಸರಿಸುವದರಿಂದ ನಿನಗೋಸ್ಕರ ದೇವರ ಕೋಪವನ್ನು ಕೂಡಿಟ್ಟುಕೊಳ್ಳುತ್ತಾ ಇದ್ದೀ. ದೇವರ ಕೋಪವೂ ನ್ಯಾಯವಾದ ತೀರ್ಪು ಪ್ರಕಟವಾಗುವ ದಿವಸ ಬರುತ್ತದಷ್ಟೆ.

6 ಆತನು ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವನು.

7 ಯಾರು ಪ್ರಭಾವ ಮಾನ ನಿರ್ಲಯತ್ವಗಳನ್ನು ಹೊಂದಬೇಕೆಂದು ಒಳ್ಳೇದನ್ನು ಬೇಸರಗೊಳ್ಳದೆ ಮಾಡುತ್ತಾರೋ ಅವರಿಗೆ ನಿತ್ಯಜೀವವನ್ನು ಕೊಡುವನು.

8 ಯಾರು ಸ್ವೇಚ್ಫೆಯುಳ್ಳವರಾಗಿ ಸತ್ಯವನ್ನು ಅನುಸರಿಸದೆ ಅನ್ಯಾಯವನ್ನು ಅನುಸರಿಸುತ್ತಾರೋ ಅವರಿಗೆ ಕೋಪ ರೌದ್ರಗಳು ಬರುವವು.

9 ಕೆಟ್ಟದ್ದನ್ನು ನಡಿಸುವ ಪ್ರತಿಯೊಬ್ಬ ನರಪ್ರಾಣಿಗೆ ಕಷ್ಟವೂ ಸಂಕಟವೂ ಬರುವವು - ಯೆಹೂದ್ಯರಿಗೆ ಮೊದಲು, ಅನಂತರ ಗ್ರೀಕರಿಗೆ ಸಹ.

10 ಆದರೆ ಒಳ್ಳೆದನ್ನು ನಡಿಸುವ ಪ್ರತಿಯೊಬ್ಬನಿಗೆ ಪ್ರಭಾವವೂ ಮಾನವೂ ಮನಶ್ಶಾಂತಿಯೂ ಉಂಟಾಗುವವು - ಯೆಹೂದ್ಯರಿಗೆ ಮೊದಲು, ಅನಂತರ ಗ್ರೀಕರಿಗೆ ಸಹ.

11-12 ದೇವರಿಗೆ ಪಕ್ಷಪಾತವಿಲ್ಲ. ಧರ್ಮಶಾಸ್ತ್ರವಿಲ್ಲದವರಾಗಿ ಪಾಪ ಮಾಡಿದವರು ಧರ್ಮಶಾಸ್ತ್ರವಿಲ್ಲದವರಾಗಿ ನಾಶಹೊಂದುವರು; ಆದರೆ ಧರ್ಮಶಾಸ್ತ್ರವುಳ್ಳವರಾಗಿದ್ದು ಪಾಪಮಾಡಿದವರು ಧರ್ಮಶಾಸ್ತ್ರಕ್ಕನುಸಾರವಾಗಿ ತೀರ್ಪನ್ನು ಹೊಂದುವರು.

13 ಧರ್ಮಶಾಸ್ತ್ರ ಕೇಳಿದ ಮಾತ್ರದಿಂದಲೇ ಯಾರೂ ದೇವರ ಸನ್ನಿಧಿಯಲ್ಲಿ ನೀತಿವಂತರಾಗುವದಿಲ್ಲ; ಅದನ್ನು ಅನುಸರಿಸುವವರೇ ನೀತಿವಂತರೆಂದು ನಿರ್ಣಯಿಸಲ್ಪಡುವರು.

14 ಧರ್ಮಶಾಸ್ತ್ರವಿಲ್ಲದ ಅನ್ಯಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆದರೆ ಅವರು ಧರ್ಮಶಾಸ್ತ್ರವಿಲ್ಲದವರಾಗಿದ್ದರೂ ತಾವೇ ತಮಗೆ ಧರ್ಮಪ್ರಮಾಣವಾಗಿದ್ದಾರೆ;

15 ಹೇಗಂದರೆ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದದೆ ಎಂಬದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಯೋಚನೆಗಳು ವಾದಿಪ್ರತಿವಾದಿಗಳಂತೆ - ಇದು ತಪ್ಪೆಂದು ತಪ್ಪಲ್ಲವೆಂದು ಸೂಚಿಸುತ್ತವೆ.

16 ನಾನು ಸಾರುವ ಸುವಾರ್ತೆಯಲ್ಲಿ ಬೋಧಿಸಿರುವ ಪ್ರಕಾರ ದೇವರು ಯೇಸು ಕ್ರಿಸ್ತನ ಮೂಲಕವಾಗಿ ಮನುಷ್ಯರ ಗುಟ್ಟುಗಳನ್ನು ಹಿಡಿದು ವಿಚಾರಿಸುವ ದಿನವು ಬರುತ್ತದೆ. ಆ ದಿನದಲ್ಲಿ ಇದೆಲ್ಲಾ ತಿಳಿದುಬರುವದು.

