Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ರೋಮಾಪುರದವರಿಗೆ 12 - ಕನ್ನಡ ಸತ್ಯವೇದವು J.V. (BSI)


ದೇವಜನರು ನಡಕೊಳ್ಳಬೇಕಾದ ರೀತಿ

1 ಆದದರಿಂದ ಸಹೋದರರೇ, ದೇವರ ಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವದೇನಂದರೆ - ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ ಆರಾಧನೆಯು.

2 ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.

3 ದೇವರು ನನಗೆ ಕೃಪೆಮಾಡಿದ ಸೇವೆಯನ್ನು ನಡಿಸಿ ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ ದೇವರು ಒಬ್ಬೊಬ್ಬನಿಗೆ ಎಂಥೆಂಥ ವಿಶ್ವಾಸ ಬಲವನ್ನು ಕೊಟ್ಟನೋ ಅದಕ್ಕೆ ತಕ್ಕ ಹಾಗೆ ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ಭಾವಿಸಿಕೊಳ್ಳಬೇಕು.

4 ಯಾಕಂದರೆ ನಮಗೆ ಒಂದೇ ದೇಹದಲ್ಲಿ ಬಹಳ ಅಂಗಗಳಿರಲಾಗಿ ಆ ಎಲ್ಲಾ ಅಂಗಗಳಿಗೆ ಹೇಗೆ ಒಂದೇ ಕೆಲಸ ಇರುವದಿಲ್ಲವೋ

5 ಹಾಗೆಯೇ ನಾವೆಲ್ಲರು ಒಟ್ಟಾಗಿ ಕ್ರಿಸ್ತನಲ್ಲಿ ಒಂದೇ ದೇಹವಾಗಿದ್ದು ಒಬ್ಬೊಬ್ಬರಾಗಿ ಪರಸ್ಪರ ಅಂಗಗಳಾಗಿದ್ದೇವೆ.

6 ದೇವರು ನಮಗೆ ಕೃಪೆಮಾಡಿದ ಪ್ರಕಾರ ನಾವು ಬೇರೆ ಬೇರೆ ವರಗಳನ್ನು ಹೊಂದಿದ್ದೇವೆ. ಹೊಂದಿದ ವರವು ಪ್ರವಾದನೆಯ ರೂಪವಾಗಿದ್ದರೆ ನಮ್ಮ ವಿಶ್ವಾಸ ವರಕ್ಕೆ ತಕ್ಕ ಹಾಗೆ ಪ್ರವಾದನೆ ಹೇಳೋಣ.

7 ಅದು ಸಭಾಸೇವೆಯ ರೂಪವಾಗಿದ್ದರೆ ಸಭಾಸೇವೆಯನ್ನು ಮಾಡುತ್ತಾ ಇರೋಣ.

8 ಬೋಧಿಸುವವನು ಬೋಧಿಸುವದರಲ್ಲಿಯೂ ಬುದ್ಧಿ ಹೇಳುವವನು ಬುದ್ಧಿ ಹೇಳುವದರಲ್ಲಿಯೂ ನಿರತನಾಗಿರಲಿ. ದಾನಕೊಡುವವನು ಯಥಾರ್ಥಮನಸ್ಸಿನಿಂದ ಕೊಡಲಿ. ಹಿರೀತನ ನಡಿಸುವವನು ಆಸಕ್ತಿಯಿಂದ ನಡಿಸಲಿ. ಕಷ್ಟದಲ್ಲಿರುವವರಿಗೆ ಉಪಕಾರ ಮಾಡುವವನು ಸಂತೋಷವಾಗಿ ಮಾಡಲಿ.

9 ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. ಕೆಟ್ಟತನಕ್ಕೆ ಹೇಸಿಕೊಂಡು ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ.

10 ಕ್ರೈಸ್ತ ಸಹೋದರರು ಅಣ್ಣತಮ್ಮಂದಿರೆಂದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.

11 ಜಾಗ್ರತೆ ಬೇಕಾದಲ್ಲಿ ಆಲಸ್ಯವಾಗಿರದೆ ಆಸಕ್ತಚಿತ್ತರಾಗಿದ್ದು ಕರ್ತನ ಸೇವೆ ಮಾಡುವವರಾಗಿರ್ರಿ.

12 ಕ್ರೈಸ್ತರು ನಿರೀಕ್ಷಿಸುವ ಮಹಾಪದವಿಯನ್ನು ನೆನಸಿ ಉಲ್ಲಾಸವಾಗಿರ್ರಿ. ಉಪದ್ರವದಲ್ಲಿ ಸೈರಣೆಯುಳ್ಳವರಾಗಿರ್ರಿ. ಬೇಸರಗೊಳ್ಳದೆ ಪ್ರಾರ್ಥನೆಮಾಡಿರಿ.

13 ದೇವಜನರಿಗೆ ಕೊರತೆಬಂದಾಗ ಸಹಾಯಮಾಡಿರಿ. ಅತಿಥಿಸತ್ಕಾರವನ್ನು ಅಭ್ಯಾಸಿಸಿರಿ.

14 ನಿಮ್ಮನ್ನು ಹಿಂಸಿಸುವವರಿಗೆ ಆಶೀರ್ವಾದಮಾಡಿರಿ; ಶಪಿಸದೆ ಆಶೀರ್ವದಿಸಿರಿ.

15 ಸಂತೋಷಪಡುವವರ ಸಂಗಡ ಸಂತೋಷಪಡಿರಿ, ಅಳುವವರ ಸಂಗಡ ಅಳಿರಿ.

16 ನಿಮ್ಮ ನಿಮ್ಮೊಳಗೆ ಏಕಮನಸ್ಸುಳ್ಳವರಾಗಿರ್ರಿ, ದೊಡ್ಡಸ್ತಿಕೆಯ ಮೇಲೆ ಮನಸ್ಸಿಡದೆ ದೀನರ ಸಂಗಡ ಬಳಿಕೆಯಾಗಿರ್ರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಎಣಿಸಿಕೊಳ್ಳಬೇಡಿರಿ.

17 ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವವಾದದ್ದೋ ಅದನ್ನೇ ಯೋಚಿಸಿ ಸಾಧಿಸಿರಿ.

18 ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.

19 ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆಂಬದಾಗಿ ಬರೆದದೆ.

20 ಹಾಗಾದರೆ ನಿನ್ನ ವೈರಿ ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವದಕ್ಕೆ ಕೊಡು. ಹೀಗೆ ಮಾಡುವದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವದು.

21 ಕೆಟ್ಟತನಕ್ಕೆ ಸೋತು ಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು