ರೋಮಾಪುರದವರಿಗೆ 16 - ಕನ್ನಡ ಸತ್ಯವೇದವು J.V. (BSI)ಶಿಫಾರಸೂ, ವಂದನೆಗಳೂ, ಎಚ್ಚರಿಕೆಯೂ 1 ನಾನು ನಿಮ್ಮ ಬಳಿಗೆ ಕಳುಹಿಸುವ ನಮ್ಮ ಸಹೋದರಿಯಾದ ಫೊಯಿಬೆಯನ್ನು ಪ್ರೀತಿಯಿಂದ ಅಂಗೀಕರಿಸಿರಿ. ಆಕೆಯು ಕೆಂಕ್ರೆಯ ಪಟ್ಟಣದಲ್ಲಿರುವ ಸಭೆಯ ಸೇವಕಳಾಗಿದ್ದಾಳೆ; 2 ನೀವು ಆಕೆಯನ್ನು ಕರ್ತನ ಶಿಷ್ಯಳೆಂದು ದೇವಜನರಿಗೆ ತಕ್ಕ ಹಾಗೆ ಸೇರಿಸಿಕೊಂಡು ಸಹಾಯವು ಯಾವ ವಿಷಯದಲ್ಲಿ ಬೇಕಾಗಿದ್ದರೂ ಸಹಾಯವನ್ನು ಮಾಡಿರಿ. ಆಕೆಯು ನನಗೂ ಅನೇಕರಿಗೂ ಸಹಾಯ ಮಾಡಿದವಳು. 3 ಕ್ರಿಸ್ತ ಯೇಸುವಿನ ಸೇವೆಯಲ್ಲಿ ನನ್ನ ಜೊತೆಕೆಲಸದವರಾದ ಪ್ರಿಸ್ಕಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ಹೇಳಿರಿ. 4 ಅವರು ನನ್ನ ಪ್ರಾಣದ ಸಂರಕ್ಷಣೆಗಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡಿದರು. ನಾನು ಮಾತ್ರವೇ ಅಲ್ಲ, ಅನ್ಯಜನರ ಸಭೆಗಳವರೆಲ್ಲರೂ ಅವರ ಉಪಕಾರವನ್ನು ಸ್ಮರಿಸುತ್ತಾರೆ. 5 ಅವರ ಮನೆಯಲ್ಲಿ ಕೂಡುವ ಸಭೆಗೆ ಸಹ ನನ್ನ ವಂದನೆಯನ್ನು ಹೇಳಿರಿ. ಆಸ್ಯ ಸೀಮೆಯಲ್ಲಿ ಕ್ರಿಸ್ತನಿಗೆ ಪ್ರಥಮಫಲವಾಗಿರುವ ನನ್ನ ಪ್ರಿಯನಾದ ಎಪೈನೆತನಿಗೆ ವಂದನೆ. 6 ನಿಮಗೋಸ್ಕರ ಬಹು ಶ್ರಮೆಪಟ್ಟ ಮರಿಯಳಿಗೆ ವಂದನೆ. 7 ನನ್ನ ಸ್ವಜನರೂ ಜೊತೆ ಸೆರೆಯವರೂ ಆಗಿರುವ ಅಂದ್ರೋನಿಕನಿಗೂ ಯೂನ್ಯನಿಗೂ ವಂದನೆ; ಅವರು ಅಪೊಸ್ತಲರಲ್ಲಿ ಪ್ರಸಿದ್ಧರಾಗಿದ್ದಾರೆ, ಮತ್ತು ನನಗಿಂತ ಮುಂಚೆ ಕ್ರಿಸ್ತನನ್ನು ನಂಬುವವರಾದರು. 8 ಕರ್ತನಲ್ಲಿ ನನ್ನ ಪ್ರಿಯನಾದ ಅಂಪ್ಲಿಯಾತನಿಗೆ ವಂದನೆ. 9 ಕ್ರಿಸ್ತನ ಸೇವೆಯಲ್ಲಿ ನಮ್ಮ ಜೊತೆ ಕೆಲಸದವನಾದ ಉರ್ಬಾನನಿಗೂ ನನ್ನ ಪ್ರಿಯನಾದ ಸ್ತಾಖುನಿಗೂ ವಂದನೆಗಳು. 10 ಕ್ರಿಸ್ತನ ಸೇವೆಯಲ್ಲಿ ಪರಿಶೋಧಿತನಾದ ಅಪೆಲ್ಲನಿಗೆ ವಂದನೆ. ಅರಿಸ್ತೊಬೂಲನ ಮನೆಯವರಿಗೆ ವಂದನೆಗಳು. 11 ನನ್ನ ಸ್ವಜನದವನಾದ ಹೆರೊಡಿಯೋನನಿಗೆ ವಂದನೆ. ನಾರ್ಕಿಸ್ಸನ ಮನೆಯವರೊಳಗೆ ಕ್ರಿಸ್ತನನ್ನು ನಂಬಿದವರಿಗೆ ವಂದನೆಗಳು. 12 ಕರ್ತನ ಸೇವೆಯಲ್ಲಿ ಪ್ರಯಾಸಪಟ್ಟವರಾದ ತ್ರುಫೈನಳಿಗೂ ತ್ರುಫೋಸಳಿಗೂ ವಂದನೆಗಳು. ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಿರುವ ಪ್ರಿಯ ಪೆರ್ಸೀಸಳಿಗೆ ವಂದನೆ. 13 ಕರ್ತನ ಭಕ್ತರಲ್ಲಿ ಪ್ರಸಿದ್ಧನಾದ ರೂಫನಿಗೂ ನನಗೆ ತಾಯಿಯಂತಿರುವ ಅವನ ತಾಯಿಗೂ ವಂದನೆಗಳು. 14 ಅಸುಂಕ್ರಿತನಿಗೂ ಪ್ಲೆಗೋನನಿಗೂ ಹೆರ್ಮೇಯನಿಗೂ ಪತ್ರೋಬನಿಗೂ ಹೆರ್ಮಾನನಿಗೂ ಅವರೊಂದಿಗಿರುವ ಸಹೋದರರಿಗೂ ವಂದನೆಗಳು. 15 ಫಿಲೊಲೊಗನಿಗೂ ಯೂಲ್ಯಳಿಗೂ ನೇರ್ಯನಿಗೂ ಅವನ ತಂಗಿಗೂ ಒಲುಂಪನಿಗೂ ಇವರೊಂದಿಗಿರುವ ದೇವಜನರೆಲ್ಲರಿಗೂ ವಂದನೆಗಳು. 16 ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಸಭೆಗಳೆಲ್ಲಾ ನಿಮ್ಮನ್ನು ವಂದಿಸುತ್ತವೆ. 17 ಸಹೋದರರೇ, ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರನ್ನು ಗುರುತಿಟ್ಟು ಅವರನ್ನು ಬಿಟ್ಟು ತೊಲಗಿಹೋಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 18 ಅಂಥವರು ನಮ್ಮ ಕರ್ತನಾದ ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ. 19 ನಿಮ್ಮ ವಿಧೇಯತ್ವವು ಎಲ್ಲರಿಗೂ ಪ್ರಸಿದ್ಧವಾದದರಿಂದ ಇದನ್ನು ಬರೆದಿದ್ದೇನೆ; ನಿಮ್ಮ ವಿಷಯದಲ್ಲಿ ಆನಂದಪಡುತ್ತೇನೆ. ನೀವು ಒಳ್ಳೇತನದ ವಿಷಯದಲ್ಲಿ ಜಾಣರೂ ಕೆಟ್ಟತನದ ವಿಷಯದಲ್ಲಿ ಕಳಂಕವಿಲ್ಲದವರೂ ಆಗಿರಬೇಕೆಂದು ಅಪೇಕ್ಷಿಸುತ್ತೇನೆ. 20 ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿಬಿಡುವನು. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ. 21 ನನ್ನ ಜೊತೆಕೆಲಸದವನಾದ ತಿಮೊಥೆಯನೂ ನನ್ನ ಸ್ವಜನರಾದ ಲೂಕ್ಯನೂ ಯಾಸೋನನೂ ಸೋಸಿಪತ್ರನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ. 22 ಈ ಪತ್ರಿಕೆಯನ್ನು ಬರೆದ ತೆರ್ತ್ಯನೆಂಬ ನಾನು ನಿಮ್ಮನ್ನು ಕರ್ತನಲ್ಲಿ ವಂದಿಸುತ್ತೇನೆ. 23 ನನಗೂ ಸಮಸ್ತ ಸಭೆಗೂ ಅತಿಥಿಸತ್ಕಾರವನ್ನು ಮಾಡುತ್ತಿರುವ ಗಾಯನು ನಿಮ್ಮನ್ನು ವಂದಿಸುತ್ತಾನೆ. ಈ ಪಟ್ಟಣದ ಖಜಾನೆಯ ಮೇಲ್ವಿಚಾರಕನಾಗಿರುವ ಎರಸ್ತನೂ ಸಹೋದರನಾದ ಕ್ವರ್ತನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ. ದೇವಸ್ತೋತ್ರವಚನವು 25-26 ಅನಾದಿಯಾಗಿ ಗುಪ್ತವಾಗಿದ್ದ ಮರ್ಮವು ಈಗ ಪ್ರಕಾಶಕ್ಕೆ ಬಂದು ನಿತ್ಯನಾದ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಗಳ ಗ್ರಂಥಗಳ ಮೂಲಕ ಅನ್ಯಜನರೆಲ್ಲರಿಗೆ ನಂಬಿಕೆಯೆಂಬ ವಿಧೇಯತ್ವವನ್ನು ಉಂಟುಮಾಡುವದಕ್ಕೋಸ್ಕರ ತಿಳಿಸಲ್ಪಟ್ಟಿದೆ. ಪ್ರಕಾಶಕ್ಕೆ ಬಂದಿರುವ ಈ ಮರ್ಮಕ್ಕೆ ಅನುಸಾರ ಅಂದರೆ ಯೇಸು ಕ್ರಿಸ್ತನ ವಿಷಯವಾದಂಥ ನಾನು ಸಾರುವಂಥ ಸುವಾರ್ತೆಗನುಸಾರ ನಿಮ್ಮನ್ನು ಸ್ಥಿರಪಡಿಸುವದಕ್ಕೆ ಶಕ್ತನಾಗಿರುವ 27 ಜ್ಞಾನನಿಧಿಯಾದ ಒಬ್ಬನೇ ದೇವರಿಗೆ ಯೇಸು ಕ್ರಿಸ್ತನ ಮೂಲಕ ಯುಗಯುಗಾಂತರಗಳಲ್ಲಿಯೂ ಸ್ತೋತ್ರವಾಗಲಿ. ಆಮೆನ್. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India