17 ನೀನು ಯೆಹೂದ್ಯನೆನಿಸಿಕೊಂಡವನೂ ಧರ್ಮಶಾಸ್ತ್ರದಲ್ಲಿ ಭರವಸವಿಟ್ಟವನೂ ದೇವರ ವಿಷಯವಾಗಿ ಹೊಗಳಿಕೊಳ್ಳುವವನೂ

18 ಆತನ ಚಿತ್ತವನ್ನು ಬಲ್ಲವನೂ ಧರ್ಮಶಾಸ್ತ್ರದಿಂದ ಉಪದೇಶವನ್ನು ಹೊಂದಿ ಇದು ತಕ್ಕದ್ದು ಅದು ತಕ್ಕದ್ದಲ್ಲವೆಂದು ವಿವೇಚಿಸುವವನೂ ಆಗಿದ್ದೀ.

19 ಧರ್ಮಶಾಸ್ತ್ರದಲ್ಲಿ ಜ್ಞಾನ ಸತ್ಯಗಳ ಸ್ವರೂಪವೇ ನನಗೆ ಇರುವದರಿಂದ ಕುರುಡರಿಗೆ ದಾರಿತೋರಿಸುವವನೂ

20 ಕತ್ತಲೆಯಲ್ಲಿರುವವರಿಗೆ ಬೆಳಕೂ ತಿಳುವಳಿಕೆಯಿಲ್ಲದವರಿಗೆ ಶಿಕ್ಷಕನೂ ಬಾಲಕರಿಗೆ ಉಪಾಧ್ಯಾಯನೂ ಆಗಿದ್ದೇನೆಂದು ನಂಬಿಕೊಂಡಿದ್ದೀ.

21 ಹೀಗಿರಲಾಗಿ ಮತ್ತೊಬ್ಬನಿಗೆ ಉಪದೇಶ ಮಾಡುವ ನೀನು ನಿನಗೆ ಉಪದೇಶಮಾಡಿಕೊಳ್ಳದೆ ಇದ್ದೀಯೋ? ಕದಿಯಬಾರದೆಂದು ಬೋಧಿಸುವ ನೀನು ಕದಿಯುತ್ತೀಯೋ?

22 ಹಾದರ ಮಾಡಬಾರದೆಂದು ಹೇಳುವ ನೀನು ಹಾದರ ಮಾಡುತ್ತೀಯೋ? ಮೂರ್ತಿಗಳಲ್ಲಿ ಅಸಹ್ಯಪಡುತ್ತಿರುವ ನೀನು ದೇವಸ್ಥಾನದಲ್ಲಿ ಕಳ್ಳತನ ಮಾಡುತ್ತೀಯೋ?

23 ಧರ್ಮಶಾಸ್ತ್ರದಲ್ಲಿ ಅಭಿಮಾನಿಯಾಗಿರುವ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆದು ದೇವರನ್ನು ಅವಮಾನಪಡಿಸುತ್ತೀಯೋ?

24 ನಿಮ್ಮ ದೆಸೆಯಿಂದ ಅನ್ಯಜನರಲ್ಲಿ ದೇವರ ನಾಮವು ದೂಷಣೆಗೆ ಗುರಿಯಾಗುತ್ತದೆಂದು ಬರೆದದೆಯಲ್ಲಾ.

25 ನೀನು ಧರ್ಮಶಾಸ್ತ್ರಾನುಸಾರವಾಗಿ ನಡೆಯುವವನಾದರೆ ಸುನ್ನತಿಯೆಂಬ ಸಂಸ್ಕಾರವು ಪ್ರಯೋಜನಕರವಾದದ್ದೇ ಸರಿ; ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆಯುವವನಾಗಿದ್ದರೆ ನಿನಗೆ ಸುನ್ನತಿಯಿದ್ದರೂ ಇಲ್ಲದಂತಾಯಿತು.

26 ಹೀಗಿರಲಾಗಿ ಸುನ್ನತಿಯಿಲ್ಲದವನು ಧರ್ಮಶಾಸ್ತ್ರದ ನೇಮಗಳ ಪ್ರಕಾರ ನಡೆದರೆ ಸುನ್ನತಿಯಿಲ್ಲದವನಾಗಿದ್ದರೂ ಸುನ್ನತಿಯಿದ್ದವನಂತೆ ಎಣಿಸಲ್ಪಡುವದಿಲ್ಲವೇ?

27 ಅವನು ಶರೀರದಲ್ಲಿ ಸುನ್ನತಿಯಿಲ್ಲದವನಾಗಿದ್ದು ಧರ್ಮಶಾಸ್ತ್ರದಲ್ಲಿ ಹೇಳಿದ್ದನ್ನು ನೆರವೇರಿಸುವದರಲ್ಲಿ ಶಾಸ್ತ್ರವೂ ಸುನ್ನತಿಯೂ ಇದ್ದು ಧರ್ಮವನ್ನು ಮೀರಿ ನಡೆಯುವ ನಿನ್ನನ್ನು ದೋಷಿಯೆಂದು ನಿರ್ಣಯಿಸುವದಿಲ್ಲವೇ?

28 ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ; ಮತ್ತು ಹೊರಗೆ ಶರೀರದಲ್ಲಿ ಮಾತ್ರ ಮಾಡಿರುವ ಸುನ್ನತಿಯು ಸುನ್ನತಿಯಲ್ಲ.

29 ಆದರೆ ಒಳಗೆ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ. ಇದು ಬಾಹ್ಯಾಚಾರಕ್ಕೆ ಸಂಬಂಧಪಟ್ಟದ್ದಲ್ಲ, ಆತ್ಮ ಸಂಬಂಧಪಟ್ಟದ್ದೇ; ಇಂಥಾ ಸುನ್ನತಿಯಿದ್ದವನಿಗೆ ಬರುವ ಹೊಗಳಿಕೆಯು ದೇವರಿಂದಲೇ ಹೊರತು ಮನುಷ್ಯರಿಂದ ಬರುವದಲ್ಲ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು