ರೋಮಾಪುರದವರಿಗೆ 10 - ಕನ್ನಡ ಸತ್ಯವೇದವು J.V. (BSI)1 ಸಹೋದರರೇ, ಇಸ್ರಾಯೇಲ್ಯರು ರಕ್ಷಣೆಹೊಂದಬೇಕೆಂಬದೇ ನನ್ನ ಮನೋಭಿಲಾಷೆಯೂ ದೇವರಿಗೆ ನಾನು ಮಾಡುವ ವಿಜ್ಞಾಪನೆಯೂ ಆಗಿದೆ. 2 ದೇವರಲ್ಲಿ ಆಸಕ್ತರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿಕೊಡುತ್ತೇನೆ; ಆದರೂ ಅವರ ಆಸಕ್ತಿ ಜ್ಞಾನಾನುಸಾರವಾದದ್ದಲ್ಲ. 3 ಅವರು ದೇವರಿಂದ ದೊರಕುವ ನೀತಿಯನ್ನರಿಯದೆ ಸ್ವನೀತಿಯನ್ನೇ ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಾ ಇದ್ದದರಿಂದ ದೇವರ ನೀತಿಗೆ ಅಧೀನರಾಗಲಿಲ್ಲ. 4 ನಂಬುವವರೆಲ್ಲರಿಗೆ ನೀತಿಯನ್ನು ದೊರಕಿಸಿರುವ ಕ್ರಿಸ್ತನಿಂದಲೇ ಕರ್ಮಮಾರ್ಗಕ್ಕೆ ಅಂತ್ಯವಾಯಿತು. 5 ನೇಮನಿಷ್ಠೆಗಳಿಂದಾಗುವ ನೀತಿಯ ವಿಷಯದಲ್ಲಿ - ಅದನ್ನು ಅನುಸರಿಸಿದವನೇ ಅದರಿಂದ ಜೀವಿಸುವನೆಂದು ಮೋಶೆಯು ಬರೆಯುತ್ತಾನೆ. 6 ಆದರೆ ನಂಬಿಕೆಯಿಂದುಂಟಾಗುವ ನೀತಿಯು ಏನು ಹೇಳುತ್ತದೆ? ಕ್ರಿಸ್ತನನ್ನು ಕೆಳಕ್ಕೆ ಕರೆದುಕೊಂಡು ಬರುವದಕ್ಕೆ ಯಾರು ಮೇಲಣ ಲೋಕಕ್ಕೆ ಏರಿಹೋದಾರು? ಎಂದಾಗಲಿ 7 ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರುವದಕ್ಕೆ ಯಾರು ಪ್ರೇತಲೋಕಕ್ಕೆ ಇಳಿದುಹೋದಾರು? ಎಂದಾಗಲಿ 8 ನಿನ್ನ ಮನಸ್ಸಿನಲ್ಲಿ ಅಂದುಕೊಳ್ಳಬೇಡ. ದೇವರ ವಾಕ್ಯವು ನಿನ್ನ ಸಮೀಪದಲ್ಲಿಯೇ ಇದೆ; ಅದು ನಿನ್ನ ಬಾಯಲ್ಲಿಯೂ ನಿನ್ನ ಹೃದಯದಲ್ಲಿಯೂ ಇದೆ ಅನ್ನುತ್ತದೆ. ಆ ವಾಕ್ಯವು ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ. 9 ಅದೇನಂದರೆ ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವದು ಎಂಬದೇ. 10 ಹೃದಯದಿಂದ ನಂಬುವದರ ಮೂಲಕ ನೀತಿಯು ದೊರಕುತ್ತದೆ. ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ. 11 ಆತನ ಮೇಲೆ ನಂಬಿಕೆಯಿಡುವ ಯಾವನಾದರೂ ಆಶಾಭಂಗಪಡುವದಿಲ್ಲವೆಂದು ಶಾಸ್ತ್ರವು ಹೇಳುತ್ತದೆಯಷ್ಟೆ. 12 ಈ ವಿಷಯದಲ್ಲಿ ಯೆಹೂದ್ಯನಿಗೂ ಗ್ರೀಕನಿಗೂ ಹೆಚ್ಚು ಕಡಿಮೆ ಏನೂ ಇಲ್ಲ. ಎಲ್ಲರಿಗೂ ಒಬ್ಬನೇ ಕರ್ತ; ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವವನಾಗಿದ್ದಾನೆ. 13 ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು ಬರೆದದೆ. ಇಸ್ರಾಯೇಲ್ಯರ ಅಪನಂಬಿಕೆಗೆ ಅವರಿಗೆ ಜ್ಞಾನವಿಲ್ಲವೆಂಬದು ಕಾರಣವಲ್ಲ 14 ಆದರೆ ತಾವು ಯಾವನನ್ನು ನಂಬಲಿಲ್ಲವೋ ಆತನ ನಾಮವನ್ನು ಹೇಳಿಕೊಳ್ಳುವದು ಹೇಗೆ? ಮತ್ತು ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ? ಸಾರುವವರು ಕಳುಹಿಸಲ್ಪಡದೆ ಸಾರುವದೆಲ್ಲಿ? 15 ಇದಕ್ಕೆ ಸರಿಯಾಗಿ ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಅಂದವಾಗಿವೆ ಎಂದು ಬರೆದದೆ. ಆದರೂ ಆ ಶುಭವರ್ತಮಾನಕ್ಕೆ ಎಲ್ಲರೂ ಕಿವಿಗೊಡಲಿಲ್ಲ. 16 ಈ ವಿಷಯದಲ್ಲಿ ಯೆಶಾಯನು - ಕರ್ತನೇ, ನಾವು ಸಾರಿದ ವಾರ್ತೆಯನ್ನು ಯಾರು ನಂಬಿದರು ಎಂದು ನುಡಿಯುತ್ತಾನೆ. 17 ಆದಕಾರಣ ಸಾರಿದ ವಾರ್ತೆಯು ನಂಬಿಕೆಗೆ ಆಧಾರ, ಆ ವಾರ್ತೆಗೆ ಕ್ರಿಸ್ತನ ವಾಕ್ಯವೇ ಆಧಾರ. 18 ಆದರೂ ಅವರ ಕಿವಿಗೆ ಬೀಳಲಿಲ್ಲವೇನು ಎಂದು ಕೇಳುತ್ತೇನೆ. ಬಿದ್ದದ್ದು ನಿಶ್ಚಯ. ಸಾರುವವರ ಧ್ವನಿಯು ಭೂವಿುಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿದವು. 19 ಆದರೆ ಇಸ್ರಾಯೇಲ್ಯರು ಆ ವಾರ್ತೆಯನ್ನು ತಿಳುಕೊಳ್ಳಲಿಲ್ಲವೇನು ಎಂದು ಕೇಳುತ್ತೇನೆ. ಈ ವಿಷಯದಲ್ಲಿ - ಜನಾಂಗವಲ್ಲದವರ ಮೂಲಕ ನಿಮ್ಮಲ್ಲಿ ಹುರುಡುಹುಟ್ಟಿಸುವೆನು; ವಿವೇಕವಿಲ್ಲದ ಜನರ ಮೂಲಕ ನಿಮ್ಮನ್ನು ಸಿಟ್ಟಿಗೆಬ್ಬಿಸುವೆನು ಎಂದು ಮೊದಲು ಮೋಶೆಯು ಹೇಳುತ್ತಾನೆ. 20 ಇದಲ್ಲದೆ ಯೆಶಾಯನು ಧೈರ್ಯವಾಗಿ ಮಾತಾಡಿ - ನನ್ನನ್ನು ಹುಡುಕದವರಿಗೂ ಸಿಕ್ಕಿದೆನು, ನನ್ನ ವಿಷಯ ವಿಚಾರಮಾಡದವರಿಗೂ ಪ್ರತ್ಯಕ್ಷನಾದೆನು ಎಂದು ಹೇಳುತ್ತಾನೆ. 21 ಆದರೆ ಅವನು ಇಸ್ರಾಯೇಲ್ಯರನ್ನು ಕುರಿತು - ನನ್ನ ಮಾತಿಗೆ ಅವಿಧೇಯರಾಗಿ ಎದುರುಮಾತಾಡುವ ಜನರನ್ನು ನಾನು ದಿನವೆಲ್ಲಾ ಕೈಚಾಚಿ ಕರೆದೆನೆಂದು ಹೇಳುತ್ತಾನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